ಉ.ಪ್ರ: 4  ದಶಕಗಳ ಹಿಂದೆ 24 ದಲಿತರ ಹತ್ಯಾಕಾಂಡ; ಮೂವರಿಗೆ ಶಿಕ್ಷೆ

Most read

ಮೈನ್‌ ಪುರಿ: ಉತ್ತರಪ್ರದೇಶದ ಮೈನ್‌ ಪುರಿ ಜಿಲ್ಲೆಯ ದಿಹುಲಿ ಎಂಬ ಗ್ರಾಮದಲ್ಲಿ ನಾಲ್ಕು ದಶಕಗಳ ಹಿಂದೆ ನಡೆದಿದ್ದ 24 ದಲಿತರ ಹತ್ಯಾಕಾಂಡ ಇಡೀ ದೇಶವನ್ನೇ ಬೆಚ್ಚಿಬೀಳಿಸಿತ್ತು. ಈ ಪ್ರಕರಣದ ಆರೋಪಿಗಳಾದ ಡಕಾಯಿತರ ತಂಡದ ಮೂವರನ್ನು ಅಪರಾಧಿಗಳು ಎಂದು ಸ್ಥಳೀಯ ನ್ಯಾಯಾಲಯ ಘೋಷಿಸಿ ತೀರ್ಪು ನೀಡಿದೆ.

ಕಪ್ಪಾನ್‌ ಸಿಂಗ್‌, ರಮ್‌ ಪಾಲ್‌ ಮತ್ತು ರಾಮ್ ಸೇವಕ್ ಎಂಬುವರೇ  ದಿಹುಲಿ ದಲಿತ್ ಹತ್ಯಾಕಾಂಡದ ಅಪರಾಧಿಗಳು. ಇವರಿಗೆ ಮಾರ್ಚ್ 18ರಂದು ಶಿಕ್ಷೆಯ ಪ್ರಮಾಣ ಪ್ರಕಟಿಸಲಾಗುವುದು ಎಂದು ವಿಶೇಷ ನ್ಯಾಯಾಧೀಶೆ ಇಂದಿರಾ ಸಿಂಗ್ ಘೋಷಿಸಿದರು ಎಂದು ಸರ್ಕಾರಿ ಅಭಿಯೋಜಕ ಪುಷ್ಟೇಂದ್ರ ಸಿಂಗ್ ಚವ್ಹಾಣ್ ತಿಳಿಸಿದ್ದಾರೆ.

ಘಟನೆ ಹಿನ್ನೆಲೆ: 1981ರ ನ. 18ರಂದು ನಡೆದ ಈ ಹತ್ಯಾಕಾಂಡದಲ್ಲಿ ಸಂತೋಷ್ ಸಿಂಗ್ ಎಂಬ ಡಕಾಯಿತರ ಗುಂಪಿನ ನಾಯಕನ ಆಜ್ಞೆಯಂತೆ ರಾಧೇ ಶ್ಯಾಮ್ ಎಂಬಾತ ದಿಹುಲಿ ಗ್ರಾಮದ ದಲಿತ ಸಮುದಾಯದ ಮೇಲೆ ದಾಳಿ ಮಾಡಿದ್ದ. ಗುಂಡಿನ ದಾಳಿಯಲ್ಲಿ ಮಹಿಳೆಯರು ಮತ್ತು ಮಕ್ಕಳು 24 ಜನ ಮೃತಪಟ್ಟಿದ್ದರು. ನಂತರ ಅವರ ಬಳಿ ಇದ್ದ ವಸ್ತುಗಳನ್ನು ದೋಚಿದ್ದರು. ಈ ಕುರಿತು ಜಸರಾಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣದ ದಾಖಲಾಗಿತ್ತು.

ತನಿಖೆ ಕೈಗೊಂಡ ಪೊಲೀಸರು ಡಕಾಯಿತರ ತಂಡದ ಮುಖಂಡ ಸಂತೋಷ್ ಮತ್ತು ರಾಧೇ ಒಳಗೊಂಡು 17 ಜನರ ವಿರುದ್ಧ ದೋಷಾರೋಪ ಸಲ್ಲಿಸಿದ್ದರು. ವಿಚಾರಣೆ ಹಂತದಲ್ಲಿ 17 ಆರೋಪಿಗಳಲ್ಲಿ ಸಂತೋಷ್ ಮತ್ತು ರಾಧೇ ಸೇರಿ 13 ಜನ ಮೃತಪಟ್ಟಿದ್ದಾರೆ. ಬದುಕುಳಿದಿರುವ ನಾಲ್ವರಲ್ಲಿ 40 ವರ್ಷಗಳ ನಂತರವೂ ಒಬ್ಬ ನಾಪತ್ತೆಯಾಗಿದ್ದಾನೆ. ಉಳಿದ ಮೂವರು ವಿಚಾರಣೆ ಎದುರಿಸಿದ್ದರು ಎಂದು ಪುಜೇಂದ್ರ ಸಿಂಗ್ ತಿಳಿಸಿದ್ದಾರೆ.

ಈ ಘಟನೆ ನಡೆದ ನಂತರ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ಗ್ರಾಮಕ್ಕೆ ಭೇಟಿ ನೀಡಿ ಸಂತ್ರಸ್ತ ಕುಟುಂಬಕ್ಕೆ ಸಾಂತ್ವನ ಹೇಳಿದ್ದರು. ವಿರೋಧ ಪಕ್ಷದ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಹತ್ಯಾಕಾಂಡ ಖಂಡಿಸಿ ದಿಹುಲಿಯಿಂದ ಫಿರೋಝಾಬಾದ್‌ನ ಸಾದುಪುರ್‌ವರೆಗೆ ಪಾದಯಾತ್ರೆ ಕೈಗೊಂಡಿದ್ದರು.

More articles

Latest article