ಉಡುಪಿ: ಜಿಲ್ಲೆಯಲ್ಲಿ ವಾಸಿಸುತ್ತಿರುವ ಕೊರಗ ಹಾಗೂ ಮಲೈ ಕುಡಿ ಜನಾಂಗದವರಿಗೆ 2025ರ ಮಾರ್ಚ್ ನಿಂದ ಮೇ ತಿಂಗಳವರೆಗೆ ಪೌಷ್ಠಿಕ ಆಹಾರ ಪದಾರ್ಥಗಳನ್ನು ಸರಬರಾಜು ಮಾಡಿದ ಆರ್. ಆರ್. ಎಂಟರ್ ಪ್ರೈಸಸ್, (ದೇವಶೆಟ್ಟಿ ಹಳ್ಳಿ ಜಡಗೇನಹಳ್ಳಿ ಹೋಬಳಿ, ಹೊಸಕೋಟೆ ತಾಲ್ಲೂಕು) ಇವರಿಗೆ ರಾಜ್ಯ ಸರ್ಕಾರದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕರಿಂದ ನೋಟಿಸ್ ಜಾರಿಯಾಗಿದೆ.
ತಾವು ಸರಬರಾಜು ಮಾಡಿರುವ ಪದಾರ್ಥಗಳು ಗುಣಮಟ್ಟದ ಆಹಾರ ಪದಾರ್ಥಗಳನ್ನು ಸರಬರಾಜು ಮಾಡಿರುವುದಿಲ್ಲ ಎಂದು ಉಡುಪಿ ಜಿಲ್ಲೆಯ ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯಾಧಿಕಾರಿಗಳು ವರದಿ ನೀಡಿರುತ್ತಾರೆ. ತಾವು ಕಾರ್ಯಾದೇಶದ ಷರತ್ತುಗಳನ್ನು ಉಲ್ಲಂಘಿಸಿರುವುದು ಕಂಡುಬಂದಿದ್ದು, ನಿಮ್ಮ ಸಂಸ್ಥೆಯ ವಿರುದ್ಧ ನಿಯಮಾನುಸಾರ ಏಕೆ ಕ್ರಮಕೈಗೊಳ್ಳಬಾರದು ಎಂದು ನೋಟಿಸ್ ನೀಡಲಾಗಿದೆ. ಈ ನೋಟಿಸ್ ತಲುಪಿದ 3 ದಿನಗಳೊಳಗಾಗಿ ಸಮಾಜಾಯಿಸಿ ನೀಡಬೇಕು ಇಲ್ಲವಾದಲ್ಲಿ ತಮ್ಮ ಸಂಸ್ಥೆಯ ವಿರುದ್ಧ ನಿಯಮಾನುಸಾರ ಕ್ರಮಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುತ್ತದೆ ಎಂದು ಉಡುಪಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕರು ನೋಟಿಸ್ ನಲ್ಲಿ ತಿಳಿಸಿದ್ದಾರೆ.
ಈ ಕುರಿತು ಕನ್ನಡ ಪ್ಲಾನೆಟ್ ನಲ್ಲಿ ಪ್ರಕಟವಾಗಿದ್ದ ವಿಸ್ತೃತ ವರದಿಯ ಪಾಠ ಇಲ್ಲಿದೆ:
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಸಿಸುತ್ತಿರುವ ಬುಡಕಟ್ಟು ಸಮುದಾಯಗಳಿಗೆ ಸೇರಿದ ಕೊರಗರು ರಕ್ತಹೀನತೆ, ಕ್ಷಯ, ಅಪೌಷ್ಟಿಕತೆ ನೊದಲಾದ ಅನಾರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಈ ಸಮುದಾಯಗಳ ಕುಸಿಯುತ್ತಿರುವ ಜನಸಂಖ್ಯೆಯನ್ನು ಮನಗೊಂಡು ಸರ್ಕಾರ ಅನೇಕ ವರ್ಷಗಳಿಂದ ಈ ಸಮುದಾಯಗಳ ಕುಟುಂಬಗಳಿಗೆ ಪೌಷ್ಟಿಕ ಆಹಾರವನ್ನು ಪೂರೈಕೆ ಮಾಡುತ್ತಿವೆ.
ಆದರೆ ಇತ್ತೀಚೆಗೆ ಕಳೆದ ಎರಡು ತಿಂಗಳಿಂದ ಪೂರೈಕೆಯಾಗುತ್ತಿರುವ ತುಪ್ಪ, ಎಣ್ಣೆ, ಕಡಲೆ, ತೊಗರಿ ಬೇಳೆ, ಸಕ್ಕರೆ, ಬೆಲ್ಲ, ಹೆಸರುಕಾಳು, ತೊಗರಿ, ಅಕ್ಕಿ, ಪಾಮೋಲಿನ್ ಎಣ್ಣೆ, ಮತ್ತು ಮೊಟ್ಟೆ ಸೇರಿದಂತೆ ಎಲ್ಲಾ ಆಹಾರ ಪದಾರ್ಥಗಳು ಕಳಪೆಯಾಗಿದ್ದು ಸೇವಿಸಲು ಯೋಗ್ಯವಾಗಿರುವುದಿಲ್ಲ. ಇದರಿಂದ ಕೊರಗರು ಮತ್ತಷ್ಟು ಅನೇಕ ಅನಾರೋಗ್ಯ ಸಮಸ್ಯೆಗಳನ್ನು ಎದುರಿಸುವಂತಾಗಿತ್ತು.
ಈ ಅಕ್ರಮ ಕುರಿತು ಮನವಿ ಸಲ್ಲಿಸಿದ್ದರೂ ಸಮಗ್ರ ಬುಡಕಟ್ಟು ಯೋಜನಾ ಇಲಾಖೆ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಬೇಸತ್ತ ಕೊರಗ ಸಂಘಗಳ ಒಕ್ಕೂಟದ ಅಧ್ಯಕ್ಷೆ ಸುಶೀಲ ನಾಡ ಮತ್ತು ಸಂಯೋಜಕ ಪುತ್ರನ್ ಹೆಬ್ರಿ ಉಡುಪಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ಹಳೆಯ ಟೆಂಡರ್ ರದ್ದುಗೊಳಿಸಿ, ಹೊಸದಾಗಿ ಟೆಂಡರ್ ಕರೆದು ಗುಣಮಟ್ಟದ ಪೌಷ್ಟಿಕ ಆಹಾರ ಪೂರೈಕೆ ಮಾಡುವಂತೆ ಒತ್ತಾಯಿಸಲಾಗಿತ್ತು. ಒಂದು ವೇಳೆ ಜಿಲ್ಲಾಡಳಿತ ಕೊರಗರ ಸಮಸ್ಯೆಗಳಿಗೆ ಸ್ಪಂದಿಸದಿದ್ದರೆ ಜಿಲ್ಲಾಧಿಕಾರಿ ಕಚೇರಿ ಎದುರು ಕೊರಗ ಸಂಘಗಳ ಒಕ್ಕೂಟದಿಂದ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಒಕ್ಕೂಟ ಎಚ್ಚರಿಕೆ ನೀಡಿತ್ತು.
ಈ ಕುರಿತು ಉಡುಪಿ ಜಿಲ್ಲೆಯ ಯೋಜನಾ ಸಮನ್ವಯಾಧಿಕಾರಿಗಳು ತನಿಖೆ ನಡೆಸಿ ವರದಿಯನ್ನೂ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ನಿರ್ದೇಶಕರು ಅಹಾರ ಪೂರೈಕೆಯ ಗುತ್ತಿಗೆ ಪಡೆದಿದ್ದ ಹೊಸಕೋಟೆ ತಾಲ್ಲೂಕಿನ ಆರ್ ಆರ್ ಎಂಟರ್ ಪ್ರೈಸಸ್ ಸಂಸ್ಥೆಗೆ ನೊಟೀಸ್ ಕಳಿಸಿ ಮೂರು ದಿನಗಳಲ್ಲಿ ಉತ್ತರ ನೀಡಲು ಆದೇಶಿಸಿರುತ್ತಾರೆ. ಸಂಸ್ಥೆಯ ಉತ್ತರ ನೋಡಿಕೊಂಡು ಮುಂದಿನ ಕ್ರಮಕ್ಕೆ ಮುಂದಾಗಲಿದ್ದಾರೆ ಎನ್ನಲಾಗಿದೆ.