ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಗ್ರಾಮೀಣ ನೀರು ಸರಬರಾಜು ಇಲಾಖೆ ಹಮ್ಮಿಕೊಂಡಿರುವ ಪಾವಗಡ ಬಹುಗ್ರಾಮ ನೀರು ಪೂರೈಕೆ ಕಾರ್ಯಕ್ರಮದಡಿ ಬಳ್ಳಾರಿ, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳ ವ್ಯಾಪ್ತಿಯಲ್ಲಿನ 1,138 ಗ್ರಾಮಗಳು ಹಾಗೂ 2 ಪಟ್ಟಣಗಳಿಗೆ ಶೀಘ್ರದಲ್ಲಿಯೇ ಕುಡಿಯುವ ನೀರು ಸರಬರಾಜು ಮಾಡುವ ಪ್ರಕ್ರಿಯೆಗೆ ಚಾಲನೆ ಸಿಗಲಿದ್ದು, ಈ ಭಾಗದ ಜನರ ಬಹು ದಿನಗಳ ಕನಸು ನನಸಾಗಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ತುಮಕೂರು ಜಿಲ್ಲೆಯ ಪಾವಗಡ ಹಾಗೂ ಕ್ವಾದಿಗುಂಟೆ ಬಳಿ ನಡೆಯುತ್ತಿರುವ ಕಾಮಗಾರಿಗಳನ್ನು ವೀಕ್ಷಿಸಿದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರು, ಬಹುಗ್ರಾಮ ನೀರು ಸರಬರಾಜು ಯೋಜನೆ ಮೂಲಕ ತುಂಗಭದ್ರ ಹಿನ್ನೀರು ಬಳಸಿ ಚಿಲಕನಹಟ್ಟಿ, ಕೂಡ್ಲಿಗಿ, ಮೊಳಕಾಲ್ಮೂರು, ಚಳ್ಳಕೆರೆ, ತುರವನೂರು ತಾಲ್ಲೂಕುಗಳ 1,138 ಗ್ರಾಮಗಳು ಹಾಗೂ ಎರಡು ಪಟ್ಟಣಗಳ 17.21 ಲಕ್ಷ ಜನಕ್ಕೆ ನೀರು ಪೂರೈಕೆ ಮಾಡಲಾಗುವುದು ಎಂದು ಮಾಹಿತಿ ನೀಡಿದರು.
ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಚಿಲಕನಹಟ್ಟಿ ಮತ್ತು 14 ಗ್ರಾಮೀಣ ವಸತಿ ಪ್ರದೇಶಗಳು ಹಾಗೂ ಕೂಡ್ಲಿಗಿ ತಾಲ್ಲೂಕಿನ ಉಜ್ಜಿನಿ ಮತ್ತು 215 ಗ್ರಾಮೀಣ ವಸತಿ ಪ್ರದೇಶಗಳು; ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ಪಟ್ಟಣ ಮತ್ತು 132 ಗ್ರಾಮೀಣ ವಸತಿ ಪ್ರದೇಶಗಳು, ಚಳ್ಳಕೆರೆ ತಾಲ್ಲೂಕಿನ 360 ಗ್ರಾಮೀಣ ವಸತಿ ಪ್ರದೇಶಗಳು ಹಾಗೂ ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ತಾಲ್ಲೂಕಿನ ತುರವನೂರು ಮತ್ತು 58 ಗ್ರಾಮೀಣ ವಸತಿ ಪ್ರದೇಶಗಳು ಹಾಗೂ ಪಾವಗಡ ಪಟ್ಟಣ ಹಾಗೂ ತಾಲ್ಲೂಕಿನ 357 ಗ್ರಾಮೀಣ ವಸತಿ ಪ್ರದೇಶಗಳು ಸೇರಿದಂತೆ 1,138 ಗ್ರಾಮಗಳು ಹಾಗೂ 2 ಪಟ್ಟಣಗಳು ತುಂಗಭದ್ರ ನೀರಿನ ಸೌಲಭ್ಯ ಪಡೆಯಲಿವೆ ಎಂದು ಸಚಿವರು ತಿಳಿಸಿದರು.
ಚಿಲಕನಹಟ್ಟಿ, ಕೂಡ್ಲಿಗಿ, ಮೊಳಕಾಲ್ಮೂರು, ಚಳ್ಳಕೆರೆ, ತುರವನೂರು ಹಾಗೂ ಪಾವಗಡ ನೀರು ಸರಬರಾಜು ಯೋಜನೆಯ ಕಾಮಗಾರಿಗಳು ಶೇ.95 ಭಾಗದಷ್ಟು ಮುಕ್ತಾಯಗೊಂಡಿದ್ದು, ಕೊಳವೆ ಮಾರ್ಗಗಳ ಅಳವಡಿಕೆ ಕಾಮಗಾರಿಗಳು ಪೂರ್ಣಗೊಂಡಿರುತ್ತದೆ. ಎಲ್ಲ ಯೋಜನೆಗಳ ವಿದ್ಯುತ್ ಸರಬರಾಜು ಮಂಜೂರಾತಿಗಳು (ಸಿಇಐಜಿ ಮತ್ತು ಬೆಸ್‌ಕಾಂ) ದೊರೆತಿದ್ದು, ಈ ಬೃಹತ್ ಯೋಜನೆಯಡಿ ಮೂರು ಜಿಲ್ಲೆಗಳ ಲಕ್ಷಾಂತರ ಜನರು ಆರೋಗ್ಯಕರ ನೀರು ಪಡೆಯಲಿದ್ದಾರೆ ಎಂದೂ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
₹2,132.02 ಕೋಟಿ ರೂ. ವೆಚ್ಚದ ಯೋಜನೆಯ ಕಾಮಗಾರಿಗಳು ಕಳೆದ ವರ್ಷದಿಂದ ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಮೇ 2024ರವರೆಗೆ ₹1,852.15 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದೂ ಸಚಿವರು ಹೇಳಿದ್ದಾರೆ. ಗ್ರಾಮೀಣ ಭಾಗದ ಜನರಿಗೆ ಅಂತರರಾಷ್ಟ್ರೀಯ ಮಾನದಂಡಗಳಂತೆ ಪ್ರತಿಯೊಬ್ಬರಿಗೂ ಪ್ರತಿ ನಿತ್ಯ 85 ಲೀಟರ್ ನೀರು ಒದಗಿಸಲಾಗುವುದು, ಪಟ್ಟಣದ ಜನರು ಪ್ರತಿ ನಿತ್ಯ 135 ಲೀಟರ್ ನೀರು ಪಡೆಯುವರು ಎಂದೂ ಸಚಿವ ಪ್ರಿಯಾಂಕ್ ಖರ್ಗೆ ಮಾಹಿತಿ ನೀಡಿದ್ದಾರೆ.
ನೀರು ಸಂಸ್ಕರಣ ಘಟಕಗಳ ಕಾಮಗಾರಿಗಳು ಮುಕ್ತಾಯಗೊಂಡಿದ್ದು, ಕೊಳವೆ ಮಾರ್ಗಗಳನ್ನು ಅಳವಡಿಸುವ ಕಾಮಗಾರಿಗಳು ಮುಕ್ತಾಯಗೊಂಡಿವೆ ಎಂದೂ ಹೇಳಿರುವ ಸಚಿವರು 568 ಒವರ್‌ಹೆಡ್ ಟ್ಯಾಂಕ್‌ಗಳ ನಿರ್ಮಾಣ ಕಾಮಗಾರಿಗಳು ಮುಕ್ತಾಯ ಹಂತದಲ್ಲಿವೆ ಎಂದೂ ತಿಳಿಸಿದ್ದಾರೆ.