Sunday, January 5, 2025

ಮೈತ್ರಿ ಬಾಗಿಲು ತೆರೆದಿರುತ್ತದೆ ಎಂಬ ಲಾಲು ಹೇಳಿಕೆಗೆ ನಿತೀಶ್ ಪ್ರತಿಕ್ರಿಯೆ ಹೀಗಿತ್ತು…

Most read

ಪಟನಾ: ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರಿಗೆ ಮೈತ್ರಿ ಬಾಗಿಲು ಸದಾ ತೆರೆದಿರುತ್ತದೆ ಎಂಬ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್‌, ನೀವೇನು ಹೇಳುತ್ತಿದ್ದೀರಾ ಎಂದು ಕುತೂಹಲ ವ್ಯಕ್ತಪಡಿಸಿದ್ದಾರೆ. ಬಿಹಾರದ ನೂತನ ರಾಜ್ಯಪಾಲರಾಗಿ ಆರಿಫ್ ಮೊಹಮ್ಮದ್ ಖಾನ್‌ ಪ್ರಮಾಣ ವಚನ ಸಮಾರಂಭದಲ್ಲಿ ಗುರುವಾರ ನಿತೀಶ್ ಕುಮಾರ್ ಭಾಗಿಯಾಗಿದ್ದಾರೆ. ಈ ವೇಳೆ ಲಾಲು ಪ್ರಸಾದ್ ಅವರ ಹೇಳಿಕೆ ಕುರಿತು ಪ್ರಶ್ನಿಸಿದಾಗ ನಿತೀಶ್‌ ಕುಮಾರ್ ಅವರು, ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ್ದಾರೆ. ಪ್ರತಿಕ್ರಿಯೆ ನೀಡುವಂತೆ ಒತ್ತಾಯ ಮಾಡಿದಾಗ, ನೀವೇನು ಹೇಳುತ್ತಿದ್ದೀರಾ ಎಂದು ಮರು ಪ್ರಶ್ನಿಸಿದ್ದಾರೆ. ಈ ವೇಳೆ ಬಿಜೆಪಿಯ ಆರಿಫ್‌ ಖಾನ್ ಮತ್ತು ಉಪ ಮುಖ್ಯಮಂತ್ರಿ ಸಾಮ್ರಾಟ್ ಚೌಧರಿ, ನಿತೀಶ್ ಕುಮಾರ್‌ ಅವರ ಬಳಿಯೇ ನಿಂತಿದ್ದರು. ರಾಜ್ಯ ಸರ್ಕಾರ ತನ್ನ ಅವಧಿಯನ್ನು ಪೂರ್ಣಗೊಳಿಸುತ್ತದೆಯೇ ಎಂಬ ಪ್ರಶ್ನೆಗೆ ಮಧ್ಯಪ್ರವೇಶಿಸಿದ ಆರಿಫ್ ಖಾನ್‌, ಈ ರೀತಿಯ ಪ್ರಶ್ನೆಗಳಿಗೆ ಇದು ಸುಸಂದರ್ಭವಲ್ಲ. ಒಳ್ಳೆಯ ವಿಷಯಗಳನ್ನು ಕುರಿತು ಮಾತ್ರ ಮಾತನಾಡೋಣ ಎಂದು ಹೇಳಿದ್ದಾರೆ.

ಕೂಡಲೇ ಇದೇ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಅವರಿಗೂ ಇದೇ ಪ್ರಶ್ನೆಯನ್ನು ಕೇಳಿದಾಗ ನಿಮ್ಮಂತವರು ಲಾಲು ಪ್ರಸಾದ್‌ ಜೀ ಅವರ ಬಳಿ ಹೋಗಿ ಇದೇ ಪ್ರಶ್ನೆ ಕೇಳಿದರೆ ಅವರಾದರೂ ಏನು ಮಾಡುತ್ತಾರೆ. ಮಾಧ್ಯಮಗಳ ಕುತೂಹಲವನ್ನು ತಣಿಸಲು ಹಾಗೆ ಹೇಳಿರುತ್ತಾರೆ ಎಂದು ಯಾದವ್‌ ವಿಷಯವನ್ನು ತೇಲಿಸಿದ್ದಾರೆ. ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಸಚಿವ, ಮಾಜಿ ಜೆಡಿಯು ಅಧ್ಯಕ್ಷ ಲಲ್ಲನ್‌ ಸಿಂಗ್, ಎನ್‌ಡಿಎ ಮೈತ್ರಿಕೂಟ ಬಲಿಷ್ಠವಾಗಿದ್ದು, ಬಿಜೆಪಿ ಮತ್ತು ಜೆಡಿಯು ಒಗ್ಗಟ್ಟಾಗಿವೆ. ಸಮಾಜ ಮುಕ್ತವಾಗಿದ್ದು ಯಾರು ಏನು ಬೇಕಾದರೂ ಹೇಳಬಹುದು ಎಂದಿದ್ದಾರೆ.

ನಿತೀಶ್ ಅವರಿಗೆ ಮೈತ್ರಿ ಬಾಗಿಲು ಸದಾ ತೆರೆದಿರುತ್ತದೆ. ಅವರು ಸಹ ತಮ್ಮ ಗೇಟಿನ ಬಾಗಿಲನ್ನು ತೆರೆಯಬೇಕು. ಇದು ಎರಡು ಕಡೆಯವರಿಗೆ ಒಳ್ಳೆಯದನ್ನು ಮಾಡಲಿದೆ ಎಂದು ಮಾಜಿ ಮುಖ್ಯಮಂತ್ರಿಯೂ ಆಗಿರುವ  ಲಾಲು ಪ್ರಸಾದ್ ಹೇಳಿದ್ದರು. ಕಳೆದ ಒಂದು ದಶಕದಲ್ಲಿ ನಿತೀಶ್ ಕುಮಾರ್ ಅವರ ಪಕ್ಷ ಜೆಡಿಯು, ಲಾಲು ಪ್ರಸಾದ್ ನೇತೃತ್ವದ ಆರ್‌ಜೆಡಿಯೊಂದಿಗೆ ಎರಡು ಬಾರಿ ಮೈತ್ರಿ ಮಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

More articles

Latest article