ಜಮ್ಮುಕಾಶ್ಮೀರ ಎನ್ ಕೌಂಟರ್ ನಲ್ಲಿ ಇಬ್ಬರು ಭಯೋತ್ಪಾದಕರ ಹತ್ಯೆ: ಕಾರ್ಯಾಚರಣೆಯಲ್ಲಿ ಓರ್ವ ಸೈನಿಕ ಹುತಾತ್ಮ

Most read

ಶ್ರೀನಗರ: ಜಮ್ಮುಕಾಶ್ಮೀರದ ಕತುವಾದಲ್ಲಿ ನಿನ್ನೆ ತಡರಾತ್ರಿ ನಡೆದ ಕಾರ್ಯಾಚರಣೆಯೊಂದರಲ್ಲಿ ಇಬ್ಬರು ಭಯೋತ್ಪಾದಕರನ್ನು ಪ್ಯಾರಾಮಿಲಿಟರಿ ಸೈನಿಕರು ಕೊಂದುಹಾಕಿದ್ದಾರೆ. ಕಾರ್ಯಾಚರಣೆ ಸಂದರ್ಭದಲ್ಲಿ ಭಯೋತ್ಪಾದಕರು ಹಾರಿಸಿದ ಗುಂಡಿಗೆ ಓರ್ವ ಸೈನಿಕ ಹುತಾತ್ಮರಾಗಿದ್ದಾರೆ.

ನಿನ್ನೆ ರಾತ್ರಿ ದೋಡಾ ಮತ್ತು ಕತುವಾದಲ್ಲಿ ಅಡಗಿ ಕುಳಿತಿದ್ದ ಭಯೋತ್ಪಾದಕರ ವಿರುದ್ಧ ಪ್ಯಾರಾ ಮಿಲಿಟರಿ ಪಡೆಗಳು ಕಾರ್ಯಾಚರಣೆ ನಡೆಸಿದ್ದವು. ಕಾರ್ಯಾಚರಣೆ ಬೆಳಗಿನ ಜಾವದವರೆಗೆ ನಡೆದಿತ್ತು. ದೋಡಾದಲ್ಲಿ ನಡೆದ ಕಾರ್ಯಾಚರಣೆ ಸಂದರ್ಭದಲ್ಲಿ ಐವರು ಸೈನಿಕರು ಗಾಯಗೊಂಡಿದ್ದು, ಓರ್ವ ವಿಶೇಷ ಪೊಲೀಸ್‌ ಅಧಿಕಾರಿ ಕೂಡ ಗಾಯಗೊಂಡಿದ್ದಾರೆ.

ಎರಡು ದಿನಗಳ ಹಿಂದಷ್ಟೇ ತೀರ್ಥಯಾತ್ರಾರ್ಥಿಗಳಿದ್ದ ಬಸ್‌ ಮೇಲೆ ರಿಯಾಸಿ ಎಂಬಲ್ಲಿ ಭಯೋತ್ಪಾದಕರು ನಡೆಸಿದ ದಾಳಿಯಿಂದಾಗಿ ಬಸ್ ಕಮರಿಗೆ ಉರುಳಿ ಬಿದ್ದು 9 ಮಂದಿ ಮೃತಪಟ್ಟಿದ್ದರು. ಈ ಹಿನ್ನೆಲೆಯಲ್ಲಿ ನಿನ್ನೆ ಜಮ್ಮು ಕಾಶ್ಮೀರದ ಎರಡು ಪಟ್ಟಣಗಳಲ್ಲಿ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ನಡೆದಿತ್ತು.

ದೋಡಾದಲ್ಲಿ ನಡೆದ ಘಟನೆಯಲ್ಲಿ ಭಯೋತ್ಪಾದಕರು ರಾಷ್ಟ್ರೀಯ ರೈಫಲ್ಸ್ ಮತ್ತು ಪೊಲೀಸರ ಜಂಟಿ ಪಡೆಗಳ ಮೇಲೆ ದಾಳಿ ನಡೆಸಿದ್ದರು. ಭೂಸೇನೆಯ ನೆಲೆ ಇರುವ ಚಟ್ಟಾರ್ಗಲ ಎಂಬಲ್ಲಿ ಈ ಘಟನೆ ನಡೆದಿದೆ.

ಇನ್ನೊಂದೆಡೆ ಕತುವಾದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ನಿನ್ನೆ ರಾತ್ರಿ ಓರ್ವ ಭಯೋತ್ಪಾದಕನನ್ನು ಹೊಡೆದುರುಳಿಸಲಾಗಿತ್ತು. ಮತ್ತೋರ್ವ ಭಯೋತ್ಪಾದಕ ಅಮೆರಿಕ ನಿರ್ಮಿತ ಎಂ4 ಕಾರ್ಬೈನ್ ಅಸಾಲ್ಟ್ ರೈಫಲ್ ನೊಂದಿಗೆ ಅರಣ್ಯಪ್ರದೇಶದಲ್ಲಿ ಅಡಗಿ ಕುಳಿತುಕೊಂಡಿದ್ದ. ಆತನನ್ನು ಇಂದು ಬೆಳಿಗ್ಗೆ ಕೊಲ್ಲಲಾಯಿತು.

ಭಯೋತ್ಪಾದಕರು ಹಲವಾರು ಮನೆಗಳ ಬಳಿ ಹೋಗಿ ನೀರು ಕೇಳಿದಾಗ ಗ್ರಾಮಸ್ಥರು ಅನುಮಾನಗೊಂಡರು. ಅಪಾಯದ ಮುನ್ಸೂಚನೆಯಿಂದಾಗಿ ಹಲವು ಗ್ರಾಮಸ್ಥರು ಪೊಲೀಸರನ್ನು ಕರೆಯುವ ಸಲುವಾಗಿ ತುರ್ತು ನೆರವಿನ ಅಲಾರಾಂ ಮೊಳಗಿಸಿದರು. ಇದರಿಂದ ರೊಚ್ಚಿಗೆದ್ದ ಭಯೋತ್ಪಾದಕರು ನಾಗರಿಕರ ಮೇಲೂ ಫೈರಿಂಗ್ ನಡೆಸಿದರು. ಈ ಸಂದರ್ಭದಲ್ಲಿ ಓರ್ವ ನಾಗರಿಕನಿಗೆ ಗಾಯಗಳಾಗಿವೆ.

More articles

Latest article