ಉತ್ತರ ಕನ್ನಡ ಕ್ಷೇತ್ರದಲ್ಲಿ ಹಿಂದುಳಿದವರ ಒಗ್ಗಟ್ಟು: ಡಾ. ಅಂಜಲಿ ನಿಂಬಾಳ್ಕರ್ ಗೆಲುವಿನತ್ತ ದಾಪುಗಾಲು

Most read

ರಾಜಕಾರಣ ನಿಂತ ನೀರಲ್ಲ ಎಂಬ ಮಾತಿದೆ. ಕಳೆದ ಬಾರಿ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತ ಕುಮಾರ್ ಹೆಗಡೆ ಹತ್ತಿರತ್ತಿರ ಐದು ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಈಗ ಚುನಾವಣಾ ಕಣದಲ್ಲಿ ಅನಂತ ಕುಮಾರ ಹೆಗಡೆಯೂ ಇಲ್ಲ, ಬಿಜೆಪಿ ಪರವಾದ ಅಲೆಯೂ ಇಲ್ಲ. ಕಳೆದ ಚುನಾವಣೆಯಲ್ಲಿ  ಮೈತ್ರಿ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ನೆಲೆಯೇ ಇಲ್ಲದ ಜೆಡಿಎಸ್ ಗೆ ಈ ಕ್ಷೇತ್ರವನ್ನು ಬಿಟ್ಟುಕೊಟ್ಟು ಅನಂತ ಕುಮಾರ್ ಹೆಗಡೆಗೆ ಗೆಲುವನ್ನು ಚಿನ್ನದ ತಟ್ಟೆಯಲ್ಲಿ ಇಟ್ಟು ಕೊಟ್ಟಿತ್ತು. ಆದರೆ ಈಗ ಪರಿಸ್ಥಿತಿ ಪೂರ್ತಿ ಬದಲಾಗಿದೆ. 2023ರ ವಿಧಾನಸಭಾ ಚುನಾವಣೆ ಎಲ್ಲ ಸಮೀಕರಣವನ್ನು ಬದಲಿಸಿಬಿಟ್ಟಿದೆ. ರಾಜಕೀಯ ಪಂಡಿತರೇ ಬೆರಗಾಗುವಂತೆ ಕ್ಷೇತ್ರದ ಒಟ್ಟು ಎಂಟು ವಿಧಾನಸಭಾ ಸ್ಥಾನಗಳಲ್ಲಿ ಐದನ್ನು ಕಾಂಗ್ರೆಸ್ ಗೆದ್ದು ಬೀಗಿತ್ತು. ಇದಾದ ತರುವಾಯ ಆಂತರಿಕ ತಿಕ್ಕಾಟಗಳಿಂದ ಯಲ್ಲಾಪುರದ ಶಾಸಕ ಶಿವರಾಮ್ ಹೆಬ್ಬಾರ್ ಬಿಜೆಪಿಯಿಂದ ಒಂದು ಕಾಲು ಹೊರಗೆ ಇಟ್ಟ ಹಿನ್ನೆಲೆಯಲ್ಲಿ  ಗೆದ್ದ ಮೂರರಲ್ಲಿ ಒಂದು ಸ್ಥಾನವನ್ನು ಬಿಜೆಪಿ ಬಹುತೇಕ ಕಳೆದು ಕೊಂಡಂತಾಗಿದೆ. ಹೀಗಾಗಿ ಅನಂತ ಕುಮಾರ್ ಹೆಗಡೆ ಬದಲಿಗೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಈ ಬಾರಿ ಗೆಲುವು ಸುಲಭವಿಲ್ಲ.

ಅನಂತ ಕುಮಾರ್ ಹೆಗಡೆ ಒಟ್ಟು ಆರು ಬಾರಿ ಈ ಕ್ಷೇತ್ರವನ್ನು ಪ್ರತಿನಿಧಿಸಿದ್ದಾರೆ. 1999ರಲ್ಲಿ  ಮಾರ್ಗರೇಟ್ ಆಳ್ವ ಗೆದ್ದಿದ್ದನ್ನು ಬಿಟ್ಟರೆ, 1996ರಿಂದ ಇಲ್ಲಿಯವರೆಗೆ 28 ವರ್ಷಗಳ ಕಾಲ ಹೆಗಡೆ ಇಲ್ಲಿ ಪಾರಮ್ಯ ಮೆರೆದಿದ್ದಾರೆ. ಇತ್ತೀಚಿನ ಕೆಲವು ಲೋಕಸಭಾ ಚುನಾವಣೆಗಳನ್ನು ಕಾಂಗ್ರೆಸ್ ಪಕ್ಷ ಅಷ್ಟಾಗಿ ಗಂಭೀರವಾಗಿ ತೆಗೆದುಕೊಳ್ಳದೇ ಇರುವುದು, ದುರ್ಬಲ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದೂ ಕೂಡ ಹೆಗಡೆಗೆ ವರವಾಗಿ ಪರಿಣಮಿಸಿತ್ತು. ಅದರ ಜೊತೆಯಲ್ಲಿ ಹಿಂದುತ್ವ ಮತ್ತು ಮೋದಿಯ ಹೆಸರನ್ನು ಅವರು ಧಾರಾಳವಾಗಿ ಬಳಸುತ್ತ ಬಂದರು. ತಮ್ಮ ಮೂವತ್ತು ವರ್ಷಗಳ ರಾಜಕಾರಣದಲ್ಲಿ ಹೆಗಡೆ ಅಭಿವೃದ್ಧಿಯ ಬಗ್ಗೆ ಮಾತನಾಡಿದವರೇ ಅಲ್ಲ, ಉತ್ತರ ಕನ್ನಡ ಕ್ಷೇತ್ರದ ಸಮಸ್ಯೆಗಳ ಬಗ್ಗೆ ತುಟಿ ಬಿಚ್ಚಲೇ ಇಲ್ಲ. ಕಳೆದ ಅವಧಿಯಲ್ಲಂತೂ ಅವರು ಲೋಕಸಭೆಯಲ್ಲಿ ಒಮ್ಮೆಯೂ ಮಾತನಾಡಲಿಲ್ಲ. ಉತ್ತರ ಕನ್ನಡ ಜಿಲ್ಲೆಗೊಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಬೇಕು ಎಂದು ಜನರು ಬೇಡಿಕೊಂಡರೂ ಅವರು ಆ ಬಗ್ಗೆ ಉಸಿರೇ ಎತ್ತಲಿಲ್ಲ. ಹಿಂದುತ್ವದ ಪ್ರಚೋದನಾಕಾರಿ ಭಾಷಣಗಳಿಂದಲೇ ಖ್ಯಾತಿ/ಕುಖ್ಯಾತಿ ಪಡೆಯುತ್ತ ಬಂದ ಅವರು, ಬಿಜೆಪಿ ಅಧಿಕಾರಕ್ಕೆ ಬಂದಿರೋದೇ ಸಂವಿಧಾನ ಬದಲಿಸಲು ಎಂದರು. ಇದಕ್ಕೆ ಎಲ್ಲೆಡೆ ವಿರೋಧಗಳು ವ್ಯಕ್ತವಾಗಿ, ಬಿಜೆಪಿಯೂ ಈ ಹೇಳಿಕೆಯಿಂದ ದೂರ ಉಳಿಯುವುದಾಗಿ ಹೇಳಿದರೂ ಹೆಗಡೆ ತಮ್ಮ ಮಾತುಗಳನ್ನು ಹಿಂದಕ್ಕೆ ಪಡೆಯಲಿಲ್ಲ. ಲೋಕಸಭಾ ಚುನಾವಣೆ ಘೋಷಣೆ ಪೂರ್ವದಲ್ಲಿ ಮತ್ತೆ ಅವರು ಇದೇ ಮಾತುಗಳನ್ನು ಹೇಳಿದರು. ಸಂವಿಧಾನ ಬದಲಿಸಬೇಕು ಎಂದರೆ ಬಿಜೆಪಿಗೆ 400 ಕ್ಕೂ ಹೆಚ್ಚು ಸ್ಥಾನ ಗೆಲ್ಲಿಸಿ ಕೊಡಬೇಕು ಎಂದು ಅವರು ಹೇಳಿದರು. ಕಾಂಗ್ರೆಸ್ ಪಕ್ಷ ಇದನ್ನು ಬಳಸಿಕೊಂಡು, ಬಿಜೆಪಿ ಸಂವಿಧಾನ ಬದಲಿಸಲು ಹೊರಟಿದೆ ಎಂದು ರಾಷ್ಟ್ರಮಟ್ಟದಲ್ಲಿ ಪ್ರಚಾರ ಮಾಡತೊಡಗಿತು. ಕೊನೆಗೆ ಇದರ ಫಲಿತಾಂಶವಾಗಿ ಅನಂತ ಕುಮಾರ ಹೆಗಡೆಗೆ ಆರು ಬಾರಿ ಪ್ರತಿನಿಧಿಸಿದ್ದ ಕ್ಷೇತ್ರದಿಂದ ಟಿಕೆಟ್ ನಿರಾಕರಿಸಲಾಯಿತು. ಅವರ ಬದಲಿಗೆ ಅವರದ್ದೇ ಬ್ರಾಹ್ಮಣ ಸಮುದಾಯದ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಟಿಕೆಟ್ ನೀಡಲಾಯಿತು.

ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಅನಂತ ಕುಮಾರ್ ಹೆಗಡೆ

ಇಂಥದ್ದೇ ಸಂದರ್ಭವನ್ನು ಕಾಯುತ್ತಿದ್ದ ಕಾಂಗ್ರೆಸ್ ಪಕ್ಷ ಮಾಜಿ ಶಾಸಕಿ ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್ ಅವರನ್ನು ಸ್ಪರ್ಧೆಗಿಳಿಸುವ ನಿರ್ಧಾರ ಮಾಡಿತು. ಪಕ್ಷದ ಲೆಕ್ಕಾಚಾರ ಬಹಳ ಸ್ಪಷ್ಟವಾಗಿತ್ತು, ಬಿಜೆಪಿಯ ಸಾಂಪ್ರದಾಯಿಕ ಮತಗಳನ್ನು ಸೆಳೆಯುವುದರ ಜೊತೆಗೆ ಹಿಂದುಳಿದ ವರ್ಗಗಳ ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳುವುದು ಕಾಂಗ್ರೆಸ್ ಯೋಜನೆಯಾಗಿತ್ತು. ಕಾಂಗ್ರೆಸ್ ಈ ತಂತ್ರ ಫಲ ಕೊಡುವ ಹಾಗೆ ಕಾಣುತ್ತಿದೆ. ಎಲ್ಲೆಡೆ ಈ ಬಾರಿ ಡಾ. ಅಂಜಲಿ ಹೆಸರು ಕೇಳಿಬರುತ್ತಿದೆ. ಉತ್ತರ ಕನ್ನಡದ ಯಾವ ಕ್ಷೇತ್ರಕ್ಕೆ ಹೋದರೂ ಈ ಬಾರಿ ಬದಲಾವಣೆ ಬೇಕು ಎಂದು ಜನರು ಹೇಳುತ್ತಿದ್ದಾರೆ. ಅಂಜಲಿ ಅವರ ವ್ಯಕ್ತಿತ್ವ ಕೂಡ ಮತದಾರರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಅವರ ನೇರ ಮಾತು, ಸರಳತೆ ಮತ್ತು ಆಡಿದ್ದನ್ನು ಮಾಡುತ್ತಾರೆ ಎನ್ನುವ ಭರವಸೆ ಮತದಾರರಲ್ಲಿ ಎಲ್ಲಾ ಕಡೆ ಮೂಡುತ್ತಿದೆ. ಅವರು ಒಬ್ಬ ರಾಜಕಾರಣಿ ಎಂದು ಬಿಂಬಿಸಿಕೊಳ್ಳದೇ ಒಬ್ಬ ಸಮಾಜ ಸೇವಕಿ ಎಂದು ಹೇಳಿಕೊಳ್ಳುತ್ತಿರುವುದು ಅವರ ಮೇಲಿನ ಗೌರವ ಹೆಚ್ಚಿಸುತ್ತಿದೆ. ಖಾನಾಪುರದಲ್ಲಿ ಶಾಸಕಿಯಾಗಿದ್ದ ಅವರು ಮಾಡಿರುವ ಅಭಿವೃದ್ಧಿ ಕೆಲಸಗಳು ಒಳ್ಳೆಯ ಅಭಿಪ್ರಾಯ ಮೂಡಿಸಿವೆ.

ಇದೆಲ್ಲಕ್ಕಿಂತ ಹೆಚ್ಚು ಅಚ್ಚರಿ ಮೂಡಿಸುತ್ತಿರುವುದು ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್ ಅಲ್ಪ ಸಮಯದಲ್ಲೇ ಈ ಭಾಗದ ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಅವುಗಳ ಕುರಿತು ಮಾತನಾಡುತ್ತಿರುವ ರೀತಿಗೆ.  ಚುನಾವಣಾ ಕಣಕ್ಕೆ ಇಳಿದ ಆರಂಭದಲ್ಲೇ ಅವರು ನಾನು ಗೆದ್ದಲ್ಲಿ ಹೇಗಾದರೂ ಸರಿ ಜಿಲ್ಲೆಗೊಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ತರುತ್ತೇನೆ ಎಂದು ಘೋಷಿಸಿಬಿಟ್ಟರು. ಭಾರತೀಯ ಜನತಾ ಪಕ್ಷದ ಸಂಸದರಿಗೆ ಮೂವತ್ತು ವರ್ಷಗಳಿಂದ ಮಾಡಲು ಆಗದ ಕೆಲಸವನ್ನು ನಾನು ಮಾಡುತ್ತೇನೆ ಎಂದು ಅವರು ಹೇಳುವುದರೊಂದಿಗೆ ಜಿಲ್ಲೆಯ ಜನತೆಯ ವಿಶ್ವಾಸವನ್ನು ಗಳಿಸಲು ಅವರು ಯಶಸ್ವಿಯಾದರು. ಜಿಲ್ಲೆಯ ಬಹುದೊಡ್ಡ ಸಮಸ್ಯೆಯೇ ಅರಣ್ಯವಾಸಿಗಳ ಅತಿಕ್ರಮಣ ಸಮಸ್ಯೆ. ಇದರ ಬಗ್ಗೆ ಈ ಭಾಗದ ರಾಜಕಾರಣಿಗಳು ಹಾರಿಕೆಯ ಮಾತುಗಳನ್ನೇ ಆಡಿದ್ದಾರೆಯೇ ಹೊರತು ಸಮಸ್ಯೆ ಇತ್ಯರ್ಥಕ್ಕೆ ಪ್ರಯತ್ನವನ್ನೇ ಮಾಡಿಲ್ಲ. ಡಾ. ಅಂಜಲಿ ಈ ಬಗ್ಗೆ ಹೋದಲ್ಲೆಲ್ಲ ಮಾತನಾಡುತ್ತಿದ್ದಾರೆ. ವಂಚಿತ ಸಮುದಾಯಗಳಿಗೆ, ಆದಿವಾಸಿಗಳಿಗೆ ನ್ಯಾಯಕೊಡಿಸುವುದಾಗಿ ಹೇಳುತ್ತಿದ್ದಾರೆ.

