ಉತ್ತರಕಾಶಿ: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಧರಾಲಿ ಪ್ರದೇಶದಲ್ಲಿ ಖೀರ್ ಗಂಗಾ ನದಿಯಲ್ಲಿ ಇಂದು ಸಂಭವಿಸಿದ ಮೇಘಸ್ಫೋಟದಿಂದ ದಿಢೀರ್ ಪ್ರವಾಹ, ಭೂಕುಸಿತ ಸಂಭವಿಸಿದ್ದು, 60ಕ್ಕೂ ಹೆಚ್ಚು ಜನರು ಕೊಚ್ಚಿ ಹೋಗಿರುವ ಸಾಧ್ಯತೆಗಳಿವೆ ಎಂದು ತಿಳಿದು ಬಂದಿದೆ. ಅಲ್ಲದೆ ಭಾರಿ ಮಳೆಯ ಪರಿಣಾಮ ಅನೇಕ ಜನರು ನಾಪತ್ತೆಯಾಗಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಇಂದು ಸುರಿದ ಭಾರಿ ಮಳೆಯಿಂದಾಗಿ ನದಿಗಳ ನೀರಿನ ಮಟ್ಟ ಹೆಚ್ಚಾಗಿದ್ದು, ನದಿ ಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಹಾಗೂ ಸಾರ್ವಜನಿಕರು ನದಿಗಳ ಬಳಿ ಸೆಲ್ಫಿ ಹಾಗೂ ರೀಲ್ಸ್ ಮಾಡಬಾರದು ಎಂದು ಉತ್ತರಾಖಂಡ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಪ್ರತಿಕ್ರಿಯಿಸಿ, ಸಾವು ಸಂಭವಿಸಿರುವುದು ಅತ್ಯಂತ ದುಃಖಕರ ಸಂಗತಿಯಾಗಿದೆ. ಎಸ್‌ಡಿಆರ್‌ಎಫ್, ಎನ್‌ಡಿಆರ್‌ಎಫ್, ಜಿಲ್ಲಾಡಳಿತ ಸೇರಿದಂತೆ ಇತರೆ ಸಂಬಂಧಿತ ತಂಡಗಳು ಯುದ್ಧೋಪಾದಿಯಲ್ಲಿ ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಅವರು ತಿಳಿಸಿದ್ದಾರೆ.
ದಿಢೀರ್ ಪ್ರವಾಹದ ಪರಿಣಾಮ ನೀರಿನ ರಭಸಕ್ಕೆ ಹಲವು ಮನೆಗಳು ಭಾಗಶಃ ಕೊಚ್ಚಿ ಹೋಗಿವೆ. ಧರಾಲಿ ಮಾರುಕಟ್ಟೆಗೆ ಭಾರಿ ಹಾನಿಯನ್ನುಂಟು ಮಾಡಿದೆ. ಬಲವಾದ ಪ್ರವಾಹದಿಂದಾಗಿ, ಅಂಗಡಿಗಳು, ವಾಹನಗಳು ಮತ್ತು ಮನೆಗಳು ನೀರಿನಲ್ಲಿ ಕೊಚ್ಚಿಹೋಗಿವೆ. ಪ್ರತ್ಯಕ್ಷದರ್ಶಿಗಳ ಪ್ರಕಾರ, ಪ್ರವಾಹದ ಸ್ಥಳವು ತುಂಬಾ ಭೀಕರವಾಗಿದ್ದು, ಮುಂದೆ ಏನಾಗಲಿದೆಯೋ ಎಂಬ ಆತಂಕ ಮನೆ ಮಾಡಿದೆ ಎಂದಿದ್ದಾರೆ.
ನೀರು ಹರಿವಿನ ರಭಸಕ್ಕೆ ಬೃಹತ್ ಗಾತ್ರದ ಬಂಡೆಗಳು, ಬೆಟ್ಡದಿಂದ ಉರುಳಿಬಿದ್ದಿವೆ. ನೀರಿನ ರಭಸಕ್ಕೆ ಕೊಚ್ಚಿಹೋದವರ ಮಾಹಿತಿ ಲಭ್ಯವಾಗಿಲ್ಲ. ಇದುವರೆಗೆ 24 ಮಿಮೀ ಮಳೆ ದಾಖಲಾಗಿದೆ. ಕೆಲವು ಮೂಲಗಳ ಪ್ರಕಾರ 60ಕ್ಕೂ ಹೆಚ್ಚು ಜನರು ಕೊಚ್ಚಿ ಹೋಗಿರುವ ಸಾಧ್ಯತಗಳಿವೆ ಎಂದು ಹೇಳಲಾಗುತ್ತಿದೆ.