ವಿಜಯಪುರ: ವಿಜಯಪುರ ಜಿಲ್ಲೆಯ ನಿಂಬೆಹಣ್ಣಿಗೆ ಭೌಗೋಳಿಕ ಸ್ಥಾನಮಾನ ದೊರಕಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ನಿಂಬೆಹಣ್ಣುಗಳನ್ನು ಜನಪ್ರಿಯಗೊಳಿಸುವ ಉದ್ದೇಶದಿಂದ ಕರ್ನಾಟಕ ನಿಂಬೆ ಅಭಿವೃದ್ಧಿ ಮಂಡಳಿಯು ರಾಜ್ಯದಾದ್ಯಂತ ಲೆಮೆನ್ ಟೀ ಪಾಯಿಂಟ್ ಗಳ ಸ್ಥಾಪಿಸಲು ಮುಂದಾಗಿದೆ.
ರಾಜ್ಯದಲ್ಲೇ ಅತಿ ಹೆಚ್ಚು ದೊಡ್ಡ ನಿಂಬೆಹಣ್ಣು ಬೆಳೆಯುವ ಜಿಲ್ಲೆ ವಿಜಯಪುರ. ರಾಜ್ಯದ ಒಟ್ಟಾರೆ ನಿಂಬೆಹಣ್ಣು ಬೆಳೆಯಲ್ಲಿ ಇಂಡಿ ತಾಲೂಕೊಂದರಲ್ಲೇ ಶೇ.50 ಕ್ಕಿಂತ ಹೆಚ್ಚು ನಿಂಬೆಹಣ್ಣುಗಳನ್ನು ಬೆಳೆಯಲಾಗುತ್ತದೆ. ಇಲ್ಲಿನ ನಿಂಬೆಹಣ್ಣುಗಳನ್ನು ಜನಪ್ರಿಯಗೊಳಿಸಲು ಲೆಮೆನ್ ಟೀ ಪಾಯಿಂಟ್ ಸ್ಥಾಪಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಇತರರಿಗೆ ಫ್ರಾಂಚೈಸಿ ನೀಡಲೂ ಚಿಂತನೆ ನಡೆಸಲಾಗಿದೆ ಎಂದು ಕರ್ನಾಟಕ ನಿಂಬೆ ಅಭಿವೃದ್ಧಿ ಮಂಡಳಿ ಮಾಹಿತಿ ನೀಡಿದೆ.
ಮೊದಲಿಗೆ ಇಂಡಿ ಪಟ್ಟಣದಲ್ಲಿ ಟೀ ಪಾಯಿಂಟ್ ಗಳನ್ನು ಆರಂಭಿಸಲಾಗಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ಟೀ ಪಾಯಿಂಟ್ ಗಳ ಸ್ಥಾಪಿಸಲು ಚಿಂತನೆ ನಡೆಸಲಾಗಿದೆ. ಇಂಡಿ ನಿಂಬೆಹಣ್ಣುಗಳ ಗುಣಮಟ್ಟದ ಬಗ್ಗೆ ಜಾಗೃತಿ ಮೂಡಿಸಲು ಕೃಷಿ ಮೇಳಗಳು ಮತ್ತು ಫಲಪುಷ್ಪ ಪ್ರದರ್ಶನ ಸೇರಿದಂತೆ ವಿವಿಧ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಟೀ ಪಾಯಿಂಟ್ ಗಳನ್ನು ಸ್ಥಾಪಿಸಲಾಗುತ್ತದೆ ಎಂದು ಮಂಡಳಿ ತಿಳಿಸಿದೆ.