ಯುದ್ಧವೆಂದರೆ ಕಾರ್ಬನ್ನಿನ ಕಾರಂಜಿಯೇ ಸರಿ

Most read

ಬೆಂಕಿ ಮತ್ತು ಸಾವಿನ ಮೂಲಕ ಮಾತನಾಡುವ ಯುದ್ಧಗಳು ಇನ್ನು ಮುಂದಾದರೂ ನಿಂತುಹೋಗಬಹುದೆ? ಯುದ್ಧದ ಕರಾಳ ಕಾರ್ಬನ್ ಮುಖವನ್ನು ಹೊರಗಾಣಿಸುವ, ವಿಜ್ಞಾನ ಲೇಖಕ ಕೆ ಎಸ್‌ ರವಿಕುಮಾರ್‌ ಅವರ ಬರಹ ಇಲ್ಲಿದೆ.

ಜಾಗತೀಕರಣ ಹೆಪ್ಪುಗಟ್ಟಿ ಹೋಗಿರುವ 21ನೇ ಶತಮಾನದ ಎಂಟು ಭೀಕರ ಯುದ್ಧಗಳಲ್ಲಿ (ಭೀಕರವಲ್ಲದ ಯುದ್ಧ ಯಾವುದಿದೆ ಅಂತ ಕೇಳಬೇಡಿ) ಒಂದಾಗಿರುವ ರಷ್ಯಾ-ಉಕ್ರೇನ್ ಯುದ್ಧವು 2022ರ ಫೆಬ್ರವರಿ 24ರಂದು ರಷ್ಯಾ ಉಕ್ರೇನಿನ ಮೇಲೆ ಸರಣಿ ಮಿಸೈಲುಗಳು ಮತ್ತು ದೂರ ಹರವಿನ ತೋಪು (long-range artillary)ಗಳನ್ನು ಉಡಾಯಿಸುವ ಮೂಲಕ ಶುರುವಾಯಿತು. ಈ ತಾರೀಕಿನಿಂದ 2022ರ ಸೆಪ್ಟೆಂಬರ್ 30ರವರೆಗೆ, ಅಂದರೆ 219 ದಿನಗಳ ಗಡುವಿನಲ್ಲಿ, ಸಿಡಿತ ಮತ್ತು ಬೇರೆಬೇರೆ ಯುದ್ಧ ಸಂಬಂಧಿ ಕಾರಣಗಳಿಂದ ಬಿಡುಗಡೆಯಾದ ಕಾರ್ಬನ್ ಪ್ರಮಾಣ 8.3 ಕೋಟಿ ಟನ್ನಿನಷ್ಟು ಎಂದು The Initiative of GHG Accounting of War ಎಂಬ ಅಧ್ಯಯನ ತಂಡವು ಲೆಕ್ಕಹಾಕಿತು ((GHG ಎಂದರೆ  Green House Gases, ಹಸಿರು ಮನೆ ಅನಿಲಗಳು ಎಂಬುದರ ಮೊಟಕು ರೂಪ). Green House Gas ಜಮಾಖರ್ಚಿಗೆ ಸಂಬಂಧಿಸಿದ ವಿಷಯದಲ್ಲಿ ಪರಿಣಿತರಾದ ಲೆನ್ನಾರ್ಡ್ ಡಿ ಕ್ಲರ್ಕ್ ಅವರ ಮುಂದಾಳ್ತನದ ಈ ಅಧ್ಯಯನ ತಂಡವು ತನ್ನ ಸಂಶೋಧನೆಯ ವರದಿಯನ್ನು ಈಜಿಪ್ಟಿನಲ್ಲಿ ಜರುಗಿದ COP27  ಜಾಗತಿಕ ಸಮಾವೇಶದಲ್ಲಿ ಬಿಡುಗಡೆ ಮಾಡಿತು. ಈ ತಂಡದಲ್ಲಿ ಯುದ್ಧಪೀಡಿತ ಉಕ್ರೇನಿನ ಪರಿಣಿತರಲ್ಲದೆ ಹಲವು ದೇಶಗಳ ಪರಿಣಿತರೂ ಸೇರಿದ್ದರು.

ರಷ್ಯಾ-ಉಕ್ರೇನ್ ಯುದ್ಧದ 219 ದಿನಗಳ ಗಡುವಿನಲ್ಲಿ ಹಾಲೆಂಡ್ ದೇಶವೊಂದೇ ತನ್ನ ಎಲ್ಲ ಮೂಲಗಳಿಂದಲೂ ಸರಾಸರಿ 10 ಕೋಟಿ ಟನ್ನಿನಷ್ಟು ಕಾರ್ಬನ್ ಅನ್ನು ಬಿಡುಗಡೆ ಮಾಡಿತ್ತು ಎಂಬುದನ್ನು ನೆನೆದರೆ ಬರಿಯ ಯುದ್ಧವೊಂದೆ ನಿಸರ್ಗಕ್ಕೆ ಯಾವ ಪರಿ ಮಾರಕವಾಗಿರಬಲ್ಲುದು ಎಂಬುದನ್ನು ನಾವು ಅರಿಯಬಹುದು.

 ಯುದ್ಧದಲ್ಲಿ ಕಾರ್ಬನ್ ಬಿಡುಗಡೆಯಾಗುವ ಸಂದರ್ಭಗಳನ್ನು ನೋಡೋಣ. ಡೀಸೆಲ್ ಚಾಲಿತ ಟ್ಯಾಂಕುಗಳ ಚಲನೆಯಿಂದ, ಸಬ್ ಮರೀನ್, ಏರ್‌ಕ್ರಾಫ್ಟ್‌ ಕ್ಯಾರಿಯರ್ ಹಾಗೂ ಹಡಗುಗಳ ಚಲನೆಯಿಂದ, ಹೆಲಿಕಾಪ್ಟರ್, ಬಾಂಬರ್ ಹಾಗೂ ಜೆಟ್ ವಿಮಾನಗಳ ಹಾರಾಟದಿಂದ, ಮಿಸೈಲುಗಳು, ಬಾಂಬು, ಮೊರ್ಟಾರ್, ಆರ್ಟಿಲರಿ ಶೆಲ್, ರಾಕೆಟ್, ಗ್ರನೇಡ್ ಮುಂತಾದವು ಸಿಡಿದಾಗ ಹೊತ್ತಿ ಉರಿಯುವ ಬೆಂಕಿಯಿಂದ, ಮಾನವ ನಿರ್ಮಿತ ಕಟ್ಟೋಣಗಳು ಬೆಂಕಿಯಲ್ಲಿ ಉರಿದಾಗ, ತೈಲಬಾವಿಗಳು, ಕಚ್ಚಾತೈಲ ಮತ್ತು ಪೆಟ್ರೋಲಿಯಮ್ ಉತ್ಪನ್ನಗಳ ಡಿಪೋಗಳು ಮತ್ತು ರಿಫೈನರಿಗಳು ಬಾಂಬ್ ದಾಳಿಗೆ ಸಿಲುಕಿ ಉರಿದಾಗ, ಯುದ್ಧ ನಡೆಯುವ ಜಾಗದ ಸೈನಿಕರಿಗೆ ಅಗತ್ಯ ವಸ್ತುಗಳನ್ನು ಪೊರೈಸುವ ಟ್ರಕ್ಕುಗಳಿಂದಾಗಿ, ಯುದ್ಧದ ಕಾರಣಕ್ಕೆ ನಿರಾಶ್ರಿತರಾದವರನ್ನು ಸುರಕ್ಷಿತ ತಾಣಗಳಿಗೆ ಒಯ್ಯುವ ಸಾರಿಗೆ ವಾಹನಗಳಿಂದ…..ಹೀಗೆ ಹಲವು ಸಂದರ್ಭಗಳಲ್ಲಿ ಕಾರ್ಬನ್ ಬಿಡುಗಡೆಯಾಗುತ್ತದೆ. ಕಾಡುಗಳಿರುವ ಕಡೆ ಅವಕ್ಕೆ ಯುದ್ಧದ ಬೆಂಕಿ ತಗುಲಿದರೆ ಕಾಡ್ಗಿಚ್ಚು ದಗದಗಿಸಬಹುದು. ಆಗಂತೂ ಹೇರಳ ಕಾರ್ಬನ್ ವಾತಾವರಣಕ್ಕೆ ಸೇರುತ್ತದೆ. ಉಕ್ರೇನ್ ಯುದ್ಧದಲ್ಲಿ ಮೊದಲ 214 ದಿನಗಳಲ್ಲಿ ಬರಿಯ ಸಿಡಿತದಿಂದಲೆ 6,215 ಬೆಂಕಿ ಪ್ರಕರಣಗಳು ಜರುಗಿ ಒಟ್ಟಾರೆ 4,86,162 ಹೆಕ್ಟೇರ್‌ ನಷ್ಟು ಕಾಡು, ಹೊಲ, ಹುಲ್ಲುಗಾವಲು, ಬಯಲು, ಜನವಸತಿಯ ತಾಣಗಳು ಉರಿದುಹೋಗಿ ಕಾರ್ಬನ್ ಬಿಡುಗಡೆಯಾಗಿತ್ತು.

