ಮಂಗಳೂರು: ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಯನ್ನು ರದ್ದುಗೊಳಿಸಿರುವುದನ್ನು ಪ್ರತಿಭಟಿಸಿ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಕಾಂಗ್ರೆಸ್ ಪ್ರತಿಭಟನೆ ಆರಂಭಿಸಿದೆ. ಪುರಭವನ ಸಮೀಪದ ರಾಜಾಜಿ ಪಾರ್ಕ್ ನ ಮಹಾತ್ಮ ಗಾಂಧಿ ಪ್ರತಿಮೆ ಎದುರು ಪಕ್ಷದ ಸಾವಿರಾರು ಕಾರ್ಯಕರ್ತರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.
ಮಾಜಿ ಸಚಿವ ರಮಾನಾಥ ರೈ ಮಾತನಾಡಿ, ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಾಗ ನರೇಗಾ ಸೇರಿದಂತೆ ಶಿಕ್ಷಣ ಹಕ್ಕು ಕಾಯ್ದೆ ಆಹಾರ ಸುರಕ್ಷಾ ಕಾಯ್ದೆ, ಮಾಹಿತಿ ಹಕ್ಕು ಕಾಯ್ದೆ, ಉದ್ಯೋಗ ಖಾತ್ರಿ ಕಾಯ್ದೆಯಂತಹ ಅನೇಕ ಜನಪರ ಯೋಜನೆಗಳನ್ನು ಕೊಡುಗೆಯಾಗಿ ನೀಡಲಾಗಿದೆ. ಕಾಂಗ್ರೆಸ್ ನಿಂದ ಯಾವತ್ತೂ ಈ ದೇಶದ ಬಡವರು, ಪರಿಶಿಷ್ಟರು, ಅಲ್ಪಸಂಖ್ಯಾತರಿಗೆ ಕಾಂಗ್ರೆಸ್ ಪಕ್ಷದಿಂದ ಅನುಕೂಲವಾಗಿದೆ ಎಂದರು.
ಉಡುಪಿಯಲ್ಲಿ ನಡೆದ ಶ್ರೀಕೃಷ್ಣ ಮಠದ ಪರ್ಯಾಯದ ಸಂದರ್ಭದಲ್ಲಿ ಅಲ್ಲಿನ ಜಿಲ್ಲಾಧಿಕಾರಿ ಕೇಸರಿ ಧ್ವಜ ಹಾರಿಸಿದ್ದನ್ನು ಖಂಡಿಸಿದ ಅವರು, ದೇವಸ್ಥಾನದ ಕಾರ್ಯಕ್ರಮದಲ್ಲಿ ರಾಜಕೀಯ ಪ್ರೇರಿತ ಧ್ವಜ ಹಾರಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ನರೇಗಾ ಯೋಜನೆಯಿಂದ 18 ಕೋಟಿ ಜನರಿಗೆ ಉದ್ಯೋಗ ಲಭಿಸಿತ್ತು. ಈಗ ನೀತಿ ನಿಯಮಗಳನ್ನು ಬದಲಾಯಿಸುವ ಮೂಲಕ ಕೇಂದ್ರ ಸರ್ಕಾರ ಬಡವರ ಹೊಟ್ಟೆಯ ಮೇಲೆ ಹೊಡೆಯುತ್ತಿದೆ. ನರೇಗಾ ಯೋಜನೆಗೆ ಮಹಾತ್ಮ ಗಾಂಧಿ ಹೆಸರನ್ನು ನಾಮಕರಣ ಮಾಡಿದ್ದನ್ನು ಬಿಜೆಪಿಗೆ ಸಹಿಸಲು ಸಾಧ್ಯವಾಗದೆ ವಿಬಿ ಜಿ ರಾಮ್ ಜಿ ಎಂದು ಬದಲಿಸಿ, ರಾಮನ ಹೆಸರನ್ನು ವಿನಾಕಾರಣ ತುರುಕಿದೆ ಎಂದು ಟೀಕಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಕೆ. ಹರೀಶ್ ಕುಮಾರ್ ಮಾತನಾಡಿ, ನರೇಗಾ ಯೋಜನೆಯ ಹೆಸರನ್ನು ಬದಲಾಯಿಸುವ ಮೂಲಕ ಬಿಜೆಪಿ ನೇತೃತ್ವದ ಎನ್ ಡಿಎ ನೇತೃತ್ವದ ಸರ್ಕಾರ ಮಹಾತ್ಮ ಗಾಂಧಿ ಅವರನ್ನು ಎರಡನೇ ಬಾರಿಗೆ ಕೊಲೆ ಮಾಡಿದೆ ಎಂದರು. ಯೋಜನೆಯ ಮೂಲ ಸ್ವರೂಪ ಬದಲಾಯಿಸಿ ಬಡವರ ಉದ್ಯೋಗದ ಹಕ್ಕನ್ನು ಕಸಿದುಕೊಳ್ಳಲಾಗಿದೆ. ರಾಜ್ಯಗಳಿಗೆ ಆರ್ಥಿಕ ಹೊರೆ ಹೆಚ್ಚಾಗಿದೆ. ಕೇಂದ್ರ ಸರ್ಕಾರದ ಈ ನಡೆಯನ್ನು ಖಂಡಿಸಿ ಫೆಬ್ರುವರಿ 9 ರಿಂದ 12ರವರೆಗೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಿಂದ ಮೂಲ್ಕಿವರೆಗೆ 100 ಕಿ.ಮೀ ಪಾದಯಾತ್ರೆ ನಡೆಸಿ, ಜನಜಾಗೃತಿ ಮೂಡಿಸಲಾಗುವುದು ಎಂದರು.
ಕಾಂಗ್ರೆಸ್ ಮುಖಂಡರಾದ ಜೆ.ಆರ್.ಲೋಬೊ, ಪದ್ಮರಾಜ ಪೂಜಾರಿ, ಶಾಲೆಟ್ ಪಿಂಟೊ, ವಿಶ್ವಾಸ್ ಕುಮಾರ್ ದಾಸ್ ಹಾಜರಿದ್ದರು.

