ಪ್ರತ್ಯೇಕ ಮೀಸಲಾತಿ ಘೋಷಿಸುವವರೆಗೆ ಪ್ರತಿಭಟನೆಯಿಂದ ಹಿಂದೆ ಸರಿಯುವುದಿಲ್ಲ; ಅಲೆಮಾರಿಗಳ ಸಂಘಟನೆಗಳ ಎಚ್ಚರಿಕೆ

Most read

ಬೆಂಗಳೂರು: ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ವರದಿ ಪ್ರಕಾರ ಅಲೆಮಾರಿ ಸಮುದಾಯಗಳಿಗೆ ಶೇ.1ರಷ್ಟು ಪ್ರತ್ಯೇಕ ಮೀಸಲಾತಿಯನ್ನು ಕಲ್ಪಿಸಬೇಕೆಂದು ಅಲೆಮಾರಿಗಳ ವಿವಿಧ ಸಂಘಟನೆಗಳು ಬೆಂಗಳೂರಿನಲ್ಲಿ ಇಂದು ಪ್ರತಿಭಟನೆ ನಡೆಸಿದವು.

ಕರ್ನಾಟಕದ ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಮಹಾಒಕ್ಕೂಟ ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟ (ರಾಜ್ಯ ಸಮಿತಿ)ಗಳು ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನಾ ಸಮಾವೇಶ ಹಮ್ಮಿಕೊಂಡು ಪ್ರತ್ಯೇಕ ಮೀಸಲಾತಿಗೆ ಒಕ್ಕೊರಲ ಆಗ್ರಹ ಮಂಡಿಸಿದವು.

ಒಂದುವೇಳೆ ಅಲೆಮಾರಿ ಸಮುದಾಯಗಳಿಗೆ ಮೀಸಲಾತಿ ಕಲ್ಪಿಸದೆ ಇದ್ದಲ್ಲಿ ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ಮುತ್ತಿಗೆ ಹಾಕುವುದಾಗಿಯೂ ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು. ಇದೇ ಸಂದರ್ಭದಲ್ಲಿ ತಮ್ಮ ಪ್ರತ್ಯೇಕ ಮೀಸಲಾತಿಯ ಬೇಡಿಕೆ ಈಡೇರುವವರೆಗೆ ಫ್ರೀಡಂ ಪಾರ್ಕ್‌ನಲ್ಲಿ ಆರಂಭವಾಗಿರುವ ಪ್ರತಿಭಟನೆಯಿಂದ  ಹಿಂದೆ ಸರಿಯುವುದಿಲ್ಲ ಎಂದೂ ಎಚ್ಚರಿಕೆ ನೀಡಿದೆ.

ಕಳೆದ 35 ವರ್ಷಗಳಿಂದ ಅಲೆಮಾರಿ ಸಮುದಾಯಗಳು ಒಳಮೀಸಲಾತಿಗಾಗಿ ನಡೆಸಿದ ಹೋರಾಟವನ್ನು ಸರ್ಕಾರ ಪರಿಗಣಿಸಿಲ್ಲ. ಸರ್ಕಾರದ ನಿರ್ಧಾರ ಸಾಮಾಜಿಕ ನ್ಯಾಯದ ವಿರುದ್ಧವಾಗಿದೆ ಮತ್ತು ಸುಪ್ರೀಂ ಕೋರ್ಟ್‌ನ ಆಗಸ್ಟ್ 1, 2024ರ ತೀರ್ಪು ಮತ್ತು ಡಾ. ನಾಗಮೋಹನ್ ದಾಸ್ ಆಯೋಗದ ವರದಿಗೆ ವಿರುದ್ಧವಾಗಿದೆ ಆರೋಪಿಸಿದರು.

ಮೀಸಲಾತಿಯ ಒಳವರ್ಗೀಕರಣದ ಮುಖ್ಯ ಉದ್ದೇಶ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿರುವ, ಸಾರ್ವಜನಿಕ ವಲಯದಲ್ಲಿ ಸೂಕ್ತ ಪ್ರಾತಿನಿಧ್ಯ ಸಿಗದೆ ಇರುವ ಸಮುದಾಯಗಳಿಗೆ ಹೆಚ್ಚಿನ ಅವಕಾಶ ನೀಡುವುದೇ ಆಗಿದೆ. ನಾಗಮೋಹನ್ ದಾಸ್ ಆಯೋಗವು ಅಲೆಮಾರಿ ಸಮುದಾಯಗಳನ್ನು ‘ಪ್ರವರ್ಗ ಎ’ ಅಡಿಯಲ್ಲಿ ಗುರುತಿಸಿ, ಅವರಿಗೆ ಶೇ.1ರಷ್ಟು ಮೀಸಲಾತಿ ನೀಡಬೇಕೆಂದು ಶಿಫಾರಸು ಮಾಡಿತ್ತು. ಆದರೆ, ಸರ್ಕಾರ ಅಲೆಮಾರಿಗಳನ್ನು ತುಲನಾತ್ಮಕವಾಗಿ ಅಭಿವೃದ್ಧಿ ಹೊಂದಿದ ಪ್ರವರ್ಗ ‘ಡಿ’ ಜೊತೆ ಸೇರಿಸಿ, ವಾಸ್ತವದಲ್ಲಿ ಮೀಸಲಾತಿಯನ್ನು ನಿರಾಕರಿಸಿದೆ ಎಂದು ಲೆಮಾರಿಗಳ ಮುಖಂಡರು ಕಿಡಿ ಕಾರಿದ್ದಾರೆ.

ತಮಿಳುನಾಡು ಮತ್ತು ತೆಲಂಗಾಣ ಸರ್ಕಾರಗಳ ಮಾದರಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕ ಮೀಸಲಾತಿ ಕಲ್ಪಿಸಬೇಕು.ಅಂದರೆ  59 ಅತಿಸೂಕ್ಷ್ಮ ಅಲೆಮಾರಿ ಸಮುದಾಯಗಳಿಗೆ ‘ಪ್ರವರ್ಗ ಎ’ ಅಡಿಯಲ್ಲಿ ಶೇ. 1ರಷ್ಟು ಪ್ರತ್ಯೇಕ ಮೀಸಲಾತಿಯನ್ನು ಒದಗಿಸಬೇಕು. ಜತೆಗೆ ಪರಿಶಿಷ್ಟ ಜಾತಿಗಳಿಗಾಗಿ ಸರ್ಕಾರವು ವಿಶೇಷ ಘಟಕ ಯೋಜನೆಯಲ್ಲಿ (Special Component Plan) ಮೀಸಲಿರಿಸುವ ಹಣದಲ್ಲಿ ಶೇ.1ರಷ್ಟನ್ನು ಅಸ್ಪೃಶ್ಯ ಅಲೆಮಾರಿ ಸಮುದಾಯಗಳ ಸಬಲೀಕರಣಕ್ಕಾಗಿ ಕಾಯ್ದಿರಿಸಬೇಕು ಮತ್ತು ಅವರ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮವನ್ನು ಸ್ಥಾಪಿಸಬೇಕು ಎಂದೂ ಸಭೆ ಆಗ್ರಹಪಡಿಸಿದೆ.

ಅಲೆಮಾರಿಗಳ ಹೋರಾಟ ಪಕ್ಷಾತೀತವಾಗಿದ್ದು, ಯಾವುದೇ ರಾಜಕೀಯ ಪಕ್ಷವು ಇದನ್ನು ದುರುಪಯೋಗಪಡಿಸಿಕೊಳ್ಳಲು ಅವಕಾಶ ನೀಡುವುದಿಲ್ಲ. ಒಂದು ವೇಳೆ ಸರ್ಕಾರ ಅಲೆಮಾರಿಗಳ ಬೇಡಿಕೆಗಳನ್ನು ಈಡೇರಿಸದಿದ್ದರೆ, ‘ನ್ಯಾಯ ಅಥವಾ ಜೈಲು’ ಎಂಬ ಘೋಷಣೆಯೊಂದಿಗೆ ಕುಟುಂಬ ಸಹಿತ ಮುಂದಿನ ಬೆಳಗಾವಿ ಚಳಿಗಾಲದ ಅಧಿವೇಶನಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದೆ.

More articles

Latest article