ಹೊಸದಿಲ್ಲಿ: ನೀಟ್ ಪರೀಕ್ಷೆಯಲ್ಲಿ ನಡೆದ ಅಕ್ರಮದ ಕುರಿತು ದೇಶಾದ್ಯಂತ ವಿದ್ಯಾರ್ಥಿ ಸಮುದಾಯ ಪ್ರತಿಭಟನೆಗೆ ಇಳಿದ ಬೆನ್ನಲ್ಲೇ ಆಘಾತಕಾರಿ ಬೆಳವಣಿಗೆಯೊಂದರಲ್ಲಿ ಮಂಗಳವಾರ ನಡೆದ ಯುಜಿಸಿ-ಎನ್ ಇಟಿ ಪರೀಕ್ಷೆಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದೆ.
ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರದ (I4C) ರಾಷ್ಟ್ರೀಯ ಸೈಬರ್ ಕ್ರೈಮ್ ಥ್ರೆಟ್ ಅನಾಲಿಟಿಕ್ಸ್ ಘಟಕ ನೀಡಿದ ಮಾಹಿತಿಯನ್ವಯ ಮಂಗಳವಾರ ನಡೆದ ಪರೀಕ್ಷೆ ಮೋಸ ನಡೆದಿರುವುದು ಸ್ಪಷ್ಟವಾಗಿರುವುದರಿಂದ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ. ಘಟನೆ ಸಂಬಂಧ ಸಿಬಿಐ ತನಿಖೆಗೆ ಆದೇಶಿಸಲಾಗಿದೆ.
ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳಲ್ಲಿನ ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಮತ್ತು ಜೂನಿಯರ್ ಸಂಶೋಧನಾ ಫೆಲೋಶಿಪ್‌ಗೆ ಅರ್ಹತೆಯನ್ನು ನಿರ್ಧರಿಸಲು ಮಂಗಳವಾರ ದೇಶಾದ್ಯಂತ ನಡೆದ ಪರೀಕ್ಷೆಗೆ 9 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಹಾಜರಾಗಿದ್ದರು. ಪರೀಕ್ಷೆ ಬರೆದ ಅಭ್ಯರ್ಥಿಗಳು ಈ ಹೊಸ ಬೆಳವಣಿಗೆಯಿಂದ ಆಘಾತಕ್ಕೆ ಒಳಗಾಗಿದ್ದಾರೆ.
ಪರೀಕ್ಷೆ ರದ್ದಾಗಿರುವ ಕುರಿತು ಮಾಹಿತಿ ಹೊರಬೀಳುತ್ತಿದ್ದಂತೆ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರ ಇದನ್ನು ಲಘುವಾಗಿ ಪರಿಗಣಿಸಬಾರದು. ತಪ್ಪಿತಸ್ಥರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ-ರಾಷ್ಟ್ರೀಯ ಅರ್ಹತಾ ಪರೀಕ್ಷೆ (UGC-NET) ಯ ಜೂನ್ ಪರೀಕ್ಷೆಯನ್ನು ಮಂಗಳವಾರ OMR (ಪೆನ್ ಮತ್ತು ಪೇಪರ್) ಮೋಡ್ ಗಳಲ್ಲಿ ದೇಶಾದ್ಯಂತ ಎರಡು ಪಾಳಿಗಳಲ್ಲಿ ನಡೆಸಲಾಗಿತ್ತು.
ಯುಜಿಸಿ-ಎನ್ ಇಟಿ ಪರೀಕ್ಷೆಗಳನ್ನು ದೇಶಾದ್ಯಂತ ವರ್ಷಕ್ಕೆ ಎರಡು ಬಾರಿ ಜೂನ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ನಡೆಸಲಾಗುತ್ತದೆ.