ಬೆಂಗಳೂರು: ಸಾರಿಗೆ ನೌಕರರ ಹಲವು ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಬದ್ಧವಾಗಿದೆ. ಹಾಗೆಯೇ ಅವರೂ ಸಹ ಸರ್ಕಾರದ ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡು ಸಹಕಾರ ನೀಡಬೇಕು ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮನವಿ ಮಾಡಿದ್ದಾರೆ.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಇಂದಿನಿಂದ ಸಾರಿಗೆ ನೌಕರರು ಮುಷ್ಕರ ಆರಂಭಿಸಿದ್ದು, ಡಿಸಿಎಂ ಪ್ರತಿಕ್ರಿಯೆ ನೀಡಿದ್ದಾರೆ.
ಸರ್ಕಾರದ ಪರಿಸ್ಥಿತಿಯನ್ನೂ ಸಾರಿಗೆ ನೌಕರರು ಗಮನದಲ್ಲಿಟ್ಟುಕೊಳ್ಳಬೇಕು. ಸಾರಿಗೆ ನೌಕರರು ಹಠ ಮಾಡುವುದು ಸರಿಯಲ್ಲ. ನೌಕರರು ಸಹಕಾರ ಕೊಡಬೇಕು. ಸಾರಿಗೆ ನೌಕರರ ಜತೆ ಮುಖ್ಯಮಂತ್ರಿಗಳು ಮತ್ತು ಸಾರಿಗೆ ಸಚಿವರು ಸಭೆ ಮಾಡಿದ್ದಾರೆ ಎಂದಿದ್ದಾರೆ.
ಈಡೇರಿಸಲಾಗದ ಬೇಡಿಕೆಯನ್ನು ಈಡೇರಿಸಿ ಎಂದು ಒತ್ತಡ ಹೇರುವುದು ಸರಿಯಲ್ಲ. ಸಾರ್ವಜನಿಕರ ಹಿತ ಮುಖ್ಯ ಎನ್ನುವುದನ್ನು ಸಾರಿಗೆ ನೌಕರರು ಅರ್ಥ ಮಾಡಿಕೊಳ್ಳಬೇಕು. ಹಠ ಮಾಡಬಾರದು. ಕೆಲವು ನೌಕರರು ಕೆಲಸಕ್ಕೆ ಬಂದಿದ್ದಾರೆ. ಅವರಿಗೆ ಅಭಿನಂದನೆ ಎಂದು ಹೇಳಿದ್ದಾರೆ.
ಹಳದಿ ಮೆಟ್ರೊ ಮಾರ್ಗದ ಉದ್ಘಾಟನೆಗೆ ಪ್ರಧಾನಿ ಮೋದಿ ಆಗಸ್ಟ್ 10ರಂದು ಬರುವ ಮಾಹಿತಿ ಬಂದಿದೆ. ಹಾಗಾಗಿ ಅದರ ತಯಾರಿಗೆ ಪರಿಶೀಲನೆ ಮಾಡುತ್ತಿದ್ದೇನೆ. ಸರ್ಕಾರವೂ ಈ ಕಾರ್ಯಕ್ರಮದಲ್ಲಿ ಭಾಗಿಯಾಗಬೇಕಾಗುತ್ತದೆ. ಪ್ರಧಾನಿಗಳ ಬೇರೆ ಕಾರ್ಯಕ್ರಮ ಮತ್ತು ಮೆಟ್ರೊ ಮಾರ್ಗದ ಉದ್ಘಾಟನೆಯ ಸಮಯ ಕುರಿತು ಮಾಹಿತಿ ತಿಳಿಸಿಲ್ಲ ಎಂದು ತಿಳಿಸಿದರು.