ಕೋಲಾರದಲ್ಲಿ ಕುರುಬ ಸಂಘದ ಎಚ್ಚರಿಕೆ: ಪ್ರಾಣವನ್ನು ಕಳೆದುಕೊಂಡರೂ ಸಿದ್ದರಾಮಯ್ಯ ಹಿಂದೆ ನಾವು ನಿಲ್ಲುತ್ತೇವೆ

Most read

ಕೋಲಾರ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮುಡಾ ಪ್ರಕರಣ ಸಂಬಂಧಿಸಿದಂತೆ ರಾಜ್ಯಪಾಲರು ಪ್ರಾಸಿಕ್ಯೂಷನ್‌‌ಗೆ ಅನುಮತಿ ನೀಡಲು ಮುಂದಾಗಿರುವ ಘಟನೆ ಖಂಡಿಸಿ ಕೋಲಾರ ಕುರುಬರ ಸಂಘ ತೀವ್ರ ಆಕ್ಷೇಪ್ರ ವ್ಯಕ್ತಪಡಿಸಿದೆ.

ಕರ್ನಾಟಕ ಪ್ರದೇಶ ಕುರುಬರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಂಜನಿ ಸೋಮಣ್ಣ ಹೇಳಿಕೆ ನೀಡಿದ್ದು, ಇಂದು ಸಾಂಕೇತಿಕವಾಗಿ ಎಲ್ಲಾ ಜಿಲ್ಲೆಗಳಲ್ಲೂ ಪ್ರತಿಭಟನೆಗಳನ್ನು ಹಮ್ಮಿಕೊಂಡು ಜಿಲ್ಲಾಧಿಕಾರಿ ಮೂಲಕ ಮನವಿಯನ್ನು ನೀಡಲಾಗಿದೆ, ಈ ಮನವಿಯನ್ನು ಅವರು ಪರಿಗಣಿಸಿಲ್ಲ ಅಂದ್ರೆ ದೊಡ್ಡ ಜನಾಂದೋಲನವಾಗಿ ಮಾರ್ಪಡುತ್ತದೆ ಎಂದು ಎಚ್ಚರಿಸಿದರು.

ಅ.7 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ  ಸಮಾವೇಶ ಹಾಗೂ ಅ. 9 ರಂದು ಮೈಸೂರಿನಲ್ಲಿ ದೊಡ್ಡ ಮಟ್ಟದ ಬೃಹತ್ ಸಮಾವೇಶ ಮಾಡುತ್ತಿದ್ದೇವೆ. ಸಿದ್ದರಾಮಯ್ಯ ಅವರು ಈ ದೇಶಕ್ಕೆ, ರಾಜ್ಯಕ್ಕೆ ಹಾಗೂ ಎಲ್ಲಾ ಜಾತಿ ಜನಾಂಗದ ಬಡವರಿಗೆ ಬೇಕಾಗಿದ್ದಾರೆ. ಅಂಥ ವ್ಯಕ್ತಿಯನ್ನು ರಾಜಕೀಯ ಹುನ್ನಾರದಿಂದ ಕಳೆದುಕೊಂಡಿದ್ದೇ ಆದ್ರೆ ಈ ರಾಜ್ಯಕ್ಕೆ ಅನ್ಯಾಯವಾಗುತ್ತದೆ ಎಂದು ಸೋಮಣ್ಣ ಹೇಳಿದ್ದಾರೆ.

ಯಾವುದೇ ಕಾರಣಕ್ಕೂ ಬಿಟ್ಟುಕೊಡುವ ಮಾತಿಲ್ಲ, ಅಂತಹ ಸಂದರ್ಭ ಬಂದಾಗ ಏನು ಮಾಡಕ್ಕೂ ಸಿದ್ದವಾಗಿರುತ್ತೇವೆ, ರಕ್ತಪಾತವಾದರೂ ಸರಿ, ಪ್ರಾಣ ಕಳೆದುಕೊಂಡರೂ ಸರಿ, ಸಿದ್ಧರಾಮಯ್ಯ ಹಿಂದೆ ನಾವು ನಿಲ್ಲುತ್ತೇವೆ ಎಂದು ಅವರು ಎಚ್ಚರಿಸಿದ್ದಾರೆ.

ಕೋಲಾರ ಜಿಲ್ಲಾ ಕುರುಬರ ಸಂಘ ಇಂದು ಸಿದ್ಧರಾಮಯ್ಯ ವಿರುದ್ಧದ ಹುನ್ನಾರ ಖಂಡಿಸಿ ನಗರದಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.

More articles

Latest article