ಬೆಂಗಳೂರು: ರೋಹಿತ್ ವೇಮುಲ ಕಾಯಿದೆಯನ್ನು ಜಾರಿಗೊಳಿಸುವುದಕ್ಕೂ ಮುನ್ನ ಕಾಯಿದೆಯ ಕರಡಿನ ಬಗ್ಗೆ ವಿಸ್ತ್ರತ ಸಮಾಲೋಚನೆಗಳನ್ನು ಆಯೋಜಿಸಬೇಕು ಮತ್ತು ವಿಶೇಷ ನಿಬಂಧನೆಗಳನ್ನು ರೂಪಿಸಬೇಕು ಎಂದು ರೋಹಿತ್ ಕಾಯಿದೆಗಾಗಿ ಜನಾಂದೋಲನ ಸಂಘಟನೆ ಸರ್ಕಾರವನ್ನು ಒತ್ತಾಯಿಸಿದೆ. ಸಂಘಟನೆಯು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದೆ.
ಕಾಯ್ದೆಯಲ್ಲಿ ದಲಿತ-ಹಿಂದುಳಿದ-ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ರಕ್ಷಣೆ ನೀಡುತ್ತಲೇ, ಪರಿಶಿಷ್ಟ ಜಾತಿ ಹಾಗು ಪರಿಶಿಷ್ಠ ಪಂಗಡಕ್ಕೆ ಸೇರಿದ ವಿದ್ಯಾರ್ಥಿಗಳನ್ನು ಗಮನದಲ್ಲಿರಿಸಿಕೊಳ್ಳಬೇಕು. ಯುಪಿಎ -2 ಸರ್ಕಾರವು ಕಾನೂನು ಮತ್ತು ನಿಯಮಗಳನ್ನು ರಚಿಸಲು Pre-legislative consultation policy ಯನ್ನು ಜಾರಿಗೆ ತಂದಿದ್ದು, ಅದರ ಪ್ರಕಾರ ಈ ಕರಡಿನ ಬಗ್ಗೆ ವಿಸ್ತ್ರತ ಸಮಾಲೋಚನೆಗಳನ್ನು ಆಯೋಜಿಸಬೇಕು. ಈ ಕಾಯ್ದೆಯ ಬಗ್ಗೆ ರಾಜ್ಯದ ವಿದ್ಯಾರ್ಥಿಗಳ, ವಿದ್ಯಾರ್ಥಿ ಸಂಘಟನೆಗಳು, ಶಿಕ್ಷಣ ತಜ್ಞರು ಹಾಗೂ, ದಲಿತ ಸಂಘಟನೆಗಳ ಅಭಿಪ್ರಾಯ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿಕೊಂಡಿದೆ.
ರಾಜ್ಯದ ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಎಲ್ಲರಿಗೂ ಸಮಾನ ಅವಕಾಶ, ಘನತೆ ಸಿಗುವಂತೆ ಮಾಡುವುದು ನಮೆಲ್ಲರ ಕರ್ತವ್ಯವಾಗಿರುತ್ತದೆ. ಹಾಗಾಗಿ, ಈ ಮೇಲಿನೆ ಎಲ್ಲಾ ಅಂಶಗಳನ್ನು ಗಮನಿಸಿ ತಾವು ಮುಂದಿನ ಹೆಜ್ಜೆಗಳನ್ನು ಇರಿಸುತ್ತೀರಿ ಎಂಬ ಅಚಲ ವಿಶ್ವಾಸದೊಂದಿಗೆ ಈ ಕಾಯ್ದೆಯನ್ನು ಜಾರಿಗೆ ತರಲು ‘ರೋಹಿತ್ ಕಾಯ್ದೆಗಾಗಿ ಜನಾಂದೋಲನ’ವು ನಿಮ್ಮ ಜತೆ ಕೈ ಜೋಡಿಸುತ್ತದೆ ಎಂದು ಭರವಸೆ ನೀಡಿದೆ.
ರೋಹಿತ್ ಕಾಯ್ದೆಗಾಗಿ ಜನಾಂದೋಲನ’ ಸಂಘಟನೆಯು ದಲಿತ, ವಿದ್ಯಾರ್ಥಿ, ವಕೀಲರು, ಸಾಮಾಜಿಕ ಕಾರ್ಯಕರ್ತರು ಮತ್ತು ಸಾಮಾಜಿಕ ಕಾಳಜಿಯುಳ್ಳ ನಾಗರಿಕರನ್ನು ಒಳಗೊಂಡಿರುವ ಅಭಿಯಾನವಾಗಿದೆ. ಕಳೆದ ಒಂದು ವರ್ಷದಿಂದ ರೋಹಿತ್ ಕಾಯ್ದೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸಿ ನಾವು ಪ್ರತಿಭಟನೆ, ಕಮ್ಮಟ, ಪತ್ರಿಕಾ ಗೋಷ್ಠಿ ಮತ್ತಿತರ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ.
ಡಾ.ಬಿ.ಆರ್. ಅಂಬೇಡ್ಕರ್ ಅವರು ನೀಡಿರುವ ಸಂವಿಧಾನದಲ್ಲಿ, ಪ್ರತಿಯೊಬ್ಬರಿಗೂ ಘನತೆ, ಸ್ವಾತಂತ್ರ್ಯ, ಅವಕಾಶ ಹಾಗೂ ಸ್ಥಾನಮಾನಗಳ ಸಮಾನತೆಯ ಮೌಲ್ಯಗಳು ಪ್ರಮುಖವಾಗಿವೆ. ಆದರೆ, ದುರಾದೃಷ್ಟವಶಾತ್ ಇಂದಿಗೂ ದಲಿತ-ಬಹುಜನ ವಿದ್ಯಾರ್ಥಿಗಳಿಗೆ ಇವೆಲ್ಲವೂ ಮರೀಚಿಕೆಯಾಗಿಯೇ ಉಳಿದಿವೆ ಎಂದು ಸಂಘಟನೆ ತಿಳಿಸಿದೆ.
ದೇಶಾದ್ಯಂತ, ದಲಿತ ಬಹುಜನ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಬಹಳಷ್ಟು ಅಡಚಣೆಗಳು ಎದುರಿಸುತ್ತಿದ್ದಾರೆ. ಕೇವಲ ಪ್ರವೇಶ ಹಂತದವರೆಗೆ ಮಾತ್ರವಲ್ಲದೆ ನಂತರವೂ ಹತ್ತಾರು ಸಮಸ್ಡಯಗಳನ್ನು ಎದುರಿಸುತ್ತಲೇ ಇದ್ದಾರೆ. ಜಾತಿ ಆಧಾರಿತ ಕಿರುಕುಳ ಮತ್ತು ತಾರತಮ್ಯಸರ್ವೇ ಸಾಮಾನ್ಯವಾಗಿದೆ. ಇಂತಹ ತಾರತಮ್ಯ ಹಾಗು ಕಿರುಕುಳವೇ ರೋಹಿತ್ ವೇಮುಲ ಅವರನ್ನು ಬಲಿ ತೆಗೆದುಕೊಂಡಿತು. ದೇಶಾದ್ಯಂತ 2016 ರಿಂದ ರೋಹಿತ್ ಕಾಯ್ದೆಗಾಗಿ ಯುವ ಜನಾಂದೋಲನ ನೆಡಯುತ್ತಿದ್ದು, ದಲಿತ ಸಂಘಟನೆಗಳು ಈ ಕಾಯ್ದೆಯನ್ನು ಜಾರಿಗೊಳಿಸುವಂತೆ ಒತ್ತಾಯಿಸುತ್ತಲೇ ಬಂದಿದ್ದಾರೆ. ಆದರೆ, ಇದುವರೆಗೂ ಕೇಂದ್ರ ಅಥವಾ ಯಾವುದೇ ರಾಜ್ಯ ಸರ್ಕಾರ ಈ ಕಾಯ್ದೆಯನ್ನು ರೂಪಿಸಲಿಲ್ಲ ಎಂದು ಹೇಳಿದೆ.
ಮೊದಲ ಬಾರಿಗೆ ಕರ್ನಾಟಕ ಸರ್ಕಾರ ವೇಮುಲ ಕಾಯಿದೆಯ ಕರಡು ತಯಾರಿಸಿ ಐತಿಹಾಸಿಕ ಹೆಜ್ಜೆಯಿರಿಸಿದೆ. ಇದಕ್ಕಾಗಿ, ಆಂದೋಲನವು ಸರ್ಕಾರವನ್ನು ಅಭಿನಂದಿಸಿದೆ. ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದಲ್ಲಿ ಸಮಾನ ಅವಕಾಶ ದೊರಕಿಸಲು, ಅವರ ಘನತೆಯ ಮತ್ತು ಶಿಕ್ಷಣದ ಹಕ್ಕನ್ನು ಎತ್ತಿಹಿಡಿಯಲು ಈ ಕರಡು ಕಾಯ್ದೆ ತಯಾರಿಸಿರುವುದು ಸ್ವಾಗತಾರ್ಹ. ಆದರೂ, ಈ ಕಾಯ್ದೆ ತನ್ನ ಸದುದ್ದೇಶವನ್ನು ಸಾಧಿಸುವಂತಾಗಲು ಈ ಕರಡನ್ನು ಇನ್ನಷ್ಟು ಬಲಪಡಿಸಲು ಅವಕಾಶಗಳಿವೆ. ಉದಾಹರಣೆಗೆ, ತೆಲಂಗಾಣದ ಕಾಂಗ್ರೆಸ್ ಸಮಿತಿ ಹಾಗು NCDHRO ತಯಾರಿಸಿದ ಕರಡುಗಳಲ್ಲಿ ತಾರತಮ್ಯವೆಂದರೆ ಮತ್ತು ಕಿರುಕುಳ ಎಂದರೆ ಏನು ಎಂಬುದನ್ನು ವ್ಯಾಖ್ಯಾನಿಸಿದೆ. ಅದೇ ರೀತಿ ಶೋಷಣೆಯನ್ನು ತಡೆಗಟ್ಟಿ, ದೂರು ಸ್ವೀಕರಿಸಿ, ಕ್ರಮ ತಕೈಗೊಳ್ಳಲು ಉತ್ತಮ ವ್ಯವಸ್ಥೆಯನ್ನು ರೂಪಿಸಿದೆ ಎಂದು ತಿಳಿಸಿದೆ. ಸಂಘಟನೆಯ ಪರವಾಗಿ ಲೇಖಕ ಹುಲಿಕುಂಟೆ ಮೂರ್ತಿ ಮತ್ತು ಮೃದುಲ ಈ ಪತ್ರವನ್ನು ಮುಖ್ಯಮಂತ್ರಿಗಳು ಮತ್ತು ಉನ್ನತ ಸಿಕ್ಷಣ ಸಚಿವ ಡಾ.ಎಂಸಿ.ಸುಧಾಕರ್ ಅವರಿಗೆ ಪತ್ರ ಬರೆದಿದ್ದಾರೆ.