ವಿಐಪಿ ಸಂಚಾರದ ವೇಳೆ ಸೈರನ್‌ ಬಳಕೆಗೆ ಕಡಿವಾಣ: ಡಿಜಿಪಿ ಎಂ.ಎ. ಸಲೀಂ ಆದೇಶ

Most read

ಬೆಂಗಳೂರು: ಅತಿ ಗಣ್ಯ ವ್ಯಕ್ತಿಗಳು (ವಿಐಪಿ) ಸಂಚಾರ ನಡೆಸುವ ಸಂದರ್ಭದಲ್ಲಿ ವಾಹನಗಳು ಸೈರನ್‌ ಬಳಸದಂತೆ ಆದೇಶ ಹೊರಡಿಸಲಾಗಿದೆ. ಸಾರ್ವಜನಿಕರ ಸುರಕ್ಷತೆ ಹಾಗೂ ಶಬ್ದ ಮಾಲಿನ್ಯ ನಿಯಂತ್ರಿಸುವ ಉದ್ದೇಶದಿಂದ ಈ ಆದೇಶವನ್ನು ಹೊರಡಿಸಲಾಗಿದೆ. ಈ ಆದೇಶವನ್ನು ಎಲ್ಲರೂ ಕಟ್ಟುನಿಟ್ಟಾಗಿ ಪಾಲಿಸ ಬೇಕು ಎಂದು ರಾಜ್ಯ ಪೊಲೀಸ್‌ ಮಹಾನಿರ್ದೇಶಕ ಡಾ.ಎಂ.ಎ.ಸಲೀಂ ಅವರು ಸೂಚನೆ ನೀಡಿದ್ದಾರೆ.

ಗಣ್ಯ ವ್ಯಕ್ತಿಗಳ ಸಂಚಾರದ ಸಮಯದಲ್ಲಿ ಅನವಶ್ಯಕವಾಗಿ ಸೈರನ್‌ ಬಳಕೆ ಮಾಡುವುದರಿಂದ ಗಣ್ಯರು ಯಾವ ರಸ್ತೆಯಲ್ಲಿ ಚಲಿಸುತ್ತಿದ್ದಾರೆ ಎಂಬ ಮಾಹಿತಿ ಅನಧಿಕೃತ ವ್ಯಕ್ತಿಗಳಿಗೆ ಲಭ್ಯವಾಗಲಿದೆ. ಇದರಿಂದ ಗಣ್ಯ ವ್ಯಕ್ತಿಗಳಿಗೆ ಅಪಾಯ ಉಂಟಾಗುವ ಸಾಧ್ಯತೆಗಳಿರುತ್ತವೆ. ಸೈರನ್‌ ಬಳಕೆಯಿಂದ ಸಾರ್ವಜನಿಕರಿಗೆ ತೊಂದರೆ ಆಗುವುದರ ಜತೆಗೆ ಶಬ್ದ ಮಾಲಿನ್ಯವೂ ಉಂಟಾಗುತ್ತದೆ. ಸಾರ್ವಜನಿಕ ರಸ್ತೆಗಳಲ್ಲಿ ಏಕಾಏಕಿ ಸೈರನ್‌ ಬಳಸುವುದರಿಂದ ಇತರೆ ವಾಹನಗಳ ಚಾಲಕರಿಗೆ ಗೊಂದಲ ಉಂಟಾಗಿ, ಯಾವ ದಿಕ್ಕಿಗೆ ಚಲಿಸಬೇಕೆಂದು ತಿಳಿಯದೇ ವಾಹನವನ್ನು ಅಡ್ಡಾದಿಡ್ಡಿಯಾಗಿ ಚಲಾಯಿಸಿ ಬೆಂಗಾವಲು ಮತ್ತು ಇತರೆ ವಾಹನಗಳಿಗೆ ಗೊಂದಲ ಉಂಟು ಮಾಡುವ ಸಾಧ್ಯತೆ ಇರುತ್ತದೆ ಎಂದು ಅವರು ವಿವರಿಸಿದ್ದಾರೆ.

ಸೈರನ್‌ ಬದಲಾಗಿ ಅತಿ ಗಣ್ಯರ ಸಂಚಾರದ ವೇಳೆ ವಾಹನಗಳ ತುರ್ತು ಚಲನವಲನದ ಅವಶ್ಯಕತೆಗೆ ಅನುಗುಣವಾಗಿ ದೂರಸಂಪರ್ಕ ಸಾಧನಗಳಾದ ‘ವೈರ್‌ಲೆಸ್‌ ಕಮ್ಯುನಿಕೇಶನ್‌ ವ್ಯವಸ್ಥೆ’ಯನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬೇಕು. ಇದು ಹೆಚ್ಚು ಶಿಸ್ತಿನ ಹಾಗೂ ಸುರಕ್ಷತೆಯ ಮಾರ್ಗವಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಸೈರನ್‌ ಗಳನ್ನು ಕೇವಲ ತುರ್ತು ಸೇವಾ ವಾಹನಗಳಾದ ಆಂಬುಲೆನ್ಸ್‌, ಪೊಲೀಸ್‌ ವಾಹನಗಳು ಹಾಗೂ ಅಗ್ನಿಶಾಮಕ ವಾಹನಗಳು ಅನಿವಾರ್ಯ ಪರಿಸ್ಥಿತಿಗಳಲ್ಲಿ ಮಾತ್ರ ಬಳಸಬೇಕು. ಈ ಆದೇಶವನ್ನು ಪಾಲಿಸುವಂತೆ ಅಧಿಕಾರಿಗಳು, ಸಿಬ್ಬಂದಿಗೆ ಎಲ್ಲ ಘಟಕಾಧಿಕಾರಿಗಳು ಸೂಚನೆ ನೀಡಬೇಕು ಎಂದು ಸಲೀಂ ಅವರು ತಿಳಿಸಿದ್ದಾರೆ.

More articles

Latest article