ಬೆಂಗಳೂರು: ನಗರದ ವಿವಿಧ ಭಾಗಗಳಲ್ಲಿ ರಾಯಲ್ ಎನ್‌ಫೀಲ್ಡ್ 350 ಕ್ಲಾಸಿಕ್ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ ಆರೋಪಿಯೊಬ್ಬನನ್ನು ಸುದ್ದಗುಂಟೆ ಪಾಳ್ಯ ಠಾಣೆ ಪೊಲೀಸರು ಬಂಧಿಸಿ, ಆತನಿಂದ ರೂ. 15 ಲಕ್ಷ ಮೌಲ್ಯದ ಏಳು ದ್ವಿಚಕ್ರ ವಾಹನಗಳನ್ನು
ವಶಪಡಿಸಿಕೊಂಡಿದ್ದಾರೆ. ಮಾಗಡಿ ತಾಲೂಕು ತಾವರೆಕೆರೆ ನಿವಾಸಿ ಸಿರಾಜ್ ಶೇಖ್ ಬಂಧಿತ ಆರೋಪಿ.
ಈ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿಯೊಬ್ಬರು ತಮ್ಮ ಮನೆಯ ಮುಂಭಾಗ ನಿಲ್ಲಿಸಿದ್ದ ರಾಯಲ್ ಎನ್‌ಫೀಲ್ಡ್ ವಾಹನ ಕಳುವಾಗಿದೆ ಎಂದು ದೂರು ಸಲ್ಲಿಸಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಪೊಲೀಸರು ವಿವಿಧ ಮೂಲಗಳಿಂದ ಮಾಹಿತಿ ಸಂಗ್ರಹಿಸಿ ಮತ್ತು ಸಿಸಿಟಿವಿ ಕ್ಯಾಮೆರಾ ಸುಳಿವು ಆಧರಿಸಿ ಆರೋಪಿಯನ್ನು ಕೃಷ್ಣಮೂರ್ತಿ ಲೇ ಔಟ್‌ನಲ್ಲಿ ಬಂಧಿಸಿದ್ದಾರೆ .
ಆರೋಪಿಯು ತನ್ನ ಮತ್ತಿಬ್ಬರು ಸಹಚರರ ಜತೆ ಸೇರಿಕೊಂಡು ಮನೆ ಹಾಗೂ ಪೇಯಿಂಗ್ ಗೆಸ್ಟ್ ಹೌಸ್ ಗಳ ಮುಂಭಾಗ ನಿಲ್ಲಿಸುತ್ತಿದ್ದ ಹ್ಯಾಂಡಲ್ ಲಾಕ್ ಹಾಕದ ಐಷಾರಾಮಿ ದ್ವಿಚಕ್ರ ವಾಹನಗಳನ್ನು ಕಳವು ಮಾಡುತ್ತಿದ್ದ. ಕದ್ದ ವಾಹನಗಳನ್ನು ಬೆಳಗಾವಿ ಜಿಲ್ಲೆಯಲ್ಲಿ ಮಾರಾಟ ಮಾಡಿದ್ದ ಎಂದು ತಿಳಿದು ಬಂದಿದೆ. ವಾಹನಗಳ ದಾಖಲೆ ಇಲ್ಲದ ಕಾರಣ ಲಕ್ಷಾಂತರ ರೂಪಾಯಿ ಮೌಲ್ಯದ ವಾಹನಗಳನ್ನು ಕೆಲವೇ ಸಾವಿರ ರೂ.ಗಳಿಗೆ ಗ್ರಾಮಾಂತರ ಪ್ರದೇಶದಲ್ಲಿ ಮಾತ್ರ ಮಾರಾಟ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಐಷಾರಾಮಿ ಜೀವನ ನಡೆಸಲು ಸುಲಭವಾಗಿ ಹಣ ಸಂಪಾದಿಸುವ ಉದ್ದೇಶದಿಂದ ಆರೋಪಿ ಕಳ್ಳತನ ಮಾಡಲು ಆರಂಭಿಸಿದ್ದ. ಈತನ ಸಹಚರರು ನಾಪತ್ತೆಯಾಗಿದ್ದಾರೆ. ಅವರ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳು ಬೆಳಗಾವಿ ಮತ್ತು
ಮಹಾರಾಷ್ಟ್ರದಲ್ಲಿ ಮಾರಾಟ ಮಾಡಿದ್ದ ಹಾಗೂ ಹಲವು ಕಡೆ ಬಚ್ಚಿಟ್ಟಿದ್ದ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಈತನ ಬಂಧನದಿಂದ ಸುದ್ದಗುಂಟೆ ಠಾಣೆಯ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಏಳು ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿವೆ.
ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದ್ದು ತನಿಖೆ ನಡೆಯುತ್ತಿದೆ.