COP27  ಸಮಾವೇಶವನ್ನು ಉದ್ದೇಶಿಸಿ ಉಕ್ರೇನಿನ ಅಧ್ಯಕ್ಷ ವೊಲೊದಿಮಿರ್ ಜೆಲೆನಿಸ್ಕಿ ಮಾಡಿದ ವಿಡಿಯೊ ಕಾನ್ಫರೆನ್ಸ್ ಭಾಷಣದಲ್ಲಿ ‘ವೇಗದಿಂದ ಬಿಸಿಯಾಗುತ್ತಿರುವ ಭೂಮಿಗೆ ಒಂದು ಬಂದೂಕು ಉಗುಳುವ ಗುಂಡಿನ ಬೆಂಕಿಯೆ ಹೆಚ್ಚೆನಿಸಿರುವಾಗ ಒಂದು ಯುದ್ಧ ಏನೆಲ್ಲ ಹಾನಿ ತರಬಹುದು ಎಂಬುದಕ್ಕೆ ನಮ್ಮ ಮೇಲೆ ಅವರು ಮಾಡಿರುವ ದಾಳಿಯೆ ಹೇಳುತ್ತಿದೆ. ಇಡೀ ಜಗತ್ತು ಒಂದಾಗಿ ಕಾರ್ಬನ್ ಅನ್ನು ನಿಯಂತ್ರಿಸಿ ಜಾಗತಿಕ ತಾಪ ಏರಿಕೆಯ ವಿರುದ್ಧ ಹೋರಾಡಬೇಕಿರುವ ಅವಕಾಶವನ್ನು ನಮ್ಮ ಮೇಲೆ ದಾಳಿ ಮಾಡಿರುವವರು ಹಾಳುಗೆಡವುತ್ತಿದ್ದಾರೆ’ ಎಂದು ಭಾವುಕರಾಗಿ ನುಡಿದರು. ಹೌದು, ಈ ಮಾತುಗಳು ಸರಿಯಾಗಿಯೆ ಇವೆ. ಆದರೆ ತನ್ನನ್ನು ರಕ್ಷಿಸಿಕೊಳ್ಳುವ ಸಲುವಾಗಿ ತಾನೂ ನ್ಯಾಟೋ ಕೂಟ ಕೊಟ್ಟ ಅತ್ಯಾಧುನಿಕ ಹತಾರಗಳನ್ನು ರಷ್ಯಾದ ವಿರುದ್ಧ ಉಕ್ರೇನ್ ಸಿಡಿಸಿದೆ, ಹೇರಳ ಕಾರ್ಬನ್ ಬಿಡುಗಡೆಗೆ ತನ್ನ ಪಾಲನ್ನೂ ಸಲ್ಲಿಸಿದೆ. ಈ ಯುದ್ಧವೇ ಇಷ್ಟು, ಯುದ್ಧ ಬೇಡವೆನ್ನುವವರೂ ನಿಧಾನಕ್ಕೆ ಅದರ ಉಸಿರುಗಟ್ಟಿಸುವ ವಾಸ್ತವಗಳನ್ನು ಒಪ್ಪಿಕೊಂಡು ತಾವೂ ವಿನಾಶದ ಭೀಕರ ‘ಆಟ’ದಲ್ಲಿ ಪೈಪೋಟಿಗೆ ತೊಡಗುತ್ತಾರೆ.

ಕಾರ್ಬನ್ ಲೆಕ್ಕಾಚಾರ ಇದೇ ಮೊದಲೇನಲ್ಲ. 2003ರಿಂದ 2011ರವರೆಗೆ ಅಮೆರಿಕಾ ಮತ್ತು ಬ್ರಿಟನ್ ಇರಾಕ್ ಮೇಲೆ ನಡೆಸಿದ ಯುದ್ಧದಲ್ಲಿ 14.1 ಕೋಟಿ ಟನ್ನಿನಷ್ಟು ಕಾರ್ಬನ್ ಗಾಳಿಪಾಲಾಗಿತ್ತು. Oil Change International  ಎಂಬ ಸಂಸ್ಥೆ ತನ್ನ ಅಧ್ಯಯನದಿಂದ ಈ ಲೆಕ್ಕವನ್ನು ಕೊಟ್ಟಿದೆ.

ಯುದ್ಧ ನಿಂತ ಮೇಲೆ ನಾಶಗೊಂಡದ್ದನ್ನೆಲ್ಲ ಮರಳಿ ಕಟ್ಟುವ ಕ್ರಿಯೆಯಲ್ಲಿ ಕಾರ್ಬನ್ ಮತ್ತಷ್ಟು ಬಿಡುಗಡೆಯಾಗುತ್ತದೆ. ಕಟ್ಟುವುದಕ್ಕೆ ಬೇಕಾದ ಸರಕು ಸಾಮಾಗ್ರಿಗಳು ಎಲ್ಲೆಲ್ಲಿಂದಲೊ ಸಾಗಣೆಗೊಳ್ಳಬೇಕಲ್ಲ. ಸಿರಿಯಾದಲ್ಲಿ ಹೀಗೆ ಪುನರ್ ನಿರ್ಮಾಣದ ಚಟುವಟಿಕೆಗಳಲ್ಲಿ ಅಂದಾಜು 2.2 ಕೋಟಿ ಟನ್ನುಗಳಷ್ಟು ಕಾರ್ಬನ್ ಬಿಡುಗಡೆಯಾಗಿದ್ದನ್ನು ಒಂದು ಅಧ್ಯಯನ ಹೇಳುತ್ತದೆ. ಉಕ್ರೇನ್ ಕೂಡಾ ಮುಂದೆ ಇಂತಹುದೇ ಹಂತವನ್ನು ಹಾದುಹೋಗಬೇಕು.

