ಒಳಮೀಸಲಾತಿ ವರದಿ ಕುರಿತು ಚರ್ಚೆಗೆ ಆ. 16ರಂದು ವಿಶೇಷ ಸಚಿವ ಸಂಪುಟ ಸಭೆ; ಜಾತಿ ಗಣತಿ ನಡೆಸಲು ನಿರ್ಧಾರ

Most read

ಬೆಂಗಳೂರು: ಒಳಮೀಸಲಾತಿ ವರ್ಗೀಕರಣ ಕುರಿತು ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ  ಹೆಚ್.ಎನ್ ನಾಗಮೋಹನ್ ದಾಸ್ ಆಯೋಗದ ವರದಿ ಕುರಿತು ಚರ್ಚಿಸಲು  ಆಗಸ್ಟ್ 16 ಶನಿವಾರ ವಿಶೇಷ ಸಚಿವ ಸಂಪುಟ ಸಭೆಯನ್ನು ಕರೆದು ಚರ್ಚಿಸಲು ನಿರ್ಣಯವನ್ನು ಕೈಗೊಳ್ಳಲಾಗಿದೆ.

ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ ಎಂದು ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್‌ ತಿಳಿಸಿದರು.

ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ ಒಳಮೀಸಲಾತಿ ವರ್ಗೀಕರಣ ಕುರಿತು ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ  ಹೆಚ್.ಎನ್ ನಾಗಮೋಹನ್ ದಾಸ  ಅವರ ಆಯೋಗವನ್ನು ನೇಮಕ ಮಾಡಿದ್ದು, ವರದಿ ಸಲ್ಲಿಕೆಯಾಗಿದೆ. ಶ್ರಮವಹಿಸಿ ಕಡಿಮೆ ಸಮಯದಲ್ಲಿ ವೈಜ್ಞಾನಿಕವಾದ ಅಧ್ಯಯನ ಮಾಡುವ ಮೂಲಕ ಶೇ 95 ರಷ್ಟು ಸಮುದಾಯದ ಜನಸಂಖ್ಯೆಯನ್ನು ಸಮೀಕ್ಷೆಗೆ ಒಳಪಡಿಸಿ ವರದಿ ಸಲ್ಲಿಸಿದ್ದಾರೆ. ಸದರಿ ವರದಿಯನ್ನು ಎಲ್ಲಾ ಸಚಿವರಿಗೆ ನೀಡಲಾಗಿದೆ. ಸಚಿವ ಸಂಪುಟ ವರದಿಯನ್ನು  ಸ್ವೀಕರಿಸಿದೆ ಎಂದರು.

ಸಾಮಾಜಿಕ ಮತ್ತು ಶೈಕ್ಷಣಿಕ ಸಮಿಕ್ಷೆ:

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಅಯೋಗದ ವತಿಯಿಂದ ಕರ್ನಾಟಕ ರಾಜ್ಯದ ನಾಗರಿಕರ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗಳ ಬಗ್ಗೆ ಸಮೀಕ್ಷೆಯನ್ನು ಕೈಗೊಳ್ಳಲು ಸಚಿವ ಸಂಪುಟ ನಿರ್ಧರಿಸಿದೆ.

ಸಮೀಕ್ಷೆಯನ್ನು ಡಿಜಿಟಲ್ ಕೈಗೊಳ್ಳುವುದು ಮತ್ತು ಸಮೀಕ್ಷೆಯನ್ನು ಡಿಜಿಟಲ್ ವಿಧಾನದಲ್ಲಿ ಮಾಡಲು ತಂತ್ರಾಂಶದ ಅಭಿವೃದ್ಧಿ ಮತ್ತು ಉಸ್ತುವಾರಿಯನ್ನು ಇ-ಆಡಳಿತ ಇಲಾಖೆ ಮೂಲಕ ಕೈಗೊಳ್ಳಲು; ಹಾಗೂ ಸಮೀಕ್ಷೆಯಲ್ಲಿ ನಮೂದಿಸಲಾಗುವ 6 ವರ್ಷ ಮೇಲ್ಪಟ್ಟ ಪ್ರತಿ ವ್ಯಕ್ತಿಯ ಆಧಾರ್ ದೃಢೀಕರಣವನ್ನು ಕಡ್ಡಾಯಗೊಳಿಸಲು; ಹಾಗೂ ನ್ಯಾ.ನಾಗಮೋಹನ್‌ದಾಸ್ ರವರ ನೇತೃತ್ವದಲ್ಲಿ ಒಳಮೀಸಲಾತಿಗೆ ಸಂಬಂಧಿಸಿದಂತೆ ಪರಿಶಿಷ್ಟ ಜಾತಿ ಸಮೀಕ್ಷೆಗೆ ಸಾರ್ವಜನಿಕವಾಗಿ ಲಭ್ಯವಿರುವ ಚುನಾವಣಾ ಮತದಾರರ ಪಟ್ಟಿಯನ್ನು ಉಪಯೋಗಿಸಿರುತ್ತಾರೆ. ಅದೇ ರೀತಿಯಾಗಿ ಹಿಂದುಳಿದ ವರ್ಗಗಳ ಆಯೋಗವು ನಡೆಸುವ ಸಮೀಕ್ಷೆಗೆ ಸಾರ್ವಜನಿಕವಾಗಿ ಲಭ್ಯವಿರುವ ಚುನಾವಣಾ ಮತದಾರರ ಪಟ್ಟಿಯನ್ನು ಉಪಯೋಗಿಸಿಕೊಂಡು ಸಮೀಕ್ಷಾ ಕಾರ್ಯವನ್ನು ಕೈಗೊಳ್ಳಲು; ಮತ್ತು ಸಮೀಕ್ಷಾ ಕಾರ್ಯವನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಆಯೋಗದ ಮೇಲುಸ್ತುವಾರಿಯಲ್ಲಿ ಅಗತ್ಯವಿರುವ ಅಧಿಕಾರಿಗಳು, ಶಿಕ್ಷಕರು ಹಾಗೂ ಇತರೆ ಸಿಬ್ಬಂದಿ ಕೆಲಸ ಮಾಡಲಿದ್ದದಾರೆ.

ಗ್ರೇಟರ್ ಬೆಂಗಳೂರು ಆಡಳಿತ (ತಿದ್ದುಪಡಿ) ವಿಧೇಯಕ, 2025”ಕ್ಕೆ ಅನುಮೋದನೆ:

ಕರ್ನಾಟಕ ಸರ್ಕಾರ (ವ್ಯವಹಾರ ನಿರ್ವಹಣೆ) ನಿಯಮಗಳು 1977ರ ಅನುಸೂಚಿ 01ರ ಕ್ರಮ ಸಂಖ್ಯೆ: 1ರ ಅನ್ವಯ ಗ್ರೇಟರ್ ಬೆಂಗಳೂರು ಅಧಿನಿಯಮ, 2024ರ ಕಲಂ 8, 14 ಮತ್ತು 35ಕ್ಕೆ ತಿದ್ದುಪಡಿ ತರುವ ಉದ್ದೇಶದ ಅನುಬಂಧ-1 ರಲ್ಲಿನ ಗ್ರೇಟರ್ ಬೆಂಗಳೂರು ಆಡಳಿತ (ತಿದ್ದುಪಡಿ) ವಿಧೇಯಕ, 2025ಕ್ಕೆ ಸಚಿವ ಸಂಪುಟದ ಅನುಮೋದನೆ ನೀಡಿದೆ. 

ಬೆಳಗಾವಿ ಜಿಲ್ಲೆಯ ಕಿತ್ತೂರಿನಲ್ಲಿ 100 ಹಾಸಿಗೆಗಳ ತಾಲ್ಲೂಕು ಮಟ್ಟದ ಆಸ್ಪತ್ರೆಯನ್ನು ರೂ.3378.65 ಲಕ್ಷಗಳ ಅನುದಾನದಲ್ಲಿ ನಿರ್ಮಿಸಲು ಹೊಸದಾಗಿ ಟೆಂಡರ್ ಆಹ್ವಾನಿಸಿ ಕೈಗೊಳ್ಳಲು ಅಂದಾಜು ಪಟ್ಟಿಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಮೊಳಕಾಲ್ಮೂರು ತಾಲ್ಲೂಕು ಗಣಿ ಬಾಧಿತ ಪ್ರದೇಶವಾಗಿರುವುದರಿಂದ ಈ ತಾಲ್ಲೂಕಿನಲ್ಲಿ ಉತ್ತಮ ಆರೋಗ್ಯ ಸೇವೆ ಕಲ್ಪಿಸಲು ಪ್ರಸ್ತುತವಿರುವ 100 ಹಾಸಿಗೆ ತಾಲ್ಲೂಕು ಆಸ್ಪತ್ರೆಯನ್ನು 200 ಹಾಸಿಗೆಗಳಿಗೆ ಉನ್ನತೀಕರಿಸಿ ಪ್ರತ್ಯೇಕ ಜಿಲ್ಲಾಮಟ್ಟದ ಆಸ್ಪತ್ರೆಯನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ.

ಕರ್ನಾಟಕ ಶಿಕ್ಷಣ ಸಂಸ್ಥೆಗಳು (ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಿಗೆ ಮಾನ್ಯತೆ ನೀಡಲು ನಿಬಂಧನೆ ಮತ್ತು ಷರತ್ತುಗಳು) (ಕಾಲೇಜು ಶಿಕ್ಷಣ) (ತಿದ್ದುಪಡಿ) ನಿಯಮಗಳಿಗೆ ತಿದ್ದುಪಡಿ ಮೂಲಕ ಮುಸ್ಲಿಂಯೇತರ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ಆಯಾ ಅಲ್ಪಸಂಖ್ಯಾತ ವರ್ಗದ ವಿದ್ಯಾರ್ಥಿಗಳ ಸಂಖ್ಯೆ ಶೇ.50 ರಷ್ಟು ಕಡ್ಡಾಯವಾಗಿ ಹೊಂದಿರಬೇಕೆಂಬ  ನಿಯಮವನ್ನು ತೆಗೆದುಹಾಕಲು ಸಚಿವ ಸಂಪುಟ ನಿರ್ಣಯಿಸಿದೆ

ಅಲ್ಪಸಂಖ್ಯಾತರ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಪ್ರತಿ ಮಹಿಳಾ ಕಾಲೇಜು ಕಟ್ಟಡ ನಿರ್ಮಾಣಕ್ಕೆ ವ್ಯತ್ಯಾಸದ ಮೊತ್ತ ರೂ.265.57 ಲಕ್ಷಗಳಂತೆ ಒಟ್ಟು 15 ಕಾಲೇಜು ಕಟ್ಟಡಗಳ ನಿರ್ಮಾಣಕ್ಕೆ ತಗಲುವ ವ್ಯತ್ಯಾಸದ ಹೆಚ್ಚುವರಿ ಮೊತ್ತ ರೂ.3983.55 ಲಕ್ಷಗಳ ಯೋಜನಾ ವೆಚ್ಚದಲ್ಲಿ ಕೈಗೊಳ್ಳಲು ಹಾಗೂ ರೂ.87.60 ಕೋಟಿಗಳ ಪರಿಷ್ಕೃತ ಅಂದಾಜಿಗೆ ಆಡಳಿತಾತ್ಮಕ ಅನುಮೋದನೆ ನೀಡಲು ಸಚಿವ ಸಂಪುಟ ನಿರ್ಣಯಿಸಿದೆ.

ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ನಿಯಮಗಳಿಗೆ ತಿದ್ದುಪಡಿ:

ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ (ತಿದ್ದುಪಡಿ) ನಿಯಮಗಳು, 2025”ಕ್ಕೆ ಸಚಿವ ಸಂಪುಟ ಅನುಮೋದನೆ ನೀಡಿದೆ.  ಆಯೋಗದ ಅಧ್ಯಕ್ಷರ ವಯೋಮಿತಿಯನ್ನು ಕನಿಷ್ಠ 40 ವರ್ಷ ಹಾಗೂ ಸದಸ್ಯರ ವಯೋಮಿತಿಯನ್ನು ಕನಿಷ್ಠ 35 ವರ್ಷ ಎಂದು ನಿಗಧಿಪಡಿಸಲಾಗಿದೆ. ಮಕ್ಕಳ ಕ್ಷೇತ್ರದಲ್ಲಿ ಅವರಿಗೆ ಇರಬೇಕಾದ ಅನುಭವದ ಅವಧಿಯನ್ನು ಐದು ವರ್ಷಗಳಿಂದ 10 ವರ್ಷಗಳಿಗೆ ಹೆಚ್ಚಿಸಲಾಗಿದೆ. ಆಯೋಗದ ಅಧ್ಯಕ್ಷರು ಹಾಗೂ ಸದಸ್ಯರಿಗೆ ಸಾಮರ್ಥ್ಯ ಅಭಿವೃದ್ಧಿ ತರಬೇತಿ ನೀಡುವ ಬಗ್ಗೆ ತಿಳಿಸಲಾಗಿದೆ. ಆಯೋಗವು ಕೇಂದ್ರ ಸ್ಥಾನದಲ್ಲಿ ಸಭೆ ನಡೆಸುವ ಕುರಿತು ಹಾಗೂ ಕೇಂದ್ರ ಸ್ಥಾನದ ಹೊರಗೆ ಇತರೆ ಜಿಲ್ಲೆ / ತಾಲ್ಲೂಕುಗಳಿಗೆ ಭೇಟಿ ನೀಡಿ ಪರಿಶೀಲನಾ ಸಭೆಗಳನ್ನು ನಡೆಸುವ ಸಂದರ್ಭದಲ್ಲಿ ಇರಬೇಕಾದ ಸದಸ್ಯರ ಉಪಸ್ಥಿತಿ (Quoram) ಬಗ್ಗೆ ಸ್ಪಷ್ಟ ಮಾರ್ಗಸೂಚಿ ನೀಡಲಾಗಿದೆ. ಆಯೋಗದ ಕಾರ್ಯದರ್ಶಿಗಳು ಆಯೋಗದ ಆಡಳಿತದ ವ್ಯವಹಾರಗಳನ್ನು ಸುಲಲಿತವಾಗಿ ನಡೆಸಲು ವಿವರವಾದ ಮಾರ್ಗಸೂಚಿಯನ್ನು ನೀಡಲಾಗಿದೆ.

ಕರ್ನಾಟಕ ದೇವದಾಸಿಯರ (ಸಮರ್ಪಣ ನಿಷೇಧ) ಅಧಿನಿಯಮ, 1982 ಹಾಗೂ ಕರ್ನಾಟಕ ದೇವದಾಸಿಯರ (ಸಮರ್ಪಣ ನಿಷೇಧ) (ತಿದ್ದುಪಡಿ) ಅಧಿನಿಯಮ, 2009 ರದ್ದುಪಡಿಸಿ ಅನುಬಂಧ-1 ರಲ್ಲಿ ಇರಿಸಲಾದ ಸಮಗ್ರವಾದ ಕರ್ನಾಟಕ ದೇವದಾಸಿ (ತಡೆಗಟ್ಟುವಿಕೆ, ನಿಷೇಧ, ಪರಿಹಾರ ಮತ್ತು ಪುನರ್ವಸತಿ) ಕಾಯ್ದೆ, 2025”ರ ಕರಡು ಪ್ರಸ್ತಾವನೆಗೆ ಅನುಮೋದನೆ ನೀಡುವುದು ಮತ್ತು ಸದರಿ ವಿಧೇಯಕವನ್ನು ವಿಧಾನ ಮಂಡಲದಲ್ಲಿ ಮಂಡಿಸಲು ಸಚಿವ ಸಂಪುಟದ ಅನುಮೋದನೆ ನೀಡಿದೆ.

More articles

Latest article