ಬೆಂಗಳೂರು: ಧರ್ಮಸ್ಥಳ ಮತ್ತು ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ದಾಖಲಾಗಿರುವ ಅಸ್ವಾಭಾವಿಕ ಸಾವಿನ ವರದಿ (ಯುಡಿಆರ್)ಗಳನ್ನು ಕುರಿತು ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ ಐಟಿ) ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ಸೇರಿದಂತೆ ರಾಜ್ಯದ ಮತ್ತಿತರ ಧಾರ್ಮಿಕ ಕ್ಷೇತ್ರಗಳಲ್ಲಿ ದಾಖಲಾಗಿರುವ (ಯುಡಿಆರ್ ಗಳನ್ನು ಕುರಿತೂ ತನಿಖೆ ನಡೆಸಲು ಮುಂದಾಗಿದೆ. ಸಾಮೂಹಿಕವಾಗಿ ಶವಗಳನ್ನು ಹೂತು ಹಾಕಿರುವ ಪ್ರಕರಣದ ವಿಚಾರಣೆ ಆರಂಭದಲ್ಲೇ ಎಸ್ ಐಟಿ ಈ ಯುಡಿಆರ್ ಗಳ ದಾಖಲೆಗಳನ್ನು ಸಂಗ್ರಹಿಸಿದೆ ಎಂದು ಬಿಎಲ್ ಆರ್ ಪೋಸ್ಟ್ ವರದಿ ಮಾಡಿದೆ.
ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ಮತ್ತಿತರ ಧಾರ್ಮಿಕ ಕ್ಷೇತ್ರಗಳಲ್ಲಿ ಸಂಭವಿಸಿರುವ ಅಸ್ವಭಾವಿಕ ಸಾವಿನ ಪ್ರಕರಣಗಳಲ್ಲಿ ಮಹತ್ವದ ಅಥವಾ ಸಂಶಯಾತ್ಮಕ ಮಾದರಿಗಳು ಕಂಡು ಬಂದಿಲ್ಲ. ಧರ್ಮಸ್ಥಳಕ್ಕೆ ಭೇಟಿ ನೀಡುವವರೆಲ್ಲಾ ಸಾಮಾನ್ಯವಾಗಿ ಸುಬ್ರಹ್ಮಣ್ಯಕ್ಕೂ ಭೇಟಿ ನೀಡಿರುತ್ತಾರೆ. ಕುಕ್ಕೆ ಸುಬ್ರಹ್ಮಣ್ಯ ಮತ್ತು ಧರ್ಮಸ್ಥಳದಲ್ಲಿ ದಾಖಲಾದ ಯುಡಿಆರ್ ಗಳನ್ನು ತುಲನೆ ಮಾಡುವಂತಿಲ್ಲ. ಏಕೆಂದರೆ ಧರ್ಮಸ್ಥಳದಲ್ಲಿ ದಾಖಲಾಗಿರುವ ಯುಡಿಆರ್ ಗಳಲ್ಲಿ ಸಂಶಯಾತ್ಮಕ ಅಂಶಗಳು ಕಂಡು ಬರುತ್ತವೆ.
ಧರ್ಮಸ್ಥಳ ಮತ್ತು ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ದಾಖಲಾಗಿರುವ ಅಸ್ವಾಭಾವಿಕ ಸಾವಿನ ವರದಿ (ಯುಡಿಆರ್)ಗಳು ಸಂಶಯವನ್ನು ಹುಟ್ಟು ಹಾಕುವಂತಿದ್ದು, ಎಸ್ ಐಟಿ ಪ್ರತಿಯೊಂದು ಯುಡಿಆರ್ ಪ್ರಕರಣವನ್ನು ಪ್ರತ್ಯೇಕವಾಗಿ ಪರಿಗಣಿಸಿ ಅವಲೋಕಿಸುತ್ತಿದೆ. ಕೆಲವು ಯುಡಿಆರ್ ಗಳನ್ನು ಕುರಿತು ತಕರಾರು ಅರ್ಜಿ ಸಲ್ಲಿಸಿದ್ದ ಅನೇಕ ಸಾರ್ವಜನಿಕರ ಅಭಿಪ್ರಾಯವನ್ನು ಎಸ್ ಐಟಿ ಸಂಗ್ರಹಿಸುತ್ತಿದೆ. ಚಿನ್ನಯ್ಯ ದಾಖಲಿಸಿದ್ದ ಸಾಮೂಹಿಕವಾಗಿ ಶವಗಳನ್ನು ಹೂತು ಹಾಕಿರುವ ಪ್ರಕರಣದ ತನಿಖೆಗಿಂತಲೂ ಈ ಯುಡಿಆರ್ ಪ್ರಕರಣಗಳ ವಿಸ್ತೃತ ತನಿಖೆಯ ಅವಶ್ಯಕತೆ ಇದೆ ಎಂದು ಎಸ್ ಐಟಿ ಮೂಲಗಳು ಖಚಿತಪಡಿಸಿವೆ.
ಕುಕ್ಕೆ ಸುಬ್ರಹ್ಮಣ್ಯದಲ್ಲಿ ದಾಖಲಾಗಿರುವ ಯುಡಿಆರ್ ಗಳಲ್ಲಿ ಕೆಲವು ವರ್ಷಗಳಲ್ಲಿ ಇಳಿಮುಖವಾಗಿದ್ದರೆ ಕೆಲವು ವರ್ಷಗಳಲ್ಲಿ ಹೆಚ್ಚಳವಾಗಿದೆ. ಧರ್ಮಸ್ಥಳ ಮತ್ತು ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ದಾಖಲಾಗಿರುವ ಅಸ್ವಾಭಾವಿಕ ಸಾವಿನ ವರದಿ (ಯುಡಿಆರ್)ಗಳ ಮಾದರಿಯಂತೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ದಾಖಲಾಗಿರುವ ಯುಡಿಆರ್ ಗಳು ಒಂದೇ ರೀತಿ ಇಲ್ಲ ಎನ್ನುವುದು ಗಮನಾರ್ಹ ಎಂದು ಎಸ್ ಐಟಿ ಮೂಲಗಳು ತಿಳಿಸಿವೆ.
ಎಸ್ ಐಟಿಯು ಧರ್ಮಸ್ಥಳ ಮಾಹಿತಿ ಕೇಂದ್ರದ ಅನೇಕ ಪೊಲೀಸರು, ಹಾಗೂ ಧರ್ಮಸ್ಥಳ ದೇವಾಲಯವೇ ನಡೆಸುತ್ತಿರುವ ವಸತಿ ಗೃಹಗಳ ಸಿಬ್ಬಂದಿಗಳನ್ನು ಹಲವು ಬಾರಿ ವಿಚಾರಣೆಗೊಳಪಡಿಸಿದೆ. ತನಿಖೆಯು ಭರದಿಂದ ಸಾಗಿದ್ದು, ಇದುವರೆಗೂ ಕರ್ನಾಟಕದಲ್ಲಿ ನಡೆದ ಅತಿ ದೊಡ್ಡ ಎಸ್ ಐಟಿ ತನಿಖೆ ಇದಾಗಿರಲಿದೆ ಎಂದು ಎಸ್ ಐಟಿ ಮೂಲಗಳೇ ಖಚಿತಪಡಿಸಿರುವುದು ಮತ್ತಷ್ಟು ಕುತೂಹಲ ಮೂಡಿಸಿದೆ.