ಬೆಳಗಾವಿ: ಡೈರಿ ಚಟುವಟಿಕೆಗಳು ಎಲ್ಲಿ ದುರ್ಬಲವಾಗಿವೆಯೋ ಅಲ್ಲಿಯೇ ತಲಾದಾಯವೂ ಕಡಿಮೆ ಇದೆ. ಇದೇ ಕಾರಣಕ್ಕಾಗಿ ಕಲ್ಯಾಣ ಕರ್ನಾಟಕದಲ್ಲಿ ತಲಾದಾಯ ಕಡಿಮೆ ಇದೆ. ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ ಉತ್ತರ ಕರ್ನಾಟಕದಲ್ಲೂ ಕಡಿಮೆ ಇದೆ ಎಂದು ಸಿಎಂ ಸಿದ್ದರಾಮಯ್ಯ ವಿಶ್ಲೇಷಿಸಿದ್ದಾರೆ.
ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಕೊನೆಯ ದಿನವಾದ ಇಂದು ಉತ್ತರ ಕರ್ನಾಟಕದ ಸಮಸ್ಯೆಗಳನ್ನು ಕುರಿತು ನಡೆದ ಚರ್ಚೆಗೆ ಅವರು ಉತ್ತರ ನೀಡಿದರು.
371 ಜೆ ವಿಶೇಷ ಸ್ಥಾನಮಾನ ಕೊಟ್ಟಿದ್ದು ಕೇಂದ್ರದಲ್ಲಿದ್ದ ಕಾಂಗ್ರೆಸ್ ಸರ್ಕಾರ. ಅದನ್ನು ತಿರಸ್ಕರಿಸಿದ್ದು ಬಿಜೆಪಿಯ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ ಅವರು. ಹಾಗಾಗಿ ವಿರೋಧಪಕ್ಷದವರಿಗೆ ಮಾತನಾಡಲು ಯಾವುದೇ ನೈತಿಕತೆ ಇಲ್ಲ ಎಂದರು. 2023ರಲ್ಲಿ 3000 ಕೋಟಿ 2025/2026 ರಲ್ಲಿ 5000 ಕೋಟಿ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು.
371 ಜೆ ಜಾರಿ ಮಾಡಲು ಹೋರಾಡಿದ್ದು-ಜಾರಿ ಮಾಡಿದ್ದು ಕಾಂಗ್ರೆಸ್ ಪಕ್ಷ: ಕಲ್ಯಾಣ ಕರ್ನಾಟಕದ ಜನರ ಅಭಿವೃದ್ಧಿಯ ವೇಗಕ್ಕೆ 371ಜೆ ಮೂಲಕ ಚಾಲನೆ ನೀಡಿದ್ದು ನಾವು: ನೀವೇನು ಮಾಡಿದ್ದೀರಿ ದಾಖಲೆ ಕೊಡಿ: ಸಿ.ಎಂ ಸವಾಲು ಹಾಕಿದರು.
ಅಡ್ವಾನಿ ಮತ್ತು ವಾಜಪೇಯಿ ಇಬ್ಬರೂ ಕೇಂದ್ರದಲ್ಲಿ ಸರ್ಕಾರ ನಡೆಸುವಾಗ 371ಜೆ ಜಾರಿ ಸುತಾರಾಂ ಸಾಧ್ಯವಿಲ್ಲ ಎಂದು ಕಲ್ಯಾಣ ಕರ್ನಾಟಕದ ಜನತೆಗೆ ಕೈ ಎತ್ತಿ ಬಿಟ್ರಲ್ಲಾ ಯಾಕ್ರೀ…ಯಾಕ್ರೀ: ತಮ್ಮನ್ನು ಕೆಣಕಿದ ಬಿಜೆಪಿ ಸದಸ್ಯರನ್ನು ಕುಟುಕಿ ಪ್ರಶ್ನಿಸಿದರು.