ಡಾ. ಅಂಜಲಿ ನಿಂಬಾಳ್ಕರ್

ಇತ್ತೀಚಿಗೆ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ತಮ್ಮ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ʻಅಂಜಲಿಯವರಿಗೆ ರಾಜಕಾರಣ ಮಾಡಲು ಬರುವುದಿಲ್ಲʼ ಎಂದು ಹೇಳಿಕೆ ನೀಡಿದ್ದರು. ʻಹೌದು ನಾನು ರಾಜಕಾರಣ ಮಾಡಲು ಬಂದಿಲ್ಲ, ಸಮಾಜಸೇವೆಗಾಗಿ ಬಂದಿದ್ದೇನೆ. ಜನ ಸತ್ತರೂ ನಮ್ಮ ರಾಜಕಾರಣವೇ ನಾವು ಮಾಡುತ್ತೇವೆ ಅನ್ನುವವರ ಪೈಕಿ ನಾನಲ್ಲ. ಅದು ಬಿಜೆಪಿಯವರಿಂದ ಮಾತ್ರ ಸಾಧ್ಯʼ ಎಂದು ಡಾ. ಅಂಜಲಿ ತಿರುಗೇಟು ನೀಡಿದ್ದರು. ಹಾಗೆ ನೋಡಿದರೆ ಕಾಗೇರಿಯವರ ಮಾತು ಸುಳ್ಳೇನೂ ಅಲ್ಲ. ಜನರನ್ನು ಮರಳು ಮಾಡಿ, ಮೋಸ ಮಾಡುವ ಸಾಂಪ್ರದಾಯಿಕ ರಾಜಕಾರಣದಿಂದ ಅಂಜಲಿ ಭಿನ್ನವಾಗಿ ಕಾಣಿಸುತ್ತಿದ್ದಾರೆ. ನೇರವಾಗಿ ಜನರ ಬಳಿಗೆ ಹೋಗುತ್ತಿದ್ದಾರೆ, ಅವರ ಕಷ್ಟ ಸುಖಗಳನ್ನು ಕೇಳುತ್ತಿದ್ದಾರೆ. ನನಗೆ ಮತ ಹಾಕಿ ಎಂದು ಕೇಳುವುದಕ್ಕಿಂತ ಮೊದಲು ಗೃಹಲಕ್ಷ್ಮಿಯ 2,000 ರುಪಾಯಿ ನಿಮಗೆಲ್ಲ ಬರ್ತಾ ಇದೆಯಾ, ಅಕ್ಕಿ ಸರಿಯಾದ ಸಮಯಕ್ಕೆ ಸಿಗ್ತಾ ಇದೆಯಾ? ಅಕ್ಕಿಯ ಹಣ ಬ್ಯಾಂಕಿಗೆ ಬರ್ತಾ ಇದೆಯಾ ಎಂದೆಲ್ಲ ಅವರು ಕೇಳುತ್ತಾರೆ. ಅವರ ಈ ಪ್ರಾಮಾಣಿಕ ಕಾಳಜಿ, ಜನಾನುರಾಗದ ಕುರಿತು ಕ್ಷೇತ್ರದಲ್ಲಿ ಗೌರವ ಹೆಚ್ಚತ್ತಲೇ ಇದೆ.

ಡಾ. ಅಂಜಲಿ ನಿಂಬಾಳ್ಕರ್ ಸದ್ದು ಗದ್ದಲವಿಲ್ಲದಂತೆ ಇಡೀ ಕ್ಷೇತ್ರದ ಹಿಂದುಳಿದ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿದ್ದು, ಅವರ ನಡುವೆ ಸಮನ್ವಯವನ್ನು ಸಾಧಿಸಲು ಯತ್ನಿಸುತ್ತಿದ್ದಾರೆ. ಕ್ಷೇತ್ರದ ಹಿಂದುಳಿದ ವರ್ಗಗಳ ಯುವಕರು ಹಿಂದೆ ಅನಂತ ಕುಮಾರ್ ಹೆಗಡೆ ಜೊತೆ ಗುರುತಿಸಿ ಕೊಂಡಿದ್ದರು. ಅನಂತ ಕುಮಾರ್ ಹೆಗಡೆಗೆ ಟಿಕೆಟ್ ನೀಡದ ಹಿನ್ನೆಲೆಯಲ್ಲಿ ಮುನಿಸಿಕೊಂಡ ಒಂದು ಗುಂಪು ಈಗ ಡಾ. ಅಂಜಲಿಯವರ ಪರವಾಗಿ ಕೆಲಸ ಮಾಡುತ್ತಿದೆ. ಮತ್ತೊಂದು ಗುಂಪು ಈ ಚುನಾವಣೆಯಲ್ಲಿ ತಟಸ್ಥವಾಗಿ ಉಳಿದುಕೊಂಡಿದೆ. ಇನ್ನೊಂದು ಗುಂಪು ಹೇಗಾದರೂ ಮಾಡಿ ಅನಂತ ಕುಮಾರ್ ಅವರನ್ನು ಪ್ರಚಾರಕ್ಕೆ ಕರೆದುಕೊಂಡು ಬರಬೇಕು, ಮೋದಿಗಾಗಿ ಈ ಬಾರಿ ಬಿಜೆಪಿಗೆ ಮತ ಹಾಕಿ ಎಂದು ಅವರಿಂದ ಹೇಳಿಸಬೇಕು ಎಂಬ ಪ್ರಯತ್ನ ನಡೆಸುತ್ತಿದೆ. ಆದರೆ ಅನಂತ ಕುಮಾರ್ ಹೆಗಡೆ ಇದುವರೆಗೆ ಕ್ಷೇತ್ರದಲ್ಲಿ ಕಾಣಿಸಿಕೊಂಡಿಲ್ಲ, ಕಾಣಿಸಿಕೊಳ್ಳುವ ಸಾಧ್ಯತೆಯೂ ಕಂಡುಬರುತ್ತಿಲ್ಲ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 16,22,857 ಮತದಾರರಿದ್ದು, 8,15, 599 ಪುರುಷರು, 8,07,242 ಮಹಿಳೆಯರು, 16 ಅನ್ಯ ಲಿಂಗಿ ಮತದಾರರು ಇದ್ದಾರೆ. ನಾಮಧಾರಿ (ಈಡಿಗ)- 2 ಲಕ್ಷ, ಬ್ರಾಹ್ಮಣ- 1.6 ಲಕ್ಷ, ಗೌಡ (ಹಾಲಕ್ಕಿ/ಕರೆಒಕ್ಕಲಿಗ)- 1.10 ಲಕ್ಷ , ಮರಾಠ- 2.20 ಲಕ್ಷ, ಅಲ್ಪಸಂಖ್ಯಾತರು (ಮುಸ್ಲಿಂ/ಕ್ರಿಶ್ಚಿಯನ್)- 3 ಲಕ್ಷ, ಮೀನುಗಾರ- 80 ಸಾವಿರ, SC/ST/ಬುಡಕಟ್ಟು- 2 ಲಕ್ಷ, ಲಿಂಗಾಯತ- 1 ಲಕ್ಷ, ಮಡಿವಾಳ- 40 ಸಾವಿರ, ಕೋಮಾರಪಂಥ- 35 ಸಾವಿರ, ದೈವಜ್ಞ ಬ್ರಾಹ್ಮಣ- 40 ಸಾವಿರ, ಭಂಡಾರಿ- 40 ಸಾವಿರ, ಇತರರು- 82,600 ಸಾವಿರ ಸಂಖ್ಯೆಯಲ್ಲಿ ಇದ್ದಾರೆ. ಇದು ಇಲ್ಲಿನ ಜಾತಿವಾರು ಲೆಕ್ಕಾಚಾರ.