ಇಬ್ಬರ ಸೆಣೆಸಾಟದಲ್ಲಿ ನರುಕುವ ನಿಸರ್ಗ

ರಷ್ಯಾ-ಉಕ್ರೇನ್ ಯುದ್ಧ ಇನ್ನೂ ನಿಲುಗಡೆಗೆ ಬಂದಿಲ್ಲ. ತಕ್ಷಣಕ್ಕೆ ನಿಲುಗಡೆಗೆ ಬರುವ ಸೂಚನೆಯೂ ಇಲ್ಲ. ಉಕ್ರೇನ್‍ಗೆ ನ್ಯಾಟೋ ದೇಶಗಳ ನೆರವಿಲ್ಲದೆ ಹೋಗಿದ್ದರೆ ಅದು ಇಷ್ಟು ಹೊತ್ತಿಗೆ ಸೋತು ಮಂಡಿಯೂರಿರುತ್ತಿತ್ತೇನೊ. ಹಾಗೆಂದು ಈ ಯುದ್ಧವನ್ನು ಅದು ಗೆಲ್ಲುವುದೂ ಇಲ್ಲ. ಈಗಾಗಲೆ ಪರಿಸರ, ಸಾಮಾಜಿಕ ಬದುಕು, ವಾಣಿಜ್ಯ ವ್ಯವಹಾರ, ಉತ್ಪಾದನೆಯ ಬೇರುಗಳು ಹೀಗೆ ಹಲವು ರಂಗಗಳಿಗೆ ಬಹಳಕಾಲ ಸರಿಪಡಿಸಲಾಗದಷ್ಟು ಹಾನಿಯನ್ನು ಅದು ಅನುಭವಿಸಿದೆ, ಅನುಭವಿಸುತ್ತಿದೆ. ಹೊರಗಿನ ನೆರವಿಲ್ಲದೆ ವಿಯೆಟ್ನಾಮ್ ಜನತೆ ಜಗತ್ತು ಊಹಿಸಲು ಸಾಧ್ಯವಿಲ್ಲದ ತ್ಯಾಗದಿಂದ ಅಮೆರಿಕಾದ ಬರ್ಬರ ದಾಳಿಯನ್ನು ಎದುರಿಸಿ ನೈತಿಕವಾಗಿ ಮತ್ತು ತಾತ್ವಿಕವಾಗಿ ಯುದ್ಧವನ್ನು ಗೆದ್ದಿದ್ದರು. ಅಮೆರಿಕಾ ಎಂದಿಗೂ ನಿರೀಕ್ಷಿಸಿರದಿದ್ದ ಸೋಲಿನ ರುಚಿಯನ್ನು ತೋರಿಸಿದ್ದರು. ಉಕ್ರೇನ್ ವಿಯೆಟ್ನಾಮ್ ಅಲ್ಲ. ನ್ಯಾಟೋ ಕೂಟದ ಯುದ್ಧಪಿಪಾಸು ನಿಲುವು ಉಕ್ರೇನಿನ ಬೆಂಬಲಕ್ಕಿದೆ. ಹಾಗೆಂದು ರಷ್ಯಾ ಗೆಲ್ಲುವುದೆ, ಇಲ್ಲ. ಅದು ಈಗಾಗಲೆ ತನ್ನ ಮಿಲಿಟರಿ ಕಸುವಿನಲ್ಲಿ ಬಹಳಷ್ಟನ್ನು ಕಳೆದುಕೊಂಡಿದೆ. ಅದನ್ನೆಲ್ಲ ಮರುದುಂಬಿಕೊಳ್ಳಲು ಅದಕ್ಕೆ ಬಹಳ ಸಮಯ ಬೇಕು. ಗೆಲ್ಲಲಾಗದ ಹತಾಶೆಯಿಂದ ಕಡೆಯಲ್ಲಿ ನ್ಯೂಕ್ಲಿಯರ್ ಹತಾರಗಳನ್ನು ಬಳಸಿದರೆ ವಿನಾಶಕಾರಿ ವಿಕಿರಣದ ದಾಳಿಯನ್ನು ಕೇವಲ ಮಾನವಕುಲವಷ್ಟೆ ಅಲ್ಲ ಈ ಭೂಮಿಯ ನಿಸರ್ಗವೂ ಎದುರಿಸಬೇಕು. 15 ಕಿಲೋಟನ್ ನ್ಯೂಕ್ಲಿಯರ್ ʼಸಿಡಿತಲೆʼ (warhead)ಯೊಂದು ಸಿಡಿದಾಗ ವಾತಾವರಣಕ್ಕೆ 69 ಕೋಟಿ ಟನ್ನಿನಷ್ಟು ಕಾರ್ಬನ್ ಬಿಡುಗಡೆಯಾಗುತ್ತದೆ. ಇಲ್ಲಿ 15 ಕಿಲೋಟನ್ ಎಂಬುದು ಸಿಡಿತಲೆಯ ತೂಕವಲ್ಲ. ಅದು ಸಿಡಿದಾಗ ಬಿಡುಗಡೆಯಾಗುವ ಶಕ್ತಿಯು 15 ಕಿಲೋ ಟನ್ ಪ್ರಮಾಣದ TNT (Trinitrotoluene) ಸ್ಫೋಟಕವು ಸಿಡಿದು ಹೊರಹಾಕುವ ಶಕ್ತಿಗೆ ಸಮ ಎಂದರ್ಥ. ರಷ್ಯಾದ ಬಳಿ ಜಗತ್ತಿನಲ್ಲೆ ಅತಿಹೆಚ್ಚು ನ್ಯೂಕ್ಲಿಯರ್ ಸಿಡಿತಲೆಗಳಿವೆ. ಅದರ ಬಳಿ ಇರುವ ಕೆಲವು ಸಿಡಿತಲೆಗಳು 300-800 ಕಿಲೋಟನ್ TNT ಸ್ಫೋಟಕ ಶಕ್ತಿಯನ್ನು ಸಾಧಿಸಬಲ್ಲ ಸಾಮರ್ಥ್ಯದವು. 300 ಕಿಲೋಟನ್ ಸಾಮರ್ಥ್ಯದವು ಇಡೀ ವಾಷಿಂಗ್‍ಟನ್ ಅಥವಾ ಲಂಡನ್ ಅಥವಾ ಪ್ಯಾರಿಸ್ ನಗರವನ್ನೆ ನಾಶಮಾಡಬಲ್ಲವು. ಹಾಗೆಯೆ ವಾತಾವರಣಕ್ಕೆ 13,800 ಕೋಟಿ ಟನ್ನಿನಷ್ಟು ಕಾರ್ಬನ್ ಅನ್ನು ಉಗುಳಬಲ್ಲ ಸಿಡಿತವನ್ನು ಸೃಷ್ಟಿಸಬಲ್ಲವು!