ವಿರೋಧ ಪಕ್ಷದ ನಾಯಕರಾದಿಯಾಗಿ ಅನೇಕರು ತಲಾದಾಯದ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ. ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಜನರ ತಲಾದಾಯ ರಾಜ್ಯದ ಉಳಿದೆಡೆಗಳಿಗೆ ಹೋಲಿಸಿದರೆ ಕಡಿಮೆ ಇದೆ. ನಮ್ಮಲ್ಲಿ ಪೂರ್ಣ ಪ್ರಮಾಣದ ತಲಾದಾಯ ಕುರಿತ ವರದಿ ಲಭ್ಯ ಇರುವುದು 2023-24 ರ ಸಾಲಿನದು. ಅದನ್ನು ಆಧರಿಸಿ ಹೇಳುವುದಾದರೆ, ಅದರ ಪ್ರಕಾರ ರಾಜ್ಯದ ಜನರ ಸರಾಸರಿ ತಲಾದಾಯ ಪ್ರಸ್ತುತ ದರಗಳಲ್ಲಿ 3,39,813 ರೂ ಇದೆ. ಅದಕ್ಕಿಂತ ಮೇಲೆ 6 ಜಿಲ್ಲೆಗಳಿವೆ. ಬೆಂಗಳೂರು ನಗರ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ ಜಿಲ್ಲೆಗಳ ಜನರ ತಲಾದಾಯ 3.4 ಲಕ್ಷ ರೂಗಳಿಗಿಂತ ಹೆಚ್ಚು. ಅದಕ್ಕೆ ಸಮೀಪದಲ್ಲಿ 10 ಜಿಲ್ಲೆಗಳಿವೆ. 2.5 ಲಕ್ಷದಿಂದ 3.4 ಲಕ್ಷದವರೆಗೆ ಮಂಡ್ಯ, ತುಮಕೂರು, ಕೊಡಗು, ಹಾಸನ, ಬಳ್ಳಾರಿ, ರಾಮನಗರ, ಉತ್ತರ ಕನ್ನಡ, ಧಾರವಾಡ, ಚಾಮರಾಜನಗರ, ಬಾಗಲಕೋಟೆ ಜಿಲ್ಲೆಗಳು ಎಂದು ವಿವರ ನೀಡಿದರು.
2 ರಿಂದ 2.5 ಲಕ್ಷ ತಲಾದಾಯ ಇರುವ ಜಿಲ್ಲೆಗಳು 4. ಅವು, ಮೈಸೂರು, ಚಿಕ್ಕಬಳ್ಳಾಪುರ, ಕೋಲಾರ, ದಾವಣಗೆರೆ. 2 ಲಕ್ಷಕ್ಕಿಂತ ಕಡಿಮೆ ಇರುವ ಜಿಲ್ಲೆಗಳು ಚಿತ್ರದುರ್ಗ, ಗದಗ, ಹಾವೇರಿ, ರಾಯಚೂರು, ವಿಜಯನಗರ, ವಿಜಯಪುರ, ಬೀದರ್, ಬೆಳಗಾವಿ, ಕೊಪ್ಪಳ, ಯಾದಗಿರಿ, ಕಲಬುರಗಿ ಸೇರಿ 11 ಇವೆ.
ನಾವು ತಲಾದಾಯವನ್ನು ಅಭಿವೃದ್ಧಿಯ ಮಾನದಂಡವಾಗಿರಿಸಿಕೊಳ್ಳುತ್ತೇವೆ. ತಲಾದಾಯವೆಂದರೆ ಒಟ್ಟಾರೆ ಆ ಜಿಲ್ಲೆಯ ಒಟ್ಟು ಉತ್ಪನ್ನವನ್ನು ಲೆಕ್ಕ ಹಾಕಿ ಅದನ್ನು ಆ ಜಿಲ್ಲೆಯ ಎಲ್ಲಾ ಜನರಿಗೆ ಡಿವೈಡ್ ಮಾಡಿದಾಗ ಸಿಗುವ ಮೌಲ್ಯವಾಗಿರುತ್ತದೆ. ಹೆಚ್ಚು ಇಂಡಸ್ಟ್ರಿಯಲೈಸ್ ಆದ, ಕಮರ್ಷಿಯಲೈಸ್ ಆದ ಜಿಲ್ಲೆಗಳ ತಲಾದಾಯ ಹೆಚ್ಚಿರುತ್ತದೆ. ಹೆಚ್ಚು ಕೃಷಿಯನ್ನು ಅವಲಂಬಿಸಿದ ಜಿಲ್ಲೆಗಳಲ್ಲಿ ಕಡಿಮೆ ಇರುತ್ತದೆ.
