ಸ್ವತಂತ್ರ ಲಿಂಗಾಯತ ಧರ್ಮಕ್ಕಾಗಿ ನಾವೆಲ್ಲ ಒಂದಾಗಬೇಕು : ಬಸವರಾಜ್‌ ಹೊರಟ್ಟಿ

Most read

ಬೆಂಗಳೂರು : ನಾವು ಬೇರೆ ಸಮಾಜವನ್ನ ನೋಡಿ ಕಲಿಯಬೇಕು. ಜಾತಿಗಣತಿಯ ಸಮೀಕ್ಷೆಯಲ್ಲಿ ಲಿಂಗಾಯತರನ್ನು 2ಬಿ ಮತ್ತು 3ಬಿ ಗೆ ಸೇರಿಸಿದ್ದಾರೆ. ಹಿಂದೂ ಲಿಂಗಾಯತ ಬಣಜಿಗ, ಹಿಂದೂ ಲಿಂಗಾಯತ ಸಾದು, ಹಿಂದೂ ಲಿಂಗಾಯತ ಗಾಣಿಗ ಅಂತ ಬರೆದರೆ ಯಾವುದಕ್ಕೆ ಸೇರಿಸಬೇಕು ಎಂದು ಗೊಂದಲವಾಗುತ್ತದೆ. ಆದ್ದರಿಂದ ನಾವೆಲ್ಲ ಸಂಘಟಿತರಾಗಿ ಲಿಂಗಾಯತ ಸ್ವತಂತ್ರ ಧರ್ಮಕ್ಕಾಗಿ ಹೋರಾಟ ಮಾಡಬೇಕು ಎಂದು ವಿಧಾನಪರಿಷತ್ತಿನ ಸಭಾಧ್ಯಕರಾದ ಬಸವರಾಜ್‌ ಹೊರಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.

ಜಿ.ಬಿ. ಪಾಟೀಲರ ಲಿಂಗಾಯತ ಚಳುವಳಿ 2017-18 ಕೃತಿಯ ಲೋಕಾರ್ಪಾಣೆಯಲ್ಲಿ ಮಾತನಾಡಿದ ಅವರು, “ಇಡೀ ರಾಜ್ಯದಲ್ಲಿ 1ಕೋಟಿ 10ಸಾವಿರ ಜನ ಇದ್ದಿವಿ. ಪಂಚಮಸಾಲಿಯನ್ನು 2ಬಿ ಆಗಬೇಕು ಅಂದರೆ ಲಿಂಗಾಯತರೆಲ್ಲರು 2ಬಿ ಅಂತ ಮಾಡಿದರೆ ಮುಂದೆ ನಮ್ಮ ಗತಿ ಏನು ಎಂದು ಆತಂಕ ವ್ಯಕ್ತಪಡಿಸಿದರು.

“ಲಿಂಗಾಯರ ಪ್ರತ್ಯೇಕ ಧರ್ಮಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ(ಮೊದಲ ಅವಧಿ) ಅವರ ಬಳಿ ಹೋದೆವು. ಅವರು ನಿಮ್ಮಲ್ಲಿರುವ ಎಲ್ಲಾ ಒಳಪಂಗಡಗಳು ಒಟ್ಟಿಗೆ ಬನ್ನಿ ಎಂದರು. ವಾದವಿವಾದಗಳ ನಂತರ ಲಿಂಗಾಯತರನ್ನು ಪ್ರತ್ಯೇಕ ಧರ್ಮ ಮಾಡಿ ಎಂದು ಒತ್ತಡ ಹಾಕಿದ ನಂತರ ನಮ್ಮ ಮನವಿಯನ್ನು ಸ್ವೀಕರಿಸಿ ಕೇಂದ್ರ ಸರ್ಕಾರಕ್ಕೆ ಕಳಿಸಿದರು” ಎಂದರು.

ನಾವೆಲ್ಲ ಒಂದು ಎಂದು ತೋರಿಸಲು ಲಿಂಗಾಯತರೆಲ್ಲರೂ ಒಡಗೂಡಿ ಕಮಿಟಿಯನ್ನು ರಚಿಸಬೇಕು. ಲಿಂಗಾಯತ ಪ್ರತ್ಯೇಯ ಧರ್ಮವನ್ನು ರಚಿಸಿದರೆ ನಮ್ಮ ಮುಂದಿನ ಪೀಳಿಗೆಗೆ ನೆಮ್ಮದಿ ಬದುಕನ್ನು ಕೊಡಬಹುದು. ಸಮುದಾಯದಲ್ಲಿ ಹುಟ್ಟಿದವರಿಗೆ ಇದೊಂದು ಪ್ರತಿಷ್ಠೆಯ ಪ್ರ‍ಶ್ನೆಯಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿಗಳಾದ ಎಚ್.ಎನ್. ನಾಗಮೋಹನ ದಾಸ್, ಸಾಣೇಹಳ್ಳಿ ಶಾಖಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಗುರುಮಹಾಂತ ಸ್ವಾಮೀಜಿ, ವಿಧಾನ ಪರಿಷತ್‌ ಸಭಾಪತಿಗಳಾದ ಬಸವರಾಜ ಹೊರಟ್ಟಿ, ಶಾಸಕರಾದ ಬಿ.ಆರ್. ಪಾಟೀಲ್,‌ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪುರುಷೋತ್ತಮ ಬಿಳಿಮಲೆ, ಪ್ರಾಧ್ಯಪಕರಾದ ಪ್ರಶಾಂತ ನಾಯಕ ಉಪಸ್ಥತರಿದ್ದರು.

More articles

Latest article