 ಜಗತ್ತಿಗೆ ಈಗ ಶಾಂತಿದೂತರ ಅಗತ್ಯ ಬಹಳವಿದೆ. ಬಡಿದಾಡಿಕೊಳ್ಳುವವರ ಸೊಕ್ಕು, ಸೆಡವುಗಳನ್ನು ತಗ್ಗಿಸಿ ಮಾತುಕತೆಗೆ ಸಜ್ಜುಗೊಳಿಸುವ ನೈತಿಕ ಜಾಣ್ಮೆಯ ಶಾಂತಿದೂತರು ಬೇಕು. ಯುದ್ಧವಿರದ ಜಗತ್ತಿನ ಕನಸು ಕಾಣುವವರ ಸಂಖ್ಯೆ ಪ್ರತೀ ದೇಶದಲ್ಲೂ ಹೆಚ್ಚಬೇಕಿದೆ. ಒಪ್ಪಂದದ ಮೇಜಿನಲ್ಲಿ ಸಮಾಧಾನವಾಗಿ ಜರುಗಬೇಕಾದ ಮಾತಿನ ಜಾದೂ ಯುದ್ಧಭೂಮಿಯಲ್ಲಿ ಎಂದಿಗೂ ಜರುಗುವುದಿಲ್ಲ. ಬೇಸರವೆಂದರೆ ಪ್ರತಿಯೊಂದನ್ನೂ ವ್ಯಾಪಾರಿಯ ಧೋರಣೆಯಿಂದ ನೋಡುವ ಜಾಗತೀಕರಣದ ದಿನಗಳಲ್ಲಿ ಯುದ್ಧ ಕೂಡಾ ಒಂದು ಕಾರ್ಪೊರೇಟ್ ಮಾರುಕಟ್ಟೆಯಾಗಿದೆ.

ರಷ್ಯಾ-ಉಕ್ರೇನ್ ಯುದ್ಧ ಶುರುವಾದ ಮೇಲೆ ನ್ಯಾಟೋಕೂಟ, ಅದರಲ್ಲೂ ಮುಖ್ಯವಾಗಿ, ಅಮೆರಿಕಾ ಹಿಂದೆಂದೂ ಕಾಣದಿರುವಷ್ಟು ಲಾಭವನ್ನು ಹತಾರಗಳ ಮಾರಾಟದಿಂದಲೇ ಮಾಡಿಕೊಂಡಿದೆ. ಉಕ್ರೇನ್ ತನ್ನ ಆದಾಯದ ಬಹುಪಾಲನ್ನು ಈ ಹತಾರ ಕೊಳ್ಳಲು ವೆಚ್ಚಮಾಡಿದೆ. ಸದರಿ ಯುದ್ಧ ಮತ್ತು ಹವಾಮಾನ ಬದಲಾವಣೆಯ ಕಾರಣಗಳಿಂದ ಯುರೋಪ್ ಹಿಂದೆಂದೂ ಕಾಣದಿದ್ದಂತಹ ಹಣದುಬ್ಬರ, ಹವಾಮಾನದ ಅತಿರೇಕಗಳು, ಉರುವಲಿನ ಕೊರತೆ, ಬೆಲೆಯೇರಿಕೆಯಿಂದ ತತ್ತರಿಸಿದಾಗ ಅಮೆರಿಕಾದ ತೈಲ ಹಾಗೂ ಯುದ್ಧಹತಾರಗಳನ್ನು ಪೊರೈಸುವ ಕಂಪೆನಿಗಳು ಯುರೋಪಿನ ದೇಶಗಳ ಜೊತೆ ವ್ಯಾಪಾರ ವಹಿವಾಟು ನಡೆಸುತ್ತ ಅಮೆರಿಕಾ ಸರ್ಕಾರದ ಬೆಂಬಲದೊಂದಿಗೆ ಒಂದಕ್ಕೆ ಹತ್ತಾರುಪಟ್ಟು ಅನ್ಯಾಯದ ಲಾಭ ಮಾಡಿಕೊಳ್ಳುತ್ತಿರುವ ಬಗ್ಗೆ ಯುರೋಪಿಯನ್ ಒಕ್ಕೂಟದ ಹಲವು ನಾಯಕರೇ ತಮ್ಮ ಗೊಣಗಾಟವನ್ನು 2022ರ ಡಿಸೆಂಬರ್‌ನಲ್ಲಿ ದಾಖಲಿಸಿದರು (ನೋಡಿ ಯೂಟ್ಯೂಬ್ ಕೊಂಡಿ https://youtu.be/xvU9_TS1RwE) . ಯುದ್ಧದ ತೆರೆಮರೆಯಲ್ಲಿ ನಡೆಯುವ ವ್ಯಾಪಾರದ ಹೇಸಿಗೆಯ ಮುಖಗಳೇನೇ ಇರಲಿ ಕಟ್ಟಕಡೆಯಲ್ಲಿ ಬಳಲುವುದು ಹೆಚ್ಚುವರಿ ಕಾರ್ಬನ್ ಮೊಗೆದುಕೊಂಡ ಭೂಮಿಯ ನಿಸರ್ಗ ಮಾತ್ರ.

