ಬೆಂಗಳೂರು: ಕನ್ನಡ ಚಿತ್ರರಂಗದ ಹಿರಿಯ ನಾಯಕ, ನಿರ್ಮಾಪಕ ದ್ವಾರಕೀಶ್ ಮೃತಪಟ್ಟಿದ್ದಾರೆ.
ವಯೋಸಹಜ ಖಾಯಿಲೆಗಳಿಂದ ಬಳಲುತ್ತಿದ್ದ ಅವರು ಇಂದು ಬೆಳಿಗ್ಗೆ ಮೃತಪಟ್ಟಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು.
ಕನ್ನಡದ ಕುಳ್ಳ ಎಂದೇ ಹೆಸರಾಗಿದ್ದ ದ್ವಾರಕೀಶ್ 1942 ಆಗಸ್ಟ್ 19ರಂದು ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಜನಿಸಿದ್ದರು. ಇವರ ತಂದೆ ಶಾಮರಾವ್ ಮತ್ತು ತಾಯಿ ಜಯಮ್ಮ. ತಮ್ಮ ಸಹೋದರನ ಜೊತೆ ಸೇರಿ ಭಾರತ್ ಆಟೋ ಸ್ಪೇರ್ ಸ್ಟೋರ್ ಆರಂಭಿಸಿದ್ದ ದ್ವಾರಕೀಶ್ 1963ರಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು.
1964ರಲ್ಲಿ ವೀರ ಸಂಕಲ್ಪ ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ದ್ವಾರಕೀಶ್, ನಟರಾಗಿ, ಹಾಸ್ಯ ಕಲಾವಿದರಾಗಿ, ಪೋಷಕ ನಟನಾಗಿ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ವಿಷ್ಣುವರ್ಧನ್ ಹಾಗೂ ದ್ವಾರಕೀಶ್ ಜೋಡಿ ಕಳ್ಳ-ಕುಳ್ಳ ಎಂದೇ ಪ್ರಸಿದ್ಧವಾಗಿತ್ತು.
1966ರಲ್ಲಿ ದ್ವಾರಕೀಶ್ ಅವರು ಮಮತೆಯ ಬಂಧನ ಸಿನಿಮಾವನ್ನು ಇನ್ನಿಬ್ಬರು ನಿರ್ಮಾಪಕರ ಜೊತೆಗೂಡಿ ನಿರ್ಮಿಸುವುದರೊಂದಿಗೆ ನಿರ್ಮಾಣಕ್ಕೆ ಕೈ ಹಾಕಿದರು. 1969ರಲ್ಲಿ ಡಾ.ರಾಜ್ಕುಮಾರ್ ಅಭಿನಯದ ಮೇಯರ್ ಮುತ್ತಣ್ಣ ಎಂಬ ಸಿನಿಮಾ ದ್ವಾರಕೀಶ್ ಅವರ ನಿರ್ಮಾಣದ ಪ್ರಥಮ ಸಿನಿಮಾ ಆಗಿತ್ತು. ಚಿತ್ರ ಸೂಪರ್ ಹಿಟ್ ಕೂಡ ಆಗಿತ್ತು. ಅದಾದ ನಂತರ ದ್ವಾರಕೀಶ್ ತಿರುಗಿನೋಡಿದ್ದೇ ಇಲ್ಲ. ಸುಮಾರು 40ಕ್ಕೂ ಹೆಚ್ಚು ಚಿತ್ರಗಳು ಅವರ ನಿರ್ಮಾಣದಲ್ಲಿ ಹೊರಬಂದವು. ಅವರ ನಿರ್ಮಾಣದ ಆಪ್ತಮಿತ್ರ ಚಿತ್ರ ಬಾಕ್ಸ್ ಆಫೀಸ್ ದಾಖಲೆಗಳನ್ನು ಪುಡಿಗಟ್ಟಿದ್ದು ಈಗ ಇತಿಹಾಸ.
ಚಿತ್ರ ನಿರ್ಮಾಣದ ಜೊತೆ ನಿರ್ದೇಶನಕ್ಕೂ ಕೈ ಇಟ್ಟ ದ್ವಾರಕೀಶ್, ನೀ ಬರೆದ ಕಾದಂಬರಿ ಎಂಬ ಚಿತ್ರವನ್ನು ನಿರ್ದೇಶಿಸಿದರು. ಈ ಸಿನಿಮಾ ಬಹುದೊಡ್ಡ ಯಶಸ್ಸು ಗಳಿಸಿತು. ನಂತರ ಡಾನ್ಸ್ ರಾಜ ಡಾನ್ಸ್, ಶ್ರುತಿ, ಶ್ರುತಿ ಹಾಕಿದ ಹೆಜ್ಜೆ, ರಾಯರು ಬಂದರು ಮಾವನ ಮನೆಗೆ ಸೇರಿದಂತೆ 15ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.
ಕನ್ನಡ ಚಿತ್ರರಂಗದ ಮಹಾಸಾಹಸಿ ನಿರ್ಮಾಪಕರಲ್ಲಿ ಒಬ್ಬರಾದ ದ್ವಾರಕೀಶ್ ತಮ್ಮ ʻದ್ವಾರಕೀಶ್ ಚಿತ್ರʼ ಬ್ಯಾನರ್ ಅಡಿಯಲ್ಲಿ ಡಾ.ರಾಜ್‌ಕುಮಾರ್, ವಿಷ್ಣುವರ್ಧನ್‌ನಂತಹ ದಿಗ್ಗಜರ ಸಿನಿಮಾಗಳನ್ನು ನಿರ್ಮಿಸಿದ್ದಲ್ಲದೆ, ತಮಿಳು, ಹಿಂದಿ ಸಿನಿಮಾಗಳನ್ನು ಕೂಡ ನಿರ್ಮಿಸಿದ್ದರು.