ಕೊಡಗು: ರಾಜ್ಯ ಸರ್ಕಾರ ನಡೆಸುತ್ತಿರುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಗಣತಿಯನ್ನು ಸೌಲಭ್ಯ ವಂಚಿತ ಜನರಿಗೆ ಯೋಜನೆಗಳನ್ನು ರೂಪಿಸುವ ಉದ್ದೇಶದಿಂದ ಕೈಗೊಳ್ಳಲಾಗುತ್ತಿದೆಯೇ ಹೊರತು ಅನ್ಯ ಉದ್ದೇಶ ಹೊಂದಿಲ್ಲ ಎಂದು ಕೊಡಗು ಜಿಲ್ಲಾ ಉಸ್ತುವಾರಿಯನ್ನೂ ಹೊಂದಿರುವ ಸಣ್ಣ ನೀರಾವರಿ ಹಾಗೂ ವಿಜ್ಞಾನ, ತಂತಜ್ಞಾನ ಸಚಿವ ಎನ್.ಎಸ್.ಬೋಸರಾಜು ಸ್ಪಷ್ಟಪಡಿಸಿದ್ದಾರೆ.
ಜಿಲ್ಲೆಯಲ್ಲಿ ಜಾತಿ ಗಣತಿ ನಡೆಯುತ್ತಿದ್ದು, ಈ ವೇಳೆ ಗಣತಿ ನಡೆಯುತ್ತಿರುವ ಮನೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ನೆರೆದಿದ್ದ ಜನರೊಂದಿಗೆ ಮಾತನಾಡಿದ ಸಚಿವರು, “ಜನರ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಪರಿಸ್ಥಿತಿ ಅರ್ಥೈಸಿಕೊಳ್ಳಲು ಈ ಸಮೀಕ್ಷೆ ನಡೆಸಲಾಗುತ್ತಿದೆಯೇ ಹೊರತು ಬೇರೆ ಕಾರಣಗಳಿಗಾಗಿ ಅಲ್ಲ. ಆದರೆ, ಪ್ರತಿಪಕ್ಷಗಳು ಈ ಬಗ್ಗೆ ಸುಳ್ಳು ಮಾಹಿತಿ ಹಬ್ಬಿಸಿ ಜನರಲ್ಲಿ ಗೊಂದಲ ಮೂಡಿಸುತ್ತಿದ್ದು, ಸರ್ಕಾರದ ಒಳ್ಳೆಯ ಉದ್ದೇಶವನ್ನು ಜನರಿಗೆ ತಿಳಿಸುವ ಕೆಲಸ ಮಾಡಬೇಕು” ಎಂದರು.
“ಜನರ ಪರಿಸ್ಥಿತಿ ಸರ್ಕಾರಕ್ಕೆ ತಿಳಿದರೆ ಅವರ ಸಮಗ್ರ ಅಭಿವೃದ್ಧಿಗೆ ಯೋಜನೆ, ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಸಹಾಯಕವಾಗುತ್ತದೆ. ಆದ್ದರಿಂದ ಸಮೀಕ್ಷೆ ಮಾಡುವವರು ಮನೆಗೆ ಬಂದಾಗ ಅವರು ಹೇಳುವ ಮಾಹಿತಿ ನೀಡಿ ಎಲ್ಲಾ ಸಮುದಾಯದ ಅಭಿವೃದ್ಧಿಗೆ ಸಹಕರಿಸಬೇಕು” ಎಂದು ಮನವಿ ಮಾಡಿದರು.
ಈ ವೇಳೆ ಸ್ಥಳೀಯ ಜನರು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಗಣತಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ, ಸಚಿವರು ಮತ್ತು ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿದರು. ಈ ರೀತಿಯ ಗಣತಿ ಮೂಲಕ ತೊಂದರೆಗೊಳಗಾದ ಜನರಿಗೆ ಅನುಕೂಲ ಕಲ್ಪಿಸಬೇಕು ಎಂದು ಕೋರಿದರು. ಸರ್ಕಾರದಿಂದ ಎಲ್ಲಾ ವರ್ಗದ ಜನರ ಪ್ರಗತಿಗೆ ಸೂಕ್ತ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಮುಖ್ಯಮಂತ್ರಿಯವರ ಕಾನೂನು ಸಲಹೆಗಾರರೂ ಆಗಿರುವ ಶಾಸಕ ಎ.ಎಸ್.ಪೊನ್ನಣ್ಣ, ಶಾಸಕ ಡಾ.ಮಂಥರ್ ಗೌಡ, ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮರಾಜನ್ ಕೆ., ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆನಂದ್ ಪ್ರಕಾಶ್ ಮೀನಾ ಸೇರಿದಂತೆ ಪಕ್ಷದ ಮುಖಂಡರು, ಅಧಿಕಾರಿಗಳು ಈ ವೇಳೆ ಹಾಜರಿದ್ದರು.

                                    