ಶಾಂತಿಕಾಲದ ತಲ್ಲಣ

ಕಾರ್ಬನ್ ಬಿಡುಗಡೆಯ ವಿಷಯದಲ್ಲಿ ಬರೀ ಯುದ್ಧವನ್ನು ಮಾತ್ರ ಗುರಿಮಾಡಬೇಕಿಲ್ಲ. ಶಾಂತಿಯ ಕಾಲದಲ್ಲಿ ನಡೆಸುವ ಮಿಲಿಟರಿ ಸಂಬಂಧಿ ಸಮರಾಭ್ಯಾಸ ಮತ್ತು ಕಸರತ್ತುಗಳ ವೇಳೆಯಲ್ಲೂ ಹೇರಳ ಕಾರ್ಬನ್ ಗಾಳಿಗೆ ಸೇರುತ್ತದೆ. ಮಿಲಿಟರಿ ಎಂದ ಕೂಡಲೆ ಅದರ ಜೊತೆ ಯುದ್ಧಕಾಲದಲ್ಲಿ ‘ಪ್ರಶ್ನೆ ಮಾಡಲೇಬಾರದ’ ಕೊಸರಿಕೆಗಳಾದ ದೇಶದ ಹಿತ, ಸ್ವರಕ್ಷಣೆಯ ಕಲಿತನ, ಕಲಿತನದ ಮೆರೆಸಾಟ, ದೇಶಭಕ್ತಿಯ ಉಬ್ಬರ ಮುಂತಾದವು ಹೆಣೆದುಕೊಳ್ಳುವುದರಿಂದ ಯುದ್ಧದ ಔಚಿತ್ಯವನ್ನು ಪ್ರಶ್ನಿಸಬೇಕೆಂದುಕೊಂಡ ಜನಸಾಮಾನ್ಯರು ಮತ್ತು ಪ್ರಾಮಾಣಿಕ ಮಾಧ್ಯಮಗಳು ದನಿ ತೆಗೆಯಲಾಗದ ಅಸಹಾಯಕತೆಗೆ ಸರಿಯುತ್ತಾರೆ. ಈ ಅಸಹಾಯಕತೆಯ ಲಾಭವನ್ನು ಸರ್ಕಾರಗಳು ಹಿರಿದುಕೊಳ್ಳಲು ಹಿಂಜರಿಯುವುದಿಲ್ಲ. ಹೀಗಾಗಿ ಯುದ್ಧಕ್ಕೆ ಮತ್ತು ಮಿಲಿಟರಿಯ ಯಾವ ಯಾವ ವಿಭಾಗದಲ್ಲಿ ಯಾತಕ್ಕೆ ಎಷ್ಟೆಷ್ಟು ವೆಚ್ಚವಾಯಿತು ಎಂಬುದರ ಕರಾರುವಾಕ್ ಲೆಕ್ಕಪತ್ರ ಹೊರಗಿನವರಿಗೆ ತಿಳಿಯುವುದಿಲ್ಲ. ಮಿಲಿಟರಿ ವೆಚ್ಚಕ್ಕೆ ಬಹುತೇಕ ಆಡಿಟ್ ನಡೆಯುವುದೇ ಇಲ್ಲ. ಮಿಲಿಟರಿ ವಾಹನಗಳು ಬಳಸಿಕೊಳ್ಳುವ ಪಳೆಯುಳಿಕೆ ಇಂಧನಗಳು ಎಷ್ಟು ಉರಿದಿವೆ, ಅವಕ್ಕೆ ಎಷ್ಟು ಖರ್ಚಾಗಿದೆ ಎಂಬ ಪಕ್ಕಾ ಲೆಕ್ಕ ಸಿಕ್ಕುವುದೇ ಇಲ್ಲ. ಬಹಳ ವೇಳೆ ಸಂಶೋಧನೆ ಮಾಡುವವರು ನಿಖರತೆಗೆ ಹತ್ತಿರವಾದ ಊಹೆಗೆ ಮೊರೆ ಹೋಗುತ್ತಾರೆ. ಹೀಗಾಗಿ ಶಾಂತಿಕಾಲದಲ್ಲಿ ಮಿಲಿಟರಿಗಳು ಬಿಡುಗಡೆ ಮಾಡುವ ಕಾರ್ಬನ್ ಎಷ್ಟು ಎಂದು ತಿಳಿಯುವುದು ಒಂದು ಕಸರತ್ತೇ ಸರಿ.

ತಮ್ಮ ಹೆಸರನ್ನು ಹೊರಹಾಕಬಾರದು ಎಂಬ ಷರತ್ತಿನಡಿ ಜರ್ಮನಿಯ ಮಿಲಿಟರಿ ಅಧಿಕಾರಿಯೊಬ್ಬರು ನೀಡಿದ ಒಂದು ಮಾಹಿತಿ ಇಲ್ಲಿದೆ. 2019ರಲ್ಲಿ ಪೊಲ್ಯಾಂಡಿನಲ್ಲಿ ನಡೆದ ನ್ಯಾಟೋ ಕೂಟದ ಟ್ಯಾಂಕ್ ಕಸರತ್ತಿನಲ್ಲಿ ಜರ್ಮನಿಯ ಲೆಪರ್ಡ್-2 ಟ್ಯಾಂಕುಗಳು ಪಾಲ್ಗೊಂಡಿದ್ದವು. ಕೆಲವೇ ತಾಸುಗಳ ಕಾಲ ನಡೆದ ಈ ಕಸರತ್ತಿನಲ್ಲಿ ಪ್ರತೀ ಲೆಪರ್ಡ್-2 ಟ್ಯಾಂಕು ನೂರು ಕಿ.ಮೀ. ಚಲಿಸಲು 400 ಲೀಟರಿನಷ್ಟು ಡೀಸೆಲ್ ಅನ್ನು ಉರಿಸಿದ್ದಿತು. ಪ್ರತೀ ಲೀಟರ್ ಡೀಸೆಲ್ ಉರಿದಾಗ 2.7ಕೆ.ಜಿ.ಯಷ್ಟು ಕಾರ್ಬನ್ ಬಿಡುಗಡೆಯಾಗುತ್ತದೆ.

ಯುದ್ಧ ಮತ್ತು ಶಾಂತಿಯ ಕಾಲ ಹೀಗೆ ಎರಡನ್ನೂ ಪರಿಗಣಿಸಿ ಹೇಳುವುದಾದರೆ ಕಳೆದ 20 ವರುಷಗಳಲ್ಲಿ ಅಮೆರಿಕಾ ಮತ್ತು ಅದರ ಮಿತ್ರರಾಷ್ಟ್ರಗಳು ಒಟ್ಟು 3,37,000 ಬಾಂಬು ಮತ್ತು ಮಿಸೈಲುಗಳನ್ನು ಸಿಡಿಸಿದ್ದವು ಎಂದು ಒಂದು ಅಧ್ಯಯನ ಹೇಳುತ್ತದೆ. ಬ್ರೌನ್ ವಿಶ್ವವಿದ್ಯಾನಿಲಯದ ವಾಟ್ಸನ್ ಸಂಸ್ಥೆಯ ಅಧ್ಯಯನದ ಪ್ರಕಾರ ಅಮೆರಿಕಾದ ಹಿರಿಹಂಬಲದ ‘ಭಯೋತ್ಪಾದಕತೆಯ ಮೇಲಿನ ಸಮರ’ (War on Terror)ದ ಕಾರ್ಯಾಚರಣೆಗಳಲ್ಲಿ 120 ಕೋಟಿ ಟನ್ನುಗಳಷ್ಟು ಕಾರ್ಬನ್ ವಾತಾವರಣದ ಪಾಲಾಗಿತ್ತು. ವರುಷಪೂರ್ತಿ 25 ಕೋಟಿ 70 ಲಕ್ಷ ಕಾರುಗಳು ರಸ್ತೆಯಲ್ಲೋಡಿ ಬಿಡುಗಡೆ ಮಾಡುವ ಕಾರ್ಬನ್ನಿಗೆ ಇದು ಸಮ. ಇನ್ನು ‘ದೊಡ್ಡಣ್ಣ’ನ ಜೊತೆ ಪೈಪೋಟಿಗೆ ಬಿದ್ದು ಅಥವಾ ಆತನ ನೆರವಿನಿಂದ ಇಲ್ಲವೆ ಆತನನ್ನೆ ಮಾದರಿಯಾಗಿಟ್ಟುಕೊಂಡು ತಮ್ಮ ತಮ್ಮ ಮಿಲಿಟರಿಗಳನ್ನು ಬಲಗೊಳಿಸಿಕೊಳ್ಳಲು ಸದಾ ಪ್ರಯತ್ನಿಸುವ ಚೀನಾ, ರಷ್ಯಾ, ಇರಾನ್, ಉತ್ತರ ಕೊರಿಯಾದಂತಹವು ಒಂದು ಕಡೆ ಇದ್ದರೆ ದಕ್ಷಿಣ ಕೊರಿಯಾ, ಇಂಡಿಯಾ, ಇಸ್ರೇಲ್, ಬ್ರಿಟನ್, ಜಪಾನ್, ಸೌದಿ ಅರೆಬಿಯಾ, ಯುರೋಪಿಯನ್ ಒಕ್ಕೂಟದ ದೇಶಗಳಂತಹವು ಇನ್ನೊಂದು ಕಡೆ ಇವೆ. ಈ ದೇಶಗಳ ಮಿಲಿಟರಿ ಸಂಬಂಧಿ ಕಾರ್ಬನ್ ಕೊಡುಗೆಯ ಮೇಲೆ ಇನ್ನಷ್ಟೆ ನಿಚ್ಚಳ ಅಧ್ಯಯನದ ವರದಿಗಳು ಬರಬೇಕು. ಅಂದಹಾಗೆ ಸಾಹಿತ್ಯದಲ್ಲಿ War and Peace ಕಾದಂಬರಿ ಬಂದು ಹೋಗಿದೆ. ವಿಜ್ಞಾನದಲ್ಲಿ War and Carbon ಎಂಬ ಸಮಗ್ರ ಸಂಶೋಧನೆಯ ಥೀಸಿಸ್ ಇನ್ನೂ ಬರಬೇಕಿದೆ.

