ಸಾಮರಸ್ಯ ಕದಡಲು ಯತ್ನಿಸುತ್ತಿರುವ ಉತ್ತರ ಕನ್ನಡ ಎಂ.ಇ.ಎಸ್ ಅಭ್ಯರ್ಥಿ: ಸ್ಪರ್ಧೆಯಿಂದ ಅನರ್ಹಗೊಳಿಸಲು ಕರವೇ ಆಗ್ರಹ

Most read

ದಾಂಡೇಲಿ: ಉತ್ತರ ಕನ್ನಡ ಜಿಲ್ಲೆ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಎಂ.ಇ.ಎಸ್ ನಿಂದ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ನಿರಂಜನ ದೇಸಾಯಿ ನಾಮಪತ್ರವನ್ನು ಸಲ್ಲಿಸುವ ವೇಳೆ ನಾಡದ್ರೋಹದ, ಭಾಷಾ ಸಾಮರಸ್ಯವನ್ನು ಹಾಳು ಮಾಡುವ ಮಾತುಗಳನ್ನು ಆಡಿರುವ ಹಿನ್ನೆಲೆಯಲ್ಲಿ ಸ್ಪರ್ಧೆಯಿಂದ ಅನರ್ಹಗೊಳಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.

ಕರವೇ ದಾಂಡೇಲಿ ಅಧ್ಯಕ್ಷ ಸಾದಿಕ್ ಮುಲ್ಲಾ ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ್ದು, ಎಂಇಎಸ್ ಅಭ್ಯರ್ಥಿ ಭಾಷೆ, ಗಡಿ, ನೆಲ, ಜಲ ಸಂಬಂಧಿಸಿದಂತೆ ಆಡಿರುವ ಆ ಎಲ್ಲಾ ಮಾತುಗಳನ್ನು ಕರ್ನಾಟಕ ರಕ್ಷಣಾ ವೇದಿಕೆ ತೀವ್ರವಾಗಿ ಖಂಡಿಸುತ್ತದೆ ಎಂದು ತಿಳಿಸಿದ್ದಾರೆ.

ನಿರಂಜನ ದೇಸಾಯಿ ಹೇಳುವಹಾಗೆ ಕಾರವಾರ, ಹಳಿಯಾಳ, ದಾಂಡೇಲಿ, ಜೋಯಿಡಾ, ಬೆಳಗಾವಿ ಈ ಭಾಗದ ಯಾವ ಜನರು ಕೂಡ ಮಹಾರಾಷ್ಟ್ರಕ್ಕೆ ಸೇರಿಸಿಯೆಂದು ಹೇಳುತ್ತಿಲ್ಲ. ಇಲ್ಲಿಯ ಜನರು ಎಲ್ಲರೂ ಕೂಡ ಕನ್ನಡದ ಈ ನೆಲದಲ್ಲಿ ನಿಷ್ಠೆಯಿಂದ, ಅತ್ಯಂತ ಅಭಿಮಾನದಿಂದ ಬಾಳುತ್ತಿದ್ದಾರೆ. ಚುನಾವಣೆಯ ಸಂದರ್ಭದಲ್ಲಿ ನಾಮಪತ್ರ ಸಲ್ಲಿಸುವ ವೇಳೆ ಈ ರೀತಿ ಭಾವನಾತ್ಮಕವಾದ ಸಂಗತಿಯನ್ನು ತಂದು ಜನರಲ್ಲಿ ಗೊಂದಲ ಮೂಡಿಸುವುದು ಇದು ಸರಿ ಇಲ್ಲ ಎಂದು ಅವರು ಹೇಳಿದ್ದಾರೆ‌.

ಚುನಾವಣೆ ನೀತಿ ಸಹಿತೆ ಜಾರಿಯಲ್ಲಿದ್ದು ಭಾಷೆ, ಧರ್ಮ, ಜಾತಿಯ ವಿಷಯದಲ್ಲಿ ಪ್ರಚೋದನಾಕಾರಿ ಹೇಳಿಕೆ ನೀಡುವಂತಿಲ್ಲ. ಆದರೂ ಚುನಾವಣಾ ಅಭ್ಯರ್ಥಿ ಈ ರೀತಿ ಮಾತಾಡಿರುವುದನ್ನು ಚುನಾವಣಾ ಆಯೋಗ ಗಂಭೀರವಾಗಿ ಪರಿಗಣಿಸಬೇಕು, ಕೂಡಲೇ ಈತನನ್ನು ಸ್ಪರ್ಧೆಯಿಂದ ಅನರ್ಹಗೊಳಿಸಬೇಕು ಎಂದು ಸಾದಿಕ್ ಮುಲ್ಲಾ ಆಗ್ರಹಿಸಿದ್ದಾರೆ.

ಎಂಇಎಸ್ ಅಭ್ಯರ್ಥಿ ಚುನಾವಣೆ ಸಂದರ್ಭದಲ್ಲಿ ನಾಡ ವಿರೋಧಿ ಹೇಳಿಕೆಗಳನ್ನು ಕೊಡುವ ಮೂಲಕ ಸಂಘರ್ಷವಾದ ವಾತಾವರಣವನ್ನು ಉಂಟು ಮಾಡುತ್ತಿದ್ದಾರೆ. ಇದು ಮುಂದುವರೆದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.

ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್) ಮಹಾರಾಷ್ಟ್ರದಲ್ಲಿ ರಾಜಕೀಯ ಮಾಡಲಿ. ಅವರಿಗೆ ಕರ್ನಾಟಕದಲ್ಲಿ ಏನು ಕೆಲಸ? ಬಹಳ ವರ್ಷಗಳಿಂದ ಎಂಇಎಸ್ ಗೆ ಟಿ.ಎ.ನಾರಾಯಣಗೌಡರ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ತಕ್ಕ ಪಾಠ ಕಲಿಸುತ್ತ ಬಂದಿದೆ. ಎಂಇಎಸ್ ಸಂಘಟನೆಯನ್ನೇ ಕರ್ನಾಟಕದಲ್ಲಿ ನಿಷೇಧಿಸಬೇಕೆಂದು ಅವರು ಹೇಳಿದ್ದಾರೆ.

More articles

Latest article