ಕೋಲಾರ. ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಕ್ಫ್ ತಿದ್ದುಪಡಿ ಕಾಯ್ದೆ-2025 ವಿರೋಧಿಸಿ ನಗರದ ಮುಸ್ಲಿಂ ಪ್ರಾರ್ಥನಾ ಮಂದಿರಗಳಲ್ಲಿ ಮುಸ್ಲಿಂ ಸಮುದಾಯದವರು ಕೈಗಳಿಗೆ ಕಪ್ಟು ಪಟ್ಟಿ ಧರಿಸಿಕೊಂಡು ಮೌನ ಪ್ರತಿಭಟನೆ ನಡೆಸಿದರು.
ಶುಕ್ರವಾರದ ನಮಾಜ್ ನಲ್ಲಿ ಭಾಗವಹಿಸಿ ಮಸೀದಿಯಿಂದ ಹೊರಬಂದು ಮುಸ್ಲಿಮರು ಕೈ ಗೆ ಕಪ್ಟು ಪಟ್ಟಿ ಕಟ್ಟಿಕೊಳ್ಳುವ ಮೂಲಕ ವಕ್ಫ್ ತಿದ್ದುಪಡಿ ಕಾಯ್ದೆ ವಿರೋಧಿಸಿ ಮೌನ ಪ್ರತಿಭಟನೆ ನಡೆಸಿದರು.
ನಗರದ ಎಲ್ಲಾ ಪ್ರಾರ್ಥನಾ ಮಂದಿರಗಳಲ್ಲೂ ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ನಿರ್ದೇಶನದಂತೆ ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಪ್ರಮುಖ ಪ್ರಾರ್ಥನಾ ಮಂದಿರಗಳಾದ ಹವೇಲಿ ಮೊಹಲ್ಲಾದ ಖಾನ್ ಸಾಬ್ ಪ್ರಾರ್ಥನಾ ಮಂದಿರ ಹಾಗೂ ಅಮ್ಮವಾರಿ ಪೇಟೆಯ ಬಿಲಾಲ್ ಮಸೀದಿಗಳಲ್ಲಿ ಮುಸಲ್ಮಾನರು ಮೌನ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.