ಕಾರ್ಬನ್ ಕೊಡುಗೈ ಅಮೆರಿಕಾದ ಮಿಲಿಟರಿ

ಮಿಲಿಟರಿಯಲ್ಲಿ ಬಂಡವಾಳ ಹೂಡಿಕೆ, ನಿರ್ವಹಣೆ, ಕಾರ್ಯಾಚರಣೆ ಮತ್ತು ಸಂಶೋಧನೆಗಳಿಗೆ ಜಗತ್ತಿನಲ್ಲಿ ಅತಿ ಹೆಚ್ಚು ಹಣ ವೆಚ್ಚ (ಪೋಲು?) ಮಾಡುವ ದೇಶವೆಂದರೆ ಅಮೆರಿಕಾ. ಸಹಜವಾಗಿ ಅತಿ ಹೆಚ್ಚು ಕಾರ್ಬನ್ ಬಿಡುಗಡೆಯ (ಕು)ಖ್ಯಾತಿಯೂ ಅದರ ಬೆನ್ನಿಗಿದೆ. ಸ್ವಿಟ್ಜರ್‍ಲ್ಯಾಂಡ್, ಸಿಂಗಪುರ ಮತ್ತು ಪೆರು ದೇಶಗಳೆಲ್ಲ ಕೂಡಿ ಒಂದು ವರುಷದಲ್ಲಿ ಒಟ್ಟಾರೆ ಬಿಡುಗಡೆ ಮಾಡುವ ಕಾರ್ಬನ್‍ಗಿಂತ ಹೆಚ್ಚಿನ ಪ್ರಮಾಣದ ಕಾರ್ಬನ್ ಅನ್ನು ಅಮೆರಿಕಾದ ಮಿಲಿಟರಿ ಒಂದೇ ಬಿಡುಗಡೆ ಮಾಡಬಲ್ಲುದು. ಅದರ ಪ್ರತೀ ಮಿಲಿಟರಿ ಸಿಬ್ಬಂದಿಯ ತಲೆಗೆ ವರುಷಕ್ಕೆ 42 ಟನ್ನುಗಳಷ್ಟು ಕಾರ್ಬನ್ ಉತ್ಪಾದನೆಯಾಗುತ್ತದೆ (2020ರ ಲೆಕ್ಕದಂತೆ ಪ್ರತೀ ಭಾರತೀಯನ ತಲೆಗೆ ಭಾರತದಲ್ಲಿ ಒಟ್ಟಾರೆ 2.4 ಟನ್ನಿನಷ್ಟು ಕಾರ್ಬನ್ ಬಿಡುಗಡೆಯಾಗಿತ್ತು)!

ಅಮೆರಿಕಾದ ಡಿಫೆನ್ಸ್ ಇಲಾಖೆಯ ನಿಯಂತ್ರಣದಲ್ಲಿ ಜಗತ್ತಿನಾದ್ಯಂತ 800 ಮಿಲಿಟರಿ ನೆಲೆಗಳಿವೆ. ಈ ನೆಲೆಗಳಲ್ಲಿರುವ ಅದರ 5,66,000ದಷ್ಟು ತರಬೇತಿ ಕೇಂದ್ರಗಳು, ಡಾರ್ಮಿಟರಿಗಳು, ಕಛೇರಿಗಳು, ಪ್ರಯೋಗಾಲಯಗಳು, ಹತಾರ ತಯಾರಿಕೆಯ ಘಟಕಗಳು ಹಾಗೂ ಇತರ ಕಟ್ಟಡಗಳಲ್ಲಿ ಮತ್ತು ನೆಲ, ನೀರು, ಗಾಳಿ ಹೀಗೆ ಎಲ್ಲ ಮಾರ್ಗಗಳ ಮೂಲಕ ಅವನ್ನು ತಲುಪಲು ಬಳಸುವ ಬಗೆಬಗೆಯ ವಾಹನಗಳ ಲೆಕ್ಕಕ್ಕೆ ವರುಷಕ್ಕೆ ಖರೀದಿಸಲ್ಪಟ್ಟ ಪಳೆಯುಳಿಕೆ ಇಂಧನಗಳಲ್ಲಿ ಶೇಕಡಾ 40ರಷ್ಟನ್ನು ಶಾಂತಿಯ ಕಾಲದಲ್ಲೆ ಉರಿಸಲಾಗುತ್ತದೆ. ಇನ್ನು ಯುದ್ಧದ ಅಣಕು ಅಭ್ಯಾಸ ಮತ್ತು ನೇರ ಕಾರ್ಯಾಚರಣೆಗಳಲ್ಲಿ ಉರಿಸಲ್ಪಡುವ ಪಳೆಯುಳಿಕೆ ಇಂಧನಗಳ ಪ್ರಮಾಣ ಮತ್ತು ಅವು ಉಗುಳುವ ಕಾರ್ಬನ್ ಲೆಕ್ಕದ ಬಗ್ಗೆ ‘ದೊಡ್ಡಣ್ಣ’ ಮಂಡೆ ಕೆಡಿಸಿಕೊಳ್ಳುವುದೇ ಇಲ್ಲ.  

