ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣು ಸ್ಮಾರಕ : ಅರ್ಜಿ ವಜಾಗೊಳಿಸಿದ ಕೋರ್ಟ್

Most read

ಬೆಂಗಳೂರು: ಅಭಿಮಾನ್ ಸ್ಟುಡಿಯೋದಲ್ಲಿ ಸಾಹಸ ಸಿಂಹ ವಿಷ್ಣುವರ್ಧನ್ ಅವರ ಸಮಾಧಿ ಇದೆ. ಆದರೆ ಅದರ ಅಭಿವೃದ್ಧಿ ಆಗಲೇ ಇಲ್ಲ. ವಿಷ್ಣುವರ್ಧನ್ ಅವರ ಅಭಿಮಾನಿಗಳು ಸಾಕಷ್ಟು ಹೋರಾಟ‌ ಮಾಡಿದರು ಆ ಜಾಗದ ವಿಚಾರ ಕ್ಲಿಯರ್ ಆಗ್ತಾ ಇಲ್ಲ. ಇದೀಗ ಅದಕ್ಕೆ ಸಂಬಂಧಿಸಿದ್ದ ಅರ್ಜಿ ವಜಾಗೊಂಡಿದೆ. ಸ್ಮಾರಕ‌ ನಿರ್ಮಾಣ ಮಾಡುವುದಕ್ಕೆ 10 ಗುಂಟೆ ಜಾಗ ಮಂಜೂರು ಮಾಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಹೈಕೋರ್ಟ್ ಗೆ ಅರ್ಜಿ ಹಾಕಲಾಗಿತ್ತು. ಇದೀಗ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.

ಮುಖ್ಯ ನ್ಯಾಯಮೂರ್ತಿ ಎನ್‌.ವಿ ಅಂಜಾರಿಯಾ ನೇತೃತ್ವದ ವಿಭಾಗೀಯ ನ್ಯಾಯಪೀಠ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡಿತ್ತು. ಅರ್ಜಿದಾರರ ಪರ ವಾದ ಆಲಿಸಿ ಕೋರ್ಟ್ ತನ್ನ ನಿಲುವು ಸ್ಪಷ್ಟಪಡಿಸಿದೆ. ಜೊತೆಗೆ ಸಲಹೆಯನ್ನು ನೀಡಿದೆ. ಸಿನಿಮಾ ಕಲಾವಿದರ ಸ್ಮಾರಕಕ್ಕೆ ಜಾಗ ಕೊಡಿ ಎಂದು ಸರ್ಕಾರಕ್ಕೆ ಆದೇಶ ನೀಡಿ ಎಂದು ಕೋರ್ಟ್ ಗೆ ಅರ್ಜಿ ಸಲ್ಲಿಕೆ ಮಾಡುವುದು ಸೂಕ್ತವಲ್ಲ. ಈ ಅರ್ಜಿಯಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿಯೂ ಅಡಗಿಲ್ಲ. ಇಂತಹ ವಿಚಾರಗಳಲ್ಲಿ ಹೈಕೋರ್ಟ್ ವ್ಯವಹರಿಸಲು ಸಾಧ್ಯವಿಲ್ಲ ಎಂದಿದೆ.

ಕೆಂಗೇರಿ ಹೋಬಳಿ ಮೈಲಸಂದ್ರ ಗ್ರಾಮದ ಸರ್ವೇ ನಂ. 26 ಮತ್ತು 68ರಲ್ಲಿ 10 ಗುಂಟೆ ಜಾಗವನ್ನು ಮಂಜೂರು ಮಾಡಲು 2017ರಲ್ಲಿ ತಹಸೀಲ್ದಾರ್‌ ಜಿಲ್ಲಾಧಿಕಾರಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಆದರೆ ಈವರೆಗೂ ಆ ಪ್ರಸ್ತಾವನೆಗೆ ಯಾವುದೇ ಅನುಮೋದನೆ ದೊರೆತಿಲ್ಲ. ಆದ್ದರಿಂದ ಆ 10 ಗುಂಟೆ ಜಾಗ ಮಂಜೂರು ಮಾಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ವಿ. ಎಸ್. ಎಸ್. ಅಭಿಮಾನ್ ಡಾ. ವಿಷ್ಣುವರ್ಧನ್ ಪುಣ್ಯಭೂಮಿ ಟ್ರಸ್ಟ್ ಕೋರಿತ್ತು. ವಿಷ್ಣುವರ್ಧನ್ ಕುಟುಂಬ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣಕ್ಕೆ ಜಾಗ ಕೇಳಿತ್ತು. ಅದರಂತೆ ಮೈಸೂರಿನ ಎಚ್.ಡಿ. ಕೋಟೆ ರಸ್ತೆಯ ಹಾಲಾಳು ಸಮೀಪ ಸರ್ಕಾರ ಜಾಗ ನೀಡಿತ್ತು. 11 ಕೋಟಿ ರೂ. ವೆಚ್ಚದಲ್ಲಿ ಸ್ಮಾರಕ ನಿರ್ಮಿಸಿ ಕಳೆದ ವರ್ಷ ಉದ್ಘಾಟನೆ ಮಾಡಲಾಗಿದೆ.

More articles

Latest article