ಬರೇಲಿ: ಒಳಚರಂಡಿ ಸ್ವಚ್ಛಗೊಳಿಸುತ್ತಿದ್ದ ಸಿಬ್ಬಂದಿ ಭಾರಿ ಪ್ರಮಾಣದ ತ್ಯಾಜ್ಯ ಸುರಿದಿದ್ದರಿಂದ ಮರದ ಕೆಳಗೆ ಮಲಗಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ದುರಂತ ಘಟನೆ ಉತ್ತರಪ್ರದೇಶದ ಬರೇಲಿ ಜಿಲ್ಲೆಯಲ್ಲಿ ನಡೆದಿದೆ. ಶಾಂತಿಪುರದ ನಿವಾಸಿ ತರಕಾರಿ ವ್ಯಾಪಾರಿ ಸುನಿಲ್ ಕುಮಾರ್ ಪ್ರಜಾಪತಿ (45) ಎಂಬಾತ ಕುಡಿದು ಸ್ಮಶಾಣದ ಹತ್ತಿರವಿರುವ ಮರದ ಕೆಳಗೆ ಮಲಗಿದ್ದಾನೆ. ಬರೇಲಿ ಪಾಲಿಕೆ ಸಿಬ್ಬಂದಿ ಒಳಚರಂಡಿ ಸ್ವಚ್ಛಗೊಳಿಸುತ್ತಿದ್ದು, ಟ್ರಾಕ್ಟರ್ ಮೂಲಕ ಒಳಚರಂಡಿ ತ್ಯಾಜ್ಯ ತೆಗೆದು ಮಲಗಿದ್ದ ಪ್ರಜಾಪತಿ ಮೇಲೆ ಸುರಿದಿದ್ದಾರೆ. ಕುಡಿದ ಅಮಲಿನಲ್ಲಿ ಗಾಢ ನಿದ್ರೆಯಲ್ಲಿದ್ದ ಪ್ರಜಾಪತಿ ನಿದ್ರೆಯಿಂದ ಏಳಲಾಗದೆ ಉಸಿರುಗಟ್ಟಿ ಸಾವನ್ನಪ್ಪಿದ್ದಾನೆ.
ಮೃತರ ತಂದೆ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ಪೌರಕಾರ್ಮಿಕರ ವಿರುದ್ಧ ಬರಾದರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸ್ವಲ್ಪ ಸಮಯದ ನಂತರ, ಪ್ರಜಾಪತಿಯ ಪುತ್ರ ತನ್ನ ತಂದೆ ಅವಶೇಷಗಳ ಅಡಿಯಲ್ಲಿ ಹೂತು ಹೋಗಿರುವುದನ್ನು ತಿಳಿದು ಕೂಗಿಕೊಂಡಿದ್ದಾನೆ. ಕೂಡಲೇ ಸ್ಥಳೀಯರ ಸಹಾಯದಿಂದ ಅವರನ್ನು ಹೊರತೆಗೆದು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಆ ವೇಳೆಗೆ ಪ್ರಜಾಪತಿ ಉಸಿರುಗಟ್ಟಿ ಸಾವನ್ನಪ್ಪಿದ್ದ. ಈ ಬಗ್ಗೆ ತನಿಖೆ ನಡೆಸಲು ಸೂಚನೆ ನೀಡಲಾಗಿದೆ ಎಂದು ಪುರಸಭೆ ಆಯುಕ್ತರು ಹೇಳಿದ್ದಾರೆ.