ಬೆಂಗಳೂರು : ಮುಖ್ಯಮಂತ್ರಿ ಹಾಗೂ ಹಣಕಾಸು ಸಚಿವರಾದ ಸಿದ್ದರಾಮಯ್ಯ 2026-27ನೇ ಸಾಲಿನ ಬಜೆಟ್ ವಿಧಾನಸಭೆಯಲ್ಲಿ ಮಂಡಿಸುತ್ತಿದ್ದಾರೆ.
40 ಲಕ್ಷ ರೈತರಿಗೆ 468 ಕೋಟಿ ರೂ. ಮೊತ್ತದಲ್ಲಿ ಬಿತ್ತನೆ ಬೀಜಗಳಿಗೆ ಸಹಾಯಧನ ವಿತರಣೆ. 2,825 ಕೋಟಿ ವೆಚ್ಚ ಭರಿಸಿ 7 ಲಕ್ಷ ರೈತರಿಗೆ ಹನಿ ನೀರಾವರಿ ಘಟಕ ಸ್ಥಾಪನೆ ಹಾಗೂ 3.41 ಲಕ್ಷ ರೈತರಿಗೆ ಕೃಷಿ ಯಂತ್ರೋಪಕರಣಗಳ ವಿತರಣೆ. 363 ಕೋಟಿ ರೂ. ಮೊತ್ತದಲ್ಲಿ 32,138 ಕೃಷಿ ಹೊಂಡಗಳ ನಿರ್ಮಾಣ. 51 ಲಕ್ಷ ರೈತರಿಗೆ 6,213 ಕೋಟಿ ಬೆಳೆ ವಿಮೆ ಪರಿಹಾರ. 36 ಲಕ್ಷ ನೀರಾವರಿ ಪಂಪ್ಸೆಟ್ ಗಳಿಗೆ 48,000 ಕೋಟಿ ರೂ. ಉಚಿತ ವಿದ್ಯುತ್ ಸಹಾಯಧನ. 83 ಲಕ್ಷ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ 70 ಸಾವಿರ ಕೋಟಿ ರೂ. ಕೃಷಿ ಸಾಲ ವಿತರಣೆ ಮಾಡಲು ನಿರ್ಧರಿಸಲಾಗಿದೆ.
ಗ್ರಾಮೀಣ ರೈತರಿಗೆ ಸ್ಥಿರ ಮತ್ತು ಹೆಚ್ಚುವರಿ ಆದಾಯದ ಮೂಲಗಳನ್ನು ಸೃಜಿಸುವ ಉದ್ದೇಶದಿಂದ ʻಮುಖ್ಯಮಂತ್ರಿ ಕೃಷಿ ವಿಸ್ತಾರʼ ಯೋಜನೆಯನ್ನು ಮುಂದಿನ ಮೂರು ವರ್ಷಗಳಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುವುದು.
ರಾಜ್ಯದಲ್ಲಿ ಸಿರಿಧಾನ್ಯ ಮತ್ತು ಸಾವಯವ ಉತ್ಪನ್ನಗಳನ್ನು ಉತ್ತೇಜಿಸಲು ನಿರ್ಮಿಸಲಾಗುತ್ತಿರುವ ʻಮಿಲೆಟ್ ಹಬ್ʼ ಅನ್ನು ರೈತರು, ಗ್ರಾಮೀಣ ಯುವಕರು ಮತ್ತು ನವ ಉದ್ಯಮಿಗಳಿಗೆ ತಾಂತ್ರಿಕ ಸಹಾಯ, ಸಂಸ್ಕರಣಾ ಸೌಲಭ್ಯ, ಗುಣಮಟ್ಟ ಪ್ರಮಾಣೀಕರಣ ಮತ್ತು ಮಾರುಕಟ್ಟೆ ಸಂಪರ್ಕಗಳನ್ನು ಒಂದೇ ಸೂರಿನಡಿ ಕಲ್ಪಿಸುವ ಏಕಗವಾಕ್ಷಿ ವ್ಯವಸ್ಥೆಯೊಂದಿಗೆ ಸ್ವಾವಲಂಬಿ ಸಂಸ್ಥೆಯನ್ನಾಗಿಸಲಾಗುವ ಗುರಿ ಹೊಂದಲಾಗಿದೆ.
ಪರಿಸರ ಸ್ನೇಹಿ ಮತ್ತು ಸುಸ್ಥಿರ ಕೃಷಿ ಪದ್ಧತಿಗಳನ್ನು ಉತ್ತೇಜಿಸಲು ʻವಸುಧಾಮೃತʼ ಕಾರ್ಯಕ್ರಮವನ್ನು ಮುಂದಿನ ಮೂರು ವರ್ಷಗಳಲ್ಲಿ ಜಾರಿಗೊಳಿಸಲಾಗುವುದು. ʻಸಸ್ಯ ಸಂಜೀವಿನಿ’ ಯೋಜನೆಯನ್ನು ಮುಂದಿನ ಮೂರು ವರ್ಷಗಳಲ್ಲಿ ಅನುಷ್ಠಾನಗೊಳಿಸಲಾಗುವುದು.
ರೈತರಿಗೆ ಒಂದೇ ಸೂರಿನಡಿ ಹವಾಮಾನ, ಮಾರುಕಟ್ಟೆ, ಕೃಷಿ ತಾಂತ್ರಿಕತೆ ಮತ್ತು ಇಲಾಖಾ ಮಾಹಿತಿಯನ್ನು ತ್ವರಿತವಾಗಿ ಒದಗಿಸಲು ಕೃಷಿ ಇಲಾಖೆಯ ʻರೈತ ಕರೆ ಕೇಂದ್ರʼವನ್ನು AI ತಂತ್ರಜ್ಞಾನದಿಂದ ಉನ್ನತೀಕರಿಸಲಾಗುವುದು. ಚಿತ್ರದುರ್ಗ ಜಿಲ್ಲೆಯ ಬಬ್ಬೂರಿನ ಜಿಲ್ಲಾ ಕೃಷಿ ತರಬೇತಿ ಕೇಂದ್ರವನ್ನು ರಾಜ್ಯಮಟ್ಟದ ʻಕೃಷಿ ಉದ್ದಿಮೆ ತರಬೇತಿ ಕೇಂದ್ರʼ ವನ್ನಾಗಿ ಉನ್ನತೀಕರಿಸಲಾಗುವುದು. ಅತ್ಯಾಧುನಿಕ ನಿಖರ ಬಿತ್ತನೆ ಮತ್ತು ನಾಟಿ ಯಂತ್ರಗಳನ್ನು ಹೈಟೆಕ್ ಹಾರ್ವೆಸ್ಟರ್ ಹಬ್ ಯೋಜನೆಯಡಿ ಸೇರ್ಪಡೆಗೊಳಿಸಲು ನಿರ್ಧರಿಸಲಾಗಿದೆ.
ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕನ್ನು ಸಂಪೂರ್ಣ ಸಾವಯವ ತಾಲ್ಲೂಕನ್ನಾಗಿ ಪರಿವರ್ತಿಸಲು ಅಧಿಕೃತ ಸಾವಯವ ಪ್ರಮಾಣೀಕರಣ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದು.
ರೈತರಿಗೆ ಕಳಪೆ, ಅಸುರಕ್ಷಿತ, ದೋಷಪೂರಿತ ಬೀಜಗಳು ಮತ್ತು ಕೀಟನಾಶಕಗಳನ್ನು ಪೂರೈಸುವುದನ್ನು ಹಾಗೂ ಕೃಷಿ ಪರಿಕರಗಳನ್ನು ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧ್ಯಯನ ಮಾಡಿ ಸೂಕ್ತ ಶಿಫಾರಸ್ಸುಗಳನ್ನು ಸಲ್ಲಿಸಲು ರಾಜ್ಯ ಮಟ್ಟದ ಸಲಹಾ ಸಮಿತಿಯನ್ನು ರಚಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.