ಎದುರಾಳಿಯ ಎಂತಹುದೇ ಸವಾಲನ್ನು ಎದುರಿಸಿ ನೆಮ್ಮದಿಯಾಗಿ ಹೊರಟ ನೆಲೆಗೆ ಮರಳಬಲ್ಲ, ಯುದ್ಧಬಳಕೆಯ ಜೆಟ್ ವಿಮಾನಗಳ ಚರಿತ್ರೆಯಲ್ಲೆ ತಾಂತ್ರಿಕವಾಗಿ ಊಹೆಗೂ ಮೀರಿ ಮುಂದುವರೆದಿರುವ ಅಮೆರಿಕಾ ಮಿಲಿಟರಿಯ ಈ-35 ಬಾಂಬರ್ ಜೆಟ್ ವಿಮಾನವು 100 ನಾಟಿಕಲ್ ಮೈಲಿ(1 ನಾಟಿಕಲ್ ಮೈಲು 1.852 ಕಿ.ಮೀ.ಗೆ ಸಮ)ಯಷ್ಟು ದೂರದ ಒಂದು ಹಾರಾಟದಲ್ಲಿ ಒಬ್ಬ ಬ್ರಿಟಿಷ್ ಪ್ರಜೆಯ ಸಾಮಾನ್ಯ ಕಾರು ಒಂದು ವರುಷದಲ್ಲಿ ಸರಾಸರಿ ಬಿಡುಗಡೆ ಮಾಡುವುದಕ್ಕಿಂತ ಹೆಚ್ಚಿನ ಕಾರ್ಬನ್ ಅನ್ನು ಬಿಡುಗಡೆ ಮಾಡಬಲ್ಲುದು. ದಾಳಿ ಮಾಡುವ (Fighter) ಮತ್ತು ವೈರಿಗಳ ದಾಳಿ ವಿಮಾನಗಳನ್ನು ನಡುವಲ್ಲೆ ಅಡ್ಡಗಟ್ಟುವ (Interceptor) ಜೆಟ್ ವಿಮಾನಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿರುವುದು ಅಮೆರಿಕಾದ ಮಿಲಿಟರಿಯಲ್ಲಿ. 2022ರ ಲೆಕ್ಕದಂತೆ 1,914 ಜೆಟ್ ವಿಮಾನಗಳು ಅಮೆರಿಕಾದ ಬಳಿ ಇವೆ. ಬೋಸ್ಟನ್ ವಿಶ್ವವಿದ್ಯಾನಿಲಯದ ಪೊಲಿಟಿಕಲ್ ಸೈನ್ಸ್ ಪ್ರೊಫೆಸರ್ ನೆಟಾ ಸಿ. ಕ್ರಾಫರ್ಡ್ ಅವರ ಸಂಶೋಧನೆಯ ಪ್ರಕಾರ ಈ-35 ಜೆಟ್ ವಿಮಾನವು ಪ್ರತೀ ಒಂದು ಕಿ.ಮೀ. ಹಾರಾಟದಲ್ಲಿ 5.6 ಲೀಟರಿನಷ್ಟು ಅತ್ಯುತ್ತಮ ಗುಣಮಟ್ಟದ ಸೀಸಮುಕ್ತ ಸೀಮೆಎಣ್ಣೆ (unleaded kerosene, Jet A-1) ಅಥವಾ ನಾಫ್ತಾ-ಸೀಮೆಎಣ್ಣೆ ಮಿಶ್ರಣದ (naphtha-kerosene blend, Jet-B) ಉರುವಲನ್ನು ಉರಿಸಿರುತ್ತದೆ. ಸತತ ಹಾರಿ ಅದರ ಉರುವಲು ಟ್ಯಾಂಕ್ ಒಮ್ಮೆ ಪೂರ್ತಿ ಖಾಲಿಯಾದಾಗ ವಾತಾವರಣಕ್ಕೆ 28,000 ಕೆ.ಜಿ.ಯಷ್ಟು ಕಾರ್ಬನ್ ಬಿಡುಗಡೆಯಾಗಿರುತ್ತದೆ. ಮಿಲಿಟರಿಗೆ ಸಂಬಂಧಿಸಿದ ವಾಹನಗಳಲ್ಲೆ ಅತಿ ಹೆಚ್ಚು ಕಾರ್ಬನ್ ಉಗುಳುವುದು ಜೆಟ್ ವಿಮಾನಗಳು.

ಬಿಚ್ಚಿಡುವುದಕ್ಕಿಂತ ಬಚ್ಚಿಡುವುದೇ ಹೆಚ್ಚು

ಮಿಲಿಟರಿಗಳು ಹೆಚ್ಚಾಗಿ ಕಾರ್ಬನ್ ಬಿಡುಗಡೆಯ ಬಗ್ಗೆ ಸತ್ಯ ಹೇಳುವುದಿಲ್ಲ. ಬಿಚ್ಚಿಡುವುದಕ್ಕಿಂತ ಬಚ್ಚಿಡುವುದೇ ಹೆಚ್ಚು. ಬ್ರಿಟನ್ನಿನ ಡಿಫೆನ್ಸ್ ಮಿನಿಸ್ಟ್ರಿ ತನ್ನ ಮಿಲಿಟರಿ ಪಡೆಗಳಿಂದ ವರುಷಕ್ಕೆ ಸರಾಸರಿ 0.3 ಕೋಟಿ ಟನ್ನಿನಷ್ಟು ಕಾರ್ಬನ್ ಬಿಡುಗಡೆಯಾಗುವುದೆಂದು ಬೂಸಿ ಬಿಟ್ಟಿತ್ತು. Scientists for Global Responsibility (SGR) ಎಂಬ ಅಧ್ಯಯನ ತಂಡವು ನಿಜಕ್ಕೂ ಇದು 1.1 ಕೋಟಿ ಟನ್ನಿನಷ್ಟು ಎಂದು ಪತ್ತೆ ಮಾಡಿತು. 2019ರಲ್ಲಿ ಯುರೋಪಿಯನ್ ಒಕ್ಕೂಟದ ಮಿಲಿಟರಿ ಪಡೆಗಳು ವರುಷಕ್ಕೆ 2.48 ಕೋಟಿ ಟನ್ನುಗಳಷ್ಟು ಕಾರ್ಬನ್ ಬಿಡುಗಡೆ ಮಾಡಿದ್ದನ್ನು SGR ಲೆಕ್ಕ ಹಾಕಿತ್ತು. ಇದರಲ್ಲಿ ಮೂರನೇ ಒಂದು ಪಾಲು ಫ್ರಾನ್ಸ್‌ಗೆ ಸೇರಿದ್ದಾಗಿತ್ತು. ಯುದ್ಧ ಶುರುಮಾಡುವ ಕಡೆಯ ಗಳಿಗೆಯ ತನಕ ದಾಳಿಯ ಸ್ವರೂಪ ಮತ್ತು ಸಮಯಗಳ ವಿವರಗಳನ್ನು ಮುಚ್ಚುಮರೆ ಮಾಡುವುದರಿಂದ ಮತ್ತು ಅಕಸ್ಮಾತ್ ದಾಳಿಗೆ ಸಿಲುಕುವ ಅಪಾಯಗಳ ನಡುವೆಯೆ ಯುದ್ಧಭೂಮಿಗೆ ತೆರಳಿ ಅಧ್ಯಯನ ಮಾಡಬೇಕಿರುವುದರಿಂದ ಸಾಮಾನ್ಯವಾಗಿ ಯುದ್ಧಸಂಬಂಧಿ ಕಾರ್ಬನ್ ಬಿಡುಗಡೆಯ ಲೆಕ್ಕಾಚಾರ ಯಾವಾಗಲೂ ನೂರರಷ್ಟು ಕರಾರುವಾಕ್ ಇರುವುದಿಲ್ಲ. ಫಲಿತಾಂಶ ಶೇಕಡಾ 10-20ರಷ್ಟು ಆಚೀಚೆ ಇರುತ್ತದೆ. ಅಧ್ಯಯನದ ಈ ಮಿತಿಯನ್ನು ಬಳಸಿಕೊಂಡು ಸರ್ಕಾರಗಳು ಬಣ್ಣಗಟ್ಟಿ ಸುಳ್ಳು ಹೇಳುವುದನ್ನೇ ಹೆಚ್ಚು ಇಷ್ಟಪಡುತ್ತವೆ.

