ಕೇಂದ್ರ ಸಚಿವ ಜಿತನ್ ರಾಮ್ ಮಾಂಝಿ ಮೊಮ್ಮಗಳ ಹತ್ಯೆ; ಕೊಂದಿದ್ದು ಯಾರು?

Most read

ಗಯಾ: ಕೇಂದ್ರ ಮೈಕ್ರೊ, ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಸಚಿವ ಜಿತನ್ ರಾಮ್ ಮಾಂಝಿ ಅವರ ಮೊಮ್ಮಗಳನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.  ಬಿಹಾರದ ಅಟಾರಿ ಬ್ಲಾಕ್‌ನ ಟೆಟುವಾ ಗ್ರಾಮದಲ್ಲಿ ಈ ದುರಂತ ನಡೆದಿದೆ. ಮೃತರನ್ನು ಸುಷ್ಮಾದೇವಿ ಎಂದು ಗುರುತಿಸಲಾಗಿದೆ. ಈಕೆಯ ಪತಿ ರಮೇಶ್ ನಾಡ ಪಿಸ್ತೂಲಿನಿಂದ ಹತ್ಯೆ ಮಾಡಿದ್ದಾರೆ ಎಂದು ತಿಳಿದು ಬಂದಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿ ನಾಪತ್ತೆಯಾಗಿದ್ದು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಮೃತ ಸುಷ್ಮಾ ಅವರು, ಅಟ್ಟಾರಿ ಬ್ಲಾಕ್‌ ನಲ್ಲಿ ಸ್ವಯಂಸೇವಾ ಸಂಸ್ಥೆಯೊಂದರಲ್ಲಿ ವಿಕಾಸ್ ಮಿತ್ರ ಆಗಿ ಕೆಲಸ ಮಾಡುತ್ತಿದ್ದರು. ಆರೋಪಿ ರಮೇಶ್ ಪಾಟ್ನಾದಲ್ಲಿ ಟ್ರಕ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. ನಿನ್ನೆ ಮಧ್ಯಾಹ್ನ 12 ಗಂಟೆ ಸುಮಾರಿಗೆ ಕೊಲೆ ನಡೆದಿದೆ ಎಂದು ಹೇಳಲಾಗುತ್ತಿದೆ. ರಮೇಶ್‌ ಮತ್ತು ಸುಷ್ಮಾ ಇಬ್ಬರೂ 14 ವರ್ಷಗಳ ಹಿಂದೆ ಅಂತರ್ಜಾತಿ ವಿವಾಹವಾಗಿದ್ದರು. ಪ್ರಕರಣ ನಡೆದಾಗ ಸುಷ್ಮಾ ಅವರ ಸಹೋದರಿ ಮತ್ತು ಮಕ್ಕಳು ಇನ್ನೊಂದು ಕೋಣೆಯಲ್ಲಿದ್ದರು. ಗುಂಡಿನ ಶಬ್ದ ಕೇಳಿ ಮೃತನ ಸಹೋದರಿ, ಮಕ್ಕಳು ಮತ್ತು ಅಕ್ಕಪಕ್ಕದ ಮನೆಯವರು ಓಡಿ ಬಂದಿದ್ದಾರೆ. ರಕ್ತದ ಮಡುವಿನಲ್ಲಿದ್ದ ಆಕೆಯನ್ನು ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ವೈದ್ಯರು ಅವರು ಮೃತಪಟ್ಟಿದ್ದಾರೆಂದು ಘೋಷಿಸಿದ್ದಾರೆ.

ಕೆಲಸದಿಂದ ರಮೇಶ್ ಸಿಂಗ್ ಮನೆಗೆ ಬರುತ್ತಿದ್ದಂತೆ ಇಬ್ಬರ ನಡುವೆ ಜೋರು ಗಲಾಟೆ ನಡೆದಿದೆ. ನಂತರ ಕೋಪೋದ್ರಿಕ್ತನಾದ ಪತಿ, ಪತ್ನಿ ಸುಷ್ಮಾ ದೇವಿಯನ್ನು ಬಲವಂತವಾಗಿ ಕೋಣೆಗೆ ಕರೆದೊಯ್ದು ಬಾಗಿಲು ಬಂದ್‌ ಮಾಡಿ ಗುಂಡು ಹಾರಿಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಗುಂಡು ಸುಷ್ಮಾ ದೇವಿಯ ಎದೆಗೆ ತಗುಲಿ ಅಸುನೀಗಿದ್ದಾರೆ.  ಆರೋಪಿ ತಲೆಮರೆಸಿಕೊಂಡಿದ್ದಾನೆ. ಶೀಘ್ರದಲ್ಲೇ ಆರೋಪಿ ಪತಿಯನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

More articles

Latest article