ಕುಣಿಗಲ್: ತಾಲ್ಲೂಕಿನಲ್ಲಿ ಇಂದು ಮುಂಜಾನೆ ಸಂಭವಿಸಿದ ಎರಡು ಪ್ರತ್ಯೇಕ ರಸ್ತೆ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿ, ಎಂಟು ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ನಡೆದಿದೆ. ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ-75ರ ಅಂಚೆಪಾಳ್ಯ ಸಮೀಪ ಮುಂಜಾನೆ ಖಾಸಗಿ ಬಸ್ ಸ್ವಾಗತ ಕಮಾನಿಗೆ ಅಪ್ಪಳಿಸಿ ಪಲ್ಟಿಯಾದ ಪರಿಣಾಮ ಚಾಲಕ ಸಾವನ್ನಪ್ಪಿದ್ದು, ಎಂಟು ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳೂರಿನ ಬಿ.ಸಿ. ರಸ್ತೆ ನಿವಾಸಿ ಮಹಮದ್ ಇಬ್ರಾಹಿಂ ಮೃತಪಟ್ಟಿರುವ ಬಸ್ ಚಾಲಕ. ಉಡುಪಿಯ ಸುಭಾಷ್ ನಗರದಿಂದ ರಾತ್ರಿ 7.45 ಹೊರಟಿದ್ದ ಖಾಸಗಿ ಬಸ್ ಬೆಂಗಳೂರಿಗೆ ತೆರಳುತ್ತಿದ್ದ ಮಾರ್ಗಮಧ್ಯೆ ಅಂಚೇಪಾಳ್ಯ ಸಮೀಪ ರಾಷ್ಟ್ರೀಯ ಹೆದ್ದಾರಿ-75ರಲ್ಲಿ ಚಾಲಕನ ನಿಯಂತ್ರಣ ತಪ್ಪಿ ಸ್ವಾಗತ ಕಮಾನಿಗೆ ಡಿಕ್ಕಿ ಹೊಡೆದು ಪಲ್ಟಿಯಾದ್ದರಿಂದ ಈ ದುರ್ಘಟನೆ ಸಂಭವಿಸಿದೆ. ಸುದ್ದಿ ತಿಳಿದ ಕೂಡಲೇ ಕುಣಿಗಲ್ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಮತ್ತೊಂದು ಅಪಘಾತದಲ್ಲಿ ಮರಕ್ಕೆ ಕಾರು ಡಿಕ್ಕಿ ಹೊಡೆದ ಪರಿಣಾಮ ಬೆಸ್ಕಾಂ ನೌಕರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ತಾಲ್ಲೂಕಿನ ದೊಡ್ಡಮಾವತ್ತೂರು ಸಮೀಪ ರಾಜ್ಯ ಹೆದ್ದಾರಿ-33 ಟಿ.ಎಂ. ರಸ್ತೆ ಬಳಿ ನಡೆದಿದೆ.
ಮೃತ ಬೆಸ್ಕಾಂ ನೌಕರನನ್ನು ತಿಪಟೂರಿನ ಸಿ.ಎನ್. ಹರೀಶ್ (37) ಎಂದು ಗುರುತಿಸಲಾಗಿದೆ.
ಬೆಸ್ಕಾಂ ನೌಕರ ಹರೀಶ್ ಅವರು ಕುಣಿಗಲ್ ಮಾರ್ಗವಾಗಿ ಮೈಸೂರಿಗೆ ಕಾರಿನಲ್ಲಿ ತೆರಳುತ್ತಿದ್ದಾಗ ಕಾರು ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಅಪ್ಪಳಿಸಿ, ನಂತರ ತೆಂಗಿನ ಮರಕ್ಕೆ ಡಿಕ್ಕಿ ಹೊಡೆದು ಉರುಳಿ ಬಿದ್ದಿದೆ. ಇದರಿಂದ ಕಾರು ಚಾಲನೆ ಮಾಡುತ್ತಿದ್ದ ಹರೀಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.