ಬೆಂಗಳೂರು, ರಾತ್ರಿ ಎರಡು ಗಂಟೆಯಲ್ಲೂ 27.4 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ, ತಡೆಯಲಾಗದ ಧಗೆ, ಫ್ಯಾನ್ ಗಾಳಿಯಲ್ಲೂ ಕಿತ್ತುಬರುವ ಬೆವರು… ಇದು ಬೆಂಗಳೂರಿನ ಚಿತ್ರ. ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ನಿನ್ನೆ ಗುಡುಗು ಸಹಿತ ಧಾರಾಕಾರ ಮಳೆ ಸುರಿದರೂ ಬೆಂಗಳೂರಿಗೆ ಆ ಭಾಗ್ಯವಿಲ್ಲ. ಒಂದು ಸಮಾಧಾನವೆಂದರೆ ನಿನ್ನೆ ಮಳೆ ಮೋಡಗಳು ಬೆಂಗಳೂರಿನ ಹೊರವಲಯದ ಕೆಲವು ಪ್ರದೇಶಗಳಲ್ಲಿ ಕಾಣಿಸಿಕೊಂಡಿದ್ದವು. ಆದಷ್ಟು ಬೇಗ ಮಳೆಯಾಗಬಹುದೆಂಬ ನಿರೀಕ್ಷೆ ಹವಾಮಾನ ತಜ್ಞರದು.
ನಿನ್ನೆ ಮಂಡ್ಯ, ದಾವಣಗೆರೆ, ರಾಯಚೂರು, ಕೊಪ್ಪಳ, ಧಾರವಾಡ, ಗದಗ, ಹಾವೇರಿ, ಚಾಮರಾಜನಗರ, ಮೈಸೂರು ಹಾಗೂ ವಿಜಯಪುರದಲ್ಲಿ ಸಾಕಷ್ಟು ಮಳೆಯಾಗಿದ್ದು ಅಲ್ಲಿನ ಜನರಲ್ಲಿ ಮಂದಹಾಸಕ್ಕೆ ಕಾರಣವಾಗಿದೆ. ಆದರೆ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇನ್ನೂ ಮಳೆಯ ಸೂಚನೆ ಕಂಡುಬಂದಿಲ್ಲ.
ಕಲ್ಬುರ್ಗಿ, ರಾಯಚೂರು, ಬಳ್ಳಾರಿ, ಯಾದಗಿರಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ತಾಪಮಾನ ದಿನೇದಿನೇ ಹೆಚ್ಚುತ್ತಲೇ ಇದ್ದು 40 °C ಆಸುಪಾಸಿನಲ್ಲಿದೆ.
ಇದುವರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಆಗಿರುವ ಮಳೆಯ ಪ್ರಮಾಣ ಈ ಕೆಳಕಂಡಂತಿದೆ. ಬೆಳಗಾವಿ 102 mm, ಗದಗ 72.5 mm, ಉತ್ತರ ಕನ್ನಡ 54 mm, ಶಿವಮೊಗ್ಗ 46.5 mm, ವಿಜಯಪುರ 46 mm, ಬಾಗಲಕೋಟೆ 45 mm, ಧಾರವಾಡ 44 mm, ಹಾವೇರಿ 39.5 mm,ಚಿಕ್ಕಮಗಳೂರು 34 mm, ಕಲ್ಬುರ್ಗಿ 30.5 mm, ಕೊಪ್ಪಳ 25 mm, ಹಾಸನ 24.5 mm, ದಾವಣಗೆರೆ 24 mm, ಮಂಡ್ಯ 23 mm, ಮೈಸೂರು 23 mm, ಬಳ್ಳಾರಿ 18.5 mm, ಕೊಡಗು 15 mm, ಬೆಳಗಾವಿ 66 mm.
ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ತುಮಕೂರು, ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇನ್ನೂ ಮಳೆಯೇ ಆಗಿಲ್ಲ.
ನಿನ್ನೆ ಮೈಸೂರಲ್ಲಿ ವರ್ಷದ ಮೊದಲ ಮಳೆಯಾಗಿದ್ದು ಬಿಸಿಲ ಬೇಗೆಯಿಂದ ಕಂಗೆಟ್ಟಿದ ಜನರ ಮೊಗದಲ್ಲಿ ಸಮಾಧಾನ ಕಾಣಿಸಿಕೊಂಡಿದೆ. ಮಂಡ್ಯ ಜಿಲ್ಲೆಯ ಹಲವು ಭಾಗಗಳಲ್ಲಿ ಅರ್ಧ ಗಂಟೆ ಕಾಲ ಬಿರುಗಾಳಿ ಸಮೇತ ಮಳೆಯಾಗಿದೆ. ಗಾಳಿ ಮಳೆಯಿಂದಾಗಿ ಗಣಂಗೂರು ಟೋಲ್ ಸಮೀಪ ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇನಲ್ಲಿ ವಿದ್ಯುತ್ ಕಂಬಗಳು ಕೆಳಗೆ ಬಿದ್ದು, ಹೈಟೆನ್ಷನ್ ವೈರ್ ಗಳು ರಸ್ತೆಯಲ್ಲಿ ಸಂಚಾರ ವ್ಯವಸ್ಥೆ ಅಸ್ತವ್ಯಸ್ಥಗೊಂಡಿತ್ತು. ದಾವಣಗೆರೆ ಜಿಲ್ಲೆಯ ದಾವಣಗೆರೆ, ಹರಪನಹಳ್ಳಿ ಮತ್ತಿತರ ಭಾಗಗಳಲ್ಲಿ ಗುಡುಗು ಸಹಿತ ಮಳೆಯಾಗಿದೆ. ಗಾಳಿಗೆ ಹಲವೆಡೆ ಮನೆಗಳ ಮೇಲ್ಛಾವಣಿಗಳು ಹಾರಿಹೋಗಿವೆ.
ಈ ವರ್ಷ ಬಿಸಿಲಿನ ಬೇಗೆ ಅತಿ ಹೆಚ್ಚಿರುವ ರಾಯಚೂರೂ ಜಿಲ್ಲೆಯ ಒಂದೆರಡು ಕಡೆ ಮಳೆಯಾಗಿದೆ. ಲಿಂಗಸೂಗೂರಿನಲ್ಲಿ ಒಳ್ಳೆಯ ಮಳೆಯಾಗಿದೆ. ಕೊಪ್ಪಳದಲ್ಲೂ ಅರ್ಧ ಗಂಟೆ ಕಾಲ ಗಾಳಿ ಮಳೆ ಕಾಣಿಸಿಕೊಂಡಿದೆ. ಧಾರವಾಡದಲ್ಲಿ ಹಲವೆಡೆ ಆಲಿಕಲ್ಲು ಮಳೆಯಾಗಿದೆ. ವಿಜಯಪುರದಲ್ಲೂ ಬಿರುಗಾಳಿ, ಗುಡುಗು ಸಮೇತ ಮಳೆಯಾಗಿದೆ. ಗದಗ ಜಿಲ್ಲೆಯಲ್ಲಿ ವಿಪರೀತ ಧಗೆಯ ನಡುವೆಯೂ ಇದ್ದಕ್ಕಿದ್ದಂತೆ ಅರ್ಧ ಗಂಟೆ ಮಳೆ ಸುರಿದಿದೆ.
ಹಾವೇರಿಯಲ್ಲಿ ಮಳೆಯಿಂದಾಗಿ ಬೆಳೆ ನಾಶವಾದ ವರದಿಗಳು ಬಂದಿವೆ. ಧಾರಾಕಾರ ಸುರಿದ ಮಳೆಯಿಂದಾಗಿ ಹಲವೆಡೆ ಮನೆಗಳ ಮೇಲ್ಛಾವಣಿಗಳು ಜಖಂ ಆಗಿವೆ. ಹಾವೇರಿಯ ಕಾಲೇಜು ಆವರಣದಲ್ಲಿ ನಡೆಯುತ್ತಿದ್ದ ಬಿಜೆಪಿ ಮಹಿಳಾ ಸಮಾವೇಶ ಮಳೆಯಿಂದಾಗಿ ಮೊಟಕುಗೊಂಡಿದೆ.