ಬೆಂಗಳೂರು: ನಮ್ಮ ಪೂರ್ವಜರು ನಿರ್ಮಿಸಿದ ಜಲಮೂಲಗಳನ್ನು ಸಂರಕ್ಷಿಸುವ ಮೂಲಕ ಅಂತರ್ಜಲ ಮಟ್ಟ ವೃದ್ಧಿಸಿ ಸಮೃದ್ಧ ಕರ್ನಾಟಕ ನಿರ್ಮಾಣಕ್ಕೆ ಭದ್ರ ಅಡಿಪಾಯ ಹಾಕುವ ಉದ್ದೇಶದಿಂದ ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆ ವತಿಯಿಂದ “ನೀರಿದ್ದರೆ ನಾಳೆ” WATER IS FUTURE ಎನ್ನುವ ವಿಶೇಷ ಪರಿಕಲ್ಪನೆಯ ರಾಜ್ಯಮಟ್ಟದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್. ಎಸ್. ಭೋಸರಾಜು ಅವರು ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮ ಪ್ರಕಟಣೆಯನ್ನು ನೀಡಿರುವ ಅವರು, ಕರ್ನಾಟಕ ಆರ್ಥಿಕ ಸಮೀಕ್ಷೆ 2024-25ರ ಪ್ರಕಾರ ರಾಜ್ಯದ ಒಟ್ಟು ಕೃಷಿ ಭೂಮಿಯಲ್ಲಿ ಶೇಕಡಾ 60ರಷ್ಟು ಭಾಗದಲ್ಲಿ ಕೃಷಿ ಚಟುವಟಿಕೆಯು ಕೊಳವೆಬಾವಿಗಳ ಮೇಲೆ ಅವಲಂಬಿತವಾಗಿದೆ. ಇದು ದಶಕಗಳ ಹಿಂದಿನ ಶೇ. 37 ರಷ್ಟು ಹಂಚಿಕೆಯಿಂದ ಗಣನೀಯವಾಗಿ ಏರಿಕೆಯಾಗಿದೆ. ಈ ಅಂಕಿಅಂಶಗಳು ರಾಜ್ಯದ ಕೃಷಿ ಕ್ಷೇತ್ರದಲ್ಲಿ ಅಂತರ್ಜಲದ ಅವಲಂಬನೆಗೆ ಸಾಕ್ಷಿಯಾಗಿದೆ. ವಿಶೇಷವಾಗಿ ಬರ ಪ್ರದೇಶಗಳು ಹಾಗೂ ಮಳೆ ಆಧಾರಿತ ಕೃಷಿ ಪ್ರದೇಶಗಳಲ್ಲಿ ರೈತರು ಕೃಷಿ ಚಟುವಟಿಕೆಗೆ ಕೊಳವೆ ಬಾವಿಗಳ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿ ಅಂತರ್ಜಲ ಮಟ್ಟ ದಿನೇ ದಿನೇ ಕುಸಿಯುತ್ತಿದೆ.
ಅಂತರ್ಜಲ ವೃದ್ದಿ, ನೀರಿನ ಸಮರ್ಪಕ ಬಳಕೆಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಹಾಗೂ ಜಲ ಸಮೃದ್ಧ ಹಾಗೂ ಜಲ ಸುಭದ್ರ, ಸುಸ್ಥಿರ ಕರ್ನಾಟಕವನ್ನು ನಿರ್ಮಿಸುವ ಗುರಿ ನಮ್ಮದಾಗಿದೆ. ಇದಕ್ಕಾಗಿ ನೀರಿದ್ದರೆ ನಾಳೆ ಎನ್ನುವ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಹೇಳಿದ್ದಾರೆ.
ಸಣ್ಣ ನೀರಾವರಿ, ಅಂತರ್ಜಲ ಅಭಿವೃದ್ದಿ ಇಲಾಖೆ ರಾಯಭಾರಿಯಾಗಿ ನಟ ವಶಿಷ್ಟ ಸಿಂಹ:
ಯುವ ಪೀಳಿಗೆಯಲ್ಲಿ ನೀರಿನ ಸಮರ್ಪಕ ಬಳಕೆ ಹಾಗೂ ಅಂತರ್ಜಲದ ವೃದ್ದಿಗೆ ಕೈಗೊಳ್ಳಬೇಕಾದ ಕ್ರಮಗಳಮ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಖ್ಯಾತ ನಟ ವಶಿಷ್ಟ ಸಿಂಹ ಅವರನ್ನು ಇಲಾಖೆಯ ರಾಯಭಾರಿಯನ್ನಾಗಿ ನೇಮಕ ಮಾಡಿಕೊಳ್ಳಲಾಗಿದೆ. ನಟ ವಶಿಷ್ಟ ಸಿಂಹ ಅವರ ಜೊತೆಯಲ್ಲಿ ರಾಜ್ಯದ ವಿವಿಧ ಭಾಗಗಳಲ್ಲಿ ಕೆರೆ ಸಂರಕ್ಷಣೆ, ಮಳೆ ನೀರಿನ ಕೊಯ್ಲು ಸೇರಿದಂತೆ ಹಲವಾರು ಸರಣಿ ಕಾರ್ಯಕ್ರಮಗಳನ್ನ ಆಯೋಜಿಸಲು ಚಿಂತಿಸಲಾಗಿದೆ. ನಟ ವಶಿಷ್ಟ ಸಿಂಹ ಯಾವುದೇ ಸಂಭಾವನೆ ಪಡೆಯದೆ ಇಲಾಖೆಯ ಜಲ ಜಾಗೃತಿ ಕಾರ್ಯಕ್ರಮಗಳ ರಾಯಭಾರಿಯಾಲು ಒಪ್ಪಿಗೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಅಕ್ಟೋಬರ್ 9 ರಂದು ವಿಧಾನಸೌಧದ ಬ್ವಾಂಕ್ವೇಟ್ ಹಾಲ್‌ನಲ್ಲಿ ನೀರಿದ್ದರೆ ನಾಳೆ (ವಾಟರ್ ಇಸ್ ಫ್ಯೂಚರ್) ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸೇರಿದಂತೆ ಸಚಿವ ಸಂಪುಟದ ಸದಸ್ಯರು ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ತಮ್ಮ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.