ಸದನದ ಗೌರವ ಉಳಿಸಿಲು ಯಾವುದೇ ರೀತಿಯ ಕ್ರಮಕ್ಕೂ ಹಿಂಜರಿಯುವುದಿಲ್ಲ; ಯುಟಿ ಖಾದರ್‌

Most read

ಮಂಗಳೂರು: ಸದನದ ಘನತೆ ಗೌರವಕ್ಕೆ ಚ್ಯುತಿ ತರುವಂತಹ ನಡವಳಿಕೆ ವಿರುದ್ಧ ಯಾವುದೇ ರೀತಿಯ ಕಠಿಣ ಕ್ರಮ ತೆಗೆದುಕೊಳ್ಳಲು ಹಿಂಜರಿಯುವುದಿಲ್ಲ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್‌ ಹೇಳಿದ್ದಾರೆ. ಶಾಸಕರು ವಿಧಾನಸಭಾಧ್ಯಕ್ಷರ ಪೀಠಕ್ಕೆ ಅಗೌರವ ತೋರುವು ಪ್ರವೃತ್ತಿಯನ್ನು ಮುಂದುವರೆಸಿದರೆ ಅವರನ್ನೂ ಅಮಾನತು ಮಾಡಲು ಅವಕಾಶ ಇದೆ ಎಂದು ಹೇಳಿದ್ದಾರೆ.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸದನಕ್ಕಿಂತ ದೊಡ್ಡ ಸಾಂವಿಧಾನಿಕ ಸಂಸ್ಥೆ ಬೇರೆ ಇಲ್ಲ. ವಿಧಾನಸಭಾಧ್ಯಕ್ಷರ ಪೀಠಕ್ಕಿಂತ ದೊಡ್ಡದು ಎಲ್ಲಿದೆ? ಇದು ಗೊತ್ತಿದ್ದೂ ಸಭಾಧ್ಯಕ್ಷ ಪೀಠದ ಬಳಿಗೆ ಬಂದು ಮಸೂದೆಯ ಪ್ರತಿ ಕಿತ್ತುಕೊಳ್ಳಲು ಪ್ರಯತ್ನಿಸುವುದನ್ನು ಮಾರ್ಷಲ್‌ಗಳನ್ನು ತಳ್ಳುವುದನ್ನು ಸಹಿಸಲು ಸಾಧ್ಯವಿಲ್ಲ. ಅಧಿವೇಶನದ ಕೊನೆಯ ದಿನ ಏನೂ ಮಾಡಿದರೂ ನಡೆಯುತ್ತದೆ. ಹೆಚ್ಚೆಂದರೆ ಅಧಿವೇಶನದ ಅವಧಿಗೆ ತಮ್ಮನ್ನು ಅಮಾನತು ಮಾಡಬಹುದು. ಅದರಿಂದ ಏನೂ ಆಗದು ಎನ್ನುವುದು ಕೆಲವು ಶಾಸಕರ ಧೋರಣೆಯಾಗಿತ್ತು. ಅವರ ತಪ್ಪನ್ನು ಮನವರಿಕೆ ಮಾಡಿಸಲು ಸಭಾಧ್ಯಕ್ಷನಾಗಿ ನನಗಿರುವ ಅಧಿಕಾರ ಏನೆಂಬುದನ್ನು ತೋರಿಸಿದ್ದೇನೆ. ಅವರು ತಮ್ಮ ವರ್ತನೆಯನ್ನು ಸುಧಾರಿಸಿಕೊಂಡು ಉತ್ತಮ ನಡವಳಿಕೆ ರೂಪಿಸಿಕೊಳ್ಳಲಿ ಎಂಬ ಉದ್ದೇಶದಿಂದ ಈ ಕ್ರಮಕೈಗೊಂಡಿದ್ದೇನೆ ಎಂದು ಹೇಳಿದರು.

ಅಮಾನತುಗೊಂಡವರು ನಮ್ಮ ಸ್ನೇಹಿತರೇ. ಅವರು ಸದನದಲ್ಲಿ ನಡೆದುಕೊಂಡ ದೃಶ್ಯಗಳನ್ನು ಮತ್ತೆ ನೋಡಿದರೆ ಅವರು ಮಾಡಿರುವ ತಪ್ಪು ಎಷ್ಟು ಗಂಭೀರವಾದದ್ದು ಎಂದು ಮನವರಿಕೆಯಾಗುತ್ತದೆ. ಅವರ ಇಂತಹ ವರ್ತನೆಯನ್ನು ಚಾಳಿಯನ್ನಾಗಿ ಮಾಡಿಕೊಂಡರೆ ಅವರನ್ನು ವಜಾ ಮಾಡುತ್ತೇನೆ ಎಂದು ನಾನು ಹೇಳುವುದಿಲ್ಲ. ಸಭಾಧ್ಯಕ್ಷರ ಪೀಠಕ್ಕೆ ಮೊದಲ ಸಲ ಅಗೌರವ ತೋರಿದಾಗ, ಶಾಸಕರನ್ನು ಮೂರು ದಿನಗಳ ಕಾಲ ಅಮಾನತು ಮಾಡಿದ್ದೆ. ಈ ಸಲ ಅರು ತಿಂಗಳು ಅಮಾನತು ಮಾಡಲಾಗಿದೆ. ಇಂತಹ ತಪ್ಪುಗಳು ಮರುಕಳಿಸಿದರೆ ಪೀಠವು ತೆಗೆದುಕೊಳ್ಳುವ ಕ್ರಮವೂ ಬದಲಾಗುತ್ತದೆ. ಅಗತ್ಯಬಿದ್ದರೆ ಒಂದು ವರ್ಷದವರೆಗೂ ಅಮಾನತು ಮಾಡಬಹುದು ಎಂದರು.

ಪೀಠಕ್ಕೆ ಅವಮಾನ ಮಾಡಿದ, ಅಸಹ್ಯ ಪಡುವಂತಹ ವಾತಾವರಣ ಸೃಷ್ಟಿಸಿದ ದೃಶ್ಯಗಳನ್ನು ನಮ್ಮ ರಾಜ್ಯದವರು ಮಾತ್ರವಲ್ಲ, ಬೇರೆ ದೇಶದವರೂ ನೋಡಿದ್ದಾರೆ. ಕೆಲವು ಶಾಸಕರ ನಡವಳಿಕೆ ಜನರಲ್ಲಿ ಅಸಹ್ಯ ಭಾವನೆಯನ್ನು ಮೂಡಿಸಿದೆ. ಸದನದ ಪಾಲಿಗೆ ಇದೊಂದು ಕಪ್ಪುಚುಕ್ಕೆ ಎಂದು ತಿಳಿಸಿದರು. ರಾಜ್ಯದ ಘನತೆ ಗೌರವ ಕಾಪಾಡಲು ವೈದ್ಯರು, ಎಂಜಿನಿಯರ್‌ಗಳು, ಪೊಲೀಸರು, ಸಾಹಿತಿಗಳು ಹಾಗೂ ಇತರರ ಕೊಡುಗೆ ಶೇ 90ರಷ್ಟಿದೆ. ಶಾಸಕರನ್ನು ಅಮಾನತು ಮಾಡಿದ್ದು ಇಡೀ ಸದನ ತೆಗೆದುಕೊಂಡ ತೀರ್ಮಾನ. ಈ ತೀರ್ಮಾನ ಸರಿ ಎಂದು ಬಹುತೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದರು.

ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ್ ಹಾಗೂ ವಿ.ಸುನಿಲ್ ಕುಮಾರ್ ಸದನದಲ್ಲಿ ಹನಿಟ್ರ್ಯಾಪ್ ವಿಚಾರ ಪ್ರಸ್ತಾಪಿಸಿದಾಗ ಚರ್ಚೆಗೆ ಅವಕಾಶ ನೀಡಿದ್ದೆ. ಈ ಬಗ್ಗೆ ಗೃಹಸಚಿವ ಜಿ.ಪರಮೇಶ್ವರ ಅವರು ಉತ್ತರವನ್ನೂ ನೀಡಿದಾಗ ಅದಕ್ಕೆ ಒಪ್ಪಿ ವಿರೋಧ ಪಕ್ಷದ ಶಾಸಕರೂ ಸುಮ್ಮನೆ ಕುಳಿತಿದ್ದರು. ಅಧಿವೇಶನದ ಕೊನೆಯ ದಿನ ಬಜೆಟ್ ಕುರಿತ ಚರ್ಚೆಗೆ ಉತ್ತರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುರುಮಾಡಿದಾಗ ಈ ವಿಚಾರವನ್ನು ವಿರೋಧ ಪಕ್ಷದವರು ಮತ್ತೆ ಪ್ರಸ್ತಾಪಿಸಿದರು. ಈ ಬಗ್ಗೆ ಉನ್ನತ ಮಟ್ಟದ ಸಮಿತಿ ರಚಿಸಿ ತನಿಖೆ ನಡೆಸುತ್ತೇವೆ. ತನಿಖೆಯನ್ನು ಸಿಬಿಐಗೆ ಒಪ್ಪಿಸಬೇಕೋ ಅಥವಾ ನ್ಯಾಯಾಧೀಶರಿಂದ ನಡೆಸಬೇಕೋ ಎಂಬ ಬಗ್ಗೆ ಶೀಘ್ರವೇ ಸಮಿತಿ ತೀರ್ಮಾನಿಸಲಿದೆ ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದರು. ಸಿ.ಎಂ ಉತ್ತರದ ಬಳಿಕ ವಿರೋಧ ಪಕ್ಷದವರು ಧನವಿನಿಯೋಗ ಮಸೂದೆ ಮಂಡನೆಗೆ ಅವಕಾಶ ನೀಡದೇ, ಗದ್ದಲ ನಡೆಸಿದ್ದು ಸರಿಯೇ ಎಂದು ಖಾದರ್ ಪ್ರಶ್ನಿಸಿದರು.

ಧನವಿನಿಯೋಗ ಮಸೂದೆ ಮಂಡನೆಗೆ ಅವಕಾಶ ಕಲ್ಪಿಸುವುದು ಸಭಾಧ್ಯಕ್ಷರ ಜವಾಬ್ದಾರಿ. ಈ ಮಸೂದೆ ಅಂಗೀಕಾರ ಆಗದಿದ್ದರೆ ಅಧಿಕಾರಿಗಳಿಗೆ ಸಂಬಳ ಆಗುವುದಿಲ್ಲ. ಸರ್ಕಾರದ ಯಾವುದೇ ಖಾತೆಗಳಿಗೆ ಹಣ ಹಾಕಲು, ಅನುದಾನ ಬಿಡುಗಡೆ ಮಾಡಲು ಸಾಧ್ಯವಾಗುವುದಿಲ್ಲ ಎನ್ನುವುದು ಅರಿವಿಲ್ಲವೇ ಎಂದು ಪ್ರಶನಿಸಿದರು.

ಈ ಹಿಂದೆ ವಿಧಾನ ಪರಿಷತ್ತಿನಲ್ಲಿ ಸಭಾಪತಿಯ ಪೀಠದಲ್ಲಿದ್ದವರನ್ನು ಕೆಳಕ್ಕಿಳಿಸಿದ ಘಟನೆ ನಡೆದಾಗ ಇಷ್ಟು ಕಠಿಣ ಕ್ರಮ ಆಗಿರಲಿಲ್ಲ ಅಲ್ಲವೇ ಎಂಬ ಪ್ರಶ್ನೆಗೆ, ಆಗ ಕಠಿಣ ಕ್ರಮ ಕೈಗೊಳ್ಳದೇ ಇದ್ದುದರಿಂದಲೇ ಇಂತಹ ಘಟನೆಗಳು ಮರುಕಳಿಸಿವೆ. ಹಿಂದಿನವರು ಕ್ರಮ ಕೈಗೊಂಡಿಲ್ಲ ಎಂದು ನಾನು ಸುಮ್ಮನೆ ಇದ್ದರೆ ಭವಿಷ್ಯದಲ್ಲಿ ಎಲ್ಲ ಮಸೂದೆ ಮಂಡನೆ ವೇಳೆ ಇವರು ಬಂದು ಪೀಠದಲ್ಲಿ ಕುಳಿತುಕೊಳ್ಳಬಹುದು. ಈ ಬಗ್ಗೆ ಯಾರಾದರೂ ಕಠಿಣ ತೀರ್ಮಾನ ಕೈಗೊಳ್ಳಲೇಬೇಕು. ಹಿಂದಿನವರಿಗೆ ಧೈರ್ಯ ಇರಲಿಲ್ಲ, ಹಾಗಾಗಿ ಕಠಿಣ ಕ್ರಮ ಕೈಗೊಂಡಿಲ್ಲ. ನನಗೆ ಧೈರ್ಯವಿದೆ ನಾನು ಕಠಿಣ ಕ್ರಮ ಕೈಗೊಂಡಿದ್ದೇನೆ ಎಂದು ಕ್ರಮವನ್ನು ಸಮರ್ಥಿಸಿಕೊಂಡರು. ಈ ತೀರ್ಮಾನದಲ್ಲಿ ಮುಖ್ಯಮಂತ್ರಿ ಯಾವುದೇ ಹಸ್ತಕ್ಷೇಪ ಮಾಡಿಲ್ಲ ಎಂದು ತಿಳಿಸಿದರು.

More articles

Latest article