“ಟ್ರೆಂಡಿಂಗ್ ಕತೆಗಳ ಸುತ್ತಮುತ್ತ…”

Most read

ಇಂದು “ಜವಾನ್” ಚಿತ್ರವು ಬಿಡುಗಡೆಯಾದ ನಂತರ ತಲೆಗೆಲ್ಲ ಬ್ಯಾಂಡೇಜು ಸುತ್ತಿಕೊಂಡು ಓಡಾಡುತ್ತಿರುವ ಹುಡುಗರನ್ನು ಕಂಡಾಗ ನನಗೆ ಅಚ್ಚರಿಯಾಗುವುದಿಲ್ಲ. ಏಕೆಂದರೆ ಈ ಬಗೆಯ ಅಭಿಮಾನಿಗಳು ಮೈಕಲ್ ಜಾಕ್ಸನ್-ರಾಜೇಶ್ ಖನ್ನಾರ ಕಾಲದಲ್ಲೂ ಇದ್ದರು. ಒಟ್ಟಿನಲ್ಲಿ ಕಾಲವು ಅದ್ಯಾವುದೇ ಆಗಿರಲಿ. ಆದರೆ ಟ್ರೆಂಡ್ ಗಳ ಕತೆ ಮಾತ್ರ ಕೊನೆಯಾಗುವುದಿಲ್ಲ –ಪ್ರಸಾದ್‌ ನಾಯ್ಕ್‌, ದೆಹಲಿ

ಮೆಟ್ರೋ ಟೈಮ್ಸ್‌ – 6

ಒಂದು ಚಿಕ್ಕ ಕತೆ.

ಈ ಕತೆಯ ಹೀರೋ ಅಥವಾ ಹೀರೋಯಿನ್ ನೀವೇ ಎಂದಿಟ್ಟುಕೊಳ್ಳೋಣ.

ನೀವು ಎಲ್ಲಿಗೋ ಹೊರಟಿದ್ದೀರಿ ಅಥವಾ ತಲುಪಿದ್ದೀರಿ. ಪ್ರಯಾಣದಲ್ಲಿದ್ದೀರಿ ಎಂದರೂ ಸರಿ. ವಿಹಾರ, ವಿಶ್ರಾಂತಿ ಆದರೂ ಓಕೆ. ಅಚಾನಕ್ಕಾಗಿ ಹೊಟ್ಟೆಯು ತಳಮಳಿಸಿದಂತಾಗುತ್ತದೆ. ಸಣ್ಣಗೆ ಶುರುವಾಗುವ ಇಂಥದ್ದೊಂದು ಅನುಭವವು ಕ್ರಮೇಣ ನಿಮ್ಮನ್ನು ಇನ್ನಿಲ್ಲದಂತೆ ಹಿಂಡಿ ಹಾಕುತ್ತದೆ. ನಿಮಗೀಗ ಅರ್ಜೆಂಟಾಗಿ ಶೌಚಕ್ಕೆ ಹೋಗಬೇಕು. ಹೋಗಬೇಕು ಎಂದರೆ ಹೋಗಲೇಬೇಕು, ಅಷ್ಟೇ. ಅಷ್ಟರಮಟ್ಟಿನ ತುರ್ತು. ಆದರೆ ಅಲ್ಲಿ ಯಾವುದೇ ಶೌಚದ ಸೌಲಭ್ಯವಿರುವುದಿಲ್ಲ. ಇದ್ದರೂ ನೀವಿರುವ ಸಮಯ, ಸಂದರ್ಭಗಳು ನಿಮಗೆ ಶೌಚಕ್ಕೆ ಹೋಗಲು ಬಿಡುವುದಿಲ್ಲ.

ನೀವು ಆಗೇನು ಮಾಡುತ್ತೀರಿ?

ಇಂತಹ ಫಜೀತಿಯ ಅನುಭವಗಳು ನಮ್ಮಲ್ಲಿ ಬಹುತೇಕ ಎಲ್ಲರಿಗೂ ಆಗಿರುತ್ತವೆ. ಅದನ್ನು ಹೇಗೋ ನಿಭಾಯಿಸಿಯೂ ಇರುತ್ತೇವೆ. ಆದರೆ ನಂತರ ಈ ಬಗ್ಗೆ ಅಷ್ಟೇನೂ ಗಂಭೀರವಾಗಿ ಯೋಚಿಸಿರುವುದಿಲ್ಲ. ಏಕೆಂದರೆ ಎಲ್ಲಾ ಕಡೆ ಹೇಳಿಕೊಂಡು ಕೊಚ್ಚಿಕೊಳ್ಳಲು ಅದು ಸಾಹಸಗಾಥೆಯೇನಲ್ಲ. ಮೋಜಿನ ಪಾರ್ಟಿಗಳಲ್ಲಿ ತಮಾಷೆಗೆಂದು ಹೇಳಿದರೆ ಉಗಿಸಿಕೊಳ್ಳುವ ಸಾಧ್ಯತೆಗಳೇ ಹೆಚ್ಚು. ಎಲ್ಲದಕ್ಕಿಂತ ಹೆಚ್ಚಾಗಿ ತಮ್ಮನ್ನು ತಾವೇ ಮುಜುಗರಕ್ಕೀಡು ಮಾಡುವ ಪ್ರಸಂಗಗಳಿವು. ಅಂತೂ ಪರಿಸ್ಥಿತಿಯು ನಮ್ಮ ನಿಯಂತ್ರಣಕ್ಕೆ ಬಂತಲ್ಲ ಎಂದು ನಿಟ್ಟುಸಿರಿಟ್ಟು ಸಹಜವಾಗಿ ಅದನ್ನು ಮರೆತಿರುತ್ತೇವೆ. ಬದುಕು ಎಂದಿನಂತೆ ಮುಂದಕ್ಕೆ ಸಾಗಿರುತ್ತದೆ.

ವಿಶೇಷವೆಂದರೆ ಲೇಖಕ ರ್ಯಾನ್ ಜೇಕಬ್ಸನ್ ಇಂಥದ್ದೇ ವಿಚಿತ್ರ ಅನುಭವಗಳನ್ನು ಹಲವರಿಂದ ಕಲೆಹಾಕಿ “ಟಾಯ್ಲೆಟ್ ಟೇಲ್ಸ್” (ಶೌಚದ ಕತೆಗಳು) ಎಂಬ ಪುಸ್ತಕವೊಂದನ್ನು ತಂದಿದ್ದಾರೆ. ಹಲವು ಪೇಚಿನ ಸಂದರ್ಭಗಳಲ್ಲಿ ಸಿಕ್ಕಿಹಾಕಿಕೊಂಡು, ಅದೆಷ್ಟೋ ಮಂದಿ ಫಜೀತಿಗೊಳಗಾದ ಪ್ರಸಂಗಗಳನ್ನು ನಾವು ಈ ಪುಟ್ಟ ಪುಸ್ತಕದಲ್ಲಿ ಓದಬಹುದು. ಈ ಬಗೆಯ ಕಂಟೆಂಟ್ ಅನ್ನು ಕೂಡ ಪುಸ್ತಕ ರೂಪದಲ್ಲಿ ತರಬಹುದೇ ಎಂದು ನನ್ನನ್ನು ಯೋಚನೆಗೆ ದೂಡಿದ ಕೃತಿಯಿದು.

ಸಾಮಾನ್ಯವಾಗಿ ಪುಸ್ತಕಗಳ ಲೋಕದಲ್ಲಿ ಎಂತೆಂಥಾ ಹೊಸ ಟ್ರೆಂಡ್ ಗಳು ಸೃಷ್ಟಿಯಾಗುತ್ತಿವೆ ಎಂಬುದನ್ನು ಕುತೂಹಲದಿಂದ ಗಮನಿಸುತ್ತಿರುವವನು ನಾನು. “ಶೌಚ ಸಾಹಿತ್ಯ” (ಹೀಗೆಂದು ಕರೆಯಬಹುದೇ? ಗೊತ್ತಿಲ್ಲ!) ವನ್ನು ಬರೆದಿರುವುದರಲ್ಲಿ ರ್ಯಾನ್ ಮೊದಲನೆಯವನೇನಲ್ಲ. ನಿಸ್ಸಂದೇಹವಾಗಿ ಕೊನೆಯವನೂ ಆಗುವುದಿಲ್ಲ. ಆದರೆ ಟಾಯ್ಲೆಟ್ ಲೋಕದ ಈ ಆಯಾಮವನ್ನು ಕೂಡ ಸತ್ಯಕತೆಗಳಾಗಿ ಓದುಗರಿಗಾಗಿ ನೀಡಬಹುದು ಎಂಬ ಹೊಸ ಟ್ರೆಂಡ್ ಅನ್ನು ಸೃಷ್ಟಿಸುವುದು ಲೇಖಕನ ಪ್ರಯತ್ನವಾಗಿರಬಹುದು. ಈ ಸಾಧ್ಯತೆಯನ್ನು ನಾನು ಅಷ್ಟು ಸುಲಭವಾಗಿ ಅಲ್ಲಗಳೆಯಲಾರೆ.

ಏಕೆಂದರೆ ನಮ್ಮ ನಡುವಿನ ಪ್ರತಿಯೊಬ್ಬ ಸೃಷ್ಟಿಕರ್ತನೂ ಒಂದಲ್ಲ ಒಂದು ಬಾರಿ ಹೊಸದೊಂದು “ಟ್ರೆಂಡ್” ಅನ್ನು ಸೃಷ್ಟಿಸಲು ಪ್ರಯತ್ನಿಸಿರುತ್ತಾನೆ. ಕ್ರಿಕೆಟಿಗ ಧೋನಿಯ ಕೇಶಶೈಲಿಯನ್ನು ನಮ್ಮ ಕಾಲದ ಅನೇಕ ಹುಡುಗರು ಪ್ರಯತ್ನಿಸಿದ್ದು, ಇದರಿಂದಾಗಿ ಮನೆಯವರಿಂದ ಧೋನಿಯ ಸಿಕ್ಸರ್ ಗಿಂತಲೂ ಭರ್ಜರಿಯಾದ ಒದೆತಗಳನ್ನು ತಿಂದಿದ್ದು… ಹೀಗೆ ಹಲವು ಸಂಗತಿಗಳು ನನಗೆ ನೆನಪಿವೆ. ನನ್ನ ಸಹಪಾಠಿ ವಲಯದಲ್ಲಿದ್ದ ಓದುಗರು ಆಗೆಲ್ಲ ಹ್ಯಾರಿ ಪಾಟರ್ ಸರಣಿಯ ಪುಸ್ತಕಗಳನ್ನು ಎದ್ದೂ ಬಿದ್ದೂ ಓದೋರು. ಏಕೆಂದರೆ ಹ್ಯಾರಿ ಪಾಟರ್ ಓದಿಲ್ಲ ಅಂತಾದರೆ ನೀನು ಓದುಗನೇ ಅಲ್ಲ ಎಂಬಂತಹ ಟ್ರೆಂಡ್ ಒಂದು ಆಗಿನ ದಿನಗಳಲ್ಲಿ ಸೃಷ್ಟಿಯಾಗಿತ್ತು. ಇಂದು “ಜವಾನ್” ಚಿತ್ರವು ಬಿಡುಗಡೆಯಾದ ನಂತರ ತಲೆಗೆಲ್ಲ ಬ್ಯಾಂಡೇಜು ಸುತ್ತಿಕೊಂಡು ಓಡಾಡುತ್ತಿರುವ ಹುಡುಗರನ್ನು ಕಂಡಾಗ ನನಗೆ ಅಚ್ಚರಿಯಾಗುವುದಿಲ್ಲ. ಏಕೆಂದರೆ ಈ ಬಗೆಯ ಅಭಿಮಾನಿಗಳು ಮೈಕಲ್ ಜಾಕ್ಸನ್-ರಾಜೇಶ್ ಖನ್ನಾರ ಕಾಲದಲ್ಲೂ ಇದ್ದರು. ಒಟ್ಟಿನಲ್ಲಿ ಕಾಲವು ಅದ್ಯಾವುದೇ ಆಗಿರಲಿ. ಆದರೆ ಟ್ರೆಂಡ್ ಗಳ ಕತೆ ಮಾತ್ರ ಕೊನೆಯಾಗುವುದಿಲ್ಲ.

ಇವು ನಿರುಪದ್ರವಿ ಟ್ರೆಂಡ್ ಗಳ ಕತೆಯಾಯಿತು. ಆದರೆ ಇವುಗಳನ್ನು ಜಾಗತಿಕ ಆಯಾಮದಲ್ಲಿ ನೋಡಿದರೆ ಉದ್ಯಮ-ಲಾಭ-ಮಾರುಕಟ್ಟೆಯ ಹೊಳಹುಗಳೂ ನಿಧಾನವಾಗಿ ಕಾಣತೊಡಗುತ್ತವೆ. ಅಷ್ಟಕ್ಕೂ “ಟ್ರೆಂಡ್” ಎಂದರೇನು? ಸರಳ ಭಾಷೆಯಲ್ಲಿ ಹೇಳುವುದಾದರೆ ದೊಡ್ಡ ಬದಲಾವಣೆಯನ್ನು ತರುವ ಯಾವುದಾದರೊಂದು ಹೊಸ ಬೆಳವಣಿಗೆಯನ್ನು ಟ್ರೆಂಡ್ ಅನ್ನಬಹುದು. ಇದಕ್ಕೊಂದು ಒಳ್ಳೆಯ ಉದಾಹರಣೆಯೆಂದರೆ ಫ್ಯಾಷನ್ ಉದ್ಯಮ. ನಾವು ಹೇಗಿದ್ದರೆ ಚಂದ ಎನ್ನುವುದನ್ನು ಯಾವುದೋ ದೇಶದ, ಯಾವುದೋ ದೈತ್ಯ ಕಂಪೆನಿಯಲ್ಲಿ ಕೂತಿರುವ, ಕೆಲ ಬುದ್ಧಿವಂತರ ತಂಡಗಳು ನಿರ್ಧರಿಸುತ್ತವೆ. ಇದಕ್ಕೆ ತಕ್ಕಂತೆ ಬೆಳ್ಳಗೆ-ತೆಳ್ಳಗಿರುವುದೇ ಸೌಂದರ್ಯ, ಕಪ್ಪಗಿರುವುದು ಕುರೂಪ… ಇತ್ಯಾದಿ ಅರೆಬೆಂದ ವ್ಯಾಖ್ಯೆಗಳನ್ನು ಸೃಷ್ಟಿಸಿ, ಹಲವು ಬಗೆಯ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡಲಾಗುತ್ತದೆ. ಇನ್ನು ಇಲ್ಲಿ ಲಾಭವೇ ಅಂತಿಮ ಉದ್ದೇಶವಾಗಿರುವುದರಿಂದ ಇವುಗಳನ್ನು ಅನುಷ್ಠಾನಗೊಳಿಸುವ ವೈಖರಿಯೂ ಕೂಡ ಸಹಜವಾಗಿ ವ್ಯವಸ್ಥಿತ ಮಟ್ಟಿನದ್ದಾಗಿರುತ್ತದೆ.

ಹಲವು ವರ್ಷಗಳ ಹಿಂದೆ ಪತ್ರಿಕೆಯೊಂದಕ್ಕಾಗಿ ಇಸ್ಲಾಮಿಕ್ ರಿಪಬ್ಲಿಕ್ ಆಫ್ ಮೌರಿಟಾನಿಯಾ ಎಂಬ ದೇಶದ ಬಗ್ಗೆ ವಿಶೇಷ ಲೇಖನವೊಂದನ್ನು ನಾನು ಸಿದ್ಧಪಡಿಸಿದ್ದೆ. ವಿಶೇಷವೆಂದರೆ ಈ ದೇಶದಲ್ಲಿ ದಪ್ಪಗಿರುವ ಹೆಣ್ಣುಮಕ್ಕಳನ್ನು ಸುಂದರಿಯರೆಂದು ಒಪ್ಪಿಕೊಳ್ಳುವ ನಂಬಿಕೆಯಿದೆ. ಹೀಗಾಗಿ ಇಲ್ಲಿ ಹುಡುಗಿಯರು ದಪ್ಪಗಿದ್ದಷ್ಟು ವಿವಾಹಕ್ಕೆ ಬೇಡಿಕೆ ಹೆಚ್ಚು. ವಧುದಕ್ಷಿಣೆಯೂ ಹೆಚ್ಚು (ಭಾರತದಲ್ಲಿ ವರದಕ್ಷಿಣೆಯಿದ್ದಂತೆ ಇಲ್ಲಿ ವಧುದಕ್ಷಿಣೆಯ ರೂಢಿಯಿದೆ). ಹೀಗಾಗಿ ಹೆಣ್ಣುಮಕ್ಕಳ ತೂಕವನ್ನು ಒತ್ತಾಯ ಪೂರ್ವಕವಾಗಿ ಹೆಚ್ಚಿಸುವ ಅಮಾನವೀಯ, ಭಯಾನಕ ಕ್ಯಾಂಪುಗಳು ಇಲ್ಲಿ ಕಾಣಸಿಗುವ ಸಾಮಾನ್ಯ ದೃಶ್ಯಗಳಲ್ಲೊಂದು. ಹಾಗೆ ನೋಡಿದರೆ ಹೆಣ್ಣುಮಕ್ಕಳು ದಪ್ಪಗಿದ್ದರೇನೇ ಚಂದ ಅನ್ನುವಂಥದ್ದು ಮೌರಿಟಾನಿಯಾದಲ್ಲಿ ಚಾಲ್ತಿಯಲ್ಲಿರುವ ಒಂದು ದೀರ್ಘಾವಧಿಯ ಸಾಂಪ್ರದಾಯಿಕ ಟ್ರೆಂಡ್. ಮುಖ್ಯವಾಹಿನಿಯ ಫ್ಯಾಷನ್ ಉದ್ಯಮದಷ್ಟು ಇದು ಜಾಗತಿಕ ಮಟ್ಟದಲ್ಲಿ ಪ್ರಚಲಿತವಾಗಿಲ್ಲ ಮತ್ತು ಅಲ್ಲಿರುವಷ್ಟು ಆರ್ಥಿಕ ಮೌಲ್ಯವಿಲ್ಲ ಅನ್ನುವುದೊಂದನ್ನು ಬಿಟ್ಟರೆ ಅದಕ್ಕೂ ಇದಕ್ಕೂ ಹೆಚ್ಚಿನ ವ್ಯತ್ಯಾಸಗಳೇನಿಲ್ಲ. ಏಕೆಂದರೆ ಸೌಂದರ್ಯವನ್ನು ದೇಹದ ತೂಕದೊಂದಿಗೆ ತಕ್ಕಡಿಯಲ್ಲಿ ಹಾಕುವುದೇ ಒಂದು ಬಗೆಯ ಮೂರ್ಖತನ.

ಇದೇ ಹಿನ್ನೆಲೆಯನ್ನಿಟ್ಟುಕೊಂಡು ಸುದ್ದಿಯನ್ನೂ ನಾನೀಗ ಟ್ರೆಂಡ್ ಪರಿಕಲ್ಪನೆಯ ಜೊತೆಗೆ ಇಲ್ಲಿ ಎಳೆದು ತರುತ್ತಿದ್ದೇನೆ. ಏಕೆಂದರೆ ಸುದ್ದಿಗೂ ಟ್ರೆಂಡಿಗೂ ಬಹಳ ಸಾಮ್ಯತೆಗಳಿವೆ. ಎರಡೂ ನಮ್ಮ ದೈನಂದಿನ ಜೀವನದಲ್ಲಿ ನಿತ್ಯವೂ ಬಂದುಹೋಗುವ ಅಂಶಗಳು. ಎರಡಕ್ಕೂ ಇರುವ ಆಯಾಮಗಳು ಹಲವು. ಎರಡನ್ನೂ ಬಹಳ ಚಾಕಚಕ್ಯತೆಯಿಂದ ಸೃಷ್ಟಿಸಲಾಗುತ್ತದೆ ಮತ್ತು ಕೆಲ ಕಾಲದವರೆಗೆ ಜೀವಂತವಾಗಿಡಲಾಗುತ್ತದೆ. ಇವೆರಡರ ಹಿಂದೆಯೂ ಹಲವು ವ್ಯಕ್ತಿ/ಸಮುದಾಯಗಳ ಮತ್ತು ಸಂಸ್ಥೆಗಳ ಹಿತಾಸಕ್ತಿಯನ್ನು ಕಾಪಾಡುವ ಶಕ್ತಿಗಳು ಸದಾ ಯುದ್ಧಸನ್ನದ್ಧರಾಗಿ ಕೆಲಸ ಮಾಡುತ್ತಿರುತ್ತವೆ. ಎಲ್ಲದಕ್ಕಿಂತ ಹೆಚ್ಚಾಗಿ ಇವರೆಡನ್ನು ಫಾಲೋ ಮಾಡುವುದು ಅಥವಾ ಬಿಡುವುದು ಸಂಪೂರ್ಣವಾಗಿ ನಮ್ಮ ಆಯ್ಕೆಗೆ ಬಿಟ್ಟಿರುವುದು. ಏಕೆಂದರೆ ಇವರೆಡು ನಮ್ಮ ಮೊದಲೂ ಇದ್ದವು. ನಮ್ಮ ನಂತರವೂ ಇರಲಿವೆ.

ಈಗ ಮತ್ತೆ ಸುದ್ದಿಯತ್ತ ಬರೋಣ. ಅಸಲಿಗೆ ಸ್ವಿಸ್ ಲೇಖಕ ರಾಲ್ಫ್ ಡೊಬೆಲಿ ನಾವು ಸುದ್ದಿಗಳನ್ನು ಯಾಕೆ ಓದಬಾರದು ಎಂಬ ಅದ್ಭುತ ಕೃತಿಯೊಂದನ್ನು ಬರೆದಿದ್ದಾನೆ. ತನ್ನ ಪ್ರಖರ ವಿಚಾರಗಳನ್ನು ಬಹಳ ಕನ್ವಿನ್ಸಿಂಗ್ ಆಗಿ ಓದುಗರಿಗಾಗಿ ಪ್ರಸ್ತುತಪಡಿಸಬಲ್ಲ ಕೆಲವೇ ಲೇಖಕರಲ್ಲಿ ಈತನೂ ಒಬ್ಬ. ನಾವು ಸುದ್ದಿಗಳನ್ನು ಏಕೆ ನೋಡಬಾರದು/ಓದಬಾರದು ಎಂದು ರಾಲ್ಫ್ ಹೇಳಿರುವ ಹಲವು ಕಾರಣಗಳಲ್ಲಿ ಕೆಲವು ಆಯ್ದ ಸ್ವಾರಸ್ಯಕರ ಅಂಶಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇನೆ. ಜೊತೆಗೇ ಮೇಲೆ ಹೇಳಿರುವ ಹಿನ್ನೆಲೆಯಲ್ಲಿ ಟ್ರೆಂಡ್ ಪರಿಕಲ್ಪನೆಯನ್ನೂ ಕೂಡ ಸುದ್ದಿಗಳ ಜೊತೆ ತಾಳೆ ಹಾಕಿ ಆವರಣದಲ್ಲಿ ನೀಡಿದ್ದೇನೆ.

– ಸುದ್ದಿಗಳನ್ನು ನೋಡದಿದ್ದ ಪರಿಣಾಮವಾಗಿ ನಾವು ಔಟ್-ಡೇಟೆಡ್ ಏನೂ ಆಗುವುದಿಲ್ಲ. ಸುದ್ದಿಯು ನಿಜಕ್ಕೂ ಅಷ್ಟು ದೊಡ್ಡದಾಗಿದ್ದರೆ ಅಥವಾ ಮುಖ್ಯವಾಗಿದ್ದರೆ ಸ್ವಲ್ಪ ತಡವಾಗಿಯಾದರೂ ಬೇರೆ ಮೂಲಗಳಿಂದ ನಿಮ್ಮನ್ನು ಖಂಡಿತ ತಲುಪುತ್ತದೆ. ಈ ಸುದ್ದಿಯನ್ನು ನಾನೇ ಮೊದಲು ಓದಿದ್ದು/ನೋಡಿದ್ದು ಎಂದು ಬೀಗುವುದರಲ್ಲಿ ಅರ್ಥವೇ ಇಲ್ಲ.

(ಸೋಷಿಯಲ್ ಮೀಡಿಯಾದಿಂದ ನಾಲ್ಕು ದಿನ ವಿರಾಮ ತೆಗೆದುಕೊಂಡಲ್ಲಿ ಪರಿತಪಿಸುವ ಅಗತ್ಯವೇನಿಲ್ಲ. ಮಾರುಕಟ್ಟೆಯಲ್ಲಿ ಐ-ಫೋನ್ ಅಪ್ಡೇಟ್ ಆದಾಗಲೆಲ್ಲ ನಾವು ನಮ್ಮ ಸ್ಮಾರ್ಟ್‍ಫೋನುಗಳನ್ನು ಬದಲಾಯಿಸಬೇಕಿಲ್ಲ. ನಿನ್ನೆ ಏನೋ ಇತ್ತು. ನಾಳೆ ಇನ್ನೇನೋ ಬರುತ್ತದೆ. ಇದು ನಿತ್ಯ ನಿರಂತರ)

– ಸುದ್ದಿಗಳನ್ನು ಪ್ರಸ್ತುತಪಡಿಸುವುದರ ಹಿಂದೆ ಒಂದು ವಿನ್ಯಾಸವಿರುತ್ತದೆ. ಅದು ಪತ್ರಿಕೆ, ನ್ಯೂಸ್ ಚಾನೆಲ್, ರೇಡಿಯೋ, ವೆಬ್-ಸೈಟ್… ಹೀಗೆ ಒಂದೊಂದು ಕಡೆ ಒಂದೊಂದು ಬಗೆಯಲ್ಲಿರುತ್ತದೆ. ಉದಾಹರಣೆಗೆ ವೆಬ್-ಸೈಟ್ ಒಂದರ ಚಿಕ್ಕದೊಂದು ಕಾಲಮ್ಮಿನಲ್ಲಿ “ಉಕ್ರೇನ್ ಯುದ್ಧದಿಂದಾಗಿ ಜಗತ್ತಿನಾದ್ಯಂತ ಕಾಗದಗಳ ಪೂರೈಕೆಗೆ ಹೊಡೆತ ಬಿದ್ದಿದೆ” ಎಂದು ಪ್ರಕಟವಾಗಿದೆ ಎಂದಿಟ್ಟುಕೊಳ್ಳೋಣ. ಈ ಸುದ್ದಿಯು ಒಂದು ಮಟ್ಟಿಗೆ ಸತ್ಯವಾಗಿರಬಹುದು. ಹಾಗಂತ ಅದೊಂದೇ ಕಾರಣ ಎಂದು ಹೇಳಲಿಕ್ಕಾಗುವುದಿಲ್ಲ. ಏಕೆಂದರೆ ಈ ಜಗತ್ತಿನಲ್ಲಿ ಜಿಯೋಪಾಲಿಟಿಕ್ಸ್ ಸೇರಿದಂತೆ ಹಲವು ಸಂಗತಿಗಳು ನಿಜಕ್ಕೂ ಸಂಕೀರ್ಣವಾಗಿರುತ್ತವೆ. ಹಲವು ಸಂಗತಿಗಳು ಒಂದಕ್ಕೊಂದು ಕೊಂಡಿ ಹಾಕಿಕೊಂಡು ಹೊಸ ಸನ್ನಿವೇಶಗಳನ್ನು ಸೃಷ್ಟಿಸಿರುತ್ತವೆ. ನಿಸ್ಸಂದೇಹವಾಗಿ ಅವುಗಳನ್ನು ಕೆಲವೇ ಕೆಲವು ವಾಕ್ಯ ಅಥವಾ ಪ್ಯಾರಾಗ್ರಾಫುಗಳಲ್ಲಿ ಹಿಡಿದಿಡುವುದು ಅಸಾಧ್ಯ. ಹೀಗಾಗಿ ನಿಮಗೆ ಸಿಗುವ ಸುದ್ದಿಯು ಘಟನಾವಳಿಗಳನ್ನು ಸ್ಪಷ್ಟವಾಗಿ ಅರ್ಥೈಸುವ ನಿಟ್ಟಿನಲ್ಲಿ ಬಹುತೇಕ ಅಪೂರ್ಣವೇ ಆಗಿರುತ್ತವೆ.

(ಕೆಲ ಚಿತ್ರಗಳು ಅಥವಾ ವೀಡಿಯೋಗಳು ಜಗತ್ತಿನಾದ್ಯಂತ ವೈರಲ್ ಆದ ಮಾತ್ರಕ್ಕೆ ಸದಾ ಸತ್ಯವೇ ಆಗಿರಬೇಕು ಅಂತೇನಿಲ್ಲ. ಈ ಕಂಟೆಂಟ್ ಗಳ ಹಿನ್ನೆಲೆಗಳನ್ನು ಹುಡುಕುತ್ತಾ ಹೋದರೆ ಅದೇ ಒಂದು ದೊಡ್ಡ ಸಾಹಸವಾಗಬಹುದು)

– ಹಿಂದೆ ಸಾಧಕರಷ್ಟೇ ಸೆಲೆಬ್ರಿಟಿಗಳಾಗುತ್ತಿದ್ದರು. ಇಂದು ತಲೆಬುಡವಿಲ್ಲದ ಕೆಲಸಗಳೂ, ಹಾಸ್ಯಾಸ್ಪದ ವ್ಯಕ್ತಿಗಳೂ ಕ್ಯಾಮೆರಾಗಳಿಗೆ ವಸ್ತುವಾಗುತ್ತವೆ. ಸೆಲೆಬ್ರಿಟಿ ಎಂಬ ಪದಕ್ಕೆ ಸದ್ಯದ ಕಾಲಮಾನದಲ್ಲಿ ಅರ್ಥವೇ ಇಲ್ಲ. ಉದಾಹರಣೆಗೆ ಇಂತಿಂಥಾ ಚಿತ್ರನಟಿಯೊಬ್ಬಳಿಗೆ ವಿಚ್ಛೇದನದಿಂದಾಗಿ ಇಷ್ಟಿಷ್ಟು ಮಿಲಿಯನ್ ಡಾಲರ್ ಪರಿಹಾರ ಸಿಕ್ಕಿತು, ಇಂದು ವ್ಯಕ್ತಿಯೊಬ್ಬ ಎರಡು ಸಾವಿರ ಕಬ್ಬಿಣದ ಮೊಳೆಗಳನ್ನು ನುಂಗಿ ವಿಶ್ವದಾಖಲೆ ನಿರ್ಮಿಸಿದ… ಇಂಥಾ ಕೆಲಸಕ್ಕೆ ಬಾರದ ಸುದ್ದಿಗಳಿಂದಾಗಿ ನಿಮಗೆ ನಯಾಪೈಸೆಯ ಪ್ರಯೋಜನವಿಲ್ಲ.

(ನಟಿಯೊಬ್ಬರು ಮಾಲ್ಡೀವ್ಸ್ ದ್ವೀಪಕ್ಕೆ ಹೋಗಿ ವಿಹಾರ ಮಾಡಿಬಂದ ಚಿತ್ರವೊಂದು ಎಲ್ಲೆಡೆ ಟ್ರೆಂಡಿಂಗ್ ಆಗುತ್ತಿದ್ದರೆ ಮತ್ತು ನೀವು ಒಂದು ಪಕ್ಷ ಈ ಸುದ್ದಿಯನ್ನು ಮಿಸ್ ಮಾಡಿಕೊಂಡಿದ್ದರೆ ತಲೆ ಚಚ್ಚಿಕೊಳ್ಳುವಂಥದ್ದೇನಿಲ್ಲ. ಟೇಕ್ ಇಟ್ ಈಸಿ!)

– ಸುದ್ದಿಗಳು ನಿಮಗೆ ತಕ್ಷಣದ ಮಾಹಿತಿಯನ್ನು ನೀಡಬಲ್ಲವೇ ಹೊರತು ಅವುಗಳು ನಿಮ್ಮ ಜ್ಞಾನವನ್ನು ಹೆಚ್ಚಿಸಲಾರವು. ಹೀಗಾಗಿ ವಿಷಯವೊಂದರ ಬಗ್ಗೆ ಆಳವಾದ ಜ್ಞಾನವನ್ನು ಪಡೆದುಕೊಳ್ಳಲು ಸುದ್ದಿಗಳನ್ನು ಅವಲಂಬಿಸುವುದಕ್ಕಿಂತ, ಆಯಾ ವಿಷಯಗಳ ಬಗ್ಗೆ ತಜ್ಞರಿಂದ ಬರೆದ ಅಂಕಣಗಳು ಅಥವಾ ಸಂಬಂಧಿ ಪುಸ್ತಕಗಳನ್ನು ಓದುವುದು ಹೆಚ್ಚು ಉಪಕಾರಿಯಾಗಬಲ್ಲದು. (ಜಾಹೀರಾತು ಆಕರ್ಷಕವಾಗಿದ್ದ ಮಾತ್ರಕ್ಕೆ ಉತ್ಪನ್ನಗಳೂ ಅದ್ಭುತವಾಗಿರಬೇಕು ಅಂತೇನಿಲ್ಲ)

ಹೀಗೆ ನಾವು ಬೇಕೆಂದರೂ ಬೇಡವೆಂದರೂ ಸುದ್ದಿಗಳು ಹಲವು ರೂಪಗಳಲ್ಲಿ ನಮ್ಮ ನಡುವೆ ಸದಾ ಇರುತ್ತವೆ ಮತ್ತು ಮುಂದೆಯೂ ಇರಲಿವೆ. ಇದು ಟ್ರೆಂಡ್ ಗಳ ವಿಚಾರದಲ್ಲೂ ಸತ್ಯ. ಟ್ರೆಂಡ್ ಗಳ ಬಗ್ಗೆ ಬರೆಯುವಾಗ ಸಾಮಾನ್ಯವಾಗಿ “ಸಮೂಹಸನ್ನಿ” ಎಂಬ ಪದವನ್ನು ಕನ್ನಡದಲ್ಲಿ ಪ್ರಯೋಗಿಸಲಾಗುತ್ತದೆ. ಟ್ರೆಂಡ್ ಅನ್ನು ಸಮರ್ಥವಾಗಿ ಹಿಡಿದಿಡಲು ಒಂದಿಷ್ಟು ಸತ್ಯವೂ, ಒಂದಿಷ್ಟು ವ್ಯಂಗ್ಯವೂ ಅಡಗಿರುವ ಈ ಪದಕ್ಕಿಂತ ಒಳ್ಳೆಯ ಪದವು ನಮಗೆ ಸಿಗಲಾರದೇನೋ.

“ಟ್ರೆಂಡ್” ಎಂಬ ಚಿಕ್ಕ ಪದವೊಂದರ ಮೂಲವನ್ನು ಬೆನ್ನಟ್ಟಿ ಹೋಗಿದ್ದೆ. ಇಷ್ಟೆಲ್ಲಾ ಬರೆಯಬೇಕಾಯಿತು!

ಪ್ರಸಾದ್‌ ನಾಯ್ಕ್‌, ದೆಹಲಿ

ಸರಕಾರಿ ಸ್ವಾಮ್ಯದ ಸಂಸ್ಥೆಯೊಂದರಲ್ಲಿ ಅಡಿಷನಲ್ ಚೀಫ್ ಎಂಜಿನಿಯರ್ ಆಗಿ ಸೇವೆ ಸಲ್ಲಿಸುತ್ತಿರುವ ಪ್ರಸಾದ್ ನಾಯ್ಕ್ ಪ್ರಸ್ತುತ ದೆಹಲಿ ಮಹಾನಗರದ ನಿವಾಸಿ. “ಹಾಯ್ ಅಂಗೋಲಾ”, “ಸಫಾ”, “ಸ್ನೇಹಗ್ರಾಮದ ಸಂಸತ್ತು” ಮತ್ತು “ಮರ ಏರಲಾರದ ಗುಮ್ಮ” ಇವರ ಪ್ರಕಟಿತ ಕೃತಿಗಳು. ಕನ್ನಡದ ಓದುಗರಿಗೆ ಕತೆಗಾರರಾಗಿ, ಅಂಕಣಕಾರರಾಗಿ ಮತ್ತು ಅನುವಾದಕರಾಗಿ ಪರಿಚಿತರು.

More articles

Latest article