‘ಬರವಣಿಗೆಯ ಮೂಲಕ ಅನ್ಯಾಯಗಳಿಗೆ ಪ್ರತಿರೋಧ ವ್ಯಕ್ತಪಡಿಸುವ ಲೇಖಕರನ್ನು ‘ಅರ್ಬನ್ ನಕ್ಸಲ್’ ಎಂಬ ಹಣೆಪಟ್ಟಿ ಕಟ್ಟಿ ನಮ್ಮ ಪ್ರಭುತ್ವ ಬೇಟೆಯಾಡುತ್ತಿರುವುದು ದೇಶದಲ್ಲಿ ಪ್ರಜಾಪ್ರಭುತ್ವ ತಲುಪಿರುವ ಪಾತಾಳವನ್ನು ತೋರಿಸುತ್ತಿದೆ. ಇಂತಹ ಬೆಳವಣಿಗೆಯಿಂದಾಗಿ ಬರಹಗಾರರು ಸಮಷ್ಟಿ ಚಿಂತನೆಯ ಕುರಿತು ಭೀತಿಗೊಳ್ಳುವಂತೆ ಮಾಡಲಾಗುತ್ತಿದೆ. ಪೆನ್ ಮತ್ತು ಗನ್ ಒಂದೇ ಎಂದು ನೋಡುವ ಮನಸ್ಥಿತಿಯನ್ನು ಸರ್ಕಾರಗಳು ನೆಲೆಗೊಳಿಸುತ್ತಿರುವುದು ವಿಷಾದಕರ’ ಎಂದು ಪ್ರಸಿದ್ಧ ಬರಹಗಾರ್ತಿ, ಕವಯಿತ್ರಿ ಮೀನಾ ಕಂದಸ್ವಾಮಿ ಹೇಳಿದರು.
ಅವರು ಇಂದು ಮಂಗಳೂರಿನ ಸಹೋದಯ ಸಭಾಂಗಣದಲ್ಲಿ ಪಿ ಪಿ ಗೋಮತಿ ಮೆಮೊರಿಯಲ್ ಟ್ರಸ್ಟ್ ಹಾಗೂ ಕರ್ನಾಟಕ ಥಿಯೊಲಾಜಿಕಲ್ ರಿಸರ್ಚ್ ಇನ್ ಸ್ಟಿಟ್ಯೂಟ್ ಸಹಯೋಗದಲ್ಲಿ ಆಯೋಜಿಸಿದ್ದ ‘ಪ್ರತಿರೋಧವಾಗಿ ಬರವಣಿಗೆ’ ವಿಷಯದ ಕುರಿತು ಉಪನ್ಯಾಸದಲ್ಲಿ ಮಾತನಾಡಿದರು.
‘ಸಂಶೋಧಕ, ಲೇಖಕ ಡಾ. ಎಂ ಎಂ ಕಲ್ಬುರ್ಗಿ ಅವರ ಕೊಲೆಯಾದ ನಂತರದಲ್ಲಿ ಬೆಂಗಳೂರಿನಲ್ಲಿ ನಡೆದ ಒಂದು ಪ್ರತಿಭಟನಾ ಸಭೆಯಲ್ಲಿ ಗೌರಿ ಲಂಕೇಶ್, ಪ್ರೊ ಮರುಳಸಿದ್ದಪ್ಪ, ಗಿರೀಶ್ ಕಾರ್ನಾಡ್ ಮುಂತಾದವರು ಇದ್ದರು. ಅಂದು ಸೈದ್ಧಾಂತಿಕ ಅಸಹಿಷ್ಣುತೆಯ ಮುಂದಿನ ಗುರಿ ಗೌರಿ ಲಂಕೇಶ್ ಆಗಲಿದ್ದಾರೆ ಎಂಬ ಊಹೆಯೂ ಇರಲಿಲ್ಲ. ಸ್ವಲ್ಪ ದಿನಗಳಲ್ಲಿ ಅವರ ಹತ್ಯೆಯಾಯ್ತು. ಭೀಮಾ ಕೊರೆಗಾಂವ್ ಸುಳ್ಳು ಕೇಸಿನಲ್ಲಿ ಪ್ರಭುತ್ವ ಅನೇಕರನ್ನು ಬಂಧಿಸಿ ವರ್ಷಗಳ ಕಾಲ ಸೆರೆಯಲ್ಲಿಟ್ಟರು. ನ್ಯಾಯಾಧೀಶರೇ “ಮೆದುಳು ತುಂಬಾ ಅಪಾಯಕಾರಿ” ಎಂಬಂತಹ ಮಾತುಗಳನ್ನಾಡಿದರು. ಈ ನಡುವೆ ಸೆರೆಮನೆಗಳಲ್ಲಿಯೇ ಅನೇಕ ಬರೆಹಗಳು ರಚನೆಯಾದವು. ದಿನೇ ದಿನೇ ಪ್ರತಿರೋಧಾತ್ಮಕವಾಗಿ ಬರೆಯುತ್ತಿರುವವರ ವಲಯ ಕ್ಷೀಣಿಸುತ್ತಿರುವುದು ವಿಷಾದಕರ ಎಂದರು.
ವ್ಯಾಪಕವಾಗಿ ಹಬ್ಬುತ್ತಿರುವ ಸುಳ್ಳುಸುದ್ದಿಗಳನ್ನು ಭೇದಿಸಿ ಸತ್ಯ ತಿಳಿಸಿಕೊಡುತ್ತಿರುವ ಮೊಹಮ್ಮದ್ ಝುಬೇರ್ ಅವರ ಮೇಲೆ ಪ್ರಭುತ್ವ ನಡೆಸಿದ ದಾಳಿ ನೋಡಿದರೆ ನಾವೆಂತಹ ವ್ಯವಸ್ಥೆಯಲ್ಲಿದ್ದೇವೆ ಎಂದೂ ಆತಂಕ ವ್ಯಕ್ತಪಡಿಸಿದರು.
ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, “ನನ್ನ ತಾಯಿ, ಒಬ್ಬ ದಲಿತ ಸಮುದಾಯದ ಮಹಿಳೆಯಾಗಿ 20 ವರ್ಷಗಳ ಹಿಂದೆ IIT ಗಳಲ್ಲಿ ಮೀಸಲಾತಿ ಜಾರಿಗೊಳಿಸದ ಅನ್ಯಾಯದ ಕುರಿತು ಧ್ವನಿ ಎತ್ತಿದ್ದಾಗ ನಾನಾ ರೀತಿಯ ಮಾನಸಿಕ ಹಿಂಸೆಗೆ ಗುರಿಯಾಗಬೇಕಾಯಿತು. ಆಗ ಅವರು ಒಂಟಿ ದನಿಯಂತೆ ಅನಿಸಿತ್ತು. ಆದರೆ ಮೊನ್ನೆ, ಕಾಂಗ್ರೆಸ್ ರಾಷ್ಟ್ರೀಯ ವಕ್ತಾರೆ ಸುಪ್ರಿಯಾ ಶ್ರೀನೇತ್ ಅವರು ಇಂದು ಭಾರತದ IIT ಗಳಲ್ಲಿ ಶೇಕಡಾ 85 ರಷ್ಟು ಬೋಧಕ ವರ್ಗ ಇರುವುದು ಒಂದೇ ಜಾತಿಯಿಂದ ಬಂದವರು ಎಂಬ ಸಂಗತಿಯನ್ನು ಹೇಳಿದ್ದಾರೆ. ಇಂತಹ ವಿಷಯ ರಾಷ್ಟ್ರೀಯ ಪಕ್ಷವೊಂದರ ಪ್ರಮುಖ ವಿಷಯವಾಗಿರುವುದು ಈ ಇಪ್ಪತ್ತು ವರ್ಷಗಳಲ್ಲಿ ಆಗಿರುವ ಉತ್ತಮ ಬದಲಾವಣೆ ಎಂದರು. ಅದೇ ಸಂದರ್ಭದಲ್ಲಿ ಇಂದು ಒಂದು ವ್ಯವಸ್ಥೆಯಾಗಿ ಯೂನಿವರ್ಸಿಟಿಗಳು ಬ್ರಾಹ್ಮಣವಾದದ ಅಡ್ಡೆಗಳಾಗಿವೆ, ದೇವಸ್ಥಾನಗಳಲ್ಲಿ ಪುರೋಹಿತರು ಸನಾತನಾವಾದಿಗಳಾಗಿರದೇ ಇರಬಹುದು, ಆದರೆ ಯೂನಿವರ್ಸಿಟಿಗಳಲ್ಲಿ ಇರುವ ಸನಾತನವಾದ ಬಹುಜನರನ್ನು ಉಸಿರುಗಟ್ಟಿಸುವ ಮಟ್ಟಿಗಿದೆ. ಯೂನಿವರ್ಸಿಟಿಗಳಲ್ಲಿ ದೊಡ್ಡ ಮಟ್ಟದಲ್ಲಿ ತಳಸಮುದಾಯಗಳ ವಿದ್ಯಾರ್ಥಿಗಳು ಮಾನಸಿಕ, ಹಾಗೂ ದೈಹಿಕ ಶೋಷಣೆ ಅನುಭವಿಸುತ್ತಿರುವುದನ್ನು ಪ್ರತಿನಿತ್ಯ ನೋಡುತ್ತಿದ್ದೇವೆ ” ಎಂದರು.
ಕಾರ್ಯಕ್ರಮದ ಮೊದಲಿಗೆ ಟ್ರಸ್ಟಿ ವಾಸುದೇವ್ ಅವರು ಸ್ವಾಗತಿಸಿದರೆ, ಡಾ. ಶ್ರೀನಿವಾಸ ಕಕ್ಕಿಲ್ಲಾಯ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಕರ್ನಾಟಕ ಥಿಯಾಲಜಿಕಲ್ ರಿಸರ್ಚ್ ಇನ್‌ಸ್ಟಿಟ್ಯೂಟ್ ನ ನಿರ್ದೇಶಕ ಕ್ರಿಸ್ಟೋಫರ್ ಜಾರ್ಜ್ ವಂದಿಸಿದರು.