ಬೆಂಗಳೂರು: ಗೃಹ ಸಚಿವ ಪರಮೇಶ್ವರ್ ಅವರನ್ನು ಅವಹೇಳನ ಮಾಡಿದ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಂಡಿರುವ ಪೊಲೀಸರ ಕ್ರಮವನ್ನು ಸ್ವಾಗತಿಸುವುದಾಗಿ ಮಾಜಿ ಸಚಿವ ಎಚ್.ಆಂಜನೇಯ ಹೇಳಿದ್ದಾರೆ.
ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಅವರು ಮಾತನಾಡಿದರು.
ಗೌರವಾನ್ವಿತ ವ್ಯಕ್ತಿಯನ್ನು ಹೀಗೆ ನಿಂದಿಸುವುದು ಸರಿಯಲ್ಲ. ಆಡಳಿತದಲ್ಲಿ ವೈಫಲ್ಯ ಉಂಟಾಗಿದ್ದರೆ ಅವರನ್ನು ಟೀಕೆ ಮಾಡಲಿ. ಅದನ್ನು ಬಿಟ್ಟು ಕುಟುಂಬವನ್ನು ಎಳೆದುತಂದು ವೈಯಕ್ತಿಕ ತೇಜೋವಧೆ ಮಾಡುವುದು ಸರಿಯಲ್ಲ. ಟೀಕೆ ಮಾಡುವಾಗ ಎಚ್ಚರಿಕೆಯಿಂದ ಟೀಕೆ ಮಾಡಬೇಕು. ಯಾರ ಮನಸ್ಸಿಗೂ ನೋವಾಗದಂತೆ ಟೀಕೆ ಮಾಡಬೇಕು ಎಂದರು.
ಇಂತಹ ಟೀಕೆಯನ್ನು ಸಮರ್ಥನೆ ಮಾಡಿಕೊಳ್ಳುತ್ತಿರುವ ಬಿಜೆಪಿಯದ್ದು ಹೀನ ಮನಸ್ಥಿತಿ. ಇದೇ ಅವರ ಸಂಸ್ಕೃತಿ. ಈ ಬಿಜೆಪಿಯವರು ಏನು ಮಾಡಿದರೂ ಸಮರ್ಥನೆ ಮಾಡಿಕೊಳ್ಳುತ್ತಾರೆ. ಇದನ್ನು ಮಾಡುವುದಕ್ಕೂ ಮಾನ ಮಾರ್ಯಾದೆ ಇರಬೇಕು. ಇದೇ ಪ್ರಕ್ರಿಯೆ ಮುಂದುವರೆದರೆ ನಾನು ಎಂದಿಗೂ ಅಸಂಸದೀಯ ಪದಗಳನ್ನು ಬಳಕೆ ಮಾಡುವುದಿಲ್ಲ. ಸಂಸದೀಯ ಪದಗಳಲ್ಲೇ ಉಗ್ರವಾಗಿ ಟೀಕೆ ಮಾಡುತ್ತೇವೆ ಎಂದು ಹೇಳಿದರು.
ಒಳಮೀಸಲಾತಿ ಕುರಿತು ಮಾತನಾಡಿದ ಅವರು, “ಅಲೆಮಾರಿಗಳು ನ್ಯಾಯಾಲಯದ ಮೊರೆ ಹೋಗಿದ್ದರು. ವಿಚಾರಣೆಯೂ ಡಿ.3 ಕ್ಕೆ ಮುಂದೂಡಲ್ಪಟ್ಟಿದೆ” ಎಂದರು. ಏರ್ ಪೋರ್ಟ್ ನಲ್ಲಿ ನಮಾಜ್ ಮಾಡಿರುವ ಬಗ್ಗೆ ಕೇಳಿದಾಗ, “ನಾನು ಇದರ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನೇ ಕೊಟ್ಟಿಲ್ಲ. ಜಾಗ ಇದ್ದ ಕಡೆ ಮನಸ್ಸಿನ ನೆಮ್ಮದಿಗಾಗಿ ದೇಶದ ಒಳಿತಿಗಾಗಿ ಪ್ರಾರ್ಥನರ ಮಾಡಿರಬಹುದು. ಈ ಹಿಂದೆ ಋಷಿ ಮುನಿಗಳು ಎಲ್ಲರ ಒಳಿತಿಗೆ ಪ್ರಾರ್ಥನೆ ಮಾಡುತ್ತಿದ್ದರು. ಅವರ ಪ್ರಾರ್ಥನೆಯಿಂದ ಯಾರಿಗಾದರೂ ತೊಂದರೆಯಾಗಿದೆಯೇ? ಇದೇ ವಿಚಾರಗಳನ್ನು ನಾನು ಹೇಳಿದ್ದು. ನಮ್ಮವರೇ ಅಂದರೆ ಅಸ್ಪೃಶ್ಯ, ಬಡ ವರ್ಗಕ್ಕೆ ಸೇರಿದವರು ನಾಮ ಹಾಕಿಕೊಂಡು ತಟ್ಟೆ ಹಿಡಿದುಕೊಂಡು ಟ್ರಾಫಿಕ್ ಸಿಗ್ನಲ್ ಗಳಲ್ಲಿ ದೇವರ ಹೆಸರಿನಲ್ಲಿ ಬಿಕ್ಷೆ ಬೇಡುತ್ತಾ ಇರುತ್ತಾರೆ” ಎಂದರು.
