ರೂ.53.31 ಕೋಟಿ ಮೌಲ್ಯದ ಮನಗೂಳಿ ಕೆನರಾ ಬ್ಯಾಂಕ್ ಕಳವು ಪ್ರಕರಣ: ರಾಜ್ಯ ಕೇಂದ್ರ ಸರ್ಕಾರಿ ನೌಕರರೇ ಕಳ್ಳರು

Most read

ವಿಜಯಪುರ: ತೀವ್ರ ಕುತೂಹಲ ಕೆರಳಿಸಿದ್ದ ವಿಜಯಪುರ ಜಿಲ್ಲೆಯ ಮನಗೂಳಿ ಪಟ್ಟಣದ ಕೆನರಾ ಬ್ಯಾಂಕ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಅದೇ ಬ್ಯಾಂಕಿನ ಹಿಂದಿನ ಹಿರಿಯ ವ್ಯವಸ್ಥಾಪಕ, ರೈಲ್ವೆ ಇಲಾಖೆ ಮೂವರು ನೌಕರರು, ಧಾರವಾಡದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕ ಹಾಗೂ ವಿವಿಧ ಖಾಸಗಿ ಕಂಪನಿಗಳ ನೌಕರರು, ಲಾರಿ ಚಾಲಕ, ವಾಚ್‌ಮನ್, ಎಲೆಕ್ಟ್ರೀಷಿಯನ್ ಸೇರಿದಂತೆ 15 ಆರೋಪಿಗಳನ್ನು ವಿಜಯಪುರ ಜಿಲ್ಲಾ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇಂದು ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬೆಳಗಾವಿ ಉತ್ತರ ವಲಯ ಐಜಿಪಿ ಚೇತನ್ ಕುಮಾರ್ ರಾಠೋಡ್ ಮತ್ತು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಅವರು ನಗರದಲ್ಲಿ ಶುಕ್ರವಾರ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.

ಬಂಧಿತ ಆರೋಪಿಗಳಿಂದ 39 ಕೆ.ಜಿ.ಚಿನ್ನ, ರೂ.1.16 ಕೋಟಿ ನಗದು ಮತ್ತು ಕಳ್ಳತನಕ್ಕೆ ಬಳಸಿದ್ದ ರೈಲ್ವೆ ಇಲಾಖೆಗೆ ಸೇರಿದ ಗೂಡ್ಸ್ ಲಾರಿ, 4 ವಾಕಿಟಾಕಿ, ಒಂದು ಪಿಸ್ತೂಲ್‌ ಸಿಗರೇಟ್ ಲೈಟರ್, 2 ಗ್ಯಾಸ್ ಸಿಲಿಂಡರ್, ಒಂದು ಆಕ್ಸಿಜನ್ ಸಿಲಿಂಡ‌ರ್, ಬರ್ನಿಂಗ್ ಗನ್, ನಕಲಿ ಕೀಲಿಕೈಗಳು ಹಾಗೂ ಐದು ಕಾರುಗಳನ್ನು ವಶಕ್ಕೆ ಪಡೆದಿರುವುದಾಗಿ ತಿಳಿಸಿದರು.

ಮೇ 23 ರಿಂದ 25ರ ನಡುವೆ ಕಳ್ಳರು ಮನಗೂಳಿ ಪಟ್ಟಣದಲ್ಲಿರುವ ಕೆನರಾ ಬ್ಯಾಂಕಿನ ಸೇಫ್ ಲಾಕರ್‌ನಲ್ಲಿದ್ದ ಅಂದಾಜು ರೂ. 53.26 ಕೋಟಿ ಮೌಲ್ಯದ ಬಂಗಾರದ ಆಭರಣ ಹಾಗೂ 5,20,450 ನಗದು ಸೇರಿದಂತೆ ಒಟ್ಟು ರೂ.53.31 ಕೋಟಿ ಮೌಲ್ಯದ ಬಂಗಾರದ ಆಭರಣಗಳು ಹಾಗೂ ನಗದು ಹಣವನ್ನು ಕಳ್ಳತನ ಮಾಡಿದ್ದರು.

ಮನಗೂಳಿ ಕೆನರಾ ಬ್ಯಾಂಕಿನ ಹಿಂದಿನ ಹಿರಿಯ ವ್ಯವಸ್ಥಾಪಕ ವಿಜಯಕುಮಾರ್ ಮಿರಿಯಾಲ (41), ಖಾಸಗಿ ಉದ್ಯೋಗಿ ಚಂದ್ರಶೇಖರ ನೆರೆಲ್ಲಾ (38), ಸುನೀಲ ಮೋಕಾ (40) ಎಂಬುವವರನ್ನು ಈಗಾಗಲೇ ಬಂಧಿಸಿ ಅವರಿಂದ ರೂ.10.75 ಕೋಟಿ ಮೌಲ್ಯದ 10.5 ಕೆ.ಜಿ.ಬಂಗಾರದ ಆಭರಣ ಮತ್ತು ಕರಗಿಸಿದ ಬಂಗಾರದ ಗಟ್ಟಿಯನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ತಿಳಿಸಿದರು.

