ವಿಶ್ವವಿಖ್ಯಾತ ತಿರುಪತಿ ಲಡ್ಡು ತಯಾರಿಕೆಯಲ್ಲಿ ಗುಣಮಟ್ಟವಿಲ್ಲದ ಪದಾರ್ಥಗಳು ಮತ್ತು ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿದೆ ಎಂಬ ಚರ್ಚೆಯ ನಡುವೆ ಈಗ ಲ್ಯಾಬ್ ರಿಪೋರ್ಟ್ ಬಹಿರಂಗವಾಗಿದೆ.
ಗುಜರಾತ್ ಮೂಲದ ಜಾನುವಾರು ಪ್ರಯೋಗಾಲಯದಿಂದ ತಿರುಪತಿ ಲಡ್ಡುವನ್ನು ಸಂಶೋಧನೆಗೆ ಒಳಪಡಿಸಿದ್ದು, ಅದರಲ್ಲಿ ದನದ ಕೊಬ್ಬು ಹಾಗೂ ಮೀನಿನ ಎಣ್ಣೆ ಇರುವುದು ದೃಢಪಟ್ಟಿದೆ. ಈ ಕುರಿತು ಆಡಳಿತಾರೂಢ ತೆಲುಗು ದೇಶಂ ಪಕ್ಷವು ಗುರುವಾರ ಹೇಳಿದೆ.
ಟಿಡಿಪಿ ವಕ್ತಾರ ಆನಂ ವೆಂಕಟ ರಮಣ ರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ, ಪ್ರಯೋಗಾಲಯದ ವರದಿಯನ್ನು ಪ್ರದರ್ಶಿಸಿ, ಇದು ತುಪ್ಪದ ಮಾದರಿಯಲ್ಲಿರುವ “ದನದ ಕೊಬ್ಬಿನಿಂದ” ಮಾಡಿರುವ ಲಡ್ಡು ಎಂದು ಆರೋಪಿಸಿದ್ದಾರೆ.
ಉದ್ದೇಶಿತ ಪ್ರಯೋಗಾಲಯದ ವರದಿಯ ಮಾದರಿಯಲ್ಲಿ, ದನದ ಜೊತೆ ಹಂದಿಯ ಕೊಬ್ಬು ಮತ್ತು ಮೀನಿನ ಎಣ್ಣೆ ಕೂಡ ಇದೆ ಎಂಬುದು ತಿಳಿದು ಬಂದಿದೆ. ಪ್ರಯೋಗಾಲಯ ಮಾದರಿ ರಶೀದಿಯ ದಿನಾಂಕ ಜುಲೈ 9, 2024 ಇದ್ದರೆ, ಲ್ಯಾಬ್ ವರದಿಯು ಜುಲೈ 16 ಎಂದು ನಮೂದಾಗಿದೆ.
ಈಗ, ಪಶು ಆಹಾರ ಮತ್ತು ಹಾಲಿನ ಉತ್ಪನ್ನಗಳನ್ನು ಪರೀಕ್ಷಿಸುವ ಖಾಸಗಿ ಪ್ರಯೋಗಾಲಯದ NDDB CALF ನ ವರದಿಯು ತಿರುಪತಿ ಲಡ್ಡುಗಳನ್ನು ತಯಾರಿಸಲು ಬಳಸುವ ತುಪ್ಪದ ಮಾದರಿಗಳಲ್ಲಿ ತಾಳೆ ಎಣ್ಣೆ, ಮೀನಿನ ಎಣ್ಣೆ, ದನದ ಕೊಬ್ಬು ಸೇರಿದಂತೆ ಹಂದಿಯ ಕೊಬ್ಬಿನಾಂಶಗಳನ್ನು ಬಳಸಲಾಗಿದೆ ಎಂದು ಹೇಳಿದೆ.
ಆದಾಗ್ಯೂ, ಆಂಧ್ರಪ್ರದೇಶ ಸರ್ಕಾರ ಅಥವಾ ಪ್ರಸಿದ್ಧ ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ಯಿಂದ ಲ್ಯಾಬ್ ವರದಿಯ ಬಗ್ಗೆ ಅಧಿಕೃತ ಯಾವ ಹೇಳಿಕೆಯೂ ದಾಖಲಾಗಿಲ್ಲ.