ಕರ್ನಾಟಕ ರಾಜ್ಯದಲ್ಲಿ ಅಂಗನವಾಡಿ ನೌಕರರನ್ನು ಹಲವು ವರ್ಷಗಳಿಂದ ನಮ್ಮನ್ನು ಸರ್ಕಾರಿ ನೌಕರರೆಂದು ಪರಿಗಣಿಸಿ ಹಲವು ಸೌಲಭ್ಯಗಳನ್ನು ನೀಡಿ ಎಂದು ಹೋರಾಟ ಮಾಡುತ್ತಲೇ ಇದ್ದಾರೆ. ಆದರೆ ಗುಜರಾತ್ ಅಂಗನವಾಡಿ ನೌಕರರನ್ನು ಸರ್ಕಾರಿ ನೌಕರರಾಗಿ ಪರಿಗಣಿಸಿ ಎಂಬ ಕಾನೂನು ಹೋರಾಟಕ್ಕೆ ಜಯ ಸಿಕ್ಕಿದ್ದು, ಗುಜರಾತ್ ರಾಜ್ಯದ ಹೈಕೋರ್ಟ್ ಅಂಗನವಾಡಿ ನೌಕರರ ಪರ ಮಹತ್ವದ ತೀರ್ಪು ನೀಡಿದೆ.
ಕೇಂದ್ರ ಸರ್ಕಾರದ ಸಮಗ್ರ ಶಿಶು ಅಭಿವೃದ್ಧಿ ಯೋಜನೆ – ಐಸಿಡಿಎಸ್ ಅಡಿಯಲ್ಲಿ 1983ರಿಂದ 2010ರ ನಡುವಿನ ಅವಧಿಯಲ್ಲಿ ನೇಮಕವಾದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಸಲ್ಲಿಸಿದ್ದ ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡ ಗುಜರಾತ್ ಹೈಕೋರ್ಟ್ ನ್ಯಾಯಮೂರ್ತಿ ನಿಖಿಲ್ ಎಸ್. ಕರಿಯಲ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಮಹತ್ವದ ಆದೇಶ ನೀಡಿದೆ.
ಹತ್ತು ವರ್ಷಗಳಿಗೂ ಹೆಚ್ಚಿನ ಅವಧಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ದಿನಕ್ಕೆ ಆರು ಗಂಟೆಗಳಿಗಿಂತ ಹೆಚ್ಚು ಕೆಲಸ ಮಾಡುತ್ತಿದ್ದಾರೆ. ಆದರೆ, ಅವರಿಗೆ ರಾಜ್ಯ ಸರ್ಕಾರಿ ನೌಕರರಿಗೆ ಸಿಗುವ ಸೌಲಭ್ಯ, ಪ್ರಯೋಜನಗಳು ಸಿಗುತ್ತಿಲ್ಲ ಎಂದು ಅರ್ಜಿಯಲ್ಲಿ ದೂರಲಾಗಿತ್ತು.
ಇದನ್ನು ಆಲಿಸಿದ ಕೋರ್ಟ್, ಸಂಬಳ ವಿಷಯದಲ್ಲಿ ಸರ್ಕಾರಿ ಸೌಲಭ್ಯಗಳ ವಿಷಯದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ತಾರತಮ್ಯ ಆಗುತ್ತಿದೆ ಎಂಬುದು ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ನೀಡಲಾಗಿರುವಹೊಣೆ ಮತ್ತು ಅವರ ಕರ್ತವ್ಯ ಬಹಳದೊಡ್ಡದು. ಸರ್ಕಾರಿ ನೌಕರರ ಹೊಣೆ ಮತ್ತು ಕರ್ತವ್ಯಕ್ಕೆ ಹೋಲಿಸಿದರೂ ತಾರತಮ್ಯ ಗೊತ್ತಾಗುತ್ತದೆ ಎಂದು ನ್ಯಾಯಪೀಠ ಹೇಳಿದೆ.
ಈ ಎರಡು ಹುದ್ದೆಗಳನ್ನು ಸರ್ಕಾರಿ ಸೇವೆಯಲ್ಲಿ ಸೇರಿಸಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ನೀತಿಯೊಂದನ್ನು ರೂಪಿಸಬೇಕು. ಆದೇಶ ಪ್ರಕಟವಾದ ಆರು ವಾರಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ವೇತನಕ್ಕೆ ಸಂಬಂಧಿಸಿದಂತೆ ನೀತಿಯೊಂದನ್ನು ರೂಪಿಸಬೇಕು. ಈ ನೀತಿಯ ಪರಿಣಾಮವಾಗಿ ದೇಶದ ಎಲ್ಲಾ ಅಂಗನವಾಡಿ ನೌಕರರಿಗೆ ಸರ್ಕಾರಿ ಪ್ರಯೋಜನಗಳು ದೊರೆಯುವಂತಾಗಬೇಕು ಎಂದು ತೀರ್ಪಿನಲ್ಲಿ ತಿಳಿಸಿದೆ.
ಇನ್ನು ಕರ್ನಾಟಕದಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಇದೇ ರೀತಿ ಹೋರಾಟಕ್ಕೆ ನಿಂತಲ್ಲಿ ಅವರಿಗೆ ಸಲ್ಲಿಬೇಕಾದ ನ್ಯಾಯ ಸಲ್ಲೇ ಸಲ್ಲುತ್ತದೆ ಎಂದು ಈ ತೀರ್ಪಿನಿಂದ ತಿಳಿದುಕೊಳ್ಳಬಹುದಾಗಿದೆ. ಹೀಗಾಗಿ ಈ ನಿಟ್ಟಿನಲ್ಲಿ ಅಂಗನವಾಡಿ ನೌಕರರು ತಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳುವುದಕ್ಕೆ ಮುಂದಾಗಬೇಕಿದೆ.
ಅಂಗನವಾಡಿ ನೌಕರರು ಈಗಾಗಲೇ ಹಲವಾರು ಹೋರಾಟಗಳನ್ನು ಮಾಡಿದ್ದು, ಬಹುತೇಕ ಗೌರವ ಸೌಲಭ್ಯಗಳನ್ನು ಹೋರಾಟದ ಮೂಲಕವೇ ಪಡೆದುಕೊಂಡಿದ್ದಾರೆ. ಆದರೆ ಇನ್ನೂ ಕೆಲವೊಂದು ನ್ಯಾಯಯುತವಾಗಿ ಸಿಗಬೇಕಾಗಿರುವುದನ್ನು ಕಾನೂನು ಮೂಲಕವೇ ಹೋರಾಟ ಮಾಡಿದರೆ ಸಿಗುತ್ತದೆ ಎಂಬುದು ಈ ತೀರ್ಪಿನಲ್ಲಿ ತಿಳಿಯಬಹುದಾಗಿದೆ.