ಈ ಮೂವರು ಆರೋಪಿಗಳು ನೀಡಿದ ಮಾಹಿತಿ ಆಧಾರದಲ್ಲಿ ಉಳಿದ ಆರೋಪಿಗಳಾದ ಹುಬ್ಬಳ್ಳಿ ನೈರುತ್ತ ರೈಲ್ವೆ ನೌಕರರಾದ ಬಾಲರಾಜ ಮಣಿಕಮ್ ಯೆರುಕುಲಾ(40), ಬಾಬುರಾವ್ ಮಿರಿಯಾಲ (40), ಸೋಲೋಮನ್ನೇಸ್ಸಿ ಪಲುಕುರಿ (40), ಧಾರವಾಡ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕ ಪೀಟರ್ (40), ಖಾಸಗಿ ನೌಕರ ಗುಂಡು ಜೋಸೆಫ್ (28), ಚಂದನರಾಜ್ (29), ಚಾಲಕ ಇಜಾಜ್ ಧಾರವಾಡ(34), ವಾಚಮನ್ ಸುಸೈರಾಜ್ (44), ನಕಲಿ ಕೀಲಿ ಕೈ ತಯಾರಿಸುವ ಅಂಗಡಿಯವ ಮಹಮ್ಮದ್ ಆಸೀಫ್ ಕಲ್ಲೂರ (31), ಚಾಲಕ ಅನೀಲ ಮಿರಿಯಾಲ (40), ಖಾಸಗಿ ಉದ್ಯೋಗಿ ಅಬು ಅಲಿಯಾಸ್ ಮೋಹನಕುಮಾರ (42), ಇಲೆಕ್ನಿಷಿಯನ್ ಮರಿಯಾದಾಸ (40) ಎಂಬುವವರನ್ನು ಬಂಧಿಸಿಲಾಗಿದೆ ಎಂದು ತಿಳಿಸಿದರು.

ಬಂಧಿತ ಆರೋಪಿಗಳೆಲ್ಲರೂ ಹುಬ್ಬಳ್ಳಿ ನಗರದವರು ಮತ್ತು ಸ್ನೇಹಿತರು. ಜತೆಗೆ ಇವರೆಲ್ಲರೂ ಮೊದಲ ಬಾರಿಗೆ ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ರಾಜ್ಯ, ದೇಶದ ವಿವಿಧ ಭಾಗಗಳಲ್ಲಿ ನಡೆದಿದ್ದ ದೊಡ್ಡ ಬ್ಯಾಂಕ್ ದರೋಡೆ ಪ್ರಕರಣಗಳನ್ನು ಕುರಿತು ಅಧ್ಯಯನ ಮಾಡಿದ್ದರು. ಇಂಗ್ಲೀಷ್‌ ಸಿನಿಮಾ, ಧಾರಾವಾಹಿಗಳನ್ನು ನೋಡಿಯೂ ಬ್ಯಾಂಕ್ ಕಳವಿಗೆ ಮೂರು ತಿಂಗಳ ತಯಾರಿ ನಡೆಸಿದ್ದರು.

ಈಗಾಗಲೇ ಬಂಧಿತ ಆರೋಪಿಗಳಿಂದ 39 ಕೆ.ಜಿ ಬಂಗಾರದ ಗಟ್ಟಿ ಹಾಗೂ ಆಭರಣವನ್ನು ವಶಪಡಿಸಿಕೊಳ್ಳಲಾಗಿದೆ. ಅಲ್ಲದೇ, ಆರೋಪಿಗಳು ಒಂದಷ್ಟು ಬಂಗಾರ ಮಾರಾಟ ಮಾಡಿ ಬಂದ ಹಣವನ್ನು ಗೋವಾದ ಮೆಜೆಸ್ಟಿಕ್ ಪ್ರೈಡ್ ಕ್ಯಾಸಿನೋದಲ್ಲಿ ಡಿಪಾಸಿಟ್ ಮಾಡಿದ್ದ ರೂ. 1.16 ಕೋಟಿ ನಗದನ್ನು ವಶಪಡಿಸಿಕೊಳ್ಳಲಾಗಿದೆ. ಕಳವುವಾಗಿದ್ದ ಚಿನ್ನಾಭರಣದಲ್ಲಿ ಶೇ 85ರಷ್ಟು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.

More articles

Latest article