ನಾಲ್ಕನೇ ಗುಂಪಿನ ಜಿಲ್ಲೆಗಳ ಸುಧಾರಣೆಗೆ ನಾವು ಹೆಚ್ಚು ಗಮನ ಹರಿಸಬೇಕಾಗಿದೆ. ಉತ್ತರ ಕರ್ನಾಟಕದ 14 ಜಿಲ್ಲೆಗಳಲ್ಲಿ 10 ಜಿಲ್ಲೆಗಳು ಹಾಗೂ ಚಿತ್ರದುರ್ಗ ಜಿಲ್ಲೆ ಕಡೆಯ ಕೆಟಗರಿಯಲ್ಲಿ ಬರುತ್ತವೆ. ಮೈಸೂರು, ಕೋಲಾರ, ಚಿಕ್ಕಬಳ್ಳಾಪುರ, ದಾವಣಗೆರೆ ಜಿಲ್ಲಗಳ ತಲಾದಾಯವು 4 ನೇ ಗುಂಪಿನ ಜನರ ತಲಾದಾಯಕ್ಕೆ ಸಮೀಪದಲ್ಲೆ ಇದೆ.
ಆದರೂ ಉತ್ತರ ಕರ್ನಾಟಕದ 10 ಜಿಲ್ಲೆಗಳ ಜನರ ತಲಾದಾಯ ಅದರಲ್ಲೂ ಕಲ್ಯಾಣ ಕರ್ನಾಟಕದ ಜನರ ತಲಾದಾಯ ಕಡಿಮೆ ಇರಲು ಕಾರಣಗಳೇನು? ಎಂದು ಹುಡುಕುತ್ತಾ ಹೋದರೆ ಡೈರಿ ಚಟುವಟಿಕೆಗಳು ಎಲ್ಲಿ ದುರ್ಬಲವಾಗಿವೆಯೋ ಅಲ್ಲಿಯೇ ತಲಾದಾಯವೂ ಕಡಿಮೆ ಇದೆ. ನೀವು ಸಲಹೆ ಕೊಡಬೇಕಾಗಿವುದು ಇಂಥ ವಿಚಾರಗಳನ್ನೇ ಎಂದರು.
ಹಸು, ಎಮ್ಮೆ ಸಾಕಾಣಿಕೆಯು ತಕ್ಷಣದ ಆದಾಯವನ್ನು ಹೆಚ್ಚು ಮಾಡುತ್ತದೆ. ಜನರು ಗುಳೆ ಹೋಗುವುದನ್ನು ತಪ್ಪಿಸುತ್ತದೆ. ಜನ ನಿಂತರೆ ಅಲ್ಲಿ ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ. ಉತ್ತಮ ಶಿಕ್ಷಣವು ಉತ್ತಮ ಜೀವನದ ಕಡೆಗೆ ಮುನ್ನಡೆಯಲು ಸಾಧ್ಯವಾಗುತ್ತದೆ. ಕೌಶಲ್ಯಯುತ ಶಿಕ್ಷಣದ ಅಗತ್ಯವೂ ಇಂದಿನ ಅಗತ್ಯವಾಗಿದೆ.
ನಂಜುಂಡಪ್ಪ ವರದಿ ಜಾರಿಯಾದ ನಂತರದಲ್ಲಿ ಡೈರಿ ಚಟುವಟಿಕೆಗಳು ಹೆಚ್ಚಾಗಿದ್ದು, ಕೆಎಂಎಫ್ ನಲ್ಲಿ ಪ್ರತಿ ದಿನ 1 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಬೀದರ್, ಗುಲ್ಬರ್ಗ ಕಲಬುರ್ಗಿ ಮತ್ತು ಯಾದಗಿರಿ ಹಾಲು ಒಕ್ಕೂಟದಲ್ಲಿ ಪ್ರತಿದಿನಕ್ಕೆ 67 ಸಾವಿರ ಲೀಟರ್ ಉತ್ಪಾದನೆ ಆಗುತ್ತಿದೆ. ಈ ಎರಡರ ನಡುವೆ ಅಜಗಜಾಂತರ ವ್ಯತ್ಯಾಸವಿದೆ. ಹಳೆ ಮೈಸೂರಿನಲ್ಲಿ ಒಂದು ಕೋಟಿ ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ ಉತ್ತರ ಕರ್ನಾಟಕದಲ್ಲಿ 10 ಲಕ್ಷಕ್ಕೂ ಹೆಚ್ಚು ಲೀಟರ್ ಹಾಲು ಉತ್ಪಾದನೆ ಆಗುತ್ತಿದೆ. ನಮ್ಮ ಸರ್ಕಾರ ಪ್ರತಿ ಲೀಟರ್ ಹಾಲಿಗೆ ಒಮ್ಮೆ ಮೂರು ರೂ ಮತ್ತೊಮ್ಮೆ 400 ಗಳ ಸಹಾಯಧನವನ್ನು ಹೆಚ್ಚಳ ಮಾಡಿದೆ. ಈ ಮೊತ್ತ ಸಂಪೂರ್ಣವಾಗಿ ರೈತರಿಗೆ ಹೋಗುತ್ತಿದೆ. ಬಿಜೆಪಿ ಸರ್ಕಾರ ಬಿಟ್ಟು ಹೋಗಿದ್ದ 600 ಕೋಟಿ ಗಳನ್ನು ನಮ್ಮ ಸರ್ಕಾರ ತೀರಿಸಿದೆ. ಮೇವಿನ ವೆಚ್ಚ ಹೆಚ್ಚಳವಾಗಿದೆ ಎಂಬ ಕಾರಣಕ್ಕೆ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ 7 ರೂಗಳ ಪ್ರೋತ್ಸಾಹ ಧನವನ್ನು ಈ ಅವಧಿಯಲ್ಲಿಯೇ ಕೊಡುತ್ತೇವೆ ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು.
