ಬೆಂಗಳೂರು: ಚಿತ್ರನಟಿ, ಮಾಜಿ ಲೋಕಸಭಾ ಸದಸ್ಯೆ ರಮ್ಯಾ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ಚಿತ್ರ ಹಾಗೂ ಬೆದರಿಕೆ ಸಂದೇಶಗಳನ್ನು ಕಳುಹಿಸಿದ್ದ ಪ್ರಕರಣ ಸಂಬಂಧ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು, 47 ಮಂದಿಯ ಐ.ಪಿ ವಿಳಾಸಗಳನ್ನು ಪತ್ತೆಹಚ್ಚಿದ್ದಾರೆ.
ಈಗಾಗಲೇ 15 ಮಂದಿಯನ್ನು ಗುರುತಿಸಲಾಗಿದ್ದು, ಈ ಪೈಕಿ ನಾಲ್ವರು ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸಲಾಗುತ್ತಿದೆ. ಪ್ರಕರಣದ ತನಿಕೆಯನ್ನು ಚುರುಕುಗೊಳಿಸಿರುವ ಪೊಲೀಸರು ರಮ್ಯಾ ಅವರಿಂದಲೂ ಮಾಹಿತಿ ಸಂಗ್ರಹಿಸಿದ್ದಾರೆ.
ಬೆಂಗಳೂರು, ಕೋಲಾರ ಬಳ್ಳಾರಿ, ಚಿತ್ರದುರ್ಗ ಸೇರಿ ವಿವಿಧ ಜಿಲ್ಲೆಗಳಲ್ಲಿರುವ ಉಳಿದ ಖಾತೆದಾರರನ್ನು ಪತ್ತೆ ಹಚ್ಚಲಾಗುತ್ತಿದೆ. ಬೆಂಗಳೂರು ಹೊರವಲಯದ ಕೆಲವು ವ್ಯಕ್ತಿಗಳ ಖಾತೆಗಳಿಂದಲೂ ಬೆದರಿಕೆ ಸಂದೇಶ ಬಂದಿರುವುದು ತಿಳಿದು ಬಂದಿದೆ. ಕೆಲವರು ಕ್ಷಮೆ ಕೇಳಿದ್ದರೆ ಇನ್ನೂ ಕೆಲವರು ಆಕಸ್ಮಿಕವಾಗಿ ಮಾಹಿತಿ ಇಲ್ಲದೆ ಸಂದೇಶ ಮಾಡಿರುವುದಾಗಿ ಹೇಳಿದ್ದಾರೆ ಎಂದು ಪೊಲೀಸರು ತಿಳಿಸಿದಾರೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಸೇರಿದಂತೆ ಏಳು ಮಂದಿ ಆರೋಪಿಗಳಿಗೆ ಜಾಮೀನು ನೀಡಿದ್ದ ಕರ್ನಾಟಕ ಹೈಕೋರ್ಟ್ ಕ್ರಮಕ್ಕೆ ಸುಪ್ರೀಂಕೋರ್ಟ್ ಛೀಮಾರಿ ಹಾಕಿ ಜಾಮೀನಿನ ಮೇಲಿನ ಆದೇಶವನ್ನು ಕಾಯ್ದಿರಿಸಿದೆ.
ಸುಪ್ರೀಕೋರ್ಟ್ ಹೇಳಿಕೆಯನ್ನು ಆಧರಿಸಿ ರಮ್ಯಾ ತಮ್ಮ ‘ಎಕ್ಸ್’ ಖಾತೆಯಲ್ಲಿ ‘ಭಾರತದ ಸಾಮಾನ್ಯ ಜನರಿಗೆ ಸುಪ್ರೀಂ ಕೋರ್ಟ್ ಒಂದು ಭರವಸೆಯ ಕಿರಣ ಇದ್ದಂತೆ. ರೇಣುಕಾಸ್ವಾಮಿ ಕುಟುಂಬಕ್ಕೆ ನ್ಯಾಯ ಸಿಗಲಿದೆ ಎನ್ನುವ ನಿರೀಕ್ಷೆಯಲ್ಲಿ’ ಎಂದು ಪೋಸ್ಟ್ ಮಾಡಿದ್ದರು.