ಬೆಂಗಳೂರು: “ಮಹಿಳಾ ಮೀಸಲಾತಿ ಜಾರಿಯಾದರೆ ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ 224 ಕ್ಷೇತ್ರಗಳ ಪೈಕಿ 74 ಕ್ಷೇತ್ರಗಳಲ್ಲಿ ಮಹಿಳೆಯರೇ ಅಭ್ಯರ್ಥಿಗಳಾಗುತ್ತಾರೆ. ಹೀಗಾಗಿ ಮಹಿಳಾ ಕಾಂಗ್ರೆಸ್ ವತಿಯಿಂದ ಮಹಿಳಾ ಅಭ್ಯರ್ಥಿಗಳನ್ನು ತಯಾರು ಮಾಡಬೇಕು” ಎಂದು ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಕರೆ ನೀಡಿದ್ದಾರೆ.
ಕೆಪಿಸಿಸಿ ಭಾರತ ಜೋಡೋ ಭವನದಲ್ಲಿ ಶನಿವಾರ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜನರನ್ನು ಜಾಗೃತರನ್ನಾಗಿ ಮಾಡಬೇಕಾದರೆ ಮಹಿಳೆಯರು ಜಾಗೃತರಾಗಿರಬೇಕು. ಆಕೆ ನಡೆದರೆ ಕುಟುಂಬ ನಡೆದಂತೆ, ಕುಟುಂಬ ನಡೆದರೆ ಗ್ರಾಮ ನಡೆದಂತೆ, ಸಮಾಜ ಹಾಗೂ ದೇಶ ನಡೆಯುತ್ತದೆ ಎಂದು ನೆಹರೂ ಹೇಳಿದ್ದಾರೆ. ರಾಜ್ಯದಲ್ಲಿ 1.23 ಕೋಟಿ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆ ತಲುಪುತ್ತಿದೆ. 1.50 ಕೋಟಿ ಕುಟುಂಬಗಳಿಗೆ ಗೃಹಜ್ಯೋತಿ ಯೋಜನೆ ನೀಡಲಾಗುತ್ತಿದೆ. ರಾಜ್ಯದ ಎಲ್ಲಾ ಮಹಿಳೆಯರಿಗೂ ಬಸ್ ನಲ್ಲಿ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸಿದ್ದೇವೆ. ಇನ್ನು ಬಡವರಿಗೆ ನೀಡುವ ಮನೆ ಹಾಗೂ ನಿವೇಶನಗಳನ್ನು ಆ ಕುಟುಂಬದ ಮಹಿಳೆಯರ ಹೆಸರಿನಲ್ಲಿ ಮಾಡಬೇಕು ಎಂದು ಕಡ್ಡಾಯ ನಿಯಮ ಮಾಡಿದ್ದೇವೆ. ನನ್ನ ಕ್ಷೇತ್ರದಲ್ಲಿ ಆಶ್ರಯ 7 ಸಾವಿರ ನಿವೇಶನಗಳನ್ನು ಮಹಿಳೆಯರ ಹೆಸರಿಗೆ ನಿವೇಶನ ಹಂಚಿದ್ದೆ. ಆದಾದ ನಂತರದ ಚುನಾವಣೆಯಲ್ಲಿ ಜನ ನನ್ನನ್ನು 30 ಸಾವಿರ ಮತಗಳ ಅಂತರದಲ್ಲಿ ಗೆಲ್ಲಿಸಿದರು” ಎಂದು ತಿಳಿಸಿದರು.
“18 ಕ್ಷೇತ್ರಗಳ ಉಪಚುನಾವಣೆಯಲ್ಲಿ 15 ರಲ್ಲಿ ಸೋತು ಪಕ್ಷ ಕಷ್ಟದ ಪರಿಸ್ಥಿತಿಯಲ್ಲಿತ್ತು. ಮಾರ್ಚ್ 11ರಂದು ನಾನು ಅಧ್ಯಕ್ಷನಾಗಿ ನೇಮಕಗೊಂಡು 5 ವರ್ಷವಾಗಿದೆ. ನಾನು ಇಲ್ಲಿ ಅಧಿಕಾರ ಸ್ವೀಕರಿಸಿದ ದಿನ ‘ನನಗೆ ಭವಿಷ್ಯ ಕಾಣಬೇಕಾದರೆ ಮಹಿಳೆ ಹಾಗೂ ಯುವಕರಿಂದ ಮಾತ್ರ ಸಾಧ್ಯ’ ಎಂದು ಹೇಳಿದ್ದೆ. ಅದರಂತೆ ನಾವು ಚುನಾವಣೆ ಪ್ರಣಾಳಿಕೆ ಮಾಡುವಾಗ ಯುವಕರು ಹಾಗೂ ಮಹಿಳೆಯರಿಗೆ ಆದ್ಯತೆ ನೀಡಿದೆವು” ಎಂದು ತಿಳಿಸಿದರು.
“ನಮ್ಮ ಭಾಷೆಯನ್ನು ಮಾತೃಭಾಷೆ ಎಂದು ಕರೆಯುತ್ತೇವೆ. ನಮ್ಮ ನಾಡಿನ ದೇವತೆ ಚಾಮುಂಡೇಶ್ವರಿ, ಭುವನೇಶ್ವರಿ. ಹಳ್ಳಿಗಳಿಗೆ ಹೋದರೆ ಗ್ರಾಮ ದೇವತೆ ಕೇಳುತ್ತೇವೆ. ಭೂಮಿಯನ್ನು ಭೂತಾಯಿ ಎಂದು ಪರಿಗಣಿಸುತ್ತೇವೆ. ಯಾವುದೇ ಶುಭ ಕಾರ್ಯಕ್ರಮದಲ್ಲಿ ಆಹ್ವಾನ ನೀಡಬೇಕಾದರೆ ಮೊದಲು ಶ್ರೀಮತಿ ನಂತರ ಶ್ರೀ ಎಂದು ನಮೂದಿಸುತ್ತೇವೆ. ಹೀಗೆ ಪ್ರತಿ ಹಂತದಲ್ಲಿ ಮಹಿಳೆಯರಿಗೆ ಆದ್ಯತೆ ನೀಡಲಾಗಿದೆ. ನೀವೆಲ್ಲರೂ ನಾಯಕಿಯರು” ಎಂದು ತಿಳಿಸಿದರು. “ಮಹಿಳೆಯರಿಗಾಗಿ ನಮ್ಮ ಪಕ್ಷ ಇಷ್ಟು ಕಾರ್ಯಕ್ರಮ ನೀಡಿದೆ. ಈಗ ನೀವೆಲ್ಲರೂ ಸೇರಿ ನಮ್ಮ ಪಕ್ಷಕ್ಕೆ ಏನು ಮಾಡುತ್ತೀರಿ ಎಂದು ಅಧ್ಯಕ್ಷನಾಗಿ ಕೇಳುತ್ತೇನೆ. ನೀವು ಕಾಂಗ್ರೆಸ್ ಪಕ್ಷದ ಸದಸ್ಯರಾಗಿ ಪಕ್ಷಕ್ಕೆ ಏನು ಕೊಡುಗೆ ನೀಡುತ್ತೀರಿ ಎಂಬುದು ಮುಖ್ಯ. ಸೌಮ್ಯ ರೆಡ್ಡಿ ಸೇರಿದಂತೆ ನಾನು ಎಲ್ಲರಿಗೂ ಹೇಳುವುದು ಒಂದೇ. ರಾಣಿ ಸತೀಶ್ ಅವರ ಕಾಲದಿಂದ ಇಲ್ಲಿಯವರೆಗೂ ಮಹಿಳಾ ಕಾಂಗ್ರೆಸ್ ಬಗ್ಗೆ ನನಗೆ ತೃಪ್ತಿ ಇಲ್ಲ. ನೀವು ನಿಮ್ಮ ಒತ್ತಡಗಳ ಮಧ್ಯೆ ಪಕ್ಷ ಸಂಘಟನೆಗೆ ನನ್ನ ನಿರೀಕ್ಷೆ ಮಟ್ಟದಲ್ಲಿ ಕೆಲಸ ಮಾಡಲು ಆಗಿಲ್ಲ. ಇದಕ್ಕಾಗಿ ನನಗೆ ಬೇಸರವಿಲ್ಲ. ಇಂದು ಕೂಡ ಅವಕಾಶಗಳು ನಿಮ್ಮ ಮನೆ ಬಾಗಿಲ ಮುಂದಿದೆ” ಎಂದರು.
ಪ್ರತಿ ಗೃಹಲಕ್ಷ್ಮಿ ಫಲಾನುಭವಿಗಳಿಂದ 50 ಜನ ಕಾಂಗ್ರೆಸ್ ಸದಸ್ಯರನ್ನಾಗಿ ಮಾಡಿಸಿ ಸಾಕು. ಪ್ರತಿ ವಿಧಾನಸಭೆಯಲ್ಲಿ ಕ್ಷೇತ್ರ ಅಥವಾ ತಾಲೂಕು ಮಟ್ಟದಲ್ಲಿ ಯಾರು ಅತಿ ಹೆಚ್ಚು ಮಹಿಳೆಯರನ್ನು ಪಕ್ಷದ ಸದಸ್ಯೆಯರನ್ನಾಗಿ ಮಾಡುತ್ತೀರೋ ಅವರಿಗೆ ತಾಲೂಕು ಮಟ್ಟದಲ್ಲಾದರೂ ನಿರ್ದೇಶಕ ಹುದ್ದೆ ನೀಡಲಾಗುವುದು. ಇದು ನನ್ನ ವಾಗ್ದಾನ, ಬದ್ಧತೆ. ಕರಾವಳಿ ಭಾಗದಲ್ಲಿ ನಮ್ಮ ಶಾಸಕರು ಹೆಚ್ಚಾಗಿ ಗೆದ್ದಿಲ್ಲ. ಅಲ್ಲಿನ ಮಹಿಳೆಯರು ಈ ಯೋಜನೆಗಳ ಫಲಾನುಭವಿಗಳಾಗಿಲ್ಲವೇ? ನೀವು ಅವರ ಬಳಿ ಹೋಗಿ, ಕಾಂಗ್ರೆಸ್ ಪಕ್ಷದ ಕಾರ್ಯಕ್ರಮಗಳ ಬಗ್ಗೆ ವಿವರವಾಗಿ ಚರ್ಚೆ ಮಾಡಿ. ಈಪಕ್ಷವನ್ನು ಉಳಿಸಿಕೊಳ್ಳಿ ಎಂದು ಪಕ್ಷದ ಸದಸ್ಯತ್ವ ಅಭಿಯಾನ ಮಾಡಿ” ಎಂದು ತಿಳಿಸಿದರು.
“ರಾಜಕೀಯದಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಬೇಕು ಎಂದು ಕಾಂಗ್ರೆಸ್ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿತ್ತು. ರಾಜ್ಯಸಭೆಯಲ್ಲಿ ಸಂಖ್ಯಾಬಲದ ಕೊರತೆಯಿಂದ ಸಾಧ್ಯವಾಗಲಿಲ್ಲ. ಈಗ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ಪ್ರಣಾಳಿಕೆಯಲ್ಲಿ ಈ ವಿಚಾರ ಪ್ರಸ್ತಾಪಿಸಿವೆ. ಮುಂದಿನ ವಿಧಾನಸಭೆ ಚುನಾವಣೆ ವೇಳೆಗೆ 224 ಕ್ಷೇತ್ರಗಳ ಪೈಕಿ 74 ಮಹಿಳಾ ಅಭ್ಯರ್ಥಿಗಳು ಬೇಕಾಗುತ್ತಾರೆ. ಈಗ ನಾವು 10-12 ಅಭ್ಯರ್ಥಿಗೆ ಟಿಕೆಟ್ ನೀಡುತ್ತಿದ್ದೇವೆ. ಈ 74 ಅಭ್ಯರ್ಥಿಗಳನ್ನು ಯಾರು ತಯಾರು ಮಾಡಬೇಕು? ನನಗೆ ನನ್ನ ಮಗಳು, ಪತ್ನಿಯನ್ನು ಅಭ್ಯರ್ಥಿ ಮಾಡುವುದು ಮುಖ್ಯವಲ್ಲ. ನಿಮ್ಮಂತಹ ಕಾರ್ಯಕರ್ತರು, ಜನಸಾಮಾನ್ಯರು ಪಕ್ಷದ ಅಭ್ಯರ್ಥಿಯಾಗುವ ಮಟ್ಟಕ್ಕೆ ಬೆಳೆಯಬೇಕು. ಆಗ ಮಾತ್ರ ನಾವು ನಿಮಗೆ ಶಕ್ತಿ ನೀಡಿದಂತಾಗುತ್ತದೆ” ಎಂದರು.
“ಒಂದೇ ದಿನದಲ್ಲಿ ಗಿಡ ಮರವಾಗಿ ಬೆಳೆದು ಹಣ್ಣು ಬಿಡುವುದಿಲ್ಲ. ಇದಕ್ಕೆ ಕಾಲಾವಕಾಶ ಬೇಕು. ಇದಕ್ಕಾಗಿ ನಾನು ‘ನಾ ನಾಯಕಿ’ ಕಾರ್ಯಕ್ರಮ ಮಾಡಿದೆ. ಈ ನಾ ನಾಯಕಿ ಕಾರ್ಯಕ್ರಮಕ್ಕೆ ನೀವೆಲ್ಲರೂ ಹೊಸ ರೂಪ ನೀಡಬೇಕು. ಇಂದು ಮಹಿಳಾ ದಿನಾಚರಣೆ ಆಚರಿಸುತ್ತಿದ್ದೀರಿ. ಈ ಹಬ್ಬದಲ್ಲಿ ಸ್ವಯಂಪ್ರೇರಿತರಾಗಿ ಮಹಿಳೆಯರನ್ನು ಕರೆ ತರಬೇಕು. ಕಾಂಗ್ರೆಸಿಗರ ಪಾಲಿಗೆ ಪಕ್ಷದ ಕಚೇರಿ ದೇವಾಲಯವಿದ್ದಂತೆ. ಇಲ್ಲಿಗೆ ಜನರನ್ನು ಕರೆತರಬೇಕು. ನೀವು ವೇಗವಾಗಿ ಸಾಗಬೇಕಾದರೆ ಒಬ್ಬರೇ ಸಾಗಿ, ನೀವು ದೂರ ಕ್ರಮಿಸಬೇಕಾದರೆ ಒಟ್ಟಾಗಿ ಸಾಗಿ ಎಂದು ನಾನು ಹೇಳುತ್ತಿರುತ್ತೇನೆ. ನಾನು ಒಬ್ಬನೇ ಪಾದಯಾತ್ರೆ ಮಾಡಲು ಸಾಧ್ಯವೇ? ಹತ್ತಾರು ಜನ ಸೇರಿದ್ದಕ್ಕೆ ಅಲ್ಲವೇ ದೂರದ ಪಾದಯಾತ್ರೆ ಮಾಡಲು ಸಾಧ್ಯವಾಗಿದ್ದು. ಅವರು ಬಂದರೆ ನಮ್ಮ ಸ್ಥಾನ ಏನಾಗುತ್ತದೆಯೋ ಎಂಬ ಅಳುಕು ಬೇಡ. ನಿಮ್ಮ ಹಣೆಬರಹವನ್ನು ಯಾರೂ ತಪ್ಪಿಸಲು ಸಾಧ್ಯವಿಲ್ಲ ಎಲ್ಲಿ ಶ್ರಮವಿದೆಯೋ ಅಲ್ಲಿ ಫಲವಿದೆ. ಎಲ್ಲಿ ಭಕ್ತಿ ಇರುತ್ತದೆಯೋ ಅಲ್ಲಿ ಭಗವಂತ ಇರುತ್ತಾನೆ. ಎಲ್ಲಿ ಮನಸ್ಸಿದೆಯೋ ಅಲ್ಲಿ ಮಾರ್ಗ ಇರುತ್ತದೆ. ಶ್ರಮಪಟ್ಟು ಸಂಘಟನೆ ಮಾಡಿ” ಎಂದು ಸಲಹೆ ನೀಡಿದರು.
“ಇದೇ ಮೇ 20ರಂದು ಸರ್ಕಾರದ ಎರಡು ವರ್ಷಗಳ ಸಂಭ್ರಮಾಚರಣೆ ನಡೆಯಲಿದ್ದು, ರಾಜ್ಯದೆಲ್ಲೆಡೆ ಇದನ್ನು ಹಬ್ಬದಂತೆ ಸಂಭ್ರಮಾಚರಣೆ ಮಾಡಬೇಕು. ಎಲ್ಲಾ ಗ್ರಾಮಗಳಲ್ಲಿ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳ ಮನೆ ಮುಂದೆ ರಂಗೋಲೆ ಸ್ಪರ್ಧೆ ನಡೆಸಬೇಕು. ಅತ್ಯುತ್ತಮವಾಗಿ ರಂಗೋಲಿ ಹಾಕಿದವರಿಗೆ ಬಹುಮಾನ ನೀಡಲಾಗುವುದು. ಸರ್ಕಾರದ ವಿರುದ್ಧ ಯಾರು ಎಷ್ಟಾದರೂ ಧಿಕ್ಕಾರ ಕೂಗಲಿ, ಕುಣಿಯಲಿ ಅದಕ್ಕೆಲ್ಲಾ ತಲೆಕೆಡಿಸಿಕೊಳ್ಳುವುದಿಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಿ ಹಣಕಾಸಿನ ವಿಚಾರ ಚರ್ಚೆ ಮಾಡುತ್ತೇನೆ” ಎಂದು ತಿಳಿಸಿದರು.