ಆಸ್ಪತ್ರೆಯಿಂದ ಮನೆಗೆ ಮರಳಿದ ಕಾಂಬ್ಳಿ; ಅವರು ನೀಡಿದ ಸಂದೇಶ ಏನು?

Most read

ಠಾಣೆ: ಭಾರತದ ಮಾಜಿ ಕ್ರಿಕೆಟ್‌ ಆಟಗಾರ ವಿನೋದ್ ಕಾಂಬ್ಳಿ ಅವರು ಅನಾರೋಗ್ಯದಿಂದ ಚೇತರಿಸಿಕೊಂಡಿದ್ದು, ಇಲ್ಲಿನ ಭೀವಂಡಿಯಲ್ಲಿರುವ ಖಾಸಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಮರಳಿದ್ದಾರೆ. ಎರಡು ವಾರಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ವಿನೋದ್ ಕಾಂಬ್ಳಿ, ನಿನ್ನೆ ಸಂಜೆ ಆಸ್ಪತ್ರೆಯಿಂದ ತೆರಳಿದ್ದಾರೆ. ಆಸ್ಪತ್ರೆಯಿಂದ ಹೊರನಡೆಯುವಾಗ ಅವರು ಟೀಂ ಇಂಡಿಯಾ ಜೆರ್ಸಿ ತೊಟ್ಟು, ಕ್ಯಾಪ್‌ ಹಾಕಿಕೊಂಡಿರುವ ಮತ್ತು ಬ್ಯಾಟ್‌ ಹಿಡಿದುಕೊಂಡಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಮೂತ್ರನಾಳದ ಸೋಂಕು ಮತ್ತು ಸ್ನಾಯು ಸೆಳೆತದಿಂದ ಬಳಲುತ್ತಿದ್ದ 52 ವರ್ಷದ ಕಾಂಬ್ಳಿ ಅವರನ್ನು ಡಿ. 21ರಂದು ಖಾಸಗಿ ಆಕೃತಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅವರ ಮಿದುಳಿನಲ್ಲಿ ರಕ್ತ ಹೆಪ್ಪುಗಟ್ಟಿರುವುದು ಪರೀಕ್ಷೆಯಿಂದ ದೃಢವಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿರುವ ಕಾಂಬ್ಳಿ, ಹೊಸ ವರ್ಷದ ಸಂದೇಶ ಹಂಚಿಕೊಂಡಿದ್ದು, ‘ದುಶ್ಚಟಗಳು ಜೀವನವನ್ನು ನಾಶಮಾಡುತ್ತವೆ. ಎಂದಿದ್ದಾರೆ. ಮದ್ಯ ಹಾಗೂ ಡ್ರಗ್ಸ್‌ ಗಳಿಂದ ದೂರವಿರುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಕಾಂಬ್ಳಿ ಅವರಿಗೆ ಚಿಕಿತ್ಸೆ ನೀಡಿದ ವೈದ್ಯ ಡಾ.ವಿವೇಕ್‌ ತ್ರಿವೇದಿ ಅವರು, ಕಾಂಬ್ಳಿ ಸಂಪೂರ್ಣ ಗುಣಮುಖರಾಗಿದ್ದಾರೆ. ಅವರು ಒಂದಿಷ್ಟು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ ಎಂದು ತಿಳಿಸಿದ್ದಾರೆ. ಕಾಂಬ್ಳಿ ಆಸ್ಪತ್ರೆಯಲ್ಲಿದ್ದಾಗ ನೃತ್ಯ ಮಾಡಿದ ವಿಡಿಯೊ ಎರಡು ದಿನಗಳ ಹಿಂದೆ ವೈರಲ್‌ ಆಗಿತ್ತು.

More articles

Latest article