104 ಪ್ರಕರಣಗಳಲ್ಲಿ ಬೇಕಾಗಿದ್ದ ಇಬ್ಬರು ಕುಖ್ಯಾತ ರೌಡಿಗಳ ಬಂಧನ

Most read

ಬೆಂಗಳೂರು:  ರೌಡಿ ಚಟುವಟಿಕೆಗಳಲ್ಲಿ ಬಾಗಿಯಾಗಿದ್ದ ಕುಖ್ಯಾತ ಸರಗಳ್ಳರೂ ಆಗಿದ್ದ ಇಬ್ಬರು ರೌಡಿಗಳನ್ನು ಬಂಧಿಸುವಲ್ಲಿ ಜಯನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಬನ್ನೇರುಘಟ್ಟ ರಸ್ತೆಯ ಲಕ್ಷ್ಮೀಲೇಔಟ್ ನಿವಾಸಿ ಮೊಹಮ್ಮದ್‌ ಜಬೀವುದ್ದೀನ್‌ ಅಲಿಯಾಸ್‌ ತಬ್ರೇಜ್‌ (39) ಹಾಗೂ ಜಯನಗರ ನಾಲ್ಕನೇ ಬ್ಲಾಕ್‌ ನಿವಾಸಿ ಮೊಹಮ್ಮದ್‌ ಮೆಹತಾಬ್‌ ಬಂಧಿತ ಆರೋಪಿಗಳು. ನಗರದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಮೊಹಮ್ಮದ್ ಜಬೀವುದ್ದೀನ್‌ ವಿರುದ್ಧ ಒಟ್ಟು 73 ಪ್ರಕರಣಗಳು ದಾಖಲಾಗಿದ್ದರೆ, ಮೊಹಮ್ಮದ್ ಮೆಹತಾಬ್ ವಿರುದ್ಧ 31 ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಪದೇ ಪದೇ ತಮ್ಮ ವಾಸ ಸ್ಥಳವನ್ನು ಬದಲಾಯಿಸುತ್ತಾ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸುತ್ತಿದ್ದರು. ಕೊನೆಗೂ ಅವರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ.

ಸರಗಳ್ಳತನ ಹಾಗೂ ರೌಡಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದ ಇಬ್ಬರನ್ನೂ ಈ ಹಿಂದೆ ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಇಬ್ಬರೂ ಜಾಮೀನು ಪಡೆದು ಜೈಲಿನಿಂದ ಬಿಡುಗಡೆ ಆಗಿದ್ದರು. ಆದರೆ  ಕ್ರಿಮಿನಲ್ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದರು. ತಾವು ವಾಸಿಸುತ್ತಿದ್ದ ಮನೆಗಳಿಗೂ ಬರುತ್ತಿರಲಿಲ್ಲ. ಹೋಟೆಲ್‌ಗಳಲ್ಲೇ ವಾಸ್ತವ್ಯ ಹೂಡುತ್ತಿದ್ದರು. ಪದೇ ಪದೇ ಹೋಟೆಲ್‌ ಗಳನ್ನು ಬದಲಾಯಿಸುತ್ತಿದ್ದರಿಂದ ಪೊಲೀಸರಿಗೆ ಹುಡುಕಾಡಲು ಕಷ್ಟವಾಗಿತ್ತು.

ಫ್ರೇಜರ್‌ಟೌನ್‌ನ ಅವೆನ್ಯೂ ಇನ್‌ ಹೋಟೆಲ್‌ ನಲ್ಲಿ ವಾಸ್ತವ್ಯ ಮಾಡಿದ್ದ ಮಾಹಿತಿ ತಿಳಿದು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಲಾಗಿದೆ. ಜಬೀವುದ್ದೀನ್‌ ವಿರುದ್ದ 36 ಪ್ರಕರಣಗಳಲ್ಲಿ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಲಾಗಿದ್ದರೆ ಮೆಹತಾಬ್‌ ವಿರುದ್ಧ 11 ಪ್ರಕರಣಗಳಲ್ಲಿ ಜಾಮೀನು ರಹಿತ ಬಂಧನ ವಾರಂಟ್ ಹೊರಡಿಸಲಾಗಿತ್ತು.

More articles

Latest article