ಚೆನ್ನೈ: ‘ಥಗ್ ಲೈಫ್’ ಬಿಡುಗಡೆಗೆ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ತಮಿಳು ಚಿತ್ರನಟ ವಿಜಯ್ ದಳಪತಿ ನಟಿಸಿರುವ ‘ಜನ ನಾಯಗನ್’ ರಾಜ್ಯದಲ್ಲಿ ಬಿಡುಗಡೆಯಾಗುವ ಸಾಧ್ಯತೆಗಳು ಕಡಿಮೆ ಎನ್ನಲಾಗುತ್ತಿದೆ.
ಕಮಲ್ ಹಾಸನ್ ನಟನೆಯ ‘ಥಗ್ ಲೈಫ್’ ಸಿನಿಮಾಕ್ಕೆ ಕರ್ನಾಟಕದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದ್ದು ಬಿಡುಗಡೆ ಮುಂದಕ್ಕೆ ಹೋಗಿದೆ. ಇದರ ಬೆನ್ನಲ್ಲೇ, ಬೆಂಗಳೂರಿನ ಕೆವಿಎನ್ ಪ್ರೊಡಕ್ಷನ್ ನಿರ್ಮಿಸಿರುವ ವಿಜಯ್ ಸಿನಿಮಾ ಬಿಡುಗಡೆಗೂ ತಡೆಯೊಡ್ಡಲಾಗುವುದು ಎಂದು ಹಲವು ಸಂಘಟನೆಗಳು ಸಾಮಾಜಿಕ ಜಾಲತಾಣದಲ್ಲಿ ಎಚ್ಚರಿಕೆ ನೀಡಿದ್ದು ನಿರ್ಮಾಕರಿಗೆ ಆತಂಕ ಮೂಡಿಸಿದೆ.
ವೆಂಕಟ್ ಕೆ. ನಾರಾಯಣ ಹಾಗೂ ನಿಶಾ ವೆಂಕಟ್ ಕೊನಾಕಿ ಅವರ ಮಾಲೀಕತ್ವದ ಪ್ರೊಡಕ್ಷನ್ ಸಂಸ್ಥೆಯು ತಮಿಳು ಭಾಷೆಯಲ್ಲಿ ಮೊದಲ ಬಾರಿಗೆ ‘ಜನ ನಾಯಗನ್’ ನಿರ್ಮಾಣ ಮಾಡಿದೆ. ಈ ಸಿನಿಮಾವು ಮುಂದಿನ ವರ್ಷ ಸಂಕ್ರಾಂತಿಗೂ ಮುನ್ನ ಬಿಡುಗಡೆಯಾಗಲಿದೆ.
ಈ ಮಧ್ಯೆ ವಿಜಯ್ ಅವರು ರಾಜಕೀಯಕ್ಕೆ ಪೂರ್ಣ ಪ್ರಮಾಣದಲ್ಲಿ ಪದಾರ್ಪಣೆ ಮಾಡಲು ಸಿದ್ಧರಾಗಿರುವ ಬೆನ್ನಲ್ಲೇ ಅವರ ನಟನೆಯ ‘ಜನ ನಾಯಗನ್’ಗೆ ಸಂಕಷ್ಟ ಎದುರಾಗಿರುವುದು ಅವರಲ್ಲೂ ಆತಂಕ ಮೂಡಿಸಿದೆ ಎಂದು ತಮಿಳು ಸಿನಿಮಾ ಇಂಡಸ್ತ್ರಿ ಹೇಳುತ್ತಿದೆ.