ತಿರುಪತಿ: ತಿರುಪತಿ ದೇವಸ್ಥಾನದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ ಮೃತಪಟ್ಟ 6 ಮಂದಿ ಭಕ್ತರ ಕುಟುಂಬಕ್ಕೆ ತಲಾ ರೂ. 25 ಲಕ್ಷ ಪರಿಹಾರ ಧನ ನೀಡುವುದಾಗಿ ಆಂಧ್ರಪ್ರದೇಶ ಮುಜರಾಯಿ ಇಲಾಖೆ ಸಚಿವ ಅಂಗನಿ ಸತ್ಯ ಪ್ರಸಾದ್ ಘೋಷಿಸಿದ್ದಾರೆ. ಆದರೆ ಈ ಅಲ್ಪ ಮೊತ್ತದ ಪರಿಹಾರಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ತಲಾ 1 ಕೋಟಿ ರೂ. ಪರಿಹಾರ ನೀಡುವಂತೆ ಆಗ್ರಹಪಡಿಸಿದೆ. ಈ ದುರಂತ ನಿಜಕ್ಕೂ ನೋವು ತಂದಿದೆ. ಹೋದ ಜೀವವನ್ನು ಮರಳಿತರಲಾಗುವುದಿಲ್ಲ. ಆದರೆ ಕುಟುಂಬಕ್ಕೆ ನೆರವಾಗಬಹುದು ಎಂದು ಅವರು ತಿಳಿಸಿದ್ದಾರೆ. ಬುಧವಾರ ರಾತ್ರಿ ಕಾಲ್ತುಳಿತದಲ್ಲಿ ಮೃತಪಟ್ಟವರ ಮೃತದೇಹವನ್ನು ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. 40 ಮಂದಿ ಗಾಯಾಳುಗಳಲ್ಲಿ 32 ಗಾಯಾಳುಗಳು ಚೇತರಿಸಿಕೊಂಡು ಮನೆಗೆ ತೆರಳಿದ್ದಾರೆ ಎಂದು ಅವರು ಹೇಳಿದ್ದಾರೆ.
ದುರಂತಕ್ಕೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಹಲವು ಸಚಿವರು, ಪ್ರಧಾನಿ ನರೇಂದ್ರ ಮೋದಿ, ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಂತಾಪ ಸೂಚಿಸಿದ್ದಾರೆ. ಈ ಮಧ್ಯೆ ಈ ಅವಘಡದಲ್ಲಿ ಕರ್ನಾಟಕದ ಯಾರೂ ಮೃತಪಟ್ಟಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ. ಟಿಟಿಡಿ ಮೃತ 6 ಜನರ ಪಟ್ಟಿ ಬಿಡುಗಡೆ ಮಾಡಿದೆ. ಗಾಯಾಳುಗಳಲ್ಲಿ ಯಾರಿಗೂ ಗಂಭೀರ ಗಾಯಗಳಾಗಿಲ್ಲ. ಇಬ್ಬರಿಗೆ ಮಾತ್ರ ಮೂಳೆ ಮುರಿತವಾಗಿದೆ. ಇನ್ನುಳಿದವರಿಗೆ ಕಾಲ್ತುಳಿತದಿಂದ ಎದೆಭಾಗದಲ್ಲಿ ನೋವಿದೆ ಎಂದು ಗಾಯಾಳುಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ.