ನವದೆಹಲಿ: ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ಕೋಚ್ ರೈಲುಗಳ ಸೇವೆ ಶೀಘ್ರ ಪ್ರಯಾಣಿಕರಿಗೆ ದೊರಕಲಿದೆ. ಸದ್ಯ ವಂದೇ ಭಾರತ್ ಸ್ಲೀಪರ್ ಕೋಚ್ ರೈಲುಗಳ ಸಾಮರ್ಥ್ಯವನ್ನು ಭಾರತೀಯ ರೈಲ್ವೆ ಪರಿಶೀಲಿಸುತ್ತಿದೆ. ಈ ಮಧ್ಯೆ ವಂದೇ ಭಾರತ್ ಸ್ಲೀಪರ್ ಕೋಚ್ ರೈಲು ಪ್ರಯೋಗಾರ್ಥ ಸಂಚಾರದಲ್ಲಿ ಗಂಟೆಗೆ ಗರಿಷ್ಠ 180 ಕಿ.ಮೀ ಸಂಚರಿಸಿ ಗಮನ ಸೆಳೆದಿದೆ. ಈ ವೇಳೆ ಲೋಕೊಪೈಲೆಟ್ ಕೂರುವ ಕ್ಯಾಬಿನ್ನಲ್ಲಿ ನೀರು ತುಂಬಿದ ಗಾಜಿನ ಲೋಟವ ಇಡಲಾಗಿತ್ತು. ಅದರಿಂದ ಒಂದು ಹನಿ ನೀರೂ ಹೊರಚೆಲ್ಲಿರಲಿಲ್ಲ. ಈ ವಿಡಿಯೊವನ್ನು ರೈಲ್ವೆ ಸಚಿವ ಅಶ್ಚಿನಿ ವೈಷ್ಣವ್ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಾಜಸ್ಥಾನದ ಕೋಟಾ ರೈಲ್ವೆ ವಿಭಾಗದಲ್ಲಿ ಈ ಪ್ರಯೋಗ ನಡೆದಿದೆ.
ಈ ಮೊದಲು ವಂದೇ ಭಾರತ್ ರೈಲು ಗಂಟೆಗೆ 160 ಕಿ.ಮೀ ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿರುತ್ತದೆ ಎಂದು ಹೇಳಲಾಗಿತ್ತು. ಇದೀಗ ಅದು ಇನ್ನೂ ಹೆಚ್ಚಚಳವಾಗಿದೆ. ಈ ರೈಲು, ಸುಧಾರಿತ ಅಪಘಾತ ಸುರಕ್ಷಾ ವಿನ್ಯಾಸವನ್ನು ಹೊಂದಿದೆ. ಜೊತೆಗೆ ರೈಲ್ವೆ ಬೋಗಿಗಳು ಪ್ರಯಣಿಕರಿಗೆ ಐಷಾರಾಮಿ ಸಂಚಾರಿ ಅನುಭವ ನೀಡಲಿವೆ. ರಾತ್ರಿ ವೇಳೆ 800-1,200 ಕಿ.ಮೀ ದೂರ ಕ್ರಮಿಸಲು ಅನುಕೂಲವಾಗುಂತೆ ವಂದೇ ಭಾರತ್ ಸ್ಲೀಪರ್ ರೈಲನ್ನು ರೂಪಿಸಲಾಗಿದೆ. ಮಧ್ಯಮ ವರ್ಗದ ಜನರಿಗೆ ಅನುಕೂಲವಾಗಲಿದೆ. ರಾಜಧಾನಿ ಎಕ್ಸ್ಪ್ರೆಸ್ ರೈಲಿನ ದರಕ್ಕೆ ಸರಿಸಮವಾಗಿ ಈ ರೈಲಿನ ಪ್ರಯಾಣ ದರ ಇರಲಿದೆ ಎಂದು ವೈಷ್ಣವ್ ಈ ಹಿಂದೆ ಹೇಳಿದ್ದರು ಅಡುಗೆ ಸಿದ್ಧಪಡಿಸಲು ವಿಶೇಷ ಕೋಣೆಯಿದ್ದು, ಇಲ್ಲಿ ಓವೆನ್, ಫ್ರಿಡ್ಜ್, ನೀರು ಕಾಯಿಸುವ ವ್ಯವಸ್ಥೆ ಕಲ್ಪಿಸಲಾಗಿದೆ. ಈ ವರ್ಷಾಂತ್ಯಕ್ಕೆ ಭಾರತ್ ಸ್ಲೀಪರ್ ಕೋಚ್ ರೈಲುಗಳ ಸೇವೆ ಆರಂಭವಾಗಬಹುದು ಎಂದು ಮೂಲಗಳು ತಿಳಿಸಿವೆ.
ವಂದೇ ಭಾರತ್ ಸ್ಲೀಪರ್ ವಿಶೇಷತೆಗಳು: ಅತ್ಯುತ್ತಮ ಒಳಾಂಗಣ ವಿನ್ಯಾಸ, ಅಗ್ನಿ ಅಪಾಯದ ಮಟ್ಟ ಕಡಿಮೆ, ವಾಸನೆ ಮುಕ್ತ ಶೌಚಾಲಯ ವ್ಯವಸ್ಥೆ, ಅಂಗವಿಕಲರಿಗೆ ವಿಶೇಷ ಆಸನ ಮತ್ತು ಶೌಚಾಲಯ ವ್ಯವಸ್ಥೆ, ಬೋಗಿಗಳ ಮಧ್ಯೆ ಸೆನ್ಸರ್ ಆಧಾರಿತ ಬಾಗಿಲುಗಳು, ಪ್ರಥಮ ದರ್ಜೆ ಎಸಿ ಕಾರಿನಲ್ಲಿ ಸ್ನಾನಕ್ಕೆ ಬಿಸಿನೀರಿನ ವ್ಯವಸ್ಥೆ, ರೈಲಿನ ಕೊನೆ ಬೋಗಿಯಲ್ಲಿ ದೂರದಿಂದಲೇ ಕಾರ್ಯ ನಿರ್ವಹಿಸುವ ಬೆಂಕಿ ತಡೆಗೋಡೆ ಬಾಗಿಲುಗಳು, ಯುಎಸ್ಬಿ ಚಾರ್ಜಿಂಗ್, ರೀಡಿಂಗ್ ಲೈಟ್ ಮತ್ತು ಸಾರ್ವಜನಿಕ ಪ್ರಕಟಣೆ ಮತ್ತು ದೃಶ್ಯ ಮಾಹಿತಿ ವ್ಯವಸ್ಥೆ ಹೊಂದಿರುತ್ತದೆ.