ಪ್ರೊ.ಆರ್.ಗೋವಿಂದರಾವ್ ಶಿಫಾರಸ್ಸುಗಳನ್ನು ಜಾರಿಗೆ ತರಲಾಗುವುದು
ಬೆಳಗಾವಿ ಅಧಿವೇಶನದಲ್ಲಿ ಪ್ರೊ.ಆರ್.ಗೋವಿಂದರಾವ್ ಅವರು ಇನ್ನೂ ಎರಡು ತಿಂಗಳು ಅಗತ್ಯವಿದೆ ಎಂದು ತಿಳಿಸಿದ ಮೇರೆಗೆ ಅವಧಿ ವಿಸ್ತರಣೆ ಮಾಡಲಾಗಿದೆ. ಬಹುತೇಕ ಜನವರಿಯಲ್ಲಿ ವರದಿಯನ್ನು ಕೊಡುತ್ತಾರೆ. ಉತ್ತರ ಕರ್ನಾಟಕದ ಅಸಮತೋಲನ ನಿವಾರಣೆಗೆ ವರದಿಯನ್ನು ಜಾರಿ ಮಾಡುತ್ತೇವೆ. ಕಿತ್ತೂರು ಕರ್ನಾಟಕಕ್ಕೆ ಕಿತ್ತೂರು ಕರ್ನಾಟಕ ಅಭಿವೃದ್ಧಿಗೆ 500 ಕೋಟಿ ಒದಗಿಸಬೇಕೆಂದು ಮನವಿ ಮಾಡಿದ್ದಾರೆ. ಪ್ರೊ.ಗೋವಿಂದರಾವ್ ವರದಿ ಬಂದ ನಂತರ ಮಾಡಲಾಗುವುದು ಎಂದು ತಿಳಿಸಲಾಗಿದೆ. ಪ್ರಾದೇಶಿಕ ಅಸಮತೋಲನ ನಿವಾರಣೆಗಾಗಿಯೇ ಪ್ರೊ.ಗೋವಿಂದರಾವ್ ಸಮಿತಿ ರಚಿಸಲಾಗಿದೆ. ರಾಷ್ಟ್ರೀಯ 14 ನೇ ಹಣಕಾಸು ಸಮಿತಿಯ ಸದಸ್ಯರಾಗಿದ್ದರು. ಬಹುತೇಕ ಜನವರಿ 2026ನಲ್ಲಿ ವರದಿ ಬರಲಿದೆ ಎಂದರು. ಗೋವಿಂದರಾವ್ ಅವರು ಉತ್ತರ ಕರ್ನಾಟಕದ ಆರ್ಥಿಕ ತಜ್ಞರು. ವರದಿ ಪರಿಶೀಲಿಸಿ ಶಿಫಾರಸ್ಸುಗಳನ್ನು ಜಾರಿಗೆ ತರಲಾಗುವುದು ಎಂದರು.
ಹೈದರಾಬಾದ್ ಕರ್ನಾಟಕವನ್ನು 1991ರಲ್ಲಿ ಹೆಚ್. ಕೆ.ಡಿ. ಬಿ ಪ್ರಾರಂಭವಾಯಿತು. ನಂತರ 6/11/2013 ರಲ್ಲಿ ಸಂವಿಧಾನಕ್ಕೆ ತಿದ್ದುಪಡಿ ತಂದು 371 ಜೆ ಸೇರ್ಪಡೆಯಾಯಿತು. . ಹೆಚ್ ಕೆ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ರಚಿಸಲಾದ ಸಮಿತಿಯು ಶೇ. 80% ರಷ್ಟು ಹೈದರಾಬಾದ್ ಕರ್ನಾಟಕದಲ್ಲಿ ಮೀಸಲಾತಿ ನೀಡಬೇಕೆಂದು ಹಾಗೂ ರಾಜ್ಯದ ಇತರ ಭಾಗಗಳಲ್ಲಿನ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ 8% ಮಾಡಬೇಕೆಂದು ಮಾಡಿದ್ದ ಶಿಫಾರಸ್ಸನ್ನು ಯಥಾವತ್ತು ಜಾರಿಗೆ ತರಲಾಯಿತು ಎಂದರು.
ನಾನು ಮಿಲ್ಕ್ ಯೂನಿಯನ್ನುಗಳ ಮಾಹಿತಿ ತರಿಸಿಕೊಂಡು ನೋಡಿದೆ. ಬೆಂಗಳೂರು ಮಿಲ್ಕ್ ಯೂನಿಯನ್ನಿನಲ್ಲಿ ಪ್ರತಿ ದಿನ ಸರಾಸರಿ 17.13 ಲಕ್ಷ ಕೆಜಿ ಹಾಲು ಸಂಗ್ರಹವಾಗುತ್ತದೆ. ಹಾಸನ, ಮಂಡ್ಯ, ತುಮಕೂರು, ಮೈಸೂರು, ಶಿವಮೊಗ್ಗ, ಕೋಲಾರ ಮಿಲ್ಕ್ ಯೂನಿಯನ್ನುಗಳಲ್ಲಿ ಪ್ರತಿ ದಿನ ಸರಾಸರಿ 7.2 ರಿಂದ 14.08 ಲಕ್ಷ ಕೆಜಿಗಳಷ್ಟು ಹಾಲನ್ನು ಸಂಗ್ರಹಿಸಲಾಗುತ್ತಿದೆ. ಆದರೆ ಕಲ್ಬುರ್ಗಿ ಮಿಲ್ಕ್ ಯೂನಿಯನ್ನಿನಲ್ಲಿ [ ಬೀದರ್, ಕಲ್ಬುರ್ಗಿ, ಯಾದಗಿರಿ ಜಿಲ್ಲೆಗಳನ್ನು ಒಳಗೊಂಡದ್ದು] ದಿನಕ್ಕೆ ಕೇವಲ 67 ಸಾವಿರ ಕೆಜಿ ಹಾಲು ಮಾತ್ರ ಉತ್ಪಾದನೆಯಾಗುತ್ತಿದೆ. ವಿಜಯಪುರ ಯೂನಿಯನ್ನಿನಲ್ಲಿ 1.47 ಲಕ್ಷ ಕೆಜಿ, ಹಾವೇರಿ ಯೂನಿಯನ್ನಿನಲ್ಲಿ 1.55 ಲಕ್ಷ ಕೆಜಿ ಹಾಲು ಮಾತ್ರ ಉತ್ಪಾದನೆಯಾಗುತ್ತದೆ. ಬೆಳಗಾವಿಯಲ್ಲಿ 2.39 ಲಕ್ಷ ಕೆಜಿ ಸಂಗ್ರಹವಾಗುತ್ತದೆ.
ರಾಜ್ಯದಲ್ಲಿ ಪ್ರಸ್ತುತ ಅಂದಾಜು 6.95 ಕೋಟಿ ಜನಸಂಖ್ಯೆ ಇರಬಹುದು. ಅದರಲ್ಲಿ ಉತ್ತರ ಕರ್ನಾಟಕದ 14 ಜಿಲ್ಲೆಗಳಲ್ಲಿ 2,96,28,767 ಜನರಿದ್ದಾರೆ. ರಾಜ್ಯದ ಜನಸಂಖ್ಯೆಯಲ್ಲಿ ಸುಮಾರು ಶೇ.42 ರಷ್ಟು ಜನರು ಈ ಭಾಗದಲ್ಲಿ ವಾಸಿಸುತ್ತಾರೆ. ಈ ಜಿಲ್ಲೆಗಳ ಜನರ ಸರಾಸರಿ ಹಾಲಿನ ಸಂಗ್ರಹ ದಿನಕ್ಕೆ 3.52 ಕೆಜಿ ಮಾತ್ರ. ಹಾಗೆಯೇ ರಾಜ್ಯದಲ್ಲಿ 224 ವಿಧಾನ ಸಭಾ ಕ್ಷೇತ್ರಗಳಿವೆ. ಉತ್ತರ ಕರ್ನಾಟಕದ 14 ಜಿಲ್ಲೆಗಳಲ್ಲಿ 97 ವಿಧಾನ ಸಭಾ ಕ್ಷೇತ್ರಗಳಿವೆ.
ದಕ್ಷಿಣ ಕರ್ನಾಟಕ ಹಾಗೂ ಕರಾವಳಿಯ ಉಡುಪಿ ದಕ್ಷಿಣ ಕರ್ನಾಟಕ ಜಿಲ್ಲೆಗಳ ಜನರ ಸರಾಸರಿ ಹಾಲಿನ ಸಂಗ್ರಹದ ಪ್ರಮಾಣ ದಿನಕ್ಕೆ 22.4 ಲೀಟರುಗಳು. ರಾಜ್ಯದಲ್ಲಿ ಸರಾಸರಿ 1 ಕೋಟಿ ಲೀ.ಗಳು. ಇದರಲ್ಲಿ ಉತ್ತರ ಕರ್ನಾಟಕದ 14 ಜಿಲ್ಲೆಗಳ ಸಂಗ್ರಹ 10.45 ಲಕ್ಷ ಲೀಟರ್ ಮಾತ್ರ. ಇನ್ನುಳಿದ ಹಾಲು ಉಳಿದ 17 ಜಿಲ್ಲೆಗಳ ಸುಮಾರು 4 ಕೋಟಿ ಜನರು ಸಂಗ್ರಹಿಸುತ್ತಾರೆ. ಈ ಕಾರಣದಿಂದಲೆ ನಾವು ಈ ವರ್ಷದ ಬಜೆಟ್ಟಿನಲ್ಲಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳ ಹೈನುಗಾರಿಕೆಗೆ ಹೆಚ್ಚು ಆದ್ಯತೆಯನ್ನು ನೀಡಲು ತೀರ್ಮಾನಿಸಿದ್ದೇವೆ.
ಆರ್. ಅಶೋಕ್ ಅವರು ಹಾಲು ಉತ್ಪಾದಕರಿಗೆ ಹಾಲಿನ ಪ್ರೋತ್ಸಾಹ ಧನ ಕೊಟ್ಟಿಲ್ಲ ಎಂದು ಹೇಳಿದ್ದಾರೆ. ಹಾಗೆಯೇ ಪ್ರಣಾಳಿಕೆಯಲ್ಲಿ ಹೇಳಿದ್ದ ಒಂದು ಲೀಟರಿಗೆ 7 ರೂಗಳಿಗೆ ಹೆಚ್ಚಿಸಲಾಗುವುದು ಎಂದು ಹೇಳಿದ್ದಾರೆ. ಆದರೆ ಕೊಡಲಿಲ್ಲ ಎಂದು ಆರೋಪಿಸಿದರು. ಇದು ಪೂರ್ತಿ ನಿಜವಲ್ಲ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರೈತರ ಹಾಲಿನ ದರವನ್ನು ಎರಡು ಬಾರಿ ಹೆಚ್ಚಿಸಿದ್ದೇವೆ. ಒಮ್ಮೆ ಮೂರು ರೂಪಾಯಿ ಮತ್ತೊಮ್ಮೆ 4 ರೂ. ಇದರ ಜೊತೆಗೆ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಬಾಕಿಯಿದ್ದ 630 ಕೋಟಿ ರೂಪಾಯಿಗಳನ್ನೂ ರೈತರಿಗೆ ನೀಡಿದ್ದೇವೆ. 2023-24 ರಿಂದ 2025-26 ರವರೆಗೆ 4048 ಕೋಟಿ ರೂಪಾಯಿಗಳನ್ನು ರೈತರ ಖಾತೆಗಳಿಗೆ ನೇರವಾಗಿ ವರ್ಗಾಯಿಸಿದ್ದೇವೆ. ಅಕ್ಟೋಬರ್ ಮತ್ತು ನವೆಂಬರ್ ತಿಂಗಳ ಪ್ರೋತ್ಸಾಹಧನ ಮಾತ್ರ ಬಾಕಿ ಇದೆ. ಬಾಕಿ ಇರುವ ಶೀಘ್ರವಾಗಿ ಬಿಡುಗಡೆ ಮಾಡುತ್ತೇವೆ.
2013-14 ರಲ್ಲಿ ನಮ್ಮ ಸರ್ಕಾರ ಕ್ಷೀರಧಾರೆ ಯೋಜನೆಯನ್ನು ಜಾರಿಗೆ ತಂದು 3 ರೂ ಇದ್ದ ಪ್ರೋತ್ಸಾಹ ಧನವನ್ನು 5 ರೂಗೆ ಹೆಚ್ಚಿಸಿತ್ತು. ಅದನ್ನು 7 ರೂಗಳಿಗೆ ಹೆಚ್ಚಿಸುತ್ತೇವೆ ಎಂದು ಹೇಳಿದ್ದೇವೆ. ಮುಂದಿನ ದಿನಗಳಲ್ಲಿ ಅದನ್ನೂ ಮಾಡುತ್ತೇವೆ. ಬಿಜೆಪಿ ಅವಧಿಯಲ್ಲಿ 75 ಲಕ್ಷ ಲೀಟರುಗಳಿಗೆ ಇಳಿದಿದ್ದ ಹಾಲಿನ ಸಂಗ್ರಹ ಈಗ 1.05 ಕೋಟಿ ಲೀಟರುಗಳ ವರೆಗೆ ಏರಿಕೆಯಾಗಿದೆ.
ಶೈಕ್ಷಣಿಕ ಪ್ರಗತಿಗೆ ಛಾಯಾ ದೇವಣಗಾಂವ್ಕರ್ ವರದಿಯ ಶಿಫಾರಸ್ಸುಗಳ ಜಾರಿಗೆ ಬದ್ದ: ಸಿದ್ದರಾಮಯ್ಯ ಘೋಷಣೆ:
ಮನಮೋಹನ್ ಸಿಂಗ್ ಅವರ ನೇತೃತ್ವದ ಯುಪಿಎ ಸರ್ಕಾರದಲ್ಲಿ 6-11-2013 ರಂದು ಕಲ್ಯಾಣ ಕರ್ನಾಟಕ ಭಾಗದ ಜನರ ಬಹುದಿನಗಳ ಬೇಡಿಕೆಯಾಗಿದ್ದ ವಿಶೇಷ ಸ್ಥಾನಮಾನದ 371 ಜೆ ಅನುಷ್ಠಾನ ಮಾಡಲಾಯಿತು. 371 ಜೆ ಅನುಷ್ಠಾನವಾದ ಮೇಲೆ ಆ ಭಾಗದ ಅಭಿವೃದ್ಧಿಗಾಗಿ 24,778 ಕೋಟಿ ರೂಗಳನ್ನು ಒದಗಿಸಿದ್ದೇವೆ. ಇದುವರೆಗೆ ಸುಮಾರು 14,800 ಕೋಟಿ ರೂ ಗಳಿಗಿಂತ ಹೆಚ್ಚಿನ ಅನುದಾನಗಳನ್ನು ಖರ್ಚು ಮಾಡಲಾಗಿದೆ.
371 ಜೆ ಸ್ಥಾನಮಾನ ದೊರೆತ ನಂತರ ತಾಂತ್ರಿಕ, ವೈದ್ಯಕೀಯ ಶಿಕ್ಷಣ ಹಾಗೂ ಇನ್ನಿತರ ಪದವಿ ಹಾಗೂ ವೃತ್ತಿಪರ ಶಿಕ್ಷಣ ಸಂಸ್ಥೆಗಳಲ್ಲಿ ಶೇ.70 ರಷ್ಟು ಸ್ಥಾನಗಳನ್ನು ಮತ್ತು ರಾಜ್ಯದ ಉಳಿದ ಭಾಗಗಳಲ್ಲಿ ಶೇ.8 ರಷ್ಟು ಸ್ಥಾನಗಳನ್ನು ಈ ಭಾಗದ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ. ಇದರ ಪರಿಣಾಮ 2014-15 ರಿಂದ 2024 ರ ಶೈಕ್ಷಣಿಕ ಸಾಲಿನವರೆಗೆ 10,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ವೈದ್ಯಕೀಯ, 31,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಂಜಿನಿಯರಿAಗ್ ಕಾಲೇಜುಗಳಲ್ಲಿ ಪ್ರವೇಶ ಪಡೆದಿದ್ದಾರೆ. ಇದಲ್ಲದೆ 12,000 ಕ್ಕಿಂತ ಹೆಚ್ಚಿನ ವಿದ್ಯಾರ್ಥಿಗಳು ದಂತ ವೈದ್ಯಕೀಯ, ಹೋಮಿಯೋಪತಿ, ಕೃಷಿ ಸಂಬಂಧಿತ, ಬಿ-ಫಾರ್ಮಸಿ/ ಡಿ-ಫಾರ್ಮಸಿ ಕೋರ್ಸುಗಳು ಮುಂತಾದವುಗಳಿಗೆ ಮೀಸಲಾತಿ ಸೌಲಭ್ಯದಿಂದ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗಿದೆ. ಈ ವರ್ಷದ ಅಂಕಿ ಅಂಶಗಳೂ ಸೇರಿದರೆ ಇನ್ನಷ್ಟು ಹೆಚ್ಚಿನ ವಿದ್ಯಾರ್ಥಿಗಳಿಗೆ ಅನುಕೂಲವಾಗಿರುವುದು ತಿಳಿಯುತ್ತದೆ.
ಬಿ.ಆರ್ ಪಾಟೀಲ್ ಆದಿಯಾಗಿ ಅನೇಕ ಸದಸ್ಯರು ಶಿಕ್ಷಣದ ಬಗ್ಗೆ ಮಾತನಾಡಿದ್ದಾರೆ. ಕಲ್ಯಾಣ ಕರ್ನಾಟಕದ ಶಿಕ್ಷಣ ಪರಿಸ್ಥಿತಿಯನ್ನು ಸುಧಾರಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧ್ಯಯನ ಮಾಡಲು ಶಿಕ್ಷಣ ತಜ್ಞರಾದ ಛಾಯಾ ದೇಗಾಂವಕರ್ ಅವರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಿದ್ದೇವೆ. ವರದಿ ಸ್ವೀಕರಿಸಿ ಸಾಧಕ ಬಾಧಕ ಪರಿಶೀಲಿಸಿ ಅನುಷ್ಠಾನ ಮಾಡಲಾಗುವುದು
ಆರ್ ಅಶೋಕ್, ವಿಜಯೇಂದ್ರ ಹಾಗೂ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರುಗಳು ನಮ್ಮ ಸರ್ಕಾರ ಉತ್ತರ ಕರ್ನಾಟಕಕ್ಕೆ ಏನೂ ಕೊಟ್ಟಿಲ್ಲ ಎಂದು ಹೇಳಿದ್ದಾರೆ. ಆರ್.ಅಶೋಕ್ ಅವರು ಶ್ವೇತಪತ್ರವನ್ನೂ ಡಿಮ್ಯಾಂಡ್ ಮಾಡಿದ್ದಾರೆ. ನಾವು ತಯಾರಿದ್ದೇವೆ. 2006 ರಿಂದಲೂ ನೀವೇನು ಮಾಡಿದ್ದೀರಿ, ನಾವೇನು ಮಾಡಿದ್ದೇವೆ ಎಂಬುದನ್ನೂ ಹೇಳುತ್ತೇವೆ.
ರಾಜ್ಯದಲ್ಲಿ ಪ್ರಸ್ತುತ ಅಂದಾಜು 6.95 ಕೋಟಿ ಜನಸಂಖ್ಯೆ ಇರಬಹುದು. ಅದರಲ್ಲಿ ಉತ್ತರ ಕರ್ನಾಟಕದ 14 ಜಿಲ್ಲೆಗಳಲ್ಲಿ 2,96,28,767 ಜನರಿದ್ದಾರೆ. ರಾಜ್ಯದ ಜನಸಂಖ್ಯೆಯಲ್ಲಿ ಸುಮಾರು ಶೇ.42 ರಷ್ಟು ಜನರು ಈ ಭಾಗದಲ್ಲಿ ವಾಸಿಸುತ್ತಾರೆ. ರಾಜ್ಯದ ಭೌಗೋಳಿಕ ವಿಸ್ತೀರ್ಣ 1,91,791 ಚದರ ಕಿಮೀಗಳು. ಅದರಲ್ಲಿ ಉತ್ತರ ಕರ್ನಾಟಕದ 14 ಜಿಲ್ಲೆಗಳ ವಿಸ್ತೀರ್ಣ 1,01,708 ಚದರ ಕಿಮೀಗಳು. ವಿಸ್ತೀರ್ಣದಲ್ಲಿ ಶೇ.53 ರಷ್ಟು ಭೂ ಪ್ರದೇಶ ಈ ಭಾಗದಲ್ಲಿದೆ ಎಂದೂ ತಿಳಿಸಿದರು.

