ರಾಮನಗರ: ರಾಜ್ಯಾದ್ಯಂತ ಮೈಕ್ರೊ ಫೈನಾನ್ಸ್ ಕಂಪನಿಗಳ ಕಾಟ ಹೆಚ್ಚಾಗುತ್ತಿದ್ದು, ರಾಮನಗರ, ಚಾಮರಾಜನಗರ ಮಂಡ್ಯ ಮೊದಲಾದ ಜಿಲ್ಲೆಗಳಲ್ಲಿ ಸಾಲ ಪಡೆದವರು ಊರು ಬಿಟ್ಟು ಹೋಗುತ್ತಿರುವ ಪ್ರಕರಣಗಳು ಕೇಳಿ ಬರುತ್ತಿವೆ. ಈ ಆರೋಪಗಳ ಬೆನ್ನಲ್ಲೇ ರಾಮನಗರ ತಾಲೂಕಿನಲ್ಲಿ ಮೈಕ್ರೊ ಫೈನಾನ್ಸ್ ಕಂಪನಿಯೊಂದರ ವ್ಯವಸ್ಥಾಪಕನನ್ನು ಪೊಲೀಸರು ಬಂಧಿಸಿದ್ದಾರೆ. ತಾಲೂಕಿನ ಕೂನಮುದ್ದನಹಳ್ಳಿ ಗ್ರಾಮದ ಇರುಳಿಗರ ಕಾಲೊನಿಯೊಂದರ ಮಹಿಳೆಯೊಬ್ಬರಿಗೆ ಸಾಲ ಮರುಪಾವತಿ ಮಾಡುವಂತೆ ಕಿರುಕುಳ ನೀಡಿದ ಆರೋಪದಡಿಯಲ್ಲಿ ಆಪರ್ಚುನಿಟಿ ಪ್ರೈವೇಟ್ ಫೈನಾನ್ಸ್ ಕಂಪನಿ ಬಿಡದಿ ಶಾಖೆಯ ವ್ಯವಸ್ಥಾಪಕ ರಘು ಎಂಬಾತನನ್ನು ಬಂಧಿಸಿಲಾಗಿದೆ.
ಈ ಕಂಪನಿಯಿಂದ ಮುನಿವೆಂಕಟಮ್ಮ 52 ಸಾವಿರ ಸಾಲ ಪಡೆದುಕೊಂಡಿದ್ದರು. ಪ್ರತಿ ತಿಂಗಳು ಕಂತನ್ನು ಪಾವತಿಸುತ್ತಿದ್ದರು. ಆದರೆ ಆರ್ಥಿಕ ಮುಗ್ಗಟ್ಟಿನಿಂದ ಮೂರ್ನಾಲ್ಕು ತಿಂಗಳಿನಿಂದ ಕಂತನ್ನು ಕಟ್ಟಿರಲಿಲ್ಲ. ಈಕೆಗೆ ಫೈನಾನ್ಸ್ ಕಂಪನಿ ಕಿರುಕುಳ ನೀಡಲು ಆರಂಭಿಸಿತ್ತು. ಮುನಿವೆಂಕಟಮ್ಮ ಫೈನಾನ್ಸ್ ಕಂಪನಿ ಕಾಟಕ್ಕೆ ಹೆದರಿ ಊರು ಬಿಟ್ಟು ಮಾಗಡಿ ತಾಲೂಕಿನಲ್ಲಿರುವ ತವರುಮನೆ ಸೇರಿಕೊಂಡಿದ್ದರು. ಆ ಸಂದರ್ಭದಲ್ಲಿ ಗ್ರಾಮಕ್ಕೆ ಬಂದಿದ್ದ ರಘು ಸಾಲ ಕಟ್ಟದಿದ್ದರೆ ಬಂಧಿಸಲಾಗುತ್ತದೆ ಎಂಬ ಎಚ್ಚರಿಕೆಯ ನೋಟಿಸ್ ಅನ್ನು ಮನೆ ಬಾಗಿಲಿಗೆ ಅಂಟಿಸಿ ಹೋಗಿದ್ದ. ಸಾಲ ಮರುಪಾವತಿಗೆ ಸಮಯ ಕೇಳಿದ್ದರೂ ರಘು ಕಿರುಕುಳ ಮುಂದುವರಿಸಿದ್ದ. ಈತನಿಂದ ಸಾಲ ಪಡೆದ ಇನ್ನೂ ಕೆಲವರು ಕಿರುಕುಳಕ್ಕೆ ಹೆದರಿ ಊರು ತೊರೆದಿದ್ದರು. ಮನೆ ಬಾಗಿಲಿಗೆ ನೋಟಿಸ್ ಅಂಟಿಸಿದ್ದ ವಿಷಯ ತಿಳಿದ ಮುನಿವೆಂಕಟಮ್ಮ, ರಘು ವಿರುದ್ಧ ರಾಮನಗರ ಗ್ರಾಮಾಂತರ ಠಾಣೆಗೆ ದೂರು ಸಲ್ಲಿಸಿದ್ದರು.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ 14 ದಿನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರತಿ ತಿಂಗಳು ರೂ. 2,810 ಸಾಲದ ಕಂತನ್ನು ಪಾವತಿಸುತ್ತಿದ್ದ ಮುನಿವೆಂಕಟಮ್ಮ ತೊಂದರೆಯಿಂದ ಮೂರು ತಿಂಗಳು ಸಾಲ ಪಾವತಿಸಿರಲಿಲ್ಲ. ಡಿ.20ರಂದು ಮನೆಗೆ ಆಗಮಿಸಿದ್ದ ರಘು ಅವಾಚ್ಯ ಶಬ್ಧಗಳಿಂದ ನಿಂದಿಸಿ ಹಲ್ಲೆ ನಡೆಸಿ, ಬೆದರಿಕೆ ಹಾಕಿದ್ದ ಎಂದು ದೂರಿನಲ್ಲಿ ತಿಳಿಸಿದ್ದಾರೆ .