ಪೆಟ್ರೋಲ್‌ ಬಂಕ್‌ ನೌಕರಿನಿಗೆ ಪಿಸ್ತೂಲ್‌ ತೋರಿಸಿ ಬೆದರಿಕೆ ಹಾಕಿದ ಮಹಿಳೆ:ದೂರು ದಾಖಲು

Most read

ಲಖನೌ: ಮಹಿಳೆಯೊಬ್ಬರು ಪಿಸ್ತೂಲ್ ಹಿಡಿದು ಪೆಟ್ರೋಲ್‌ ಬಂಕ್‌ ಸಿಬ್ಬಂದಿಯೊಬ್ಬರ ಮೇಲೆ ಹಲ್ಲೆ ನಡೆಸಿ‌ ಬೆದರಿಸಿದ ಉತ್ತರ ಪ್ರದೇಶದ ಹರ್ದೋಯ್‌ನಲ್ಲಿ ನಡೆದಿದೆ. ಬಿಲ್‌ಗ್ರಾಮ್ ಪಟ್ಟಣದ ಸ್ಯಾಂಡಿ ರಸ್ತೆಯಲ್ಲಿರುವ ಪೆಟ್ರೋಲ್‌ ಬಂಕ್‌ನಲ್ಲಿ ಈ ಪ್ರಕರಣ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಾರಿಗೆ ಸಿ ಎನ್‌ ಜಿ ಇಂಧನ ತುಂಬಿಸಲು ಪೆಟ್ರೋಲ್‌ ಬಂಕ್‌ ಗೆ ಬಂದಿದ್ದ ಕುಟುಂಬವೊಂದು ಪೆಟ್ರೋಲ್‌ ಬಂಕ್‌ ಗೆ ಆಗಮಿಸಿದೆ. ಸುರಕ್ಷತೆಯ ಹಿನ್ನೆಲೆಯಲ್ಲಿ ಕಾರಿನಲ್ಲಿರುವ ಎಲ್ಲರೂ ಕೆಳಗಿಳಿಯುವಂತೆ ಬಂಕ್‌ ಸಿಬ್ಬಂದಿ ಮನವಿ ಮಾಡಿದ್ದಾರೆ.  ಇದೇ ವಿಚಾರಕ್ಕೆ ಸಿಬ್ಬಂದಿ ಮತ್ತು ಕುಟುಂಬದ ನಡುವೆ ಮಾತಿನ ಚಕಮಕಿ ನಡೆದಿದೆ.

ಮಾತಿನ ಚಕಮಕಿ ನಡೆಯುತ್ತಿದ್ದಾಗ ಮಹಿಳೆಯೊಬ್ಬರು ಬಂಕ್‌ ನಲ್ಲಿ ಕೆಲಸ ಮಾಡುತ್ತಿರುವ ರಜನೀಶ್ ಕುಮಾರ್ ಎದೆಗೆ ಬಂದೂಕು ಇಟ್ಟು, ‘ಗುರುತು ಸಿಗದ ರೀತಿ ಗುಂಡು ಹಾರಿಸಿ ಕೊಲ್ಲುತ್ತೇನೆ‘ ಎಂದು ಬೆದರಿಕೆ ಹಾಕಿದ್ದಾರೆ. ಈ ದೃಶ್ಯಗಳು ಪೆಟ್ರೋಲ್‌ ಬಂಕ್‌ ನ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದ್ಯ ಇದೀಗ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಗಲಾಟೆ ಕುರಿತು ರಜನೀಶ್ ಕುಮಾರ್ ಪೊಲೀಸರಿಗೆ ದೂರು ದಾಖಲಿಸಿದ್ದಾರೆ. ಅವಾಚ್ಯ ಶಬ್ಧಗಳಿಂದ ನಿಂದಿಸಿ, ಹಲ್ಲೆ ನಡೆಸಿ, ಬೆದರಿಕೆ ಹಾಕಿದ್ದಾರೆ ಎಂದು ಮಹಿಳೆ ಸೇರಿದಂತೆ ಆಕೆಯ ಕುಟುಂಬ ಸದಸ್ಯರ ವಿರುದ್ಧವೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

More articles

Latest article