ಜಗತ್ತಿನ ದೇಶದೇಶದ ಮಿಲಿಟರಿಗಳು ಭದ್ರತೆಯನ್ನು ಮುಂತಳ್ಳಿ ಏನ್ನನ್ನಾದರೂ ಬಚ್ಚಿಟ್ಟುಕೊಳ್ಳಲಿ, ಕಡೆಯಪಕ್ಷ ತಮಗೆ ಸೇರಿದ ಎಲ್ಲ ಬಗೆಯ ಯುದ್ಧವಾಹನಗಳು ವರುಷಕ್ಕೆ ಎಷ್ಟು ಪಳೆಯುಳಿಕೆ ಇಂಧನಗಳನ್ನು ಬಳಸಿದವು, ಎಷ್ಟು ಕಾರ್ಬನ್ ಬಿಡುಗಡೆಯಾಯಿತು ಎಂಬ ಪಾರದರ್ಶಕ ಲೆಕ್ಕವನ್ನು ಹೊರಗೆಡಹಲಿ. ‘ಮಿಲಿಟರಿ ಕಾರ್ಬನ್ audit’ ಅನ್ನು ಜಾಗತಿಕ ವೇದಿಕೆಗಳಲ್ಲಿ ವಿಶ್ವಸಂಸ್ಥೆಯ Inter-governmental Panel on Climate Change ವಿಭಾಗವು ಒತ್ತಾಯಿಸಬೇಕು. ದುಬೈನಲ್ಲಿ ಜರುಗಿದ COP28 ಸಮಾವೇಶದಲ್ಲಿ ವಾತಾವರಣಕ್ಕೆ ಮಿಲಿಟರಿ ಪಾಲಿನ ಕಾರ್ಬನ್ ಬಿಡುಗಡೆಯ ಕುರಿತು ಗಂಭೀರ ಚರ್ಚೆಗಳಾಗಲೇ ಇಲ್ಲ. ಹೋಗಲಿ, ಮಿಲಿಟರಿ ವೆಚ್ಚವನ್ನು ವರುಷ ವರುಷ ಕಡಿತಗೊಳಿಸುತ್ತ ಸಾಗುವ ಬಗ್ಗೆ ಒಂದು ಜಾಗತಿಕ ಒಡಂಬಡಿಕೆಯಾದರೂ ಕಾರ್ಯರೂಪಕ್ಕೆ ಬರಬೇಕಿದೆ.

ಮುಗಿಸುವ ಮುನ್ನ ಮತ್ತೊಂದು ಮಾತು. ಯುದ್ಧಗಳಿಗಾಗಿ ಹೆಚ್ಚೆಚ್ಚು ಆಧುನಿಕ ಹತಾರಗಳು ತಯಾರಾಗುತ್ತಿವೆ ಎಂದರೆ ಅವು ಹೆಚ್ಚೆಚ್ಚು ರಕ್ಷಣೆ ನೀಡುತ್ತವೆ ಎಂದರ್ಥವಲ್ಲ, ವಾತಾವರಣದ ಆರೋಗ್ಯವನ್ನು ಹಾಳುಗೆಡವಿ ಜಾಗತಿಕ ತಾಪವನ್ನು ಇನ್ನಷ್ಟು ಹೆಚ್ಚಿಸುತ್ತವೆ ಎಂದೇ ಅರ್ಥ. ಎರಡು ದೇಶಗಳು ಯುದ್ಧ ಮಾಡುತ್ತಿವೆ ಎಂದರೆ ಅವೆರಡೇ ಬಡಿದಾಡಿಕೊಳ್ಳುತ್ತಿವೆ ಎಂದರ್ಥವಲ್ಲ, ಎರಡೂ ಕೂಡಿ ಭೂ ವಾತಾವರಣದ ವಿರುದ್ಧ ಕಾಳಗ ನಡೆಸುತ್ತಿವೆ ಎಂದೇ ಅರ್ಥ. ಹೀಗಾಗಿ ರಷ್ಯಾ-ಉಕ್ರೇನ್ ಯುದ್ಧವು ಬೇಗನೆ ನಿಂತುಹೋಗಿ ಇದೇ ಮಾನವಕುಲದ ಕಡೆಯ ಯುದ್ಧ ಎನಿಸಬೇಕು. ಯುದ್ಧಕ್ಕೆ ಕಾರಣ ಏನೇ ಇರಲಿ, ಎಷ್ಟೇ ಬಲವಾಗಿರಲಿ ಯುದ್ಧ ಬೇಡ ಎನ್ನುವ ಶಾಂತಿಪ್ರಿಯರ ಚಳವಳಿ ಎಲ್ಲ ದೇಶಗಳಲ್ಲೂ ಬಲಗೊಳ್ಳಬೇಕು. ನಾವೀಗ ‘ದೇಶವೇ ಕೊನೆ’ ಎಂಬ ಗಡಿಗೆರೆಗಳ ಹಂತವನ್ನು ದಾಟಿ ‘ನಾವೆಲ್ಲ ಒಂದೇ ಜಗತ್ತಿಗೆ ಸೇರಿದ ಮಾನವರು’ ಎಂಬ ವಿಶ್ವಮಾನವತೆಯ ಕಾಳಜಿಗೆ ಬಡ್ತಿ ಹೊಂದಲು ಪ್ರಯತ್ನಿಸದೆ ಹೋದರೆ ಮುಂದೆ ಕಾದಿರುವ ಇನ್ನಷ್ಟು ಭೀಕರ ಹವಾಮಾನ ಬದಲಾವಣೆಗಳಿಂದ ನಮ್ಮನ್ನುಳಿಸಲು ಜಗತ್ತಿನ ಯಾವ ದೇಶದ ಮಿಲಿಟರಿಗೂ ಸಾಧ್ಯವಾಗುವುದಿಲ್ಲ.

ನನಗೆ ಗೊತ್ತು, ಜಗತ್ತು ಯುದ್ಧದಿಂದ ಪೂರ್ತಿ ಮುಕ್ತವಾಗುವುದು ಮತ್ತು ನಾವೆಲ್ಲ ವಿಶ್ವಮಾನವರಾಗುವುದು ಎರಡೂ ಅಸಾಧ್ಯಾದರ್ಶ (too idealistic to achieve) ದ ಗುರಿಗಳು ಎಂದು. ಆದರೆ ನಮಗಾಗಿ ಮತ್ತು ಉಳಿದೆಲ್ಲ ಜೀವಸಂಕುಲಗಳಿಗಾಗಿ ವಿಶ್ವದಲ್ಲಿರುವ ಒಂದೇ ಜೀವಪೋಷಕ ಭೂಮಿಯನ್ನು ಉಳಿಸಿಕೊಳ್ಳಲೇ ಬೇಕೆಂದಿದ್ದರೆ ಈ ಅಸಾಧ್ಯಾದರ್ಶಗಳು ನನಸಾಗಲೆ ಬೇಕು. ಬೇರೆ ದಾರಿಯೆ ಇಲ್ಲ.                                    

ನಡೆಯದೆ ಹೋದ ಯುದ್ಧವೆ ಅತಿ ಮುಖ್ಯ ಯುದ್ಧ ಚೀನಾ ಗಾದೆ

ರವಿಕುಮಾರ್‌ ಕೆ ಎಸ್‌

ವಿಜ್ಞಾನ ಲೇಖಕರು

More articles

Latest article