ಹಿಂದೆ ಈ ಕ್ಷೇತ್ರದಲ್ಲಿ ನಾಮಧಾರಿ ಸಮುದಾಯದ ಜಿ. ದೇವರಾಯ ನಾಯ್ಕ್ ನಾಲ್ಕು ಬಾರಿ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸಿದ್ದರು. ಅದಕ್ಕೂ ಮುನ್ನ ಬಿ.ವಿ.ನಾಯ್ಕ್ ಒಮ್ಮೆ ಇಲ್ಲಿಂದ ಗೆದ್ದಿದ್ದರು. ಅದನ್ನು ಬಿಟ್ಟರೆ ಇಲ್ಲಿ ಹಿಂದುಳಿದ ಸಮುದಾಯಗಳಿಗೆ ಇದ್ದ ರಾಜಕೀಯ ಅವಕಾಶ ಬಂದ್ ಆಗಿ ಹೋಯಿತು. ಮಾರ್ಗರೇಟ್ ಆಳ್ವ ಒಮ್ಮೆ ಮಾತ್ರ ಇಲ್ಲಿ ಗೆದ್ದರಾದರೂ ಆರು ಬಾರಿ ಗೆದ್ದಿದ್ದು ಬ್ರಾಹ್ಮಣ (ಹವ್ಯಕ) ಸಮಾಜದ ಅನಂತ ಕುಮಾರ್ ಹೆಗಡೆ. ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಈ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಮರಾಠರು, ನಾಮಧಾರಿಗಳು, ಒಕ್ಕಲಿಗರು, ಲಿಂಗಾಯಿತರಿಗೆ ಬಿಜೆಪಿ ಎಂದೂ ಟಿಕೆಟ್ ನೀಡಲಿಲ್ಲ. 1.6 ಲಕ್ಷ ಮತದಾರರನ್ನು ಹೊಂದಿರುವ ಬ್ರಾಹ್ಮಣರಿಗೇ ಸತತ ಅವಕಾಶ ನೀಡುತ್ತ ಬಂದಿತು.  ಈ ಬಾರಿ ಅನಂತ ಕುಮಾರ್ ಹೆಗಡೆಯನ್ನು ಬದಲಿಸಬೇಕು ಎಂದು ತೀರ್ಮಾನಿಸಿದ ನಂತರ ಬೇರೆ ಸಮುದಾಯದ ಅಭ್ಯರ್ಥಿಗೆ ಅವಕಾಶ ನೀಡಬಹುದಾಗಿತ್ತು. ಆದರೆ ಮತ್ತೆ ಬ್ರಾಹ್ಮಣ ಸಮುದಾಯದ ವಿಶ್ವೇಶ್ವರ ಹೆಗಡೆ ಕಾಗೇರಿಯನ್ನೇ ಅಭ್ಯರ್ಥಿ ಮಾಡಲಾಯಿತು. ಇದು ಬಿಜೆಪಿಯನ್ನು ಸತತವಾಗಿ ಬೆಂಬಲಿಸಿಕೊಂಡು ಬಂದ ಹಿಂದುಳಿದ ಸಮುದಾಯಗಳಾದ ನಾಮಧಾರಿಗಳು, ಮರಾಠರು, ಲಿಂಗಾಯಿತರು, ಹಾಲಕ್ಕಿ ಒಕ್ಕಲಿಗರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. ಎಷ್ಟು ಕಾಲ ನಾವು ಕಾಯುವುದು, ಇವರನ್ನು ಗೆಲ್ಲಿಸಿ, ಇವರ ಸೇವೆ ಮಾಡುವುದಷ್ಟೇ ನಮ್ಮ ಕೆಲಸವೇ ಎಂಬ ಮುನಿಸು ಈ ಸಮುದಾಯಗಳಲ್ಲಿ ಮೂಡಿದೆ.

ಜನಸಾಮಾನ್ಯರೊಂದಿಗೆ

ಕಾಂಗ್ರೆಸ್ ಪಕ್ಷ ಜಾಣತನದಿಂದ ಹಿಂದುಳಿದ ಮರಾಠ ಸಮುದಾಯದ ಹೆಣ್ಣುಮಗಳು ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್ ಅವರನ್ನು ಕಣಕ್ಕಿಳಿಸಿರುವ ಹಿನ್ನೆಲೆಯಲ್ಲಿ ಎಲ್ಲ ಹಿಂದುಳಿದ ಸಮುದಾಯಗಳು ಒಂದಾಗುತ್ತಿರುವ ಬೆಳವಣಿಗೆಗಳು ನಡೆಯುತ್ತಿವೆ. ಕಾಂಗ್ರೆಸ್ ಪಕ್ಷ ನಮ್ಮ ಸಮುದಾಯಕ್ಕೆ ಟಿಕೆಟ್ ನೀಡಿದೆ, ಗೆಲ್ಲಿಸುವ ಜವಾಬ್ದಾರಿ ನಮ್ಮದು ಎಂಬ ಮಾತುಗಳು ಮರಾಠಾ ಸಮುದಾಯದೊಳಗೆ ಕೇಳಿಬರುತ್ತಿದೆ. ಬಿಜೆಪಿಯನ್ನು ಬೆಂಬಲಿಸಿಕೊಂಡೇ ಬರುತ್ತಿರುವ ಈ ಸಮುದಾಯ ಈ ಬಾರಿ ತಿರುಗಿ ನಿಂತಿದೆ. ನಾಮಧಾರಿಗಳು ಮತ್ತು ಒಕ್ಕಲಿಗರು (ಹಾಲಕ್ಕಿ) ಕೂಡ ಈ ಬಾರಿ ಹಿಂದುಳಿದ ಸಮುದಾಯದ ಅಭ್ಯರ್ಥಿ ಬೆನ್ನಿಗೆ ನಿಲ್ಲುವ ಸಾಧ್ಯತೆಯೇ ಕಂಡುಬರುತ್ತಿದೆ. 

ಕ್ಷೇತ್ರದಲ್ಲಿ ಮೂರು ಲಕ್ಷದಷ್ಟು ಅಲ್ಪಸಂಖ್ಯಾತರು ( ಮುಸ್ಲಿಂ ಮತ್ತು ಕ್ರಿಶ್ಚಿಯನ್) ಇದ್ದಾರೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಬುಡಕಟ್ಟು ಸಮುದಾಯಗಳಿಗೆ ಸೇರಿದ ಎರಡು ಲಕ್ಷ ಮತಗಳಿವೆ. ಅನಂತ ಕುಮಾರ ಹೆಗಡೆಯವರ ಸಂವಿಧಾನ ವಿರೋಧಿ ಹೇಳಿಕೆ ಕುರಿತು ಈ ಸಮುದಾಯಗಳು ಗರಂ ಆಗಿವೆ. ಅಭ್ಯರ್ಥಿ ಬದಲಾದರೂ ಬಿಜೆಪಿ ಮೇಲಿನ ಆಕ್ರೋಶ ಕಡಿಮೆಯಾಗಿಲ್ಲ. ಸಂವಿಧಾನದ ಬದಲಾವಣೆಯ ಬಗ್ಗೆ ಅನಂತ ಕಮಾರ್ ಹೆಗಡೆ ಸೇರಿದಂತೆ ಬಿಜೆಪಿ ನಾಯಕರು ಪ್ರಸ್ತಾಪ ಮಾಡುತ್ತಿರುವುದೇ ಮೀಸಲಾತಿ ತೆಗೆದುಹಾಕುವ ಉದ್ದೇಶದಿಂದ ಎಂದು ದಲಿತ ಸಮುದಾಯಗಳು, ಓಬಿಸಿ ಸಮುದಾಯಗಳು ಭಾವಿಸಿವೆ. ದಲಿತ, ಆದಿವಾಸಿ, ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಗಳು `ಸಂವಿಧಾನ ಬದಲಿಸುವ’ ಹುನ್ನಾರದ ವಿರುದ್ಧ ಒಂದಾಗುತ್ತಿವೆ.

ಹಿಂದೆ ಮುಸ್ಲಿಂ ಸಮುದಾಯದ ಮತಗಳು ಕಾಂಗ್ರೆಸ್ ಜೆಡಿಎಸ್ ನಡುವೆ ಹಂಚಿ ಹೋಗುತ್ತಿದ್ದವು. ಈಗ ಆ ಸಮಸ್ಯೆ ಕಾಂಗ್ರೆಸ್ ಗೆ ಇಲ್ಲ. ಬಿಜೆಪಿ ಬಹಳ ನೇರವಾಗಿಯೇ ನಡೆಸುತ್ತಿರುವ ಮುಸ್ಲಿಂ ವಿರೋಧಿ ರಾಜಕಾರಣದಿಂದ ನೊಂದ ಸಮುದಾಯ ಕಳೆದ 2023ರ ವಿಧಾನಸಭಾ ಚುನಾವಣೆಯಲ್ಲಿ ಸಾರಾಸಗಟಾಗಿ ಕಾಂಗ್ರೆಸ್ ಬೆಂಬಲಿಸಿತ್ತು. ಈ ಬಾರಿಯೂ ಅದು ಕೈ ಹಿಡಿಯುವುದು ಖಂಡಿತ. ಇನ್ನು ಕ್ರಿಶ್ಚಿಯನ್ ಸಮುದಾಯದ ಮೇಲೆ ಸಂಘ ಪರಿವಾರದಿಂದ ನಡೆಯುವ ದಾಳಿ, ಚರ್ಚ್ ಗಳ ಮೇಲೆ ದಾಳಿಯನ್ನು ಆ ಸಮುದಾಯ ಇನ್ನೂ ಮರೆತಿಲ್ಲ. ಹೀಗಾಗಿ ಅಲ್ಪಸಂಖ್ಯಾತರ ಮತಗಳನ್ನು ಸೆಳೆಯುವಲ್ಲಿ ಡಾ. ಅಂಜಲಿ ನಿಂಬಾಳ್ಕರ್ ಅವರಿಗೆ ಅಷ್ಟೇನು ಕಷ್ಟವಲ್ಲ. ಭಟ್ಕಳ ಮತ್ತಿತರೆಡೆ ಮುಸ್ಲಿಂ ಸಮುದಾಯದ ನಾಯಕರು ತಮ್ಮನ್ನು ನಿರ್ಲಕ್ಷಿಸುತ್ತಿರುವ ಕುರಿತು ಡಾ. ಅಂಜಲಿ ಅವರಿಗೆ ದೂರಿತ್ತಿದ್ದು, ಅದನ್ನು ಬಗೆಹರಿಸುವ ಕಾರ್ಯವನ್ನೂ ಅವರು ಮಾಡಿದ್ದಾರೆ.

ಪರಿಶಿಷ್ಟ ಜಾತಿ, ಪಂಗಡಗಳ ಜೊತೆ ಇಲ್ಲಿ ಬುಡಕಟ್ಟು ಸಮುದಾಯಗಳು ಎಲ್ಲ ಕ್ಷೇತ್ರಗಳಲ್ಲೂ ಹರಡಿಕೊಂಡಿವೆ. ಸಿದ್ದಿ, ಕುಣುಬಿ, ಹಾಲಕ್ಕಿ, ಗೌಳಿ, ಗೊಂಡ, ಹಸಲರು  ಈ ಆರು ಬುಡಕಟ್ಟು ಸಮುದಾಯಗಳು ಇಲ್ಲಿ ಗಣನೀಯ ಸಂಖ್ಯೆಯಲ್ಲಿವೆ. ಆಗೇರ, ಹಳ್ಳೇರ, ಮುಕ್ರಿ ಎಂಬ ಪರಿಶಿಷ್ಟ ಜಾತಿ ಸಮುದಾಯಗಳು, ಡೊಂಗ್ರಿ ಗರಾಸಿಯ, ಕೊರಚ, ಕೊರಮ ಪಾರ್ದಿಯಂತ ಅಲೆಮಾರಿ ಸಮುದಾಯಗಳು ಕೂಡ ಇಲ್ಲಿವೆ. ಈ ಸಣ್ಣಸಣ್ಣ ಸಮುದಾಯಗಳು ಒಟ್ಟಾಗಿ ಕಾಂಗ್ರೆಸ್ ಪರ ನಿಂತರೆ ಅದು ದೊಡ್ಡ ಬದಲಾವಣೆಯನ್ನು ತರಲಿದೆ. ವಿಶೇಷವೆಂದರೆ ಯಾರೂ ತಿರುಗಿ ನೋಡದ ಈ ಸಮುದಾಯಗಳ ಬಳಿಗೆ ಡಾ. ಅಂಜಲಿ ನಿಂಬಾಳ್ಕರ್ ಹೋಗುತ್ತಿದ್ದಾರೆ. ಈ ಸಮುದಾಯಗಳು ಎದುರಿಸುತ್ತಿರುವ ಸಮಸ್ಯೆಗಳಿಗೆ ಡಾ. ಅಂಜಲಿ ಪರಿಹಾರಗಳ ಬಗ್ಗೆಯೂ ಚಿಂತಿಸಿ ಅದನ್ನು ಅವರ ಮುಂದಿಡುತ್ತಿದ್ದಾರೆ. 

ಮಿಕ್ಕಂತೆ ಲಿಂಗಾಯಿತ, ಮಡಿವಾಳ, ಕೋಮಾರಪಂಥ, ದೈವಜ್ಞ ಬ್ರಾಹ್ಮಣ, ಭಂಡಾರಿ ಸಮುದಾಯಗಳು ಈ ಕ್ಷೇತ್ರದಲ್ಲಿ ಗಣನೀಯ ಪ್ರಮಾಣದಲ್ಲಿವೆ. ಈ ಸಮುದಾಯಗಳಲ್ಲೂ ರಾಜಕೀಯ ಪ್ರಾತಿನಿಧ್ಯವಿಲ್ಲ. ಪ್ರತಿಬಾರಿ ಮೋದಿ, ಹಿಂದುತ್ವದ ಹೆಸರಲ್ಲೇ ಮತ ಕೇಳುತ್ತೀರಿ. ನಮಗೇನು ಮಾಡಿದ್ದೀರಿ ಎಂದು ಈ ಸಮುದಾಯಗಳ ಜನರು ಭಾರತೀಯ ಜನತಾ ಪಕ್ಷದ ನಾಯಕರನ್ನು ಪ್ರಶ್ನಿಸುತ್ತಿದ್ದಾರೆ. ಇನ್ನು ಬೇರೆ ಬೇರೆ ಸಮುದಾಯಗಳ 82,000 ಮತಗಳೂ ಈ ಕ್ಷೇತ್ರದಲ್ಲಿದೆ. 

ಉತ್ತರ ಕನ್ನಡ ಕ್ಷೇತ್ರದಲ್ಲಿ ಸುಮಾರು 80 ಸಾವಿರದಷ್ಟು ಮೀನುಗಾರ ಸಮುದಾಯದ ಮತಗಳಿದ್ದು, ಈ ಸಮುದಾಯವನ್ನು ಸೆಳೆಯಲು ಡಾ. ಅಂಜಲಿ ಪ್ರಯತ್ನ ಪಡುತ್ತಿದ್ದಾರೆ.  ಸಿದ್ಧರಾಮಯ್ಯ ಸರ್ಕಾರ ಮೀನುಗಾರಿಕೆ ಮತ್ತು ಬಂದರು ಇಲಾಖೆಗೆ ಹಿಂದೆಂದಿಗಿಂತಲೂ ಹೆಚ್ಚಿನ ಅನುದಾನ ನೀಡಿದೆ. ಆದರೆ ಅನುದಾನದ ಲಾಭವನ್ನು ಸಮುದಾಯಕ್ಕೆ ತಲುಪಿಸಿ ಅವರ ಮನಗೆಲ್ಲುವಲ್ಲಿ ಒಂದಷ್ಟು ಪ್ರಯತ್ನಗಳನ್ನು ಕಾಂಗ್ರೆಸ್ ನಾಯಕರು ಮಾಡದೇ ಇರುವುದು ಸಣ್ಣ ತೊಡಕಾದರೂ,   ಅದನ್ನು ಮೀರಿ ಸಮುದಾಯದ ವಿಶ್ವಾಸ ಗಳಿಸುವ ಪ್ರಯತ್ನ ಕಾಂಗ್ರೆಸ್ ಅಭ್ಯರ್ಥಿಯಿಂದ ನಡೆಯುತ್ತಿದೆ. 

ಇದೆಲ್ಲದರ ನಡುವೆ ಕಳೆದ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸೋತಿದ್ದ ಕಾಗೇರಿಯವರಿಗೆ ಸ್ವಕ್ಷೇತ್ರ ಶಿರಸಿ ಸಿದ್ದಾಪುರದಲ್ಲೇ ದೊಡ್ಡ ಸವಾಲು ಎದುರಾಗಿದೆ. ಕಾಗೇರಿ ವಿರುದ್ಧ ಇದ್ದ ಆಡಳಿತ ವಿರೋಧಿ ಅಲೆ ಅವರು ಸೋತರೂ ಇನ್ನೂ ನಿಂತಹಾಗೆ ಕಾಣುತ್ತಿಲ್ಲ. ಹಿಂದುಳಿದ ಸಮುದಾಯಗಳು ಈ ಬಾರಿಯೂ ಕಾಗೇರಿ ವಿರುದ್ಧ ದೊಡ್ಡಮಟ್ಟದಲ್ಲಿ ಮತ ಚಲಾಯಿಸುವುದು ನಿಶ್ಚಿತ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಸಮುದಾಯಗಳ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ಇರುವುದು ಕಾಗೇರಿಯವರಿಗೆ ದೊಡ್ಡ ಹೊಡೆತ ಕೊಡುತ್ತಿದೆ. ಅದರ ಜೊತೆಯಲ್ಲಿ ಇಲ್ಲಿ ವ್ಯಾಪಕವಾಗಿ ಹರಡಿಕೊಂಡಿರುವ ಅನಂತ ಕುಮಾರ್ ಹೆಗಡೆ ಬೆಂಬಲಿಗರು ಕಾಗೇರಿಯನ್ನು ಸೋಲಿಸುತ್ತೇವೆ ಎಂದು ಬಹಿರಂಗವಾಗಿಯೇ ಹೇಳಿಕೊಂಡು ಓಡಾಡುತ್ತಿದ್ದಾರೆ. ಆಶ್ಚರ್ಯವೆಂದರೆ ಆರ್ ಎಸ್ ಎಸ್ ಕಾರ್ಯಕರ್ತರೇ ಈ ಬಾರಿ ಕಾಗೇರಿ ಸೋಲುತ್ತಾರೆ ಎಂದು ಹೇಳುತ್ತಿದ್ದಾರೆ. 

ಹಾಲಕ್ಕಿ ಒಕ್ಕಲಿಗರೊಂದಿಗೆ…

ಹೊನ್ನಾವರ, ಕುಮಟಾಗಳಲ್ಲಿ ಪ್ರಮುಖ ಸಮುದಾಯವಾದ ಹಾಲಕ್ಕಿ ಒಕ್ಕಲಿಗರು ಕಾಂಗ್ರೆಸ್ ಕೈ ಹಿಡಿಯಲು ನಿರ್ಧರಿಸಿದ ಹಾಗೆ ಕಾಣುತ್ತಿದೆ. ಈ ಎರಡು ಸಮುದಾಯಗಳ ಯುವಕರಿಗೆ ನಾಯಕತ್ವ ನೀಡುವ, ಪ್ರಾತಿನಿಧ್ಯ ನೀಡುವ ಬಗ್ಗೆ ಬೇಡಿಕೆ ಇದೆ. ನಿಮಗೆ ಏನು ಸಲ್ಲಬೇಕೋ, ಅದು ಸಲ್ಲುವಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು, ನನ್ನ ಮೇಲೆ ವಿಶ್ವಾಸವಿಡಿ ಎಂದು ಡಾ. ಅಂಜಲಿ ನಿಂಬಾಳ್ಕರ್ ಭರವಸೆ ನೀಡಿರುವುದು ಇವರಲ್ಲಿ ಸಂಭ್ರಮಕ್ಕೆ ಕಾರಣವಾಗಿದೆ.    

ಕುಮಟಾದಲ್ಲಿ ಇತ್ತೀಚೆಗೆ ಶಾರದಾ ಶೆಟ್ಟಿ  ಕಾಂಗ್ರೆಸ್ ಸೇರ್ಪಡೆ ಕಾಂಗ್ರೆಸ್ ಗೆ ಬಲ ತಂದಿದೆ. ಯಲ್ಲಾಪುರದಲ್ಲಿ ಶಾಸಕ ಶಿವರಾಮ್ ಹೆಬ್ಬಾರ್  ಬಿಜೆಪಿ ಜೊತೆ ಮುನಿಸಿಕೊಂಡಿದ್ದಾರೆ. ಅವರ ಬೆಂಬಲಿಗರು ಈಗ ಡಾ. ಅಂಜಲಿ ನಿಂಬಾಳ್ಕರ್ ಅವರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ನಾನೂ ಕೂಡ ನಿಮ್ಮೊಂದಿಗಿದ್ದೇನೆ ಎಂದು ಹೇಳುವ ಸಲುವಾಗಿಯೇ ಶಿವರಾಂ ಹೆಬ್ಬಾರ್ ತಮ್ಮ ಪುತ್ರ ವಿವೇಕ್ ಹೆಬ್ಬಾರ್ ಕಾಂಗ್ರೆಸ್ ಸೇರಿಕೊಳ್ಳುವಂತೆ ನೋಡಿಕೊಂಡಿದ್ದಾರೆ. ವಿವೇಕ್ ಹೆಬ್ಬಾರ್ ಈಗ ಕ್ಷೇತ್ರದಾದ್ಯಂತ ಕಾಂಗ್ರೆಸ್ ಪರವಾಗಿ ಕೆಲಸ ಮಾಡುತ್ತಿದ್ದಾರೆ. 

ಹಳಿಯಾಳ ಮತ್ತು ಜೊಯಿಡಾ ತಾಲ್ಲೂಕುಗಳಲ್ಲಿ ಈ ಬಾರಿ ಹೆಚ್ಚು ಮತಗಳನ್ನು ಗಳಿಸುವ ನಿರೀಕ್ಷೆ ಕಾಂಗ್ರೆಸ್ ನದ್ದಾಗಿದೆ. ಹಿರಿಯ ರಾಜಕಾರಣಿ, ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆಯವರ ಭದ್ರ ಕೋಟೆ ಇದು.  ದೇಶಪಾಂಡೆ ಟೊಂಕ ಕಟ್ಟಿ ನಿಂತರೆ ಅತ್ಯಂತ ಸುಲಭವಾಗಿ ತಮ್ಮ ಕ್ಷೇತ್ರದಿಂದ ಲೀಡ್ ಕೊಡಿಸ ಬಲ್ಲರು. ಕ್ಷೇತ್ರದ ಮೇಲೆ ಅವರ ಹಿಡಿತ ಅಷ್ಟು ಗಟ್ಟಿಯಾಗಿದೆ. 

ಶಿರಸಿ ಸಿದ್ದಾಪುರದ ಹಾಗೆ ಅಂಕೋಲಾದಲ್ಲೂ ಈ ಬಾರಿ  ಕಾಗೇರಿ ವಿರುದ್ದದ ಅಲೆ ಇದೆ. ಈ ಹಿಂದೆ ಅಂಕೋಲಾದಿಂದ ಮೂರು ಸಲ ಕಾಗೇರಿ ಶಾಸಕರಾಗಿದ್ದರೂ ಕಾಗೇರಿ ಏನೂ ಕೆಲಸ ಮಾಡಿಲ್ಲ ಎಂಬ ಅಸಮಾಧಾನ ಇಲ್ಲಿನ ಜನರದ್ದು.   ಹಿಂದುಳಿದ ವರ್ಗಗಳ ಯಾರನ್ನೂ ಬೆಳೆಸಿಲ್ಲ ಎಂಬುದು ಅವರ ಪ್ರಮುಖ ತಕರಾರು. ಕಾಗೇರಿ ಬ್ರಾಹ್ಮಣ ಪಕ್ಷಪಾತಿ, ಜಿಲ್ಲೆಯನ್ನು ಒಡೆಯಲು ಪ್ರಯತ್ನ ಮಾಡುತ್ತಾರೆ ಎಂಬ ಅಸಮಾಧಾನ ಇಲ್ಲಿನ ಜನರಲ್ಲಿದೆ.  ಕಾಂಗ್ರೆಸ್ ನಾಯಕತ್ವ ಇಲ್ಲಿ ಅಷ್ಟು ಪ್ರಬಲವಾಗಿ ಕಾಣಿಸದೇ ಇದ್ದರೂ ಕಾಗೇರಿ ವಿರೋಧಿ ಅಲೆ   ಅಂಜಲಿ ಅವರಿಗೆ ಸಹಾಯವಾಗಬಹುದು. 

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಭಾಗವಾಗಿರುವ ಬೆಳಗಾವಿ ಜಿಲ್ಲೆಯ ಖಾನಾಪುರ ಕ್ಷೇತ್ರದಲ್ಲಿ ಡಾ. ಅಂಜಲಿ ನಿಂಬಾಳ್ಕರ್ ಅವರೇ ಸದ್ದು ಮಾಡುತ್ತಿದ್ದಾರೆ. ಇಲ್ಲಿ ಬಿಜೆಪಿ ಶಾಸಕರಾಗಿ ವಿಠ್ಠಲ ಹಲಗೇಕರ ಇದ್ದರೂ, ನಮ್ಮ ತಾಲ್ಲೂಕಿನ ಅಭ್ಯರ್ಥಿ ಎಂಪಿಯಾಗುತ್ತಾರೆ ಎಂಬ ಅಭಿಮಾನದಿಂದ ಹೆಚ್ಚಿನ ಬೆಂಬಲ ಡಾ. ಅಂಜಲಿಯವರಿಗೆ ವ್ಯಕ್ತವಾಗುತ್ತಿದೆ. ಇಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿಯ ಪ್ರಭಾವ ಏನೇನೂ ಇಲ್ಲ. ಇಲ್ಲಿ ಅವರಿಗೆ ಬೀಳಬಹುದಾದ ಮತಗಳು ಹಿಂದುತ್ವ ಮತ್ತು ಮೋದಿಯಿಂದ ಬರಬೇಕು ಅಷ್ಟೆ. ಖಾನಾಪುರಕ್ಕೆ ಹೊಂದಿಕೊಂಡಂತಿರುವ  ಕಿತ್ತೂರು ಕ್ಷೇತ್ರದಲ್ಲೂ ಇದೇ ಪರಿಸ್ಥಿತಿ ಇದೆ. ಬೈಲಹೊಂಗಲ ತಾಲ್ಲೂಕಿನ ನೇಸರಗಿ ಮತ್ತು ಕಿತ್ತೂರು ಹೋಬಳಿಗಳಷ್ಟೆ ಈ ಕ್ಷೇತ್ರವನ್ನು ಸೇರುತ್ತವೆ. ಇಲ್ಲಿ ಕಾಂಗ್ರೆಸ್ ಶಾಸಕ ಬಾಬಾ ಸಾಹೇಬ ಪಾಟೀಲ ಇದ್ದಾರೆ. ಅಂಜಲಿಯವರ ಮೇಲೆ ಅಭಿಮಾನ ಇರುವ ಸಾಕಷ್ಟು ಮಂದಿ ಇಲ್ಲಿದ್ದಾರೆ. ಹೀಗಾಗಿ ಇಲ್ಲೂ ಸಹ ಡಾ. ಅಂಜಲಿಯರಿಗೆ ಲೀಡ್ ಸಿಗುವ ಬಗ್ಗೆ ಭರವಸೆ ಇದೆ.

ಕುಮಟಾದಲ್ಲಿ ದಿನಕರ ಕೇಶವ ಶೆಟ್ಟಿ ಬಿಜೆಪಿ ಶಾಸಕರಾಗಿದ್ದಾರೆ. ಉತ್ತರ ಕನ್ನಡದಲ್ಲಿ ಹಿಂದುತ್ವದ ಹೆಸರಿನಲ್ಲಿ ಹೆಚ್ಚು ಮತ ಚಲಾವಣೆಯಾಗುವುದು ಈ ಕ್ಷೇತ್ರದಲ್ಲಿ. ಆದರೆ ಪರಿಸ್ಥಿತಿ ಈಗ ಮೊದಲಿನಂತಿಲ್ಲ. ಮೀನುಗಾರ ಸಮುದಾಯವನ್ನು ಪ್ರತಿನಿಧಿಸುವ ಭಟ್ಕಳ ಶಾಸಕ ಮಂಕಾಳ ವೈದ್ಯ ಈಗ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಅತಿಹೆಚ್ಚಿನ ಲೀಡ್ ದೊರಕಿಸಿಕೊಡುವ ಹೊಣೆ ಅವರದ್ದಾಗಿದೆ. ಕ್ಷೇತ್ರದಲ್ಲಿ ಇರುವ ಸಣ್ಣಪುಟ್ಟ ಅಸಮಾಧಾನಗಳನ್ನು ಸರಿಪಡಿಸಿ ಕೆಲಸ ಮಾಡುತ್ತಿದ್ದಾರೆ. ಕಾರವಾರದಲ್ಲಿ ಶಾಸಕ ಸತೀಶ್ ಸೈಲ್ ಪ್ರಭಾವಿಯಾಗಿ ಬೆಳೆದಿದ್ದಾರೆ. ಸಿದ್ಧರಾಮಯ್ಯ ಸರ್ಕಾರ ಅವರನ್ನು ಪ್ರತಿಷ್ಠಿತ ಕೆಎಸ್ ಎಂಸಿಎ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಆರಂಭದಲ್ಲಿ ಸೈಲ್ ಅಷ್ಟಾಗಿ ಕಾಣಿಸಿಕೊಳ್ಳದೇ ಇದ್ದರೂ ಈಗ ಡಾ. ಅಂಜಲಿ ಪರ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಶಿರಸಿಯಲ್ಲಿ ಭೀಮಣ್ಣ ನಾಯ್ಕ ಪ್ರಭಾವಶಾಲಿಯಾಗಿದ್ದಾರೆ. ಅವರ ಅನುಯಾಯಿಗಳು ಪೂರ್ಣಪ್ರಮಾಣದಲ್ಲಿ ಅಂಜಲಿ ಬೆನ್ನಿಗೆ ನಿಂತಿದ್ದಾರೆ.

ಆರ್.ವಿ.ದೇಶಪಾಂಡೆ ಈ ಬಾರಿ ನಮ್ಮ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವುದು ಖಚಿತ ಎಂದು ಹೇಳುತ್ತಲೇ ಇದ್ದಾರೆ. ಲೋಕಸಭಾ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಎಲ್ಲ ಶಾಸಕರಿಗೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಲೀಡ್ ಕೊಡಲೇಬೇಕು ಎಂದು ತಾಕೀತು ಮಾಡಿದ್ದಾರೆ. ಹೀಗಾಗಿ ಶಾಸಕರುಗಳು ಲೀಡ್ ಕೊಟ್ಟು ತಮ್ಮ ಪ್ರತಿಷ್ಠೆಯನ್ನು ಹೆಚ್ಚಿಸಿ ಕೊಳ್ಳುವ ಪ್ರಯತ್ನದಲ್ಲಿದ್ದಾರೆ. 

ಒಟ್ಟಾರೆಯಾಗಿ ಈ ಬಾರಿಯ ಚುನಾವಣೆ 1.6 ಲಕ್ಷ ಮತದಾರರಿರುವ ಬ್ರಾಹ್ಮಣ ಸಮುದಾಯದ ಪ್ರತಿನಿಧಿ ಮತ್ತು ಮಿಕ್ಕ 15 ಲಕ್ಷ ಮತದಾರರಿರುವ ಹಿಂದುಳಿದ ಸಮುದಾಯಗಳ ಪ್ರತಿನಿಧಿ ನಡುವಿನ ಸ್ಪರ್ಧೆ ಎಂಬಂತೆ ಆಗಿದೆ. ಹಿಂದುಳಿದ ಸಮುದಾಯಗಳಲ್ಲಿ ಆಗಿರುವ ಒಗ್ಗಟ್ಟು ಕ್ಷೇತ್ರದ ಚಿತ್ರಣವನ್ನೇ ಬದಲಿಸುತ್ತಿದೆ. ಈ ಒಗ್ಗಟ್ಟು ಮತಗಳಾಗಿ ಪರಿವರ್ತನೆ ಆದಲ್ಲಿ ಹಿಂದುಳಿದ ಸಮುದಾಯಗಳ ಕ್ರಾಂತಿಯೇ ಇಲ್ಲಿ ನಡೆಯಲಿದೆ. ದೊಡ್ಡ ಬಹುಮತದಿಂದಲೇ ಡಾ. ಅಂಜಲಿ ಹೇಮಂತ್ ನಿಂಬಾಳ್ಕರ್ ಜಯಗಳಿಸುವ ಸಾಧ್ಯತೆ ಕಾಣಿಸುತ್ತಿದೆ.

ಕರ್ನಾಟಕ ರಾಜ್ಯ ಕಂಡು ಕೇಳರಿಯದ ಕಾಮಕಾಂಡದಲ್ಲಿ ಹಾಸನದ ಬಿಜೆಪಿ-ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಸಿಕ್ಕಿಬಿದ್ದ  ಪ್ರಕರಣ ದೇಶಾದ್ಯಂತ ಚರ್ಚೆಯಾಗುತ್ತದೆ. ಸಹಜವಾಗಿಯೇ ಭಾರತೀಯ ಜನತಾ ಪಕ್ಷಕ್ಕೆ ಈ ಘಟನೆಯಿಂದ ಉತ್ತರ ಕನ್ನಡ ಕ್ಷೇತ್ರದಲ್ಲೂ ಹಿನ್ನಡೆ ಉಂಟಾಗಿದೆ. ಜೆಡಿಎಸ್ ಕಾರ್ಯಕರ್ತರು ಪ್ರಚಾರಕ್ಕೆ ಹೊರಬರಲೂ ಹಿಂಜರಿಯುತ್ತಿದ್ದಾರೆ. 

ಚುನಾವಣಾ ಅಭ್ಯರ್ಥಿಗಳುಕಾಗೇರಿ ಮತ್ತು ಅಂಜಲಿ

ರಾಜ್ಯದಲ್ಲಿ ಪ್ರತಿಬಾರಿ ಚುನಾವಣೆ ನಡೆದಾಗಲೂ ಮೋದಿ ಅಲೆಯ ವಿಷಯವೇ ಚರ್ಚೆಯಲ್ಲಿ ಇರುತ್ತಿತ್ತು. ಆದರೆ ಈ ಬಾರಿ ಹಾಗಿಲ್ಲ. ಈ ಬಾರಿ ದೊಡ್ಡಮಟ್ಟದಲ್ಲಿ ಚರ್ಚೆಯಾಗುತ್ತಿರುವುದು ಗ್ಯಾರೆಂಟಿ ಅಲೆ. 2023ರ ವಿಧಾನಸಭೆ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷ ಐದು ಗ್ಯಾರೆಂಟಿಗಳನ್ನು ಘೋಷಿಸಿತ್ತು. ಇದೆಲ್ಲ ಗ್ಯಾರೆಂಟಿಗಳು ಕಾರ್ಯಸಾಧುವಲ್ಲ, ಜಾರಿಗೊಳಿಸಲು ಸಾಧ್ಯವಿಲ್ಲ ಎಂದು ವಿರೋಧಪಕ್ಷಗಳು ಟೀಕೆ ಮಾಡುತ್ತಿದ್ದರೆ ಸಿದ್ಧರಾಮಯ್ಯ ನೇತೃತ್ವದ ಸರ್ಕಾರ ಎಲ್ಲ ಗ್ಯಾರೆಂಟಿಗಳನ್ನು ಜಾರಿಗೊಳಿಸಿಯೇಬಿಟ್ಟಿತು. ಇದರ ಸಾಮಾಜಿಕ ಪರಿಣಾಮಗಳು ಅಪಾರ. ಗೃಹ ಲಕ್ಷ್ಮಿ ಯೋಜನೆಯಡಿ ಮನೆಯೊಡತಿಗೆ ನೀಡುವ 2000 ರುಪಾಯಿ ನಿಯಮಿತವಾಗಿ ತಲುಪುತ್ತಿರುವುದು ಗೃಹಿಣಿಯರಲ್ಲಿ ಹರ್ಷ ತಂದಿದೆ. ಹೆಣ್ಣುಮಕ್ಕಳಿಗೆ ಉಚಿತ ಬಸ್ ಪ್ರಯಾಣದ ಸೌಕರ್ಯ ವಿದ್ಯಾಭ್ಯಾಸ ಮಾಡುವ, ಹೊರಗೆ ಉದ್ಯೋಗಗಳನ್ನು ಮಾಡುವ ಹೆಣ್ಣುಮಕ್ಕಳಿಗೆ ಶಕ್ತಿ ತಂದಿದೆ. ಅಷ್ಟೇ ಅಲ್ಲ, ದೇವಸ್ಥಾನ, ಪ್ರವಾಸಿ ಸ್ಥಳಗಳಿಗೆ ಹೋಗಿಬರುವ ಅವರ ಬಯಕೆಗಳೂ ಈಡೇರಿವೆ. ಹೆಚ್ಚುವರಿ ಅಕ್ಕಿ ಕೊಡಲು ಸಾಧ್ಯವಾಗದೇ ಇದ್ದರೂ ಅಕ್ಕಿಯ ಮೌಲ್ಯದ ಹಣ ಬಿಪಿಎಲ್ ಪಡಿತರದಾರರ ಅಕೌಂಟ್ ತಲುಪುತ್ತಿದೆ.  ಇದೆಲ್ಲವೂ ರಾಜ್ಯದಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿದೆ. ಭಾರತೀಯ ಜನತಾ ಪಕ್ಷ/ಜೆಡಿಎಸ್ ಮುಖಂಡರು ಗ್ಯಾರೆಂಟಿ ಯೋಜನೆಗಳನ್ನು ಟೀಕಿಸುತ್ತಿರುವುದಲ್ಲದೆ, ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಗ್ಯಾರೆಂಟಿಗಳು ಧೂಳಿಪಟವಾಗುತ್ತವೆ ಎಂದು ಹೇಳುತ್ತಿರುವುದು ಜನರನ್ನು ಕೆರಳಿಸಿದೆ. ಅಷ್ಟೇ ಅಲ್ಲದೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ನಾಯಕಿ ಶ್ರುತಿ ರಾಜ್ಯದ ಹೆಣ್ಣುಮಕ್ಕಳ ಚಾರಿತ್ರ್ಯದ ಕೀಳುಮಟ್ಟದ ಹೇಳಿಕೆ ನೀಡಿರುವುದು ಜನರನ್ನು ಕೆರಳಿಸಿದೆ. ಹೀಗಾಗಿ ರಾಜ್ಯದ ಎಲ್ಲ ಕ್ಷೇತ್ರಗಳಲ್ಲೂ ಈಗ ಗ್ಯಾರೆಂಟಿ ಅಲೆಯೇ ಎದ್ದು ಕಾಣುತ್ತಿದೆ.

ಡಾ. ಅಂಜಲಿ ನಿಂಬಾಳ್ಕರ್ ಅವರು ವೃತ್ತಿಯಿಂದ ವೈದ್ಯರು. ಸುಸಂಸ್ಕೃತರು, ಖಾನಾಪುರದಲ್ಲಿ ಶಾಸಕರಾಗಿದ್ದಾಗ ಜನೋಪಯೋಗಿ ಕೆಲಸಗಳನ್ನು ಮಾಡಿದವರು. ತಮ್ಮ ರಾಜಕೀಯ ಜೀವನದಲ್ಲಿ ಸಣ್ಣ ಕಪ್ಪುಚುಕ್ಕೆಯನ್ನೂ ಅವರು ಇಟ್ಟುಕೊಂಡಿಲ್ಲ. ಇದೆಲ್ಲದರ ಜೊತೆಗೆ ಗ್ಯಾರೆಂಟಿ ಅಲೆ ಅವರನ್ನು ದಡ ಮುಟ್ಟಿಸುವ ಸಾಧ್ಯತೆಯೇ ಹೆಚ್ಚಾಗಿ ಕಾಣುತ್ತಿದೆ. ಅತಿಮುಖ್ಯವಾಗಿ ಉತ್ತರ ಕನ್ನಡ ಕ್ಷೇತ್ರದಲ್ಲಿ ಆಗಿರುವ ಹಿಂದುಳಿದ ವರ್ಗಗಳ ಒಗ್ಗಟ್ಟಿನ ಬಲವರ್ಧನೆ ಅವರಿಗೆ ದೊಡ್ಡ ಶಕ್ತಿಯನ್ನು ತುಂಬಿದೆ.

More articles

Latest article