ವಿಧಾನಸೌಧ, ವಿಕಾಸಸೌಧದಲ್ಲಿ ಕನ್ನಡ ಘೋಷವಾಕ್ಯ ಅಳವಡಿಕೆ: ಸೂಚನೆಗೆ ಸಾರ್ವಜನಿಕರಿಗೆ ಅವಕಾಶ: ಪುರುಷೋತ್ತಮ ಬಿಳಿಮಲೆ

Most read

ಬೆಂಗಳೂರು: ನಾಡಿನ ಶಕ್ತಿಸೌಧಗಳಾದ ವಿಧಾನಸೌಧ ಮತ್ತು ವಿಕಾಸಸೌಧದಲ್ಲಿ ಕನ್ನಡತನವನ್ನು ಪ್ರತಿಬಿಂಬಿಸುವ ಘೋಷವಾಕ್ಯಗಳನ್ನು ಅಳವಡಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರ ಯೋಜನೆಯನ್ನು ರೂಪಿಸಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ತಿಳಿಸಿದ್ದಾರೆ.

ಈ ಕಟ್ಟಡಗಳ ಭವ್ಯತೆಗೆ ಪೂರಕವಾಗಿ ಆಯ್ದ ಜಾಗಗಳಲ್ಲಿ ಕನ್ನಡದ ಘೋಷಣೆಗಳನ್ನು ಅಳವಡಿಸುವ ಮಹತ್ವದ ತೀರ್ಮಾನವನ್ನು ಸರ್ಕಾರವು ತೆಗೆದುಕೊಂಡಿದ್ದು, ಸಾರ್ವಜನಿಕರಿಂದ ಕನ್ನಡ ಮತ್ತು ಕರ್ನಾಟಕದ ಕುರಿತಾದ ಹೆಮ್ಮೆಯ ಘೋಷಣೆಗಳನ್ನು ಆಹ್ವಾನಿಸಲಾಗಿದೆ ಎಂದು ಬಿಳಿಮಲೆ ಹೇಳಿದ್ದಾರೆ. ಸಾರ್ವಜನಿಕರು ಸಾಹಿತ್ಯಿಕ ಘೋಷವಾಕ್ಯಗಳಲ್ಲದೇ, ಜನಪದದ ಸೂಕ್ತಿಗಳು, ಚಳವಳಿಗಳ ಘೋಷಣೆಗಳು, ಸಿನಿಮಾ ಗೀತೆಗಳನ್ನು ಸಹ ಅವಲೋಕಿಸಿ ಮೌಲ್ಯಯುತ ಸಲಹೆಗಳನ್ನು ನೀಡಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

ಸಾರ್ವಜನಿಕರು ನೀಡುವ ಘೋಷವಾಕ್ಯಗಳು ಗದ್ಯಪದ್ಯಗಳ ಎರಡು ನೆಲೆಗಳಲ್ಲಿರಬೇಕು, ಅದನ್ನು ಓದಿದವರಲ್ಲಿ ಕನ್ನಡದ ಅಭಿಮಾನ ಜಾಗೃತವಾಗಬೇಕು, ಕನ್ನಡದ ಪ್ರಮುಖ ಉಪ ಸಂಸ್ಕೃತಿಗಳ ಒಳಗನ್ನು ತೆರೆದಿಡುವ ವಾಕ್ಯಗಳನ್ನು ಸಹ ಅವಲೋಕಿಸಬಹುದು ಎಂದಿರುವ ಬಿಳಿಮಲೆ, ಘೋಷವಾಕ್ಯಗಳು ಸಮಕಾಲೀನ ಭಾಷೆಯಲ್ಲಿರಬೇಕು. ನಿರಾಶದಾಯಕ ನುಡಿಗಳು, ವಿವಾದಾತ್ಮಕ ಹೇಳಿಕೆಗಳನ್ನು ಹೊರತುಪಡಿಸಬೇಕು ಹಾಗೂ ಗರಿಷ್ಟ ಎರಡು ಸಾಲುಗಳಲ್ಲಿರಬೇಕಾದ ಘೋಷವಾಕ್ಯಗಳ ರಚನಕಾರರ ಹೆಸರುಗಳನ್ನು ಕಡ್ಡಾಯವಾಗಿ ನಮೂದಿಸಬೇಕೆಂದು ಹೇಳಿದ್ದಾರೆ.

ಸಾರ್ವಜನಿಕರು ದಿನಾಂಕ: 30-06-2025ರೊಳಗಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಿಂಚಂಚೆ [email protected] ಗೆ ಘೋಷವಾಕ್ಯಗಳ ಪಟ್ಟಿಗಳನ್ನು ಕಳುಹಿಸಿಕೊಡಬೇಕಾಗಿದೆ ಎಂದಿರುವ ಬಿಳಿಮಲೆ, ಈ ಪಟ್ಟಿಯಲ್ಲಿ ಕಳುಹಿಸಿರುವವರ ಸಂಪರ್ಕ ಸಂಖ್ಯೆ ಮತ್ತು ವಿಳಾಸವನ್ನು ಕಡ್ಡಾಯವಾಗಿ ನಮೂದಿಸಬೇಕೆಂದು ಹೇಳಿದ್ದಾರೆ. ಘೋಷವಾಕ್ಯಗಳನ್ನು ನುಡಿ ಅಥವಾ ಯುನಿಕೋಡ್ ತಂತ್ರಾಂಶದಲ್ಲಿ ಬೆರಳಚ್ಚು ಮಾಡಿ ಕಳುಹಿಸಬೇಕೆಂದು ಬಿಳಿಮಲೆ ಸ್ಪಷ್ಟಪಡಿಸಿದ್ದಾರೆ.

More articles

Latest article