“ನಮ್ಮ ಧರ್ಮ, ದೇವರು ಆಚರಣೆಗಳನ್ನು ಅವರುಗಳು ವಿರೋಧ ಮಾಡಬಾರದು. ಆ ಧರ್ಮದವರು ಪ್ರಾರ್ಥನೆ ಮಾಡುವಾಗ ನಾವು ಕೂಡ ವಿರೋಧ ಮಾಡಬಾರದು. ಈ ದೃಷ್ಟಿಕೋನದಲ್ಲಿ ನಾನು ಮಾತನಾಡಿದ್ದೇನೆ. ನಾನು ಯಾರ ಭಾವನೆಯನ್ನೂ ಕೆರಳಿಸಿಲ್ಲ. ವಿವಾದಾತ್ಮಕ ಎಂದು ಕೊಂಡರೆ ಅದು ಅವರುಗಳ ಸೃಷ್ಟಿ” ಎಂದರು.
ಅರ್ಚಕರಿಗೆ, ಪೂಜಾರಿಗಳಿಗೆ ಅವಮಾನ ಮಾಡಲಾಗಿದೆ ಎಂದು ಬಿಂಬಿಸಲಾಗಿದೆ. ನಾನು ಯಾವ ಹೆಸರನ್ನೂ ತೆಗೆದುಕೊಂಡಿಲ್ಲ ಎಂದು ಸ್ಪಷ್ಟನೆ ನೀಡಿದರು. ಆರ್ ಎಸ್ ಎಸ್ ಪಥ ಸಂಚಲನಕ್ಕೆ ಕಾಂಗ್ರೆಸ್ ವಿರೋಧದ ಬಗ್ಗೆ ಕೇಳಿದಾಗ, ಕಾಂಗ್ರೆಸ್ ಆರ್ ಎಸ್ ಎಸ್ ಪಥಸಂಚಲನಕ್ಕೆ ಎಲ್ಲಿ ವಿರೋಧ ಮಾಡಿದೆ. ಅನುಮತಿ ತೆಗೆದುಕೊಂಡು ಮಾಡಿ ಎಂದು ಹೇಳಲಾಗಿದೆ. ಇತ್ತೀಚಿಗೆ ಚಿತ್ರದುರ್ಗದಲ್ಲಿ ನಡೆದ ಗಣಪತಿ ವಿಸರ್ಜನೆ ವೇಳೆ ಇಡೀ ನಗರವೇ ಬಂದ್ ಆಗಿತ್ತು. ಡಿಜೆ ಹಾಕಿಕೊಂಡು ಕುಣಿಯಲಾಯಿತು. ಅಲ್ಲಿ ಭಕ್ತಿಯಿಂದ ವಿಸರ್ಜನೆ ಮಾಡಿದ್ದು ಕಂಡುಬರಲಿಲ್ಲ. ಇದಕ್ಕೆ ಸುಮಾರು ಒಂದು ಕೋಟಿ ಹಣ ಖರ್ಚಾಗಿದೆ ಎಂದು ವಿವರಿಸಿದರು.
ನಾವು ಈ ಹಿಂದೆ ಭಜನೆ ಮಾಡಿಕೊಂಡು ಭಕ್ತಿಯಿಂದ ದೇವರನ್ನು ಬಾವಿಯಲ್ಲಿ ವಿಸರ್ಜನೆ ಮಾಡಿ ಬರುತ್ತಿದ್ದೆವು. ಯಾರಿಗೂ ತೊಂದರೆ ನೀಡದೆ ಸಂತೋಷದಿಂದ ಮಾಡುತ್ತಿದ್ದೆವು. ಇದನ್ನೇ ಹಿಡಿದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಿಂದು ವಿರೋಧಿ ಆಂಜನೇಯ ಎಂದು ಹೇಳುತ್ತಾರೆ. ನಾನು ಹಿಂದು ವಿರೋಧಿಯಲ್ಲ. ಹಿಂದೂ ಧರ್ಮದಲ್ಲೇ ಇದ್ದೇನೆ. ದಲಿತ, ಅಸ್ಪೃಶ್ಯರೇ ಈ ಧರ್ಮದ ಎಲ್ಲಾ ಆಚರಣೆಗಳನ್ನು ಮಾಡಿಕೊಂಡು ಬಂದವರು. ಈ ಧರ್ಮದಲ್ಲಿ ನಾವೇ ಬಹುಸಂಖ್ಯಾತರು. ಆದರೆ ನಮ್ಮನ್ನೇ ಟೀಕೆ ಮಾಡುತ್ತಾರೆ ಎಂದು ತಿಳಿಸಿದರು.

