ಟೋಟೋ ಪ್ರಶಸ್ತಿ ವಿಜೇತ ನವೀನ್ ತೇಜಸ್ವಿ

Most read

ಅಂಗಿರಸ್ ಟೋಟೋ ಅವರ ಸ್ಮರಣಾರ್ಥವಾಗಿ ಟೋಟೋ ಫಂಡ್ಸ್ ದಿ ಆರ್ಟ್ಸ್ (TFA ) ಕೊಡಲಾಗುವ 2024 ನೇ ಸಾಲಿನ ಟೋಟೋ ಪ್ರಶಸ್ತಿಗೆ ನವೀನ್ ತೇಜಸ್ವಿಗೆ ಭಾಜನರಾಗಿದ್ದಾರೆ. ನೆನ್ನೆ (ಶನಿವಾರ ) ಡೊಮ್ಮಲೂರಿನಲ್ಲಿರುವ ಬೆಂಗಳೂರು ಅಂತಾರಾಷ್ಟ್ರೀಯ ಕೇಂದ್ರ (BIC ) ದಲ್ಲಿ ಸಮಾರಂಭ ನಡೆದಿದ್ದು, ಕನ್ನಡ ಕ್ರಿಯಾತ್ಮಕ ಬರಹ ವಿಭಾಗದಲ್ಲಿ ನವೀನ್ ತೇಜಸ್ವಿಯ ‘ಸುರಗಿ ಮತ್ತು ಬಂಗಾರದ ಕಡ್ಡಿ ಡೇರೆ ಹೂ’ ಎಂಬ ಕಥೆಗಳಿಗೆ ಟೋಟೋ ಪ್ರಶಸ್ತಿ ಲಭಿಸಿದ್ದು, ಈ ಪ್ರಶಸ್ತಿಯು ₹ 60000 ನಗದು ಬಹುಮಾನ ಮತ್ತು ಸ್ಮರಣಿಕೆ ಒಳಗೊಂಡಿದೆ.


ಸಂಗೀತ, ಸೃಜನಶೀಲ ಬರಹ (ಇಂಗ್ಲಿಷ್ ), ಸೃಜನಶೀಲ ಬರಹ (ಕನ್ನಡ ) ಫೋಟೋಗ್ರಫಿ, ಕಿರುಚಿತ್ರ, ಡಿಜಿಟಲ್ ಆರ್ಟ್ಸ್ ಹೀಗೆ ವಿವಿಧ ವಿಭಾಗಗಳಲ್ಲಿ 10 ಮಂದಿ ವಿಜೇತರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು.


ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ನವೀನ್ ತೇಜಸ್ವಿ : “ಹಿಂದುಳಿದ ಸಮುದಾಯದಿಂದ ಬಂದ ಯಾರೇ ಗೆದ್ದರೂ, ಅದು ಅವರ ವೈಯಕ್ತಿಕ ಗೆಲುವು ಆಗಿರುವುದಿಲ್ಲ, ಅದು ಸಮುದಾಯದ ಗೆಲುವು ಆಗಿರುತ್ತದೆ, ಜಗತ್ತಿನ ಯಾವುದೇ ಮೂಲೆಯಲ್ಲಿ ಶೋಷಿತ ಜನಾಂಗದ ಯಾರೇ ಏನನ್ನೇ ಸಾಧಿಸಿದರು ಅದು ನನಗೆ ಯಾವಾಗಲೂ ನನ್ನದೇ ಸಣ್ಣ ಗೆಲುವು ಅನಿಸುತಿತ್ತು. ಸಾವಿರಾರು ವರುಷಗಳ ಶೋಷಣೆಗೆ ಎದೆಯೊಡ್ಡಿಯು ಬದುಕ ಕಟ್ಟಿಕೊಂಡ ನನ್ನ ಅಪ್ಪ, ಅವ್ವ, ಬೋಪ ಮತ್ತು ಊರಿನ ಜನತೆಯ ಜೀವನ ಪ್ರೀತಿಗೆ ಈ ಪ್ರಶಸ್ತಿ ಅರ್ಪಣೆ. ಸಮಾಜ ಹಿನ್ನಡೆಯುತ್ತಿದೆ ಎನಿಸುವ ಇಂತಹ ಕಷ್ಟಕರ ಸಂದರ್ಭದಲ್ಲಿ ಕಲೆ ಭರವಸೆಯ ಕಿರಣವಾಗಿ ಕಾಣುತ್ತದೆ. ಈ‌ ಪ್ರಶಸ್ತಿಯ ಹಣವನ್ನು ನಮ್ಮೂರಿನಲ್ಲಿ ‘ಕಲಾ ಕೇಂದ್ರ’ವೊಂದನ್ನು ಸ್ಥಾಪಿಸಬೇಕೆಂಬ ನನ್ನ ಬಯಕೆಗೆ ಬಳಸಲು ನಿರ್ಧರಿಸಿದ್ದೇನೆ. ನಾವು ಒಟ್ಟಿಗಿದ್ದರೆ ಮಾತ್ರ ಬಲ” ಎಂದು ಹೇಳಿದರು.

ನವೀನ್ ತೇಜಸ್ವಿ, ಶಿವಮೊಗ್ಗ ಜಿಲ್ಲೆ, ಸೊರಬ ತಾಲ್ಲೂಕಿನ ಹೊಸಬಾಳೆ ಗ್ರಾಮದ ಮೊದಲ ತಲೆಮಾರಿನ ವಿಧ್ಯಾರ್ಥಿ. ತಂದೆ ತಿಮ್ಮಪ್ಪ, ತಾಯಿ ಜಾನಕಿ. ಊರಿನ ಜನರೊಟ್ಟಿನ ಕಿರುಚಿತ್ರಗಳನ್ನು ಮಾಡಿದ್ದಾರೆ‌‌. ಇಲ್ಲಿಯವರೆಗೆ ಸುಮಾರು ನೂರು ಮಂದಿ ಊರಿನ ಜನರು, ಅವರ ಸಿನಿಮಾಗಳಲ್ಲಿ ಬೇರೆ ಬೇರೆ ವಿಭಾಗಗಳಲ್ಲಿ ಭಾಗವಹಿಸಿದ್ದಾರೆ.‌ ಈ ಕಿರುಚಿತ್ರಗಳು ಜಗತ್ತಿನಾದ್ಯಂತ ಚಿತ್ರೋತ್ಸವಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿವೆ. ಕನ್ನಡ ಮತ್ತು ಇಂಗ್ಲೀಷಿನಲ್ಲಿ ಬರೆದ ಇವರ ಪ್ರಬಂಧ ‘ಟ್ರ್ಯಾಕ್ ಒನ್’ ೨೦೨೩ರ ಬಾರ್ಬ್ರ ನಾಯ್ಡು ಪ್ರಶಸ್ತಿಯನ್ನು ಪಡೆದಿದೆ.‌ ಸದರಿ ಪ್ರಬಂಧ ಸಂತ ಜೋಸೆಫರ ಕಾಲೇಜು ಇಂಗ್ಲೀಷ್ ಪಠ್ಯಕ್ರಮದ ಭಾಗವಾಗಿದೆ. ಇವರು ತಮ್ಮ ಬರಹ ಮತ್ತು ಸಿನಿಮಾದ ಮೂಲಕ ಅವರ ಊರಿನ ಕತೆಗಳನ್ನು ಹೇಳುತ್ತಾರೆ